ಮಂಡ್ಯ: ಸಂಸದೆ ಸುಮಲತಾ ಆಪ್ತ ಇಂಡುವಾಳು ಸಚ್ಚಿದಾನಂದ ಅವರು ಇಂದು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗೋದಾಗಿ ತಿಳಿಸಿದ್ದಾರೆ. ಇಂಡುವಾಳು ಗ್ರಾಮದ ನಿವಾಸದಲ್ಲಿ ಸಚ್ಚಿದಾನಂದ ಅವರು, ಹಿತೈಷಿಗಳು, ಬೆಂಬಲಿಗರು ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಬಿಜೆಪಿಗೆ ಸೇರ್ಪಡೆ ಆಗೋದಾಗಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಸೇರ್ಪಡೆ ನಿರ್ಧಾರ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚ್ಚಿದಾನಂದ ಅವರು, ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಮಲತಾ ಅವರನ್ನು ಬೆಂಬಲಿಸಿದ ಕಾರಣ ಕಾಂಗ್ರೆಸ್ ನನ್ನನ್ನು ಉಚ್ಚಾಟನೆ ಮಾಡಿತ್ತು. ನನ್ನಂತೆ ಲಕ್ಷಾಂತರ ಕಾರ್ಯಕರ್ತರು ಸುಮಲತಾರನ್ನು ಬೆಂಬಲಿಸಿದ್ದರು. ಆ ವೇಳೆ ನನ್ನನ್ನು ಸೇರಿದಂತೆ ಹಲವು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಉಚ್ಚಾಟಿಸಲಾಗಿತ್ತು. ಆದರೆ ನನ್ನೊಬ್ಬನನ್ನು ಬಿಟ್ಟು ಉಳಿದವರೆಲ್ಲರನ್ನು ವಾಪಾಸ್ ಕರೆದುಕೊಳ್ಳಲಾಗಿದೆ. ನಾನು ಕೂಡ ಕಳೆದ ಎರಡು ವರ್ಷಗಳಿಂದ ಯಾವುದೇ ಪಕ್ಷದಲ್ಲಿ ಗುರುತಿಸಿಕೊಂಡಿರಲಿಲ್ಲ. ಈಗ ನರೇಂದ್ರ ಮೋದಿಯವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಲು ನಿರ್ಧರಿಸಿದ್ದೇನೆ. ಕಾಂಗ್ರೆಸ್ ನಾಯಕರ ಪಕ್ಷ, ಬಿಜೆಪಿ ಕಾರ್ಯಕರ್ತರ ಪಕ್ಷ. ಬಿಜೆಪಿ ಸದಸ್ಯತ್ವ ಪಡೆದು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ ಎಂದರು.
ಇದೇ ವೇಳೆ ಸಂಸದೆ ಸುಮಲತಾ ಅವರು ಕೂಡ ಬಿಜೆಪಿ ಸೇರ್ಪಡೆ ಆಗ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸುವ ಬಗ್ಗೆ ಸುಮಲತಾ ಅವರು ಸೂಕ್ತ ಸಮಯದಲ್ಲಿ ನಿರ್ಧಾರ ಮಾಡ್ತಾರೆ. ಜನವರಿ ವೇಳೆಗೆ ಶ್ರೀರಂಗಪಟ್ಟಣದಲ್ಲಿ ಬೃಹತ್ ಸಭೆ ನಡೆಸಲಾಗುತ್ತದೆ. ಶ್ರೀರಂಗಪಟ್ಟಣದ ಜನತೆ ವಂಶ ರಾಜಕಾರಣ ತೊರೆದು ಯುವ ನಾಯಕತ್ವ ಒಪ್ಪಿಕೊಳ್ಳುವ ವಿಶ್ವಾಸವಿದೆ. ಉಳಿದಂತೆ ನ.28 ರಂದು ಬೆಂಗಳೂರಿನ ಬಿಜೆಪಿ ರಾಜ್ಯ ಕೇಂದ್ರ ಕಚೇರಿಯಲ್ಲಿ ರಾಜ್ಯ ನಾಯಕರ ಸಮ್ಮುಖದಲ್ಲಿ ಪಕ್ಷವನ್ನು ಸೇರ್ಪಡೆ ಆಗಲಿದ್ದೇನೆ. ನಾನು ಸುಮಲತಾ ಅವರ ಆರ್ಶಿವಾದ ಪಡೆದುಕೊಂಡು ಬಿಜೆಪಿ ಸೇರ್ಪಡೆ ಆಗುತ್ತಿದ್ದೇನೆ. ಆದರೆ ಇನ್ನು ಲೋಕಸಭಾ ಚುನಾವಣೆಗೆ ಸಾಕಷ್ಟು ಸಮಯ ಇರೋದರಿಂದ ಸುಮಲತಾ ಅವರು ಕೂಡ ಸೂಕ್ತ ನಿರ್ಧಾರ ಮಾಡ್ತಾರೆ ಎಂದು ತಿಳಿಸಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post