ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿದೆ. ಹಿಂದೆಂದೂ ಕಂಡು ಕೇಳರಿಯದಂತಹ ಬಹುದೊಡ್ಡ ಗೆಲುವು ಸಾಧಿಸಿದೆ. ಇತಿಹಾಸವನ್ನೇ ನಿರ್ಮಿಸಿದೆ. ಮೋದಿ ಅಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದ್ರೆ, ಎಎಪಿ ಕೊಚ್ಚಿಕೊಂಡು ಹೋಗಿದೆ. ಇದೇ ತಿಂಗಳು 12ನೇ ತಾರೀಖು ಗುಜರಾತ್ ಸಿಂಹಾಸನವನ್ನ ಸಿಎಂ ಭೂಪೇಂದ್ರ ಪಟೇಲ್ ಅಲಂಕರಿಸಲಿದ್ದಾರೆ.
ಪ್ರಚಂಡ ಗೆಲುವು.. ಗುಜರಾತ್‌ನಲ್ಲಿ ಕಮಲ ಪಾಳಯಕ್ಕೆ ಪ್ರಚಂಡ ಗೆಲುವು. 155ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ. ಹಿಂದಿನ ಎಲ್ಲಾ ದಾಖಲೆಗಳು ಪುಡಿ ಪುಡಿ.. ಐತಿಹಾಸಿಕ ಗೆಲುವು ಸಾಧಿಸಿ ಹೊಸ ಇತಿಹಾಸ ನಿರ್ಮಾಣ. ಮೋದಿ ಮೋಡಿಗೆ ವಿರೋಧ ಪಕ್ಷಗಳು ಬೇಷರತ್ ಧೂಳಿಪಟ.
156 ಸೀಟ್ ಗೆದ್ದು ಇತಿಹಾಸ ಸೃಷ್ಟಿಸಿದ ಬಿಜೆಪಿ
ಮಾಧವಸಿಂಹ ಸೋಲಂಕಿ ದಾಖಲೆ ಪುಡಿ ಪುಡಿ!
ಗುಜರಾತ್‌ನಲ್ಲಿ ಬಿಜೆಪಿಗೆ ಸಿಕ್ಕಿರೋದು ಕೇವಲ ಗೆಲುವಲ್ಲ. ಪ್ರಚಂಡ ದಿಗ್ವಿಜಯ. ಐತಿಹಾಸಿಕ ಗೆಲುವು. 182 ಕ್ಷೇತ್ರಗಳಲ್ಲಿ ಬಿಜೆಪಿ ಬರೊಬ್ಬರಿ 156 ಸೀಟ್‌ಗಳಲ್ಲಿ ಜಯಭೇರಿ ಬಾರಿಸಿದೆ. ಗುಜರಾತ್ ಇತಿಹಾಸದಲ್ಲೇ ಕಂಡು ಕೇಳರಿಯದಂಥ ದಾಖಲೆ ನಿರ್ಮಿಸಿ ಹೊಸ ಚರಿತ್ರೆಯ ಅಧ್ಯಾಯವನ್ನೇ ಬರೆದಿದೆ.
ಇತಿಹಾಸ ಸೃಷ್ಟಿಸಿದ ಕಮಲ ಪಾಳಯ
ಅಂದಹಾಗೆ 1985ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮಾಧವಸಿಂಹ ಸೋಲಂಕಿಯ ನಾಯಕತ್ವದಲ್ಲಿ ಕಾಂಗ್ರೆಸ್ 149 ಸ್ಥಾನಗಳನ್ನ ಗೆದ್ದು ಇತಿಹಾಸ ಸೃಷ್ಟಿಸಿತ್ತು. ಬಳಿಕ ಮೋದಿ ಆಡಳಿತದಲ್ಲೂ ಈ ದಾಖಲೆ ಮುರಿಯೋಕೆ ಸಾಧ್ಯವಾಗದೇ 2002ರಲ್ಲಿ 127 ಕ್ಷೇತ್ರಗಳಲ್ಲಿ ಗೆದ್ದು ಅದರ ಸಮೀಪ ಬಂದಿತ್ತು. ಅದಾದ ಬಳಿಕ 2017ರಲ್ಲಿ ಕಮಲ ಪಾಳಯ ಕೇವಲ 99 ಕ್ಷೇತ್ರಗಳಲ್ಲಿ ಜಯ ಸಾಧಿಸಿತ್ತು. ಆದ್ರೀಗ 182 ಕ್ಷೇತ್ರಗಳಲ್ಲಿ ಬಿಜೆಪಿ ಬರೊಬ್ಬರಿ 156 ಸೀಟ್‌ಗಳಲ್ಲಿ ಜಯಭೇರಿ ಬಾರಿಸಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಇತಿಹಾಸ ನಿರ್ಮಿಸಿದೆ.
