ಕಾಂತಾರದ ದಾಖಲೆಗಳ ಪುಟಕ್ಕೆ ಹೊಸದೊಂದು ದಾಖಲೆ ಸೇರಿಕೊಂಡಿದೆ. ಈಗ ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಹಣವನ್ನು ಮಾಡಿದೆ. ಇಷ್ಟು ದಿನ ಕೆಜಿಎಫ್ ಹೆಸರಿನಲ್ಲಿದ್ದ ಕಲೆಕ್ಷನ್ ದಾಖಲೆಯನ್ನ ಕಾಂತಾರ ತನ್ನ ಹೆಸರಿಗೆ ಬದಲಿಸಿಕೊಂಡಿದ್ದು, ಕರುನಾಡಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದುಕೊಂಡಿದೆ.
ವರ್ಲ್ಡ್ವೈಡ್ 400 ಕೋಟಿ ಗಳಿಸಿದ ಕಾಂತಾರ
ಕರ್ನಾಟಕದಲ್ಲಿ ರಿಷಬ್ ಶೆಟ್ಟಿ ಚಿತ್ರ ನಂಬರ್ ಒನ್
ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಅತಿ ಹೆಚ್ಚು ಗಳಿಸಿದ ಸಿನಿಮಾ ಎಂಬ ದಾಖಲೆ ಕೆಜಿಎಫ್ ಚಾಪ್ಟರ್ 2 ಹೆಸರಿನಲ್ಲಿತ್ತು. ಆದ್ರೀಗ, ಈ ದಾಖಲೆಯನ್ನ ಅಳಿಸಿ ಹಾಕಿರುವ ಕಾಂತಾರ ತನ್ನ ಹೆಸರಿಗೆ ಆ ದಾಖಲೆಯನ್ನ ವರ್ಗಾಯಿಸಿಕೊಂಡಿದೆ. ಈ ಮೂಲಕ ಕರ್ನಾಟಕ ಬಾಕ್ಸ್ ಆಫೀಸ್ನಲ್ಲಿ ಹೈಯೆಸ್ಟ್ ಕಲೆಕ್ಷನ್ ಮಾಡಿರುವ ಸಿನಿಮಾಗಳ ಪಟ್ಟಿಯಲ್ಲಿ ರಿಷಬ್ ಶೆಟ್ಟಿಯ ಕಾಂತಾರ ನಂಬರ್ ಒನ್. ಸೆಪ್ಟೆಂಬರ್ ಕೊನೆಯಲ್ಲಿ ರಿಲೀಸ್ ಆಗಿದ್ದ ಕಾಂತಾರ 50 ದಿನಗಳನ್ನ ಪೂರೈಸಿ ದೇಶಾದ್ಯಂತ ಇನ್ನು ಹಲವು ಚಿತ್ರಮಂದಿರಗಳಲ್ಲಿ ಹೌಸ್ಫುಲ್ ಪ್ರದರ್ಶನ ಕಾಣ್ತಿದೆ. ಈ ನಡುವೆ ವರ್ಲ್ಡ್ವೈಡ್ 400 ಕೊಟಿ ಕ್ಲಬ್ ಸೇರಿದೆ ಎನ್ನುವ ಲೇಟೆಸ್ಟ್ ಸಮಾಚಾರ ಹೊರಬಿದ್ದಿದೆ. ಹೌದು, ಕಾಂತಾರ ಸಿನಿಮಾದ ಕನ್ನಡ, ತೆಲುಗು, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಒಟ್ಟು 400 ಕೋಟಿ ಗಳಿಸಿ ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಈ ಮೂಲಕ ಈ ವರ್ಷ ಅತಿ ಹೆಚ್ಚು ಗಳಿಸಿದ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ಕಾಂತಾರಕ್ಕೆ ಐದನೇ ಸ್ಥಾನ.
ಕರ್ನಾಟಕದಲ್ಲಿ ಕಾಂತಾರ ಗಳಿಸಿದ್ದೆಷ್ಟು?
