ಉಕ್ರೇನ್ನಲ್ಲಿ ಯುದ್ಧ ನಿಲ್ಲೋ ಲಕ್ಷಣ ಕಾಣ್ತಿಲ್ಲ. ದಿನ ಕಳೆದಂತೆ ರಣಭೂಮಿ ಮತ್ತಷ್ಟು, ಮಗದಷ್ಟು ರಕ್ತ ಸಿಕ್ತವಾಗ್ತಿದೆ. ಪುಟಿನ್ ಕೋಪಾವೇಷ, ರಣ ರಣತಂತ್ರಕ್ಕೆ ಉಕ್ರೇನ್ ಮಾತ್ರವಲ್ಲ. ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಎಚ್ಚರಿಕೆಯ ಕಣ್ಣುಗಳಿಂದ ನೋಡ್ತಿವೆ. ಆದ್ರೆ, ಈ ಭೀಕರ ಯುದ್ಧದ ಸೂತ್ರಧಾರ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೆಮ್ಮದಿಯಾಗಿದ್ದಾರಾ? ಇಲ್ಲ ಅಂತಿದೆ ಅವರ ಇತ್ತೀಚಿನ ಹಾವ-ಭಾವ ಹಾಗೂ ದೇಹಲಕ್ಷಣಗಳು.
ಕೆಂಪು ರಾಷ್ಟ್ರದ ಸರ್ವಾಧಿಕಾರಿಯಂತಲೇ ಖ್ಯಾತಿ ಪಡೆದಿರೋ ಪುಟಿನ್ ಬೆಳೆದು ಬಂದ ಹಾದಿಯೇ ರೋಚಕ. ಅಧಿಕಾರದ ಗದ್ದುಗೆ ಏರೋ ಮುನ್ನ ಖುದ್ದು ಫೀಲ್ಡ್ಗಿಳಿದು ಆಳ-ಅಗಲ ಅರಿತಿರೋ ಮಾಸ್ಟರ್ ಪ್ಲೇಯರ್. ಗುಪ್ತಚರ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರೋ ಆಡಳಿತಗಾರ. ಉಕ್ರೇನ್ ವಿರುದ್ಧ ಯುದ್ಧ ಗೆಲ್ಲಲು, ನ್ಯಾಟೋ ಪಡೆಗಳಿಗೆ ಖಡಕ್ ಸಂದೇಶ ರವಾನಿಸಲು ರಷ್ಯಾ ಹರಸಾಹಸ ನಡೆಸುತ್ತಿರುವ ಹೊತ್ತಿನಲ್ಲೇ ಪುಟಿನ್ ಆರೋಗ್ಯ ಹದಗೆಟ್ಟಿದೆ. ಕೈ ನಡಗುತ್ತಿದೆ. ಬಣ್ಣ ಬದಲಾಗ್ತಿದೆ.
ಮತ್ತಷ್ಟು ಹದಗೆಟ್ಟಿದ್ಯಾ ಪುಟಿನ್ ಆರೋಗ್ಯ?
ನೇರಳೆ ಬಣ್ಣಕ್ಕೆ ತಿರುಗಿದ ಪುಟಿನ್ ಕೈಗಳು
ಪುಟಿನ್ಗೆ ಕ್ಯಾನ್ಸರ್ ಹಾಗೂ ಪಾರ್ಕಿಸನ್ಸ್ ಕಾಡ್ತಿದೆ ಅನ್ನೋ ಬಗ್ಗೆ ಈ ಹಿಂದೆ ಹಲವು ವರದಿಗಳು ಬಂದಿವೆ. ಇದೀಗ ರಷ್ಯಾ ಅಧ್ಯಕ್ಷರ ಆರೋಗ್ಯ ಮತ್ತಷ್ಟು, ಮಗದಷ್ಟು ಕ್ಷೀಣಿಸುತ್ತಿದ್ಯಾ ಅನ್ನೋ ಅನುಮಾನ ಶುರುವಾಗಿದೆ.
