ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಪ್ರವಾಸ ಮುಂದುವರೆದಿದೆ. ದೈವಿಭಕ್ತ ರೆಡ್ಡಿ, ಐತಿಹಾಸಿಕ ದೇವಸ್ಥಾನ ಮಠಗಳಿಗೆ ಪ್ರದಕ್ಷಿಣೆ ಹಾಕ್ತಿದ್ದಾರೆ. ಅಚ್ಚರಿ ಅಂದ್ರೆ ಬಿಜೆಪಿಗರು ಸಾಥ್ ನೀಡ್ತಿದ್ದಾರೆ. ಇನ್ನು, ಸಚಿವ ಶ್ರೀರಾಮುಲು ಮೇಲೆ ಜನಾರ್ದನ ರೆಡ್ಡಿಗೆ ಮುನಿಸು ಯಾಕೆ? ಬಳ್ಳಾರಿ ಜಿಲ್ಲೆಯ ರಾಜಕಾರಣದಲ್ಲಿ ಬೀಸುತ್ತಾ ಬಿರುಗಾಳಿ ಅನ್ನೋ ಚರ್ಚೆಗಳು ಗಣಿ ಜಿಲ್ಲೆಯಲ್ಲಿ ಹರಿದಾಡ್ತಿದೆ.
ಬಳ್ಳಾರಿಯ ಗಣಿಧಣಿ ಈಗ ಗಂಗಾವತಿಯ ನೆಂಟ. ಕಲ್ಯಾಣ ಕರ್ನಾಟಕದ ಕೇಂದ್ರಸ್ಥಳ ಈ ಭತ್ತದ ನಾಡಲ್ಲಿ ರಾಜಕೀಯ ಫಸಲು ಹೆಕ್ಕಲು ರೆಡ್ಡಿ ರಣತಂತ್ರ ಹೆಣೆದಿದ್ದಾರೆ. ಸೋಮವಾರ ಹನುಮ ನಾಡಲ್ಲಿ ಪ್ರತ್ಯಕ್ಷರಾದ ರೆಡ್ಡಿ, ಇವತ್ತು ಗಂಗಾವತಿಯಲ್ಲಿ ಮಿಂಚಿನ ಸಂಚಾರ ನಡೆಸಿದ್ರು. ಐತಿಹಾಸಿಕ ಹಿರೇಜಂತ್ಕಲ್ನ ಪ್ರಸನ್ನ ವೀರುಪಾಕ್ಷೇಶ್ವರ, ಗಂಗಾವತಿಯ ಶ್ರೀಕೊಟ್ಟೂರುಸ್ವಾಮಿ ಕಲ್ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ್ರು.. ರೆಡ್ಡಿ ಹೆಜ್ಜೆಗಳಿಗೆ ಬಿಜೆಪಿ ನಾಯಕರು ಸಾಥ್ ನೀಡಿ ಅಚ್ಚರಿ ಮೂಡಿಸಿದ್ರು.
ರೆಡ್ಡಿ ತಂತ್ರ ಫಲಿಸಿದ್ರೆ ಕೈ-ಕಮಲ ಧೂಳೀಪಟ ಫಿಕ್ಸ್..!
ಉಕ್ಕಿನ ನಗರ ಇಲ್ಲಿಗೆ ಹತ್ತಿರ. ಉಸಿರಾಡಲು ಬಳ್ಳಾರಿ ಗಾಳಿ ಬೀಸ್ಬೇಕು. ಇದು ಜನಾರ್ದನ ರೆಡ್ಡಿಯ ಈ ಹಿಂದೆ ಗಂಗಾವತಿಯನ್ನ ಮನದಾರತಿ ಆಗಿಸಿಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದರು. ಸದ್ಯ ಆ ಬಯಕೆಗಳು ಬಲಿತು, ಡಿಸೆಂಬರ್ 2ನೇ ವಾರದಿಂದ ಇಡೀ ಕಲ್ಯಾಣ ಕರ್ನಾಟಕ ಆವರಿಸಿಕೊಳ್ಳಲು ರೆಡ್ಡಿ ಪ್ಲಾನ್ ಮಾಡಿದ್ದಾರೆ. ಭತ್ತದ ನಾಡಿನಿಂದಲೇ ತಮ್ಮ ಶಕ್ತಿ ನಗರವನ್ನ ನಿಯಂತ್ರಿಸಲು ಮುಂದಾಗಿದ್ದಾರೆ.
