ಅದೊಂದು ಅಭಿವೃದ್ಧಿ ಹೊಂದಿದ ರಾಷ್ಟ್ರದ ಸಿಟಿ. ಆದರೇ ಅಲ್ಲಿ ಸಾವಿರಾರು ಮನೆಗಳಿಲ್ಲ. ಇರೋದು ಒಂದೇ ಕಟ್ಟಡ. ಆ ಕಟ್ಟಡದಲ್ಲಿ ಆ ಸಿಟಿಯ ಶೇ.80 ರಷ್ಟು ಜನರ ವಾಸ ಮಾಡ್ತಿದ್ದಾರೆ. ದಿನಸಿ ಅಂಗಡಿ, ಪೊಲೀಸ್ ಸ್ಟೇಷನ್, ಸ್ಕೂಲ್, ಅಂಚೆ ಕಚೇರಿ, ಆಸ್ಪತ್ರೆ ಎಲ್ಲವೂ ಒಂದೇ ಕಟ್ಟಡದಲ್ಲಿದೆ. ಒಂದೇ ಕಟ್ಟಡದಲ್ಲಿ ಒಂದು ಸಿಟಿಯ ಶೇ.80 ರಷ್ಟು ಜನರು ವಾಸಿಸುತ್ತಿದ್ದಾರೆ. ಆ ಸಿಟಿ ಯಾವುದು? ಅದು ಇರೋದು ಎಲ್ಲಿ? ಜನರೆಲ್ಲರೂ ಏಕೆ ಒಂದೇ ಕಟ್ಟಡದಲ್ಲಿ ವಾಸ ಮಾಡ್ತಿದ್ದಾರೆ ಅನ್ನೋದರ ವಿವರ ಇಲ್ಲಿದೆ.
ಸಿಟಿಯ ಎಲ್ಲರೂ ಒಂದೇ ಕಟ್ಟಡದಲ್ಲಿ ವಾಸಿಸುತ್ತಿದ್ದರೆ ನಿಮಗೆ ಅಚ್ಚರಿ ಅನ್ನಿಸಬಹುದು. ಆದರೆ, ಇದು ಸತ್ಯ. ಸಿಟಿಯ ಎಲ್ಲ ಜನರು ಒಂದೇ ಕಟ್ಟಡದಲ್ಲಿ ವಾಸ ಮಾಡ್ತಿರುವ ಆ ಸಿಟಿ ಯಾವುದೆಂದರೆ ಅಮೆರಿಕಾದ ಅಲಾಸ್ಕಾ ರಾಜ್ಯದ ಸಿಟಿಯೇ ವಿಟ್ಟಿಯರ್. ಇದರ ಜನಸಂಖ್ಯೆಯ ಶೇ.80 ರಷ್ಟು ಜನರು ಒಂದೇ ಛಾವಣಿಯಡಿಯಲ್ಲಿ ವಾಸಿಸುತ್ತಿದ್ದಾರೆ. ವಿಟ್ಟಿಯರ್ ಸಿಟಿಯಲ್ಲಿ 14 ಅಂತಸ್ತಿನ ಕಟ್ಟಡ ಇದೆ. ಇಲ್ಲೇ ಆಸ್ಪತ್ರೆ, ಪೊಲೀಸ್ ಠಾಣೆ, ಚರ್ಚ್, ಮುನ್ಸಿಪಲ್ ಕಚೇರಿ ಮತ್ತು ದಿನಸಿ ಅಂಗಡಿ ಸೇರಿದಂತೆ ಎಲ್ಲ ಸೌಲಭ್ಯಗಳು ಇವೆ. ಬೆಗಿಚ್ ಟವರ್ಸ್ ಎಂದು ಕರೆಯಲ್ಪಡುವ ಈ ಕಟ್ಟಡವು ಈ ಹಿಂದೆ ಸೇನಾ ಬ್ಯಾರಕ್ ಆಗಿತ್ತು. ಇದು ದೊಡ್ಡ ಹೋಟೆಲ್ ಅನ್ನು ಹೋಲುತ್ತದೆ. ಈ ಕಟ್ಟಡದ ನೆಲಮಾಳಿಗೆಯಲ್ಲಿ ಸ್ಕೂಲ್ ಗೆ ಹೋಗುವ ಸುರಂಗವಿದೆ. ಈ ಕಟ್ಟಡದಲ್ಲಿ ಸದ್ಯ 318 ಜನರು ವರ್ಷವಿಡೀ ವಾಸಿಸುತ್ತಿದ್ದಾರೆ.
ವಿಟ್ಟಿಯರ್ ಸಿಟಿ 1940 ರಿಂದಲೂ ಇದೆ, ಇದನ್ನು ಎರಡನೇ ಮಹಾಯುದ್ಧದ ವೇಳೆ ನಿರ್ಮಿಸಲಾಯಿತು. ಇದು ಮಿಲಿಟರಿ ಬಂಕರ್ ಆಗಿತ್ತು. ಎರಡನೇ ವಿಶ್ವ ಮಹಾಯುದ್ದದ ನಂತರ ಅನೇಕ ಜನರು ಈ ವಿಟ್ಟಿಯರ್ ಸಿಟಿಯನ್ನು ಬಿಟ್ಟು ಬೇರೆಡೆಗೆ ಹೋದರು. ಆದರೆ 1964 ರ ಭೂಕಂಪದವರೆಗೂ ಇಲ್ಲಿ ಹೆಚ್ಚಿನ ಜನರು ವಾಸ ಇದ್ದರು. ಭೂಕಂಪದ ನಂತರ ವಿಟ್ಟಿಯರ್ಗೆ ಸಾಕಷ್ಟು ಹಾನಿಯಾಗಿದೆ. ಆದ್ದರಿಂದ ಅನೇಕ ಜನರು ವಿಟ್ಟಿಯರ್ ಸಿಟಿ ಬಿಟ್ಟು ಬೇರೆಡೆಗೆ ವಲಸೆ ಹೋದರು. ಆದರೆ ಈ ಮಿಲಿಟರಿ ವಸತಿ ಕಟ್ಟಡ ಮಾತ್ರ ಹಾಗೆಯೇ ಉಳಿದುಕೊಂಡಿದೆ.
