ಆಟ ಅನ್ನೋದು ಚಟವಾಗಬಾರದು, ಗೀಳಿಗಿ ಬೀಳಬಾರದು. ಯಾವಾಗ ಈ ಆಟಗಳು ಚಟವಾಗಿ ಪರಿಣಮಿಸುತ್ತೋ, ಆಗ ಅಪಾಯ ಕಟ್ಟಿಟ್ಟ ಬುತ್ತಿ. ಬಾಜಿ ಕಟ್ಟಿ ಮನೆ-ಮಠ, ಆಸ್ತಿ-ಪಾಸ್ತಿ ಕಳ್ಕೊಂಡವರನ್ನ ನಾವು-ನೀವು ನೋಡಿದ್ದೇವೆ. ಆದ್ರೆ, ಇಲ್ಲೊಬ್ಬ ಮಹಿಳೆ ತನ್ನನ್ನೇ ತಾನು ಬೆಟ್ ಕಟ್ಟಿಕೊಂಡು ದಾಸಿ ಆಗಿದ್ದಾಳೆ. ಈ ಕುರಿತ ರಿಪೋರ್ಟ್ ಇಲ್ಲಿದೆ.
ಇದು ಕಾಲನ ಮಹಿಮೆ. ಕಾಲಕ್ಕೆ ತಕ್ಕಂತೆ ಬದಲಾಗಿ ಹೋದ ಸನ್ನಿವೇಶಗಳು. ಅಂದು ಮಹಾಭಾರತದಲ್ಲಿ ಲುಡೋ ಆಡಿ ಯುಧಿಷ್ಠಿರ ತನ್ನ ಸಹೋದರರು ಮತ್ತು ಪಾಂಚಾಲಿ ದ್ರೌಪದಿಯನ್ನ ಅಡವಿಟ್ಟಿದ್ದ. ಇಂದು ಪಗಡೆ ಆಡಿದ ಆ ಮಹಿಳೆ ತನ್ನನ್ನೇ ಸೋತು ದಾಸಿಯಾಗಿದ್ದಾಳೆ. ಆ ದ್ರೌಪದಿ ತಾನು ಮಾಡದ ತಪ್ಪಿಗೆ ಅವಮಾನದಿಂದ ತಲೆತಗ್ಗಿಸಿದ್ರೆ, ಇಲ್ಲಿ ಆಟದ ಚಟಕ್ಕೆ ಬಿದ್ದು ತಾನೇ ಸೇವಕಿ ಆಗಿದ್ದಾಳೆ. ಅದಕ್ಕೆ ಇದು ಕಾಲನ ಮಹಿಮೆ ಅಂದಿದ್ದು.
ಲುಡೋ ಆಡಿ ತನ್ನನ್ನೇ ತಾನು ಮಾರಿಕೊಂಡ ಮಹಿಳೆ
ಲುಡೋ. ಸದ್ಯ ಆನ್ಲೈನ್ನಲ್ಲಿ ಸದ್ದಿಲ್ಲದೆ ದುಡ್ಡು ಬಾಚುವ ಗೇಮ್ಗಳು. ಇಲ್ಲೊಬ್ಬ ಮಹಿಳೆ ಲುಡೋ ಆಡಲು ತನ್ನನ್ನೇ ಪಣಕ್ಕಿಟ್ಟು ಸೋತು ಹೋಗಿದ್ದಾಳೆ. ಲುಡೋ ಆಡಲು ಹಣ ಖಾಲಿ ಆಗಿ ಜಮೀನ್ದಾರನಿಗೆ ತನ್ನನ್ನೇ ತಾನು ಬಾಜಿ ಕಟ್ಟಿಕೊಂಡು ಪರಿಚಾರಕಿ ಆಗಿದ್ದಾಳೆ. ಅಷ್ಟಕ್ಕೂ ಈ ಘಟನೆ ನಡೆದಿದ್ದು ಉತ್ತರ ಪ್ರದೇಶದ ಪ್ರತಾಪ್‍ಗಢದ ಕೊತ್ವಾಲಿಯ ದೇವಕಾಲಿ ಎಂಬಲ್ಲಿ. ಹೆಸರು ಗನ್ನು.
ಈ ಮಹಿಳೆ ಲೂಡೋ ಆಟದ ವ್ಯಸನಿಯಾಗಿದ್ಲು. ಎಷ್ಟರ ಮಟ್ಟಿಗೆ ಎಂದ್ರೆ ಆಟವನ್ನು ಆಡದೇ ಜೀವನ ನಡೆಸೋದೇ ಕಷ್ಟ ಅನ್ನೊವಷ್ಟು. ದೇವಕಲಿಯಲ್ಲಿ ಬಾಡಿಗೆ ಮನೆಯಲ್ಲಿದ್ದ ಈಕೆ ಲುಡೋ ಆಟವನ್ನೇ ಸರ್ವಸ್ವ ಆಗಿಸಿಕೊಂಡಿದ್ಲು. ಅದಕ್ಕಾಗಿಯೇ ಇರುವುದೆಲ್ಲವನ್ನ ಕಳ್ಕೊಂಡಿದ್ದಾಳೆ. ತನ್ನನ್ನೂ ತಾನು ಮಾಲೀಕನಿಗೆ ಮಾರಿಕೊಂಡಿದ್ದಾಳೆ. ಈ ಸುದ್ದಿ ತಿಳಿದ ಪತಿ, ದಿಕ್ಕೆಟ್ಟು ಹೋಗಿದ್ದಾನೆ.
