ಅಭಿಷೇಕ್ ಅಂಬರೀಶ್ ಮತ್ತು ಸಪ್ತಮಿ ಗೌಡ ಅಭಿನಯದಲ್ಲಿ ಎಸ್. ಕೃಷ್ಣ ನಿರ್ದೇಶಿಸುತ್ತಿರುವ ‘ಕಾಳಿ’ ಚಿತ್ರದ ಮುಹೂರ್ತ, ಇಂದು ಬಂಡಿ ಮಂಕಾಳಮ್ಮ ದೇವಸ್ಥಾನದಲ್ಲಿ ಯಶಸ್ವಿಯಾಗಿ ನೆರವೇರಿದೆ.
1990ರ ದಶಕದ ಕಾವೇರಿ ಗಲಭೆಯ ಹಿನ್ನೆಲೆಯಲ್ಲಿ ನಡೆಯುವ ‘ಕಾಳಿ’ ಚಿತ್ರವನ್ನು ಕೃಷ್ಣ ಅವರ ಪತ್ನಿ ಸ್ವಪ್ನಾ ಕೃಷ್ಣ ತಮ್ಮ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯಡಿ ನಿರ್ಮಾಣ ಮಾಡುತ್ತಿದ್ದಾರೆ. ಇದು ಈ ಸಂಸ್ಥೆಯ ಮೂರನೇಯ ಚಿತ್ರವಾಗಿದೆ. ಸುದೀಪ್ ಅಭಿನಯದ ‘ಪೈಲ್ವಾನ್’ ಚಿತ್ರವನ್ನು ನಿರ್ಮಿಸುವ ಮೂಲಕ ಪ್ರಾರಂಭವಾದ RRR ಮೋಷನ್ ಪಿಕ್ಚರ್ಸ್ ಸಂಸ್ಥೆಯು, ಆ ನಂತರ ಪುನೀತ್ ರಾಜ್ಕುಮಾರ್ ಅಭಿನಯದಲ್ಲಿ ಹೊಸ ಚಿತ್ರವೊಂದನ್ನು ಘೋಷಿಸಿತ್ತು.
ಪುನೀತ್ ಅವರ ಅಕಾಲಿಕ ನಿಧನದಿಂದಾಗಿ ಸಂಸ್ಥೆಯ ಎರಡನೇ ನಿರ್ಮಾಣವನ್ನು ಅವರಿಗೇ ಅರ್ಪಿಸಲಾಗುವುದು. ‘ಕಾಳಿ’ ಚಿತ್ರವು RRR ಮೋಷನ್ ಪಿಕ್ಚರ್ಸ್ನ ಮೂರನೆಯ ಚಿತ್ರವಾಗಲಿದೆ. ಇದಲ್ಲದೇ ಕಳೆದ 8 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಪ್ರಮುಖ ನಿರ್ಮಾಪರಾಗಿ ಗುರುತಿಸಿಕೊಂಡಿದ್ದಾರೆ ಸ್ವಪ್ನ ಕೃಷ್ಣ.
ನಿರ್ದೇಶಕ ಕೃಷ್ಣ ಇದಕ್ಕೂ ಮುನ್ನ 25ಕ್ಕೂ ಹೆಚ್ಚು ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದು, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ‘ಮುಂಗಾರು ಮಳೆ’ ಚಿತ್ರಕ್ಕಾಗಿ ರಾಜ್ಯ ಸರ್ಕಾರದಿಂದ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡ ಅವರು, 2014ರಲ್ಲಿ ಯಶ್ ಅಭಿನಯದ ಯಶಸ್ವಿ ಚಿತ್ರ ‘ಗಜಕೇಸರಿ’ ಮೂಲಕ ನಿರ್ದೇಶಕರಾದರು. ಆ ನಂತರ ಸುದೀಪ್ ಅಭಿನಯದಲ್ಲಿ ‘ಹೆಬ್ಬುಲಿ’ ಮತ್ತು ‘ಪೈಲ್ವಾನ್’ ಚಿತ್ರಗಳನ್ನು ನಿರ್ದೇಶಿಸಿರುವ ಕೃಷ್ಣ ಅವರ ನಾಲ್ಕನೇ ನಿರ್ದೇಶನದ ಚಿತ್ರ ಈ ‘ಕಾಳಿ’.
‘ಕಾಳಿ’ ಚಿತ್ರದಲ್ಲಿ ಅಂಬರೀಶ್ ಮತ್ತು ಸುಮಲತಾ ಅವರ ಪುತ್ರ ಅಭಿಷೇಕ್ ಅಂಬರೀಶ್ ನಾಯಕನಾಗಿ ನಟಿಸುತ್ತಿದ್ದು, ಇದು ಅವರ ಅಭಿನಯದ ಮೂರನೆಯ ಚಿತ್ರವಾಗಿದೆ. ‘ಕಾಂತಾರ’ ಖ್ಯಾತಿಯ ಸಪ್ತಮಿ ಗೌಡ ಕಾಳಿ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಹಿಂದೆ ಕೃಷ್ಣ ನಿರ್ದೇಶನದ ‘ಹೆಬ್ಬುಲಿ’ ಮತ್ತು ‘ಪೈಲ್ವಾನ್’ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಕರುಣಾಕರ್, ಇಲ್ಲೂ ಛಾಯಾಗ್ರಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’, ‘ಟಗರು’ ‘ಸಲಗ’ ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಚರಣ್ ರಾಜ್ ಈ ಚಿತ್ರದ ಸಂಗೀತ ನಿರ್ದೇಶಕರು. ದೀಪು ಎಸ್ ಕುಮಾರ್ ಸಂಕಲನ ಮತ್ತು ‘ಕೆಜಿಎಫ್’ ಖ್ಯಾತಿಯ ಚಂದ್ರಮೌಳಿ ಈ ಚಿತ್ರಕ್ಕೆ ಸಂಭಾಷಣೆ ‘ಕಾಳಿ’ ಕಾಲಿಗೆ ಸಂಭಾಷಣೆ ಬರೆಯಲಿದ್ದಾರೆ. ‘ಕಾಳಿ’ ಚಿತ್ರದಲ್ಲಿ ಅಭಿನಯಿಸುವ ಕಲಾವಿದರಿಗಾಗಿ ಡಿಸೆಂಬರ್ನಲ್ಲಿ ವಿಶೇಷ ಕಾರ್ಯಾಗಾರವನ್ನು ಆಯೋಜಿಸಲಾಗಿದ್ದು, 2023ರ ಜನವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post