ಇತ್ತೀಚೆಗೆ ಪುಟಿನ್ ಕ್ಯೂಬಾ ದೇಶದ ನಾಯಕ ಮಿಗುವೆಲ್ ಡಯಾಜ್ರನ್ನು ಭೇಟಿ ಮಾಡಿದ್ದರು. ಈ ವೇಳೆ ಪಾಶ್ಚಿಮಾತ್ಯ ದೇಶಗಳ ನಡೆ ವಿರುದ್ಧ ಕಿಡಿಕಾರಿದ್ರು. ಆದರೆ ಸಭೆಯಲ್ಲಿ ಪುಟಿನ್ ಮಾತಿಗಿಂತ ಹೆಚ್ಚು ಗಮನಸೆಳೆದಿದ್ದು, ಚರ್ಚೆಗೂ ದಾರಿ ಮಾಡಿಕೊಟ್ಟಿದ್ದು, ಅವರ ಕೈಗಳು. ಮೀಟಿಂಗ್ನ ವೇಳೆ ಪುಟಿನ್ ಕೈಗಳು ಪರ್ಪಲ್ ಅಂದ್ರೆ ತುಸು ನೇರಳೆ ಬಣ್ಣಕ್ಕೆ ತಿರುಗಿದಂತೆ ಕಂಡು ಬಂದಿದೆ. ಇದು ಹಲವಾರು ಸಂದೇಹಕ್ಕೆ ಕಾರಣವಾಗಿದೆ.
ಕಳೆದೆರಡು ತಿಂಗಳ ಹಿಂದೆ ಪುಟಿನ್ ಕೈಗಳು ಕಪ್ಪು ಬಣ್ಣಕ್ಕೆ ತಿರುಗಿದ್ದುದು ಸಾಕಷ್ಟು ಪ್ರಚಾರ ಪಡೆದಿತ್ತು. ಹಲವರು ಇದು ಇಂಜೆಕ್ಷನ್ಗಳ ಗುರುತು ಎಂದು ವಾದಿಸಿದ್ದರು. ಇದೀಗ ಕೈಗಳು ನೇರಳೆ ಬಣ್ಣಕ್ಕೆ ತಿರುಗಿರೋದು ಶಂಕೆಯ ಮನೆ ಕಟ್ಟುವಂತೆ ಮಾಡಿದೆ ಇದೊಂದೇ ಅಲ್ಲದೇ ಈ ಸಭೆಯ ಫೋಟೋ ಹಾಗೂ ವಿಡಿಯೋಗಳು ಹಲವು ಅನುಮಾನಗಳ ಚರ್ಚೆ ಹುಟ್ಟುಹಾಕಿರೋದು ಸುಳ್ಳಲ್ಲ. ಯಾಕಂದ್ರೆ ಮೀಟಿಂಗ್ ನಡುವೆ ಕೆಲವು ಬಾರಿ ಪುಟಿನ್ ತಮ್ಮ ಕೈಗಳಲ್ಲಿ ಕುರ್ಚಿಯನ್ನ ಗಟ್ಟಿಯಾಗಿ ಹಿಡಿದುಕೊಂಡಿದ್ದರು. ತಮ್ಮ ಕಾಲುಗಳನ್ನೂ ಸಾಮಾನ್ಯವಲ್ಲದಂತಹ ರೀತಿ ಅಲುಗಾಡಿಸುತ್ತಿದ್ದರು. ಇವೆಲ್ಲವೂ ಅನುಮಾನದ ಬಾಣವನ್ನ ರಷ್ಯಾ ಅಧ್ಯಕ್ಷರತ್ತ ತಿರುಗುವಂತೆ ಮಾಡಿದೆ.
ಒಟ್ಟಿನಲ್ಲಿ ಯುದ್ಧದ ಕಾವು ನಿಧಾನಗತಿಯಲ್ಲಿ ಹೆಚ್ಚಾಗ್ತಿರೋ ನಡುವೆ ರಷ್ಯಾ ಅಧ್ಯಕ್ಷರ ಆರೋಗ್ಯದ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಆರೋಗ್ಯದ ಬಗ್ಗೆಯ ಹಳೆಯ ಚರ್ಚೆಗಳು, ಹೊಸ ದಾಗಿ ಮುನ್ನೆಲೆಗೆ ಬಂದು ಮತ್ತಷ್ಟು ಬಿರುಸುಗೊಂಡಿದೆ. ಆದರೆ ರಷ್ಯಾ ಅಧ್ಯಕ್ಷರ ಬದುಕಲ್ಲಿ ನಡೆಯೋ ರಹಸ್ಯಗಳು. ಇತರರಿಗೆ ಎಂದೆಂದಿಗೂ ರಹಸ್ಯ. ಇಂತದ್ದೇ ಲೈಫ್ಸ್ಟೈಲನ್ನ ಮೊದಲಿನಿಂದಲೂ ಪುಟಿನ್ ರೂಢಿಸಿಕೊಂಡು ಬಂದಿದ್ದಾರೆ. ಹೀಗಾಗಿ ಪುಟಿನ್ ನಡೆ ಕಂಡುಹಿಡಿಯೋದು ಕೂಡ ಸುಲಭವೇನಲ್ಲ. ಆರೋಗ್ಯವೂ ಅಸ್ತ್ರದ ಮತ್ತೊಂದು ರೂಪವಾದ್ರೂ ಅಚ್ಚರಿ ಇಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post