ಎಲ್ಲರೂ ಒಂದೇ ಕಟ್ಟಡದಲ್ಲಿ ಏಕೆ ವಾಸಿಸುತ್ತಿರೋದು ಏಕೆ ಅಂದ್ರೆ ‘ಇಲ್ಲಿ ಬೇರೆ ಯಾವುದೇ ಮನೆಗಳಿಲ್ಲ. ಏಕೆಂದರೆ ಜನರು ಬೇರೆ ಯಾವುದೇ ಆಸ್ತಿಯನ್ನು ಖರೀದಿಸಲು ಸಾಧ್ಯವಿಲ್ಲ. ಏಕೆಂದರೆ ಬಹುತೇಕ ಆಸ್ತಿಪಾಸ್ತಿ, ಭೂಮಿ ಎಲ್ಲವೂ ರೈಲು ಇಲಾಖೆಯ ಒಡೆತನದಲ್ಲಿದೆ. ಹೀಗಾಗಿ ಸರ್ಕಾರದ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಖರೀದಿಸಿ ಪ್ರತೇಕ ಮನೆ ಕಟ್ಟಲು ಸಾಧ್ಯವೇ ಇಲ್ಲ. ಹೀಗಾಗಿ ಇರುವ ಒಂದೇ ಕಟ್ಟಡದಲ್ಲಿ ವಾಸಿಸೋದು ಜನರಿಗೆ ಅನಿವಾರ್ಯವಾಗಿದೆ.
ಈ ಕಟ್ಟಡದಲ್ಲಿ ಜನರು ಸ್ವಂತ ಪ್ಲ್ಯಾಟ್ ಅನ್ನು ಖರೀದಿಸಬಹುದು. ಪ್ಲ್ಯಾಟ್ ಅನ್ನು ಮಾಲೀಕರಿಂದ ಬಾಡಿಗೆಗೆ ಪಡೆಯಬಹುದು. ಆದರೆ ಹೆಚ್ಚಾಗಿ ಪ್ರತಿಯೊಬ್ಬರೂ ತಮ್ಮ ಸ್ವಂತ ಪ್ಲ್ಯಾಟ್ ಅನ್ನು ಹೊಂದಿದ್ದಾರೆ. ನೀರು, ವಿದ್ಯುತ್ ಸೇರಿದಂತೆ ಮಾಸಿಕ ಬಿಲ್ಗಳನ್ನ ಪಾವತಿಸಬೇಕಾಗುತ್ತದೆ.
ಜನರು ಮನರಂಜನೆಗಾಗಿ ಬೇಸಿಗೆಯಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಬಹುದು. ಹತ್ತಿರದ ಪ್ರದೇಶದಲ್ಲಿ ಜನರು ದೋಣಿಯಲ್ಲಿ ಸಂಚಾರ ಮಾಡಬಹುದು. ಜನರು ಟ್ರಕ್ಕಿಂಗ್ಗೆ ಹೋಗಬಹುದು, ಹತ್ತಿರದ ಪ್ರದೇಶಗಳಲ್ಲಿ ಜನರು ಮೀನುಗಾರಿಕೆ ಮಾಡಬಹುದು. ಚಳಿಗಾಲದಲ್ಲಿ ಈ ಪ್ರದೇಶದಲ್ಲಿ ಹೆಚ್ಚಿನ ಹಿಮಪಾತ ಆಗುತ್ತೆ. ಹಾಗಾಗಿ ಹೊರಗಡೆ ಓಡಾಡುವುದೇ ಕಷ್ಟ. ಎಲ್ಲವೂ ಹಿಮದಲ್ಲಿ ಮುಚ್ಚಿ ಹೋಗಿರುತ್ತೆ. ಈ ಬೆಗಿಚ್ ಟವರ್ಸ್ ನಲ್ಲಿ ಅನೇಕ ಯುವಕ, ಯುವತಿಯರು ತಮ್ಮ ಪೋಷಕರ ಜೊತೆಗೆ ವಾಸ ಮಾಡ್ತಾರೆ. ಚಿಕ್ಕಂದಿನಿಂದಲೇ ಜೊತೆಯಲ್ಲೇ ಬೆಳೆದಿರುವುದರಿಂದ ನಾವು ಪರಸ್ಪರ ಡೇಟಿಂಗ್ ಮಾಡಲ್ಲ ಅಂತ ಇಲ್ಲಿ ವಾಸ ಇರುವ ಯುವಕ, ಯುವತಿಯರು ಹೇಳುತ್ತಾರೆ.
ವಿಶೇಷ ಬರಹ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post