ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಲು ಹೋಗಿ ಮೈ-ಕೈ ಸುಟ್ಟುಕೊಂಡು ತಗಲಾಕ್ಕೊಂಡಿರುವ ಉಗ್ರ ಶಾರೀಕ್ ಇನ್ನೂ ಆಸ್ಪತ್ರೆಯಲ್ಲೇ ಇದ್ದಾನೆ. ಕೊಂಚ ಮಟ್ಟಿಗೆ ಚೇತರಿಸಿಕೊಳ್ತಿರೋದಾಗಿ ವೈದ್ಯರು ಹೇಳ್ತಿದ್ದಾರೆ. ಈ ನಡುವೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಶಾರೀಕ್ ವೃತ್ತಾಂತವನ್ನ ಜಾಲಾಡುತ್ತಿದ್ದಾರೆ. ಆತನ ಕುರಿತ ಭಯಾನಕ ಕತೆಗಳೂ ಒಂದೊಂದಾಗಿ ಬಿಚ್ಚಿಕೊಳ್ತಿವೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ಲಾನ್ ದಾರಿ ಮಧ್ಯೆ ಠುಸ್ ಆಗಿತ್ತು. ಆಟೋದಲ್ಲೇ ಕಡಿಮೆ ತೀವ್ರತೆಯೊಂದಿಗೆ ಭಾರೀ ಪ್ರಾಣಹಾನಿ ತಪ್ಪಿಹೋಗಿದೆ. ಹಾಗಂತಾ ಇದೊಂದು ಸಣ್ಣ ಘಟನೆ ಅಲ್ಲ ಅಂತಾನೇ ಪೊಲೀಸರು ಪ್ರಕರಣವನ್ನು ಗಂಭಿರವಾಗಿ ಪರಿಗಣಿಸಿ ತನಿಖೆ ಮುಂದುವರಿಸಿದ್ದಾರೆ. ಈ ನಡುವೆ ಶಾರೀಕ್ ಮತ್ತವನ ಗ್ಯಾಂಗ್ ಕುಕೃತ್ಯಗಳೆಲ್ಲಾ ಒಂದಕ್ಕೊಂದು ಲಿಂಕ್ ಆಗ್ತಿವೆ.
ಗೋಡೆಬರಹ, ತಾಲಿಬಾನ್, ಲಷ್ಕರ್ ಆಹ್ವಾನದ ವಾರ್ನಿಂಗ್!
2019ರ ಎಚ್ಚರಿಕೆ ನಿರ್ಲಕ್ಷಿಸಿದ್ದರಾ ಮಂಗಳೂರು ಪೊಲೀಸರು?
ಶಾರೀಕ್ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ಹಲವು ಸಂಗತಿಗಳನ್ನು ಮತ್ತೆ ಬಯಲು ಮಾಡ್ತಿದೆ. 2019ರ ಡಿಸೆಂಬರ್ ಮಂಗಳೂರಲ್ಲಿ ಸಿಎಎ ವಿರೋಧಿ ಹೋರಾಟ ಹಿಂಸಾರೂಪಕ್ಕೆ ತಿರುಗಿದ್ದ ಸಮಯ. ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಸಿಡಿಸಿದ್ದ ಗುಂಡಿಗೆ ಇಬ್ಬರು ಬಲಿಯಾಗಿದ್ದರು. ಇದ್ರ ಬೆನ್ನಲ್ಲೇ ಬೂದಿಮುಚ್ಚಿದ್ದ ಕೆಂಡದಂತಿದ್ದ ಮಂಗಳೂರಲ್ಲಿ ಪತ್ತೆಯಾಗಿದ್ದ ಪ್ರಚೋದನಕಾರಿ ಗೋಡೆ ಬರಹ ಉರಿಯೋ ಬೆಂಕಿಗೆ ತುಪ್ಪ ಸುರಿಯುವಂತಿತ್ತು. ಬಂಧಿತ ಶಂಕಿತ ಉಗ್ರ ಮಾಝ್ ಹಾಗೂ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿ ಆಸ್ಪತ್ರೆ ಪಾಲಾಗಿರೋ ಶಾರೀಕ್ 2019ರಲ್ಲಿ ಗೋಡೆ ಬರಹದ ಮೂಲಕವೇ ಉಗ್ರ ಕೃತ್ಯದ ಸೂಚನೆ ನೀಡಿದ್ದರು.