ಜಮೀನುದಾರನ ಬಳಿ ತನ್ನನ್ನೇ ‘ಬಾಜಿ’ ಕಟ್ಕೊಂಡಿದ್ದಾಳೆ
ಲುಡೋ ಆಡಲು ಮಹಿಳೆ ಗನ್ನು ಬಳಿ ಹಣ ಖಾಲಿ ಆಗಿದೆ. ಜೈಪುರದಲ್ಲಿ ಕೆಲಸ ಮಾಡ್ತಿದ್ದ ಪತಿ ಕಳುಹಿಸಿದ ಹಣವನ್ನು ಜೂಜಾಟಕ್ಕೆ ಬಳಸ್ತಿದ್ಲು. ಆದ್ರೆ, ಹಣದ ಕೊರತೆ ಆಗಿದ್ದು, ಆಟದ ಚಟಕ್ಕೆ ಬಿದ್ದಾಕೆಗೆ ಏನು ಮಾಡಬೇಕೆಂದು ತಿಳಿದಿಲ್ಲ. ನೇರವಾಗಿ ಜಮೀನುದಾರನ ಬಳಿ ತನ್ನನ್ನೇ ತಾನು ಬಾಜಿ ಕಟ್ಕೊಂಡಿದ್ದಾಳೆ. ಆರಂಭದಲ್ಲಿ ಆಟ ಏನೋ ಚೆನ್ನಾಗಿತ್ತು. ಆದ್ರೆ, ಕೊನೆಗೆ ಆಟಕ್ಕೆ ತಕ್ಕಂತೆ ಕಾಯಿಗಳು ಬೀಳದ ಕಾರಣದ ಸೋಲಿಗೆ ಶರಣಾಗಿದ್ದಾಳೆ. ಮಾತಿನಂತೆ ಮನೆ ಮಾಲೀಕನೂ ಆದ ಜಮೀನ್ದಾರನ ಜೊತೆಯೇ ಜೀವನ ಆರಂಭಿಸಿದ್ದಾಳೆ.
ಈ ಬಗ್ಗೆ ಪ್ರತಾಪ್ಗಢ ಪೊಲೀಸರು ಎರಡು ಆ್ಯಂಗಲ್ಗಳನ್ನ ಹೇಳ್ತಾರೆ. ಪತಿ ಉಮೇಶ್ ಕೊಟ್ಟ ದೂರಿನನ್ವಯ ಲುಡೋಗಾಗಿ ತನ್ನ ಪತ್ನಿ ಸೋತು ದಾಸಿ ಆಗಿದ್ದಾಳೆ ಅಂತ ಹೇಳ್ತಾರೆ. ಇನ್ನೊಂದು ವಾದದ ಪ್ರಕಾರ, ವರ್ಷದಿಂದ ಮನೆಗೆ ಪತಿ ಬಾರದ ಕಾರಣ, ತಾನೂ ಜಮೀನ್ದಾರನ ಮನೆಯಲ್ಲಿ ಕೆಲಸಕ್ಕೆ ಇರೋದಾಗಿ ಹೇಳಿಕೊಂಡಿದ್ದಾಗಿ ಪೊಲೀಸರು ತಿಳಿಸ್ತಾರೆ.
ಜೈಪುರದಲ್ಲಿ ಕೆಲಸ ಮಾಡ್ತಿದ್ದವನು, ಹೆಂಡ್ತಿ ಕೇಳಿದಾಗಲೆಲ್ಲಾ ಹಣ ಕಳಿಸ್ತಿದ್ದ. ಆದ್ರೆ ಪತ್ನಿ ಪದೇ ಪದೇ ಹಣ ಕೇಳಲು ಶುರು ಮಾಡಿದ್ಲು. ಗಂಡನಿಗೆ ಅನುಮಾನ ಸಹ ಬಂದಿತ್ತು. ಈಗ ಅದು ಲುಡೋ ಮಹಿಮೆ ಅನ್ನೋದು ಗೊತ್ತಾಗಿದೆ. 2 ಮಕ್ಕಳ ತಾಯಿ ಆಗಿರುವ ಗನ್ನು, ಜಮೀನ್ದಾರನ ದಾಸಿತನ ಬಿಡಲು ನಿರಾಕರಿಸಿದ್ದಾಳೆ. ಬಂದದಾರಿಗೆ ಸುಂಕ ಇಲ್ಲ ಅನ್ನುವಂತೆ ಪತಿ ಉಮೇಶ್ ಕಣ್ಣೀರಿನ ದಾಸನಾಗಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post