ಜನಾರ್ದನ ರೆಡ್ಡಿಯ ನಡೆಗೆ ಶಾಕ್ ಆದ ಕಾಂಗ್ರೆಸ್, ಬಿಜೆಪಿಗರು
ಕೊಪ್ಪಳದ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ಕುತೂಹಲ ನಡೆ ಇಟ್ಟಿದ್ದಾರೆ. ಕೈ-ಕಮಲ, ಜೆಡಿಎಸ್ ಸ್ಥಳೀಯ ನಾಯಕರ ಮನೆಗಳಿಗೆ ಭೇಟಿ ನೀಡ್ತಿದ್ದಾರೆ. ಸ್ಥಳೀಯ ಸಂಸ್ಥೆಗಳ ಎಲ್ಲಾ ನಾಯಕರ ಮನೆಗಳಿಗೆ ವಿಸೀಟ್ ಮಾಡ್ತಿರುವ ರೆಡ್ಡಿ, 3 ಪಕ್ಷಗಳ ಅಹಿಂದ ಕಾರ್ಯಕರ್ತರನ್ನ ಸೆಳೆಯುತ್ತಿದ್ದಾರೆ. ಗಂಗಾವತಿಯ ವಿವಿಧ ಕಾರ್ಯಕ್ರಮಗಳಲ್ಲಿ ರೆಡ್ಡಿಗಾರು ಭಾಗಿ ಆಗ್ತಿದ್ದು, ಗಣಿಧಣಿಯ ಈ ನಡೆಗೆ ಕಾಂಗ್ರೆಸ್, ಬಿಜೆಪಿ ನಾಯಕರು ಶಾಕ್ ಆಗ್ತಿದ್ದಾರೆ.
ಇಷ್ಟೆಲ್ಲಾ ಬೆಳವಣಿಗೆ ನಡೀತಿದ್ರೂ ಕುಚುಕು ಗೆಳೆಯ ರಾಮುಲು ಮಾತ್ರ ಸೈಲೆಂಟ್ ಆಗಿದ್ದಾರೆ. ಈ ಬೆಳವಣಿಗೆ ರೆಡ್ಡಿ, ರಾಮುಲು ಮಧ್ಯೆ ಬಿರುಕು ಮೂಡಿದೆಯಾ ಅನ್ನೋ ಅನುಮಾನದ ಗಾಯ ಮತ್ತಷ್ಟು ಉಲ್ಬಣಿಸ್ತಿದೆ. ಆಪ್ತ ಸ್ನೇಹಿತನಿಂದ ರೆಡ್ಡಿ ಸ್ವತಃ ಅಂತರ ಕಾಯ್ದುಕೊಳ್ತಿದ್ದಾರೆ.
