ಮನೆ ಮೇಲಿರೋ ಸಿಂಟೆಕ್ಸ್ ಟ್ಯಾಂಕ್ನ ಕ್ಲೀನ್ ಮಾಡೋಕೆ ಅಮ್ಮನೋ, ಅಪ್ಪನೋ ಹೇಳಿದ್ರೆ ನಾವು ಸರ್ಕಸ್ ಮಾಡ್ತಿರ್ತೀವಿ. ಇವತ್ತು, ನಾಳೆ ಅಂತ ನೆಪ ಹೇಳ್ಕೋಂಡು ಓಡಾಡುತ್ತೇವೆ. ಆದರೆ ಇಡೀ ಒಂದು ನದಿಯನ್ನ ಕ್ಲೀನ್ ಮಾಡೋದು ಅಂದ್ರೆ ಸುಮ್ನೇನಾ? ಆದ್ರೆ ಗಂಗೆಯನ್ನ ಸ್ವಚ್ಛಗೊಳಿಸೋಕೆ ಸರ್ಕಾರದ ಬಳಿ ಬಜೆಟ್ ಇತ್ತು. ಸಾವಿರಾರು ಕೋಟಿ ರೂಪಾಯಿಯನ್ನ ಈ ಪ್ರಾಜೆಕ್ಟ್ಗೆ ಅಂತಲೇ ಮೀಸಲೂ ಇಡ್ತು. ಆದ್ರೆ ಯಕಶ್ಚಿತ್ ಒಬ್ಬ ಸಾಧು ಏಕಾಂಗಿಯಾಗಿ ಶುರು ಮಾಡಿ ಇಡೀ ನದಿಯೊಂದನ್ನ ಸ್ವಚ್ಛಗೊಳಿಸಿದ್ದಾರೆ. ಅವರ ಈ ಸಾಧನೆಗಾಗಿ ಭಾರತ ಸರ್ಕಾರವು ಪದ್ಮಶ್ರೀ ನೀಡಿ ಗೌರವವನ್ನೂ ಕೊಟ್ಟಿದೆ.
ಪಂಜಾಬ್ನ ಸಂತ, ಬಲ್ಬೀರ್ ಸಿಂಗ್ ಸೀಚೆವಾಲ್. ಪಂಜಾಬ್ನಲ್ಲಿ ಇಕೋ ಬಾಬಾ ಅಂತಲೇ ಫೇಮಸ್. ಪಂಜಾಬ್ ಅಷ್ಟೇ ಅಲ್ಲ, ಭಾರತ ಸರ್ಕಾರ, ವಿದೇಶಗಳಲ್ಲೂ ಇವರ ಸಾಧನೆಗೆ ಬಹುಪರಾಕ್ ಹೇಳ್ತಿದ್ದಾರೆ. ಜಲಂಧರ್ ಜಿಲ್ಲೆಯ ಸೀಚೇವಾಲ್ನಲ್ಲಿ 1962ರಲ್ಲಿ ಜನಸಿದ ಬಲ್ಬೀರ್ ಸಿಂಗ್, ಕಾಲೇಜು ತೊರೆದು ಸನ್ಯಾಸತ್ವ ಸ್ವೀಕರಿಸಿದರು. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಇಕೋ ಬಾಬಾಗೆ, 2000ದ ಇಸವಿಯಲ್ಲಿ ಗುರು ನಾನಕ್ ಕಾಳಿ ಬೇನ್ ನದಿಯನ್ನ ಸ್ವಚ್ಛಗೊಳಿಸುವ ಆಲೋಚನೆ ಬರುತ್ತೆ.
ಈ ಸಂದರ್ಭದಲ್ಲಿ ಪಂಜಾಬ್ನಲ್ಲಿ ಅದರಲ್ಲೂ ಕಾಳಿ ಬೇನ್ ನದಿಗೆ ಸ್ಥಳೀಯ ಹಾಗೂ ಕೈಗಾರಿಕಾ ತ್ಯಾಜ್ಯದಿಂದಾಗಿ ಸಾಕಷ್ಟು ಸಮಸ್ಯೆಗಳು ಎದುರಾಗಿರುತ್ತೆ. ಹಲವೆಡೆ ಕಾಳಿ ಬೇನ್ನ ನೀರಿನ ಸೆಲೆಯೇ ಬತ್ತಿ ಹೋಗಿರುತ್ತದೆ. ಇದರಿಂದ ನದಿಯನ್ನ ಸ್ವಚ್ಛಗೊಳಿಸಬೇಕು ಮತ್ತೆ ಜೀವ ಜಲ ಉಕ್ಕಿಸಬೇಕು ಎಂಬ ಆಲೋಚನೆಯಿಂದ ಸಂತ ಬಲ್ಬೀರ್ ಸಿಂಗ್ ಸೀಚೇವಾಲ್ ಏಕಾಂಗಿಯಾಗಿ ಈ ಕಾರ್ಯಕ್ಕೆ ಮುಂದಾಗ್ತಾರೆ. ಇವರ ಕಾರ್ಯವನ್ನ ಗಮನಿಸುವ ಒಂದಷ್ಟು ಜನ ಸ್ವಯಂ ಪ್ರೇರಿತರಾಗಿ ಇವರ ಜೊತೆ ಕೈ ಜೋಡಿಸ್ತಾರೆ.
