ಮಧ್ಯಪ್ರದೇಶದಲ್ಲಿ ಮುಕ್ತಾಯದ ಹಂತ ತಲುಪಿರೋ ಭಾರತ್ ಜೋಡೋ ಯಾತ್ರೆ ಮರುಭೂಮಿಯ ನಾಡಿಗೆ ಲಗ್ಗೆ ಇಡಲು ಸಜ್ಜಾಗಿದೆ. ಈ ಮಧ್ಯೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸಚಿನ್ ಪೈಲೆಟ್ ಮೇಲೆ ಮತ್ತೊಮ್ಮೆ ಸಿಡಿಮಿಡಿಗೊಂಡಿದ್ದಾರೆ. ಅಮಿತ್ ಶಾ ಮೇಲೂ ಅಶೋಕ್ ಗಂಭೀರ ಆರೋಪವೊಂದನ್ನ ಮಾಡಿದ್ದಾರೆ. ಆಪರೇಷನ್ ಕಮಲದ ಕಥೆಯನ್ನ ಹೇಳಿದ್ದಾರೆ.
ರಾಜಸ್ಥಾನ ರಾಜಕೀಯ ಬಿಕ್ಕಟ್ಟಿಗೆ ಟ್ವಿಸ್ಟ್..
ಸೆಪ್ಟೆಂಬರ್ನಲ್ಲಿ ಮರುಭೂಮಿ ನಾಡಿನ ಕಾಂಗ್ರೆಸ್ ಸರ್ಕಾರದಲ್ಲಿ ಎದ್ದಿದ್ದ ಅಸಮಾಧಾನದ ಅಲೆ ಮುಖ್ಯಮಂತ್ರಿ ಕುರ್ಚಿ ಶೇಕ್ ಶೇಖ್ ಮಾಡಿತ್ತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ಪರ್ಧೆ ಮಾಡ್ತಾರೆ ಅನ್ನೋ ಸುದ್ದಿ ಹರಿದಾಡಿದ ಬೆನ್ನಲ್ಲೇ, ಸಚಿನ್ ಪೈಲಟ್ ಮುಖ್ಯಮಂತ್ರಿ ಕುರ್ಚಿ ಏರೋ ಕನಸು ಕಂಡಿದ್ರು. ಅಸಮಾಧಾನಿತ ಶಾಸಕರ ಟೀಂ ಕಟ್ಟಿ ಸಚಿನ್ ಪೈಲೆಟ್ ಕಾಂಗ್ರೆಸ್ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿದ್ರು. ಇನ್ನೇನುಪೈಲಟ್ ಮುಖ್ಯಮಂತ್ರಿ ಆಗೇ ಬಿಟ್ರು ಅನ್ನೋ ಹೊತ್ತಲ್ಲೇ ಅಧ್ಯಕ್ಷ ಸ್ಥಾನದ ಚುನಾವಣೆಯಿಂದ ಹಿಂದೆ ಸರಿದು ಪೈಲೆಟ್ ಕನಸಿಗೆ ಗೆಹ್ಲೋಟ್ ತಣ್ಣೀರೆರಚಿದ್ರು.
ಯಾತ್ರೆಯಲ್ಲಿ ಸಚಿನ್ ಭಾಗಿ ಅಶೋಕ್ ಸಿಡಿಮಿಡಿ..
ಭಾರತ್ ಜೋಡೋ ಯಾತ್ರೆ ಮೂಲಕ ದೇಶವನ್ನ ಒಗ್ಗೂಡಿಸುವ ಪಣ ತೊಟ್ಟಿರುವ ರಾಹುಲ್ ಗಾಂಧಿ ಮಧ್ಯಪ್ರದೇಶದಲ್ಲಿ ಸಹೋದರಿ ಪ್ರಿಯಾಂಕ ವಾದ್ರಾ ಜೊತೆ ಹೆಜ್ಜೆ ಹಾಕಿದ್ರು. ಈ ವೇಳೆ ಜೋಡೋ ಯಾತ್ರೆಯಲ್ಲಿ ಸಚಿನ್ ಪೈಲೆಟ್ ಸಹ ಭಾಗಿಯಾಗಿದ್ರು. ಮಧ್ಯಪ್ರದೇಶದ ಬಳಿಕ ರಾಜಸ್ಥಾನಕ್ಕೆ ಜೋಡೋ ಯಾತ್ರೆ ಕಾಲಿಡ್ತಿದ್ದು ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಸಕಲ ಸಿದ್ಧತೆ ನಡೀತಾಯಿದೆ. ಈ ವೇಳೆ ಮಾಧ್ಯಮದವರ ಮಾತಾಡುವ ವೇಳೆ ಗೆಹ್ಲೋಟ್, ಸಚಿನ್ ಪೈಲೆಟ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಿರೋ ಬಗ್ಗೆ ಗುಡುಗಿದ್ದಾರೆ.
