ಚೀನಾದಲ್ಲಿ ಜನ್ಮತಾಳಿದ ವೈರಸ್ನಿಂದ ಇಡೀ ವಿಶ್ವ ತತ್ತರಿಸುತ್ತಿದೆ. ಚೀನಾದಲ್ಲಿ ವೈರಸ್ ಅಬ್ಬರ ಜೋರಾಗಿದ್ದು ಭಾರತದಲ್ಲಿ ಕೊರೊನಾತಂಕ ಮನೆ ಮಾಡಿದೆ. ನಮ್ಮ ರಾಜ್ಯದಲ್ಲೂ ಕಡಿವಾಣ ಕ್ರಮಗಳನ್ನ ಕೈಗೊಳ್ಳಲಾಗಿದೆ. ಆದ್ರೆ ಹೊಸ ರೂಪಾಂತರಿ ಬಗ್ಗೆ ಆತಂಕ ಬೇಕಿಲ್ಲ ಅಂತಾ ತಜ್ಞರು ಅಭಯ ಹೇಳ್ತಿದ್ದಾರೆ. ಕೊರೊನಾ ಮಹಾಮಾರಿಯ ಅಬ್ಬರಕ್ಕೆ ಡ್ರ್ಯಾಗನ್ ಪತರುಗುಟ್ಟಿದೆ. ಆಸ್ಪತ್ರೆಗಳೆಲ್ಲ ಶವಗಳಿಂದ ತುಂಬಿ ತುಳುಕುತ್ತಿದ್ದು ಚಿಕಿತ್ಸೆ ಸಿಗದೇ ಜನ ಯಮಪುರಿಯ ದಾರಿ ಹಿಡಿಯುತ್ತಿದ್ದಾರೆ.
ಜಪಾನ್, ಅಮೆರಿಕ ಸೇರಿ ಇನ್ನೀತರ ದೇಶಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ. ಇದರಿಂದ ಭಾರತದಲ್ಲೂ ಕೊರೊನಾ ಭೀತಿ ಶುರುವಾಗಿದ್ದು ಬೆಂಗಳೂರಿಗೆ ಹೈರಿಸ್ಕ್ ದೇಶಗಳೇ ಕಂಟಕವಾಗುವ ಸಾಧ್ಯತೆ ಇದೆ. ಸ್ವಲ್ಪ ಮೈಮರೆತ್ರೂ ಕೊರೊನಾ ರಕ್ಕಸ ರೌದ್ರನರ್ತನ ನಡೆಸಲಿದೆ.
ಹೈ-ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರಿಂದಲೇ ಆತಂಕ
ಹೈ-ರಿಸ್ಕ್ ದೇಶಗಳಿಂದ ಭಾರತದಕ್ಕೆ ಬರುವ ಪ್ರಯಾಣಿಕರೇ ಸದ್ಯ ಕೊರೊನಾ ವೈರಸ್ಗೆ ಆಹ್ವಾನ ನೀಡುವ ಸಾಧ್ಯತೆ ಇದೆ. ಯಾಕಂದ್ರೆ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿಗೆ ವಿದೇಶದಿಂದ ಬಂದ 19 ಜನರಲ್ಲಿ ಕೊರೊನಾ ದೃಡಪಟ್ಟಿದೆ. ಅದರಲ್ಲೂ ದುಬೈನಿಂದ 4, ಸಿಂಗಾಪುರ, ಅಬುದಾಬಿಯಿಂದ ಬಂದ ತಲಾ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇದು ಸದ್ಯ ಆತಂಕಕ್ಕೆ ಕಾರಣವಾಗಿದೆ.
ಹೊಸ ತಳಿಯ ಬಗ್ಗೆ ಭಯ ಬೇಡವೆಂದು ತಜ್ಞರ ಸಲಹೆ
ಇನ್ನು ಕೊರೊನಾ ಹೊಸ ತಳಿಯ ಬಗ್ಗೆ ಭಯ ಬೇಡವೆಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಅಭಯ ನೀಡಿದ್ದಾರೆ. ಆತಂಕ ಸೃಷ್ಟಿಸಿರುವ BF.7 ಒಮಿಕ್ರಾನ್ನ ಉಪ ತಳಿ ಅಷ್ಟೇ. ಮೂರನೇ ಅಲೆಯ ರೀತಿಯೇ ಕೇವಲ ಕೇಸ್ ದಾಖಲಾಗುತ್ತೆ. ಮೂರ್ನಾಲ್ಕು ದಿನ ನೆಗಡಿ, ಜ್ವರ ತಲೆ ನೋವು ಬರಬಹುದಷ್ಟೇ. ಆದ್ರೆ ಎಲ್ಲರೂ ಮುನ್ನೆಚ್ಚರಿಕೆಯಾಗಿ ಇರೋದು ಅತ್ಯಗತ್ಯ ಅಂತ ಹೇಳಿದ್ದಾರೆ.
ಕೊರೊನಾ ಆತಂಕದ ಬೆನ್ನಲ್ಲೇ ಬೂಸ್ಟರ್ ಡೋಸ್ಗೆ ಒತ್ತು
ಇನ್ನು ಅದ್ಯಾವಾಗ ರಾಜ್ಯದಲ್ಲಿ ಕೊರೊನಾ ಆತಂಕ ಹೆಚ್ಚಾಯ್ತೋ ಬೂಸ್ಟರ್ ಡೋಸ್ ಪಡೆಯಲು ರಾಜ್ಯ ಸರ್ಕಾರ ಮನವಿ ಮಾಡ್ತಿದೆ. ಈ ನಡುವೆ ಬೂಸ್ಟರ್ ಡೋಸ್ ಅಗತ್ಯತೆಯ ಅರಿವು ಮೂಡಿಸಲು ಬೂಸ್ಟರ್ ಡೋಸ್ ಆ್ಯಂಟಿಬಾಡಿ ಪ್ರಮಾಣದ ಬಗ್ಗೆ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಅಧ್ಯಯನ ನಡೆಯಲಿದೆ. ಆಸ್ಪತ್ರೆಯ ಸಿಬ್ಬಂದಿ ಮೇಲೆಯೇ ಈ ಪ್ರಯೋಗ ನಡೆಯಲಿದ್ದು ಮುಂದಿನ 6ರಿಂದ 8 ದಿನದಲ್ಲಿ ಬೂಸ್ಟರ್ ಡೋಸ್ನ ವರದಿ ಸಿದ್ಧವಾಗಲಿದೆ. ಒಟ್ಟಾರೆ ಚೀನಾದಲ್ಲಿ ಕೊರೊನಾ ರಣಕೇಕೆ ಹಾಕ್ತಿದ್ದಂತೆ ಭಾರತದಲ್ಲೂ ಢವ ಢವ ಶುರುವಾಗಿದೆ. ಆದ್ರೆ ಭಯಪಡುವ ಅವಶ್ಯಕತೆ ಇಲ್ಲ ಅಂತ ತಜ್ಞರು ಅಭಯ ನೀಡಿದ್ದಾರೆ. ಆದ್ರೂ ಮುನ್ನೆಚ್ಚರಿಕೆ ಅಗತ್ಯ. ರಾಜ್ಯ ಸರ್ಕಾರ ಕೂಡ ಬೆಂಗಳೂರಿನ ಮೇಲೆ ಕಣ್ಣಿಟ್ಟಿದ್ದು ಮುಂಜಾಗ್ರತೆ ಕ್ರಮ ಕೈಗೊಳ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post