ರೆಡ್ಡಿ ಜಿಲ್ಲೆಗೆ ಎಂಟ್ರಿ ಕೊಟ್ಟರೆ ರಾಮುಲು ವರ್ಚಸ್ಗೆ ದಕ್ಕೆ
ಗಣಿನಾಡಲ್ಲಿ ತಮ್ಮದೆ ರಾಜಕೀಯ ಸಾಮ್ರಾಜ್ಯವನ್ನ ಕಟ್ಟಿದ್ದ ರೆಡ್ಡಿಗಾರು, ಜೈಲು ಸೇರಿದ ಮೇಲೆ ಬಳ್ಳಾರಿ ಜಿಲ್ಲೆಯಲ್ಲಿ ವರ್ಚಸ್ಸು ಪಾತಾಳ ಸೇರಿತು. ಅಂದು ರೆಡ್ಡಿಗಾರು ಕಟ್ಟಿದ್ದ ಸಾಮ್ರಾಜ್ಯದಲ್ಲಿ ಇಂದು ಸಚಿವ ರಾಮುಲು ಅಧಿಪತ್ಯ ಸಾಧಿಸಿದ್ದಾರೆ. ರಾಜಕೀಯವಾಗಿ ರಾಜ್ಯ ನಾಯಕನಾಗಿ ಬೆಳೆದ ಸಚಿವ ಶ್ರೀರಾಮುಲು, ಬಳ್ಳಾರಿ ಜಿಲ್ಲಾ ರಾಜಕೀಯದಲ್ಲಿ ರೆಡ್ಡಿ ಬ್ರದರ್ಸ್ ಕಡೆಗಣನೆ ಆರೋಪ ಎದುರಿಸ್ತಿದ್ದಾರೆ.
ಇದಕ್ಕೆ ತಾಜಾ ಉದಾಹರಣೆ, ಬಳ್ಳಾರಿ ವಿಭಜನೆಯಲ್ಲಿ ಸೋಮಶೇಖರ್ ರೆಡ್ಡಿ-ರಾಮುಲು ಅವರ ಭಿನ್ನ ನಡೆಗಳು. ಜೊತೆಗೆ ಸಂಪುಟ ವಿಸ್ತರಣೆ ವೇಳೆಯೂ ಸೋಮಶೇಖರ್ ರೆಡ್ಡಿಗೆ ಅಡ್ಡಗಾಲು ಹಾಕಿದ ಆರೋಪ ಇದೆ. ಈ ಎಲ್ಲಾ ಕಾರಣಗಳಿಂದ ಸದ್ಯ ಮತ್ತೆ ಬಳ್ಳಾರಿ ರಾಜಕಾರಣ ಮೇಲೆ ಜನಾರ್ದನ ರೆಡ್ಡಿ ಚಿತ್ತ ನೆಟ್ಟಿದ್ದು, ರೆಡ್ಡಿ ರೀ ಎಂಟ್ರಿಯಿಂದ ಶ್ರೀರಾಮುಲು ಹತಾಶರಾಗಿದ್ದಾರೆ. ಜಿಲ್ಲೆಗೆ ರೆಡ್ಡಿ ಎಂಟ್ರಿ ಕೊಟ್ಟರೆ ತಮ್ಮ ವರ್ಚಸ್ಸು ಕುಂದುವ ಭೀತಿ ರಾಮುಲುಗೆ ಕಾಡ್ತಿದೆ. ಹೀಗಾಗಿ ಆಪ್ತಮಿತ್ರ ರಾಮುಲುರನ್ನ ರೆಡ್ಡಿಯೇ ದೂರವಿಟ್ಟಿದ್ದಾರೆಂಬ ಚರ್ಚೆ ಗಣಿನಾಡಲ್ಲಿ ಹಬ್ಬಿದೆ.
ಬಳ್ಳಾರಿಯ ರೆಡ್ಡಿಗಾರು, ತಮ್ಮ ಶಸ್ತ್ರಾಗಾರ ನಿರ್ಮಿಸ್ತಿರೋದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ. ಆದ್ರೆ, ಗುರಿ ಇಟ್ಟಿದ್ದು ಪಕ್ಕದ ಜಿಲ್ಲೆ ರಾಯಚೂರಿನ ಸಿಂಧನೂರು ಮೇಲೆ. ಕೊಪ್ಪಳ-ರಾಯಚೂರಿನ ನಡುವಿನ ಸಿರಿವಂತ, ಸಂಪತ್ಭರಿತ ತಾಲೂಕು ಈ ಸಿಂಧನೂರು. ಲಿಂಗಾಯತರ ಬಲಿಷ್ಠ ಕೋಟೆ. ಕೆಲವೇ ಕಿ.ಮೀ ಅಂತರದಲ್ಲಿ ಯಾದಗಿರಿ ಜಿಲ್ಲೆ. ಅದಕ್ಕೆ ರೆಡ್ಡಿ ಈ ಕನಸು, ಇಡೀ ಕಲ್ಯಾಣ ಕರ್ನಾಟಕ ಆವರಿಸುವ ಲೆಕ್ಕಾಚಾರ ಇದೆ ಅನ್ನೋದನ್ನ ಆರಂಭದಲ್ಲೇ ನಾವು ಹೇಳಿದ್ದು.
ರೆಡ್ಡಿ ಜೊತೆ ಕಾಣದ ಕೈ ಕೆಲಸ ಮಾಡ್ತಿದ್ಯಾ.?
ಅಷ್ಟಕ್ಕೂ ಜನಾರ್ದನ ರೆಡ್ಡಿ ರಾಜಕೀಯ ಮೆಗಾ ಲೆಕ್ಕಾಚಾರದ ಹಿಂದೆ ಕಾಣದ ಕೈಯೊಂದು ಕೆಲಸ ಮಾಡ್ತಿದೆ. ಹೊಸ ಪಕ್ಷದ ಮೂಲಕ ರೆಡ್ಡಿ ಹೂಡಿರುವ ಬಾಣವನ್ನ ಸಿದ್ಧಪಡಿಸಿದ್ದು, ಒಂದು ಕಾಲದ ರಾಜಕೀಯ ಗುರು ಯಡಿಯೂರಪ್ಪ ಅನ್ನೋ ಮಾತಿದೆ. ರೆಡ್ಡಿ ಬೆನ್ನಿಗೆ ನಿಂತು ಮಾಜಿ ಸಿಎಂ ಬಿಎಸ್ವೈ ದಾಳ ಉರುಳಿಸ್ತಿದ್ದಾರೆ ಎನ್ನಲಾಗಿದೆ. ಹಾಗಾದ್ರೆ, ರೆಡ್ಡಿಯ ಈ ಮಾಸ್ಟರ್ ಪ್ಲಾನ್ ಏನು?
ಲೆಕ್ಕಾಚಾರ 01 : ಹೊಸ ಪಕ್ಷ
- ರಾಜಕೀಯ ರೀ ಎಂಟ್ರಿಗೆ ಪ್ರಯತ್ನ ನಡೆಸಿರುವ ಜನಾರ್ದನ ರೆಡ್ಡಿ
- ‘ಕಲ್ಯಾಣ ಕರ್ನಾಟಕ ಪಕ್ಷ’ ಎಂಬ ಹೆಸರಿನಲ್ಲಿ ಪಕ್ಷ ಕಟ್ಟುವ ಚರ್ಚೆ
ಲೆಕ್ಕಾಚಾರ 02 : ‘ಕಲ್ಯಾಣ’ ತಂತ್ರ
- ಕಲ್ಯಾಣ ಕರ್ನಾಟಕ ಭಾಗದಲ್ಲೇ ಅಭ್ಯರ್ಥಿ ಕಣಕ್ಕಿಳಿಸಬೇಕು
- ಪ್ರಾಬಲ್ಯ ಹೊಂದಿರುವ ಕಾಂಗ್ರೆಸ್ನ ಕಟ್ಟಿ ಹಾಕಲು ಐಡಿಯಾ
ಲೆಕ್ಕಾಚಾರ 03 ಕಾಂಗ್ರೆಸ್ಗೆ ಕೌಂಟರ್
- ರೆಡ್ಡಿ ಌಂಡ್ ಟೀಂ ಮೂಲಕ ‘ಕೈ’ ವೋಟ್ ಬ್ಯಾಂಕ್ಗೆ ಪೆಟ್ಟು
- ಕಾಂಗ್ರೆಸ್ ಮತ ಟಾರ್ಗೆಟ್ ಮಾಡಿ ಅಭ್ಯರ್ಥಿಗಳ ಹುಡುಕಾಟ
ಲೆಕ್ಕಾಚಾರ 04 : ಬಿಜೆಪಿಗೆ ಬೆಂ‘ಬಲ’
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ಹೆಚ್ಚಿನ ಬೆಂಬಲ ಇಲ್ಲ
- ಪ್ರಾದೇಶಿಕ ಪಕ್ಷ ಸ್ಥಾಪಿಸಿ ಬಿಜೆಪಿಗೆ ಲಾಭ, ಕಾಂಗ್ರೆಸ್ಗೆ ಹೊಡೆತ
ಲೆಕ್ಕಾಚಾರ 05 ‘ಪ್ರಾದೇಶಿಕ’ ಪ್ಲಾನ್
- SC-ST, ಮುಸ್ಲಿಂ ಮತದಾರರೇ ಜನಾರ್ದನ ರೆಡ್ಡಿ ಟಾರ್ಗೆಟ್
- ಮತ ವಿಭಜನೆ ಮಾಡಿ ಬಿಜೆಪಿಗೆ ಲಾಭ ಮಾಡೋ ಲೆಕ್ಕಾಚಾರ
ಸಿಂಧನೂರು ಮತಕ್ಷೇತ್ರ ಲಿಂಗಾಯತ ಸಮುದಾಯದ ಪ್ರಬಲ ಕ್ಷೇತ್ರ.. ಕಾಂಗ್ರೆಸ್ನ ಹಂಪನಗೌಡ ಬಾದರ್ಲಿ, ಜೆಡಿಎಸ್ನ ವೆಂಕಟರಾವ್ ನಾಡಗೌಡ ಮಧ್ಯೆ ಜಿದ್ದಾಜಿದ್ದಿ ಇದೆ. ಕುರುಬ ಸಮುದಾಯದ ಕೆ. ಕರಿಯಪ್ಪ ಕೂಡ ಇಲ್ಲಿನ ಪ್ರಬಲ ನಾಯಕ. ಈ ಮೂವರ ಜಟಾಪಟಿಯಲ್ಲಿ ರೆಡ್ಡಿ ಗೆಲುವು ನಿಕ್ಕಿ ಅನ್ನೋ ಲೆಕ್ಕಾಚಾರ ಇದೆ. ಹಾಗಾದ್ರೆ, ಏನದು ಲೆಕ್ಕಾಚಾರ? ಜಾತಿ ಸಮೀಕರಣ ಹೇಗಿದೆ? ರೆಡ್ಡಿ ಪ್ಲಾನ್ ಏನು?
ಸಿಂಧನೂರಲ್ಲಿ ಕ್ಷೇತ್ರದಿಂದ ರೆಡ್ಡಿ ಸ್ಪರ್ಧೆ ಪಕ್ಕಾ
ಕಾರಣ 01 : ಸಿಂಧನೂರಲ್ಲಿ ಸಾವಿರಾರು ರೆಡ್ಡಿ ಸಮುದಾಯದ ಮತಗಳು
ಕಾರಣ 02 : ಬರೋಬ್ಬರಿ 35-38 ಸಾವಿರ ರೆಡ್ಡಿ ಸಮುದಾಯದ ಮತಗಳು
ಕಾರಣ 03 : ಆಂಧ್ರ ವಲಸಿಗ ಮತದಾರರೇ ಸಿಂಧನೂರಲ್ಲಿ ನಿರ್ಣಾಯಕ
ಕಾರಣ 04 : ಗಂಗಾವತಿಯಿಂದ ಕೇವಲ 39 ಕಿ.ಮೀ ದೂರದ ಸಿಂಧನೂರು
ಕಾರಣ 05 : ಗಂಗಾವತಿಯಲ್ಲಿ ಮನೆ, ಸಿಂಧನೂರಲ್ಲಿ ಸ್ಪರ್ಧೆಯ ಲೆಕ್ಕಾಚಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post