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಕರ್ನಾಟಕ ಕಲೆಕ್ಷನ್ 165 ಕೋಟಿ. ಈಗ ಈ ದಾಖಲೆ ಹಿಂದಿಕ್ಕಿರುವ ಕಾಂತಾರ ಕನ್ನಡ ನಾಡಲ್ಲಿ ಇದುವರೆಗೂ 168 ಕೋಟಿ ಗಳಿಸಿ ನಂಬರ್ ವನ್ ಎನಿಸಿಕೊಂಡಿದೆ. ಕರ್ನಾಟಕದಲ್ಲಿ 168 ಕೋಟಿಗಳಿಸಿರುವ ಕಾಂತಾರ, ಆಂಧ್ರ-ತೆಲಂಗಾಣದಲ್ಲಿ 60 ಕೋಟಿ, ಕೇರಳದಲ್ಲಿ 19.2 ಕೋಟಿ, ತಮಿಳುನಾಡಿನಲ್ಲಿ 12.7 ಕೋಟಿ ಹಾಗೂ ವಿದೇಶದಲ್ಲಿ 44.5 ಕೋಟಿ ತನ್ನ ಖಾತೆಗೆ ಹಾಕಿಕೊಂಡಿದೆ. ಸರ್ಪ್ರೈಸ್ ಅಂಡ್ ಸ್ಪೆಷಲ್ ಅಂದ್ರೆ ಕರ್ನಾಟಕ ಹೊರತುಪಡಿಸಿದರೆ ಉತ್ತರ ಭಾರತದಲ್ಲಿ ಕಾಂತಾರಕ್ಕೆ ಹೆಚ್ಚು ಯಶಸ್ಸು ಸಿಕ್ಕಿದೆ. ಉತ್ತರ ಭಾರತದಲ್ಲಿ ರಿಷಬ್ ಶೆಟ್ಟಿಯ ಸಿನಿಮಾ ಬರೋಬ್ಬರಿ 96 ಕೋಟಿ ಬ್ಯುಸಿನೆಸ್ ಮಾಡಿದೆ.
ಕಾಂತಾರ ಮತ್ತು ಕೆಜಿಎಫ್ ಎರಡು ಚಿತ್ರವನ್ನ ನಿರ್ಮಾಣ ಮಾಡಿರೋ ಹೊಂಬಾಳೆ ಫಿಲಂಸ್. ಐದು ಭಾಷೆಯಲ್ಲಿ ತೆರೆಕಂಡಿದ್ದ ಚಾಪ್ಟರ್ 2 ವರ್ಲ್ಡ್ವೈಡ್ 1250 ಕೋಟಿಗೂ ಹೆಚ್ಚು ಹಣ ಬಾಚಿಕೊಂಡಿತ್ತು. ಈಗ 15 ರಿಂದ 16 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಕಾಂತಾರ 400 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಹಾಗಾಗಿ, ಈ ಎರಡು ಚಿತ್ರಗಳಿಂದಲೇ ಹೊಂಬಾಳೆ ಪ್ರೊಡಕ್ಷನ್ ಈ ವರ್ಷದ ಅತಿ ಹೆಚ್ಚು ವ್ಯವಹಾರ ಮಾಡಿದೆ. ದಾಖಲೆಗಳು ಯಾವತ್ತೂ ಶಾಶ್ವತವಲ್ಲ. ಅವತ್ತು ಕೆಜಿಎಫ್, ಇವತ್ತು ಕಾಂತಾರ, ನಾಳೆ ಇನ್ನೊಂದು. ಆದರೆ ಇನ್ನೊಂದು ಸಿನಿಮಾ ಬರೋವರೆಗೂ ಕರ್ನಾಟಕದಲ್ಲಿ ಅತಿ ಹೆಚ್ಚು ಗಳಿಸಿದ ಸಿನಿಮಾ ಕಾಂತಾರ ಅನ್ನೋದು ಮಾತ್ರ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post