ಚೀನಾದಲ್ಲಿ ಕೊರೊನಾ ಅಬ್ಬರ ಜೋರಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಾಗಿದೆ. ಜನರು ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳಲು ಲಸಿಕೆ ಹಾಕಿಸಿಕೊಳ್ಳಲು ದೌಡಾಯಿಸುತ್ತಿದ್ದಾರೆ. ಆದ್ರೆ ಲಸಿಕಾ ಕೇಂದ್ರದ ಬೋರ್ಡ್ ನೋಡಿ ವಾಪಸ್ಸಾಗ್ತಿದ್ದಾರೆ. ಇತ್ತ ರಾಜ್ಯದಲ್ಲಿ ಮತ್ತೊಬ್ಬರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಅಕ್ಷರಶಃ ಯಮರಾಜನ ಬಂಟನಂತೆ ರಣಕೇಕೆ ಹಾಕುತ್ತಿರುವ ಕೊರೊನಾ ಮಹಾಮಾರಿ ಅಬ್ಬರಕ್ಕೆ ಚೀನಾ, ಜಪಾನ್ ಸೇರಿ ಹಲವು ದೇಶಗಳು ತತ್ತರಿಸಿವೆ. ಇದು ಅಕ್ಕ-ಪಕ್ಕದ ದೇಶಗಳಿಗೂ ಆತಂಕ ಮೂಡಿಸಿದ್ದು ಕಠಿಣ ಕ್ರಮಕ್ಕೆ ಶರಣಾಗಿದ್ದಾರೆ. ಮಾತ್ರವಲ್ಲದೇ ಕೊರೊನಾ ರಕ್ಕಸನ ವಿರುದ್ಧದ ಯುದ್ಧದಲ್ಲಿ ಕತ್ತಿ ಗುರಾಣಿಯಂತೆ ಲಸಿಕೆ ಹಾಗೂ ಸ್ಯಾನಿಟೈಸರ್ ಹಿಡಿದುಕೊಂಡು ಮುನ್ನುಗ್ಗಿ ಅಂತ ಸರ್ಕಾರಗಳು ಜನರಿಗೆ ಕರೆ ಕೊಟ್ಟಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಪಾಸಿಟಿವ್ ಕೇಸ್ ಪತ್ತೆಯಾಗಿದೆ.
ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಕೋವಿಡ್ ದೃಢ
ಕೊರೊನಾ ರೂಪಾಂತರಿ