‘ಸಚಿನ್ ಪೈಲೆಟ್ ಸಿಎಂ ಆಗಲು ಸಾಧ್ಯವಿಲ್ಲ’-‘ಗದ್ದರ್’ ಎಂದ ಗೆಹ್ಲೋಟ್
‘ಗದ್ದರ್’ ಅಂದ್ರೆ ದೇಶದ್ರೋಹಿ ಅಂತ. ಸಚಿನ್ ಪೈಲೆಟ್ ವಿರುದ್ದ ಮಾತಿನ ಚಾಟಿ ಬೀಸಿರುವ ಗೆಹ್ಲೋಟ್ ಅವರನ್ನ ಗದ್ದರ್ ಅಂತ ಟೀಕಿಸಿದ್ದಾರೆ. 2020 ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದು ತಮ್ಮದೇ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿದ್ದರಿಂದ ಅವರು ಸಿಎಂ ಆಗಲು ಸಾಧ್ಯವಿಲ್ಲ ಅಂತ ಗೆಹ್ಲೋಟ್ ಗುಡುಗಿದ್ದಾರೆ.
ಇಷ್ಟಕ್ಕೆ ಮುಗಿಯದ ಗೆಹ್ಲೋಟ್ ವಾಕ್ ಪ್ರಹಾರ ಅಮಿತ್ ಶಾ ಬುಡಕ್ಕೂ ತಲುಪಿದೆ. ಅಮಿತ್ ಶಾ ವಿರುದ್ದ ಗಂಭೀರ ಆರೋಪವೊಂದನ್ನ ಗೆಹ್ಲೋಟ್ ಮಾಡಿದ್ದಾರೆ.
ಅಮಿತ್ ಶಾ Vs ಅಶೋಕ್; ಪುರಾವೆ ಇದೆ ಅಂತ ಗೆಹ್ಲೋಟ್ ಹೊಸ ಬಾಂಬ್
ಸಚಿನ್ ಪೈಲಟ್ ಬಂಡಾಯದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗಿಯಾಗಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ. ಪೈಲಟ್ಗೆ ನಿಷ್ಠರಾಗಿರುವ ಕೆಲವು ಕಾಂಗ್ರೆಸ್ ಶಾಸಕರು ಒಂದು ತಿಂಗಳಿಗೂ ಹೆಚ್ಚು ಕಾಲ ಗುರುಗ್ರಾಮ್ ರೆಸಾರ್ಟ್‌ನಲ್ಲಿ ಬೀಡುಬಿಟ್ಟಿದ್ದರು. ಈ ವೇಳೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿದ್ದರು. ಪೈಲಟ್ ಸೇರಿದಂತೆ ಪ್ರತಿಯೊಬ್ಬ ಶಾಸಕರಿಗೆ 10 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂಬುದಕ್ಕೆ ತಮ್ಮ ಬಳಿ ಪುರಾವೆ ಇದೆ ಅಂತ ಹೊಸ ಬಾಂಬ್ವೊಂದನ್ನ ಸಿಡಿಸಿದ್ದಾರೆ.
ಒಟ್ಟಿನಲ್ಲಿ ರಾಜಸ್ಥಾನಕ್ಕೆ ಜೋಡೋ ಯಾತ್ರೆ ಕಾಲಿಡೋ ಹೊತ್ತಲ್ಲೇ ಕಾಂಗ್ರೆಸ್ ಅನ್ನೇ ತೋಡೋ ಮಾಡುವಂತಹ ಒಂದು ಹೇಳಿಕೆಯನ್ನ ಗೆಹ್ಲೋಟ್ ನೀಡಿರೋದು ಹಳೇ ಬೇಸರ ಹೊಸದಾಗಿ ಸ್ಫೋಟಿಸೋ ಸಾಧ್ಯತೆಗೆ ದಾರಿ ಮಾಡಿಕೊಟ್ಟಿದೆ. ತೆಲಂಗಾಣದಲ್ಲಿ ಕುದುರೆ ವ್ಯಾಪಾರದ ಸುಳಿಯಲ್ಲಿ ಬಿಜೆಪಿ ಸಿಲುಕಿದ ಬಳಿಕ ಇದೀಗ ಅಮಿತ್ ಶಾ ಮೇಲೂ ಕುದುರೆ ವ್ಯಾಪಾರದ ಆರೋಪ ಕೇಳಿ ಬಂದಿದೆ. ಬಿಜೆಪಿ ಪಾಳಯಕ್ಕೆ ಇದಕ್ಕೆ ಏನು ಉತ್ತರಿಸುತ್ತೆ? ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post