2019ರ ಡಿಸೆಂಬರ್ನಲ್ಲಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದ ಆವರಣ ಗೋಡೆ ಮೇಲೆ ‘ಪ್ರವಾದಿ ನಿಂದನೆಗೆ ಶಿರಚ್ಛೇದ ಮಾಡುವುದೇ ಏಕೈಕ ಶಿಕ್ಷೆ’ ಅಂತಾ ಬರೆದು ಲಷ್ಕರ್ ಜಿಂದಾಬಾದ್ ಅಂತಾ ಉಗ್ರ ಸಂಘಟನೆಗೆ ಜೈಕಾರ ಹಾಕಿದ್ದರು. ಇದಾದ ಬಳಿಕ ಬಿಜೈನ ಅಪಾರ್ಟ್ಮೆಂಟ್ನ ಆವರಣ ಗೋಣೆ ಮೇಲೂ ಉಗ್ರರ ಪರ ಸಂದೇಶ ಬರೆದಿದ್ದ ಮಾಝ್ ಹಾಗೂ ಶಾರೀಕ್, ‘ಸಂಘಿಗಳು ಹಾಗೂ ಮನುವಾದಿಗಳನ್ನು ನೋಡಿಕೊಳ್ಳಲು ಲಷ್ಕರ್ – ಎ -ತಯ್ಬಾ ಹಾಗೂ ತಾಲಿಬಾನಿಗಳನ್ನು ಇಲ್ಲಿಗೆ ಕರೆ ತರುವಂಥಾ ಅನಿವಾರ್ಯತೆಯನ್ನು ಸೃಷ್ಟಿಸಬೇಡಿ.’ ಅಂತಾ ವಾರ್ನಿಂಗ್ ಕೊಟ್ಟಿದ್ದರು. ಈ ಮೂಲಕ ತಮ್ಮ ಟಾರ್ಗೆಟ್ ಮಂಗಳೂರು ಅಂತಾ ನೇರ ಎಚ್ಚರಿಕೆ ಕೊಟ್ಟಿದ್ದರು. ಈ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಶಾರೀಕ್, ಕೋರ್ಟ್ನಿಂದ ಜಾಮೀನು ಪಡೆದು ಹೊರಬಂದಿದ್ದ.
ಕಡಲತಡಿಯ ಮಂಗಳೂರು ಮೊದಲಿನಿಂದಲೂ ಉಗ್ರರಿಗೆ ಸ್ಲೀಪರ್ ಸೆಲ್ ಆಗಿತ್ತು. ಇದ್ರ ನಡುವೆಯೇ ಗೋಡೆ ಬರಹ, ಎಚ್ಚರಿಕೆಯ ಸಂದೇ ಕೂಡಾ ಓಪನ್ ಆಗಿ ನೀಡಲಾಗಿತ್ತು. ಆದ್ರೆ ಮೊನ್ನೆ ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಬಳಿಕ, ಈ ಹಿಂದೆ ಶಂಕಿತರು ನೀಡಿದ್ದ ಎಚ್ಚರಿಕೆಯನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ವಾ ಅನ್ನೋ ಶಂಕೆ ಮೂಡುತ್ತಿದೆ. ಸ್ಫೋಟದ ವೇಳೆ ಗಾಯಗೊಂಡಿದ್ದ ಆಟೋ ಚಾಲಕ ಪುರುಷೋತ್ತಮ್ ಚೇತರಿಸಿಕೊಳ್ತಿದ್ದು, ಇನ್ನೆರಡು ದಿನಗಳಲ್ಲಿ ವಾರ್ಡ್ಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಆಸ್ಪತ್ರೆಗೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಗಾಯಾಳು ಪುರುಷೋತ್ತಮ್ರ ಆರೋಗ್ಯ ವಿಚಾರಿಸಿದ್ರು. ಇನ್ನು ಕುಕ್ಕರ್ ಬಾಂಬ್ ಬ್ಲಾಸ್ಟ್ನಲ್ಲಿ ಗಾಯಗೊಂಡಿರೋ ಶಂಕಿತ ಶಾರೀಕ್ ಆರೋಗ್ಯದಲ್ಲಿ ಸುಧಾರಣೆ ಕಂಡಿದೆ. ಆತ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಷಡ್ಯಂತ್ರದ ಒಟ್ಟು ಚಿತ್ರಣ ಹೊರಬೀಳಲಿದೆ.
ಕುಕ್ಕರ್ ಬಾಂಬ್ ಬ್ಲಾಸ್ಟ್ ಕೇಸ್ಗೆ ಎಂಟ್ರಿಯಾಗುತ್ತಾ ಎನ್ಐಎ?
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ತಿದೆ. ಕೇಂದ್ರದ ತನಿಖಾ ತಂಡಗಳಾದ NIA, RAW ಹಾಗೂ IBಯ ಅಧಿಕಾರಿಗಳು ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಸ್ಫೋಟದ ಹಿಂದೆ ಭಯೋತ್ಪಾದಕರ ಕೈವಾಡ ಶಂಕೆ ಹಿನ್ನೆಲೆ ಮುಂದಿನ ತನಿಖೆಗಾಗಿ ಎನ್ಐಎಗೆ ವರ್ಗಾಯಿಸುವ ಸಾಧ್ಯತೆ ಇದೆ.
ಮಂಗಳೂರಿನ ನಾಗುರಿಯಲ್ಲಿ ನಡೆದಿರೋ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಗಂಭೀರ ಆಯಾಮಗಳನ್ನು ಪಡೆದುಕೊಳ್ತಿದೆ. ಶಾರೀಕ್ ಹಾಗೂ ಸಹಚರರು ಈ ಹಿಂದೆ ನಡೆಸಿರೋ ಕುಕೃತ್ಯಗಳ ಬಗ್ಗೆಯೂ ಆಳವಾದ ತನಿಖೆ ಮಾಡೋದಾಗಿ ಗೃಹ ಸಚಿವರು ಸುಳಿವು ಕೊಟ್ಟಿದ್ದಾರೆ. ಆದ್ರೆ ಗೋಡೆ ಬರಹದ ಬಳಿಕ ಶಾರೀಕ್ನ ಬಗ್ಗೆ ಪೊಲೀಸರು ತೋರಿದ್ದ ನಿರ್ಲಕ್ಷ್ಯವೇ ಆತ ಇಷ್ಟೊಂದು ಪ್ಲಾನ್ ಮಾಡಲು ಕಾರಣವಾಯ್ತಾ ಅನ್ನೋ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post