ದಿನೇ ದಿನೆ ಈ ಸಂಖ್ಯೆ ಹೆಚ್ಚಳವಾಗಿ ಸಾವಿರಾರು ಕಾರ್ಯಕರ್ತರು ಒಂದಾಗ್ತಾರೆ. ನದಿ ಪಾತ್ರದ ಹಳ್ಳಿಗಳಲ್ಲಿನ ನಿವಾಸಿಗಳಿಂದಲೇ ನದಿ ಸ್ವಚ್ಛತೆಗೆ ಅಗತ್ಯ ಇರುವ ವಸ್ತುಗಳನ್ನ ಖರೀದಿಸಲು ದೇಣಿಗೆ ಸಂಗ್ರಹಿಸಲಾಗುತ್ತೆ. ನದಿಯಲ್ಲಿ ಬೆಳೆದ ಅನವಶ್ಯಕ ಗಿಡ ಗಂಟಿಗಳು, ಹೂಳನ್ನ ಎತ್ತಿ ಸ್ವಚ್ಛಗೊಳಿಸಲಾಗುತ್ತೆ. ನದಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತೆ. ನದಿ ದಂಡೆ ಸುತ್ತ ಹೂ, ಹಣ್ಣುಗಳ ಗಿಡಗಳನ್ನ ಬೆಳೆಸಿ, ಸ್ನಾನ ಘಟ್ಟಗಳನ್ನ ನಿರ್ಮಿಸಲಾಗುತ್ತೆ. ಇಟ್ಟಿಗೆಯಿಂದ ರಸ್ತೆ ನಿರ್ಮಾಣ ಮಾಡ್ತಾರೆ. ಇಕೋ ಬಾಬಾರ ಈ ಆಲೋಚನೆ ಕಾರ್ಯಗತಗೊಳ್ತಿದ್ದಂತೆ ಪಂಜಾಬ್ನ ದವೋಬಾ ಪ್ರಾಂತ್ಯದಲ್ಲಿ ನೀರಿನ ಸಮಸ್ಯೆಗೆ ಪರಿಹಾರ ಸಿಗುತ್ತೆ.
ಇಕೋ ಬಾಬಾ ಸ್ವಚ್ಛಗೊಳಿಸಿದ ನದಿಯ ಉದ್ದ ಬರೋಬ್ಬರಿ 160 ಕಿಲೋಮೀಟರ್. ಇದಕ್ಕಾಗಿ ಅವ್ರು ತೆಗೆದುಕೊಂಡಿದ್ದು ಬರೋಬ್ಬರಿ 16 ವರ್ಷಗಳ ಸಮಯ. 2000 ದಿಂದ 2016ರವರೆಗೆ ಕಾಳಿ ಬೇನ್ ನದಿ ಸ್ವಚ್ಛಗೊಳಿಸುವ ಇಕೋ ಬಾಬಾ ಒಂದೇ ಒಂದು ರೂಪಾಯಿಯನ್ನೂ ಸರ್ಕಾರದಿಂದ ತಗೊಂಡಿಲ್ಲ. ವೈಟ್ ಕಾಲರ್ಗಳಂತೆ ಸುಮ್ಮನೆ ಆದೇಶ ಕೊಟ್ಟು ಕೂರಲಿಲ್ಲ. ಬದಲಿಗೆ ತಾವೇ ಖುದ್ದು ನದಿಗಿಳಿದು ಎಲ್ಲರೊಳೊಂದಾಗಿ ಅದರ ಸ್ವಚ್ಛತೆ ಕಾರ್ಯದಲ್ಲಿ ಭಾಗಿಯಾಗಿದ್ರು. ಅಷ್ಟೇ ಅಲ್ಲ, ನದಿ ಸ್ವಚ್ಛತೆಯ ಕಾರ್ಯದ ಬಳಿಕ ಪಂಜಾಬ್ ಸರ್ಕಾರದ ಜೊತೆಗೂಡಿ ಅಂಡರ್ಗ್ರೌಂಡ್ ಸೆವರೇಜ್ ವ್ಯವಸ್ಥೆಯನ್ನೂ ಮಾಡಿದ್ರು. ಇದರಲ್ಲಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಕೊಳಚೆ ನೀರು ಅಥವಾ ಚರಂಡಿ ನೀರನ್ನ ಕೊಳಗಳಲ್ಲಿ ಸಂಗ್ರಹಿಸಿ ಅದನ್ನ ಸ್ವಚ್ಛಗೊಳಿಸಿ ಕೃಷಿ ಮತ್ತು ತೋಟಗಾರಿಕೆಗೆ ಬಳಸಲಾಗುತ್ತಿದೆ. ಈ ಮಾಡೆಲ್ನಿಂದಾಗಿ ಸುಮಾರು 50 ಗ್ರಾಮಗಳಿಗೆ ಅನುಕೂಲವಾಗಿದೆ.