1.92 ಲಕ್ಷ ಮತಗಳ ಅಂತರದಿಂದ ಗೆದ್ದ ಸಿಎಂ ಭೂಪೇಂದ್ರ ಪಟೇಲ್
ಕೇವಲ ಪಕ್ಷ ಮಾತ್ರವಲ್ಲ ಸತತ 5 ವರ್ಷ ಗುಜರಾತ್ ಸಿಂಹಾಸನವೇರಿ ಆಡಳಿತ ಮಾಡಿದ್ದ ಸಿಎಂ ಭೂಪೇಂದ್ರ ಪಟೇಲ್ ಕೂಡ ದಾಖಲೆ ಬರೆದಿದ್ದಾರೆ. ಘಾಟ್ಲೋಡಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಭೂಪೇಂದ್ರ ಪಟೇಲ್ ಬರೊಬ್ಬರಿ 1.92 ಲಕ್ಷ ವೋಟ್ಗಳ ಅಂತರದಿಂದ ಗೆದ್ದು ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಮಿ ಯಾಜನಿಕ್ 21 ಸಾವಿರ ವೋಟ್ ಮಾತ್ರ ಪಡೆದ್ರು.
ವಿಪಕ್ಷ ಸ್ಥಾನದ ಅರ್ಹತೆ ಕಳೆದುಕೊಂಡ ಕಾಂಗ್ರೆಸ್
ಗುಜರಾತ್‌ನಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದ್ರೆ ಅತ್ತ ಕಾಂಗ್ರೆಸ್ ಮೋದಿ ಅಲೆಗೆ ಕೊಚ್ಚಿ ಹೋಗಿದೆ. ಬೆದರಿ ಬೆಂಡಾಗಿ ಮಖಾಡೆ ಮಲಗಿದೆ. ಕೇವಲ 17 ಕ್ಷೇತ್ರಗಳಲ್ಲಿ ಗೆದ್ದಿರುವ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ವಿಪಕ್ಷ ಸ್ಥಾನಕ್ಕೂ ಏರದಂತ ಶೋಚನೀಯ ಸ್ಥಿತಿ ತಲುಪಿದೆ.
ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆದ ಆಮ್ ಆದ್ಮಿ..!
ಗುಜರಾತ್ ಎಲೆಕ್ಷನ್ನಲ್ಲಿ ನಿರೀಕ್ಷಿತ ಫಲಿತಾಂಶ ಸಿಗದಿದ್ದರೂ ಆಮ್ ಆದ್ಮಿ ಪಕ್ಷ ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ದೆಹಲಿ ವಿಧಾನಸಭೆ ಹಾಗೂ ಪಾಲಿಕೆ ಚುನಾವಣೆ ಮತ್ತು ಪಂಜಾಬ್ನಲ್ಲಿ ಅಧಿಕಾರದ ಗದ್ದುಗೆ ಹಿಡಿದಿರೋ ಆಪ್, ಈಗ ರಾಷ್ಟ್ರೀಯ ಪಕ್ಷವಾಗಿ ಹೆಜ್ಜೆ ಇಟ್ಟಿದೆ. ಮೋದಿ ತವರೂರಲ್ಲಿ 5 ಸ್ಥಾನ ಗೆದ್ದು, ಶೇ. 6ಕ್ಕಿಂತ ಹೆಚ್ಚು ಮತ ಪಡೆಯೋ ಮೂಲಕ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿದೆ. ರಾಷ್ಟ್ರೀಯ ಪಕ್ಷ ಎಂಬ ಬಿರುದು ಗಿಟ್ಟಿಸಿಕೊಂಡ ಬೆನ್ನಲ್ಲೇ ಕರ್ನಾಟಕ ಸೇರಿ ಬೇರೆ ರಾಜ್ಯಗಳತ್ತ ಕಣ್ಣು ನೆಟ್ಟಿದೆ.
ಡಿ. 12ಕ್ಕೆ ಭೂಪೇಂದ್ರ ಪಟೇಲ್ ಸಿಎಂ ಆಗಿ ಪ್ರಮಾಣವಚನ
ಐತಿಹಾಸಿಕ ಜಯದ ಮೂಲಕ ಮತ್ತೆ ಎರಡನೇ ಬಾರಿಗೆ ಭೂಪೇಂದ್ರ ಪಟೇಲ್ ಗುಜರಾತ್ ಸಿಎಂ ಆಗಿ ಅಧಿಕಾರದ ಗದ್ದುಗೆ ಏರಲಿದ್ದಾರೆ. ಇದೇ ಡಿಸೆಂಬರ್ 12 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ಬಿಜೆಪಿಯ ಗಣ್ಯ ನಾಯಕರು ಹಾಜರಿರಲಿದ್ದಾರೆ. ಗುಜರಾತ್‌ನಲ್ಲಿ ಮೋದಿ ಅಲೆಗೆ ಆಡಳಿತ ವಿರೋಧಿ ಅಲೆ ಕೊಚ್ಚಿ ಹೋಗಿದೆ. ಕಾಂಗ್ರೆಸ್ ಮಖಾಡೆ ಮಲಗಿದ್ರೆ ಆಪ್ ಧೂಳಿಪಟವಾಗಿದೆ. ನಮೋ ಮೋಡಿಗೆ ಮತದಾರರು ನಮೋ ನಮಃ ಎಂದಿದ್ದಾರೆ. ಬಿಜೆಪಿಯ ಭದ್ರಕೋಟೆಯನ್ನ ಮತ್ತಷ್ಟು ಬಲಿಷ್ಠಗೊಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post