ಅಷ್ಟೇ ಅಲ್ಲ, ಗಂಗೆಯನ್ನ ಸ್ವಚ್ಛಗೊಳಿಸಲು ಮುಂದಾದಾಗ ಖುದ್ದು ಕೇಂದ್ರ ಸರ್ಕಾರವೂ ಸಂತ ಬಲ್ಬೀರ್ ಸಿಂಗ್ ಸೀಚೇವಾಲ್ರ ಸಹಾಯವನ್ನ ಕೋರಿತ್ತು. ಭಾರತದ ಮಾಜಿ ರಾಷ್ಟ್ರಪತಿ ದಿವಂಗತ ಎಪಿಜೆ ಅಬ್ದುಲ್ ಕಲಾಂ ಇಕೋ ಬಾಬಾರ ಕಾರ್ಯದ ಬಗ್ಗೆ, ಇಡೀ ದೇಶಕ್ಕೆ ಮಾದರಿ ಅಂತ ಕೊಂಡಾಡಿದ್ದರು. ಕೇವಲ ನದಿ ಸ್ವಚ್ಛತೆಯಷ್ಟೇ ಅಲ್ಲದೆ ಇಕೋ ಬಾಬಾ ಬಡತನ ನಿರ್ಮೂಲನೆ, ಮೂಢ ನಂಬಿಕೆ ಹೋಗಲಾಡಿಸುವುದು, ಮಹಿಳೆಯರ ಮೇಲಿನ ದೌರ್ಜನ್ಯ ತಡೆಗಾಗಿ ಶ್ರಮಿಸುತ್ತಿದ್ದಾರೆ.
ಶಾಲೆ, ಕಾಲೇಜು, ತಾಂತ್ರಿಕ ಕೇಂದ್ರಗಳನ್ನ ಸ್ಥಾಪಿಸಿ ಅಕ್ಷರ ದಾಸೋಹ ಮಾಡುತ್ತಿದ್ದಾರೆ. ಸಮಾಜಕ್ಕೆ ಅದ್ರಲ್ಲೂ ವಿಶೇಷವಾಗಿ ನದಿ ಸ್ವಚ್ಛತೆ ಇವ್ರ ಕೊಡುಗೆಗಾಗಿ ಭಾರತ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನ ನೀಡಿ ಗೌರವಿಸಿದೆ. ಇದೀಗ ಪಂಜಾಬ್ನಲ್ಲಿ ಆಪ್ ಸರ್ಕಾರ ಬಂದ ಮೇಲೆ ಇಕೋ ಬಾಬಾರನ್ನ ರಾಜ್ಯಸಭೆಗೆ ನಾಮ ನಿರ್ದೇಶನ ಮಾಡಿತ್ತು. ಸದ್ಯ ಸಂಸತ್ನ ಮೇಲ್ಮನೆ ಸದಸ್ಯರಾಗಿ ಅಲ್ಲೂ ಸಹ ಸಾಮಾಜಿಕ, ಭೌಗೋಳಿಕ ವಿಚಾರವಾಗಿ ಸಂತ ಬಲ್ಬೀರ್ ಸಿಂಗ್ ಸೀಚೇವಾಲ್ ಧ್ವನಿ ಎತ್ತುತ್ತಿದ್ದಾರೆ.
ವಿಶೇಷ ವರದಿ-ನವೀನ್ ಕುಮಾರ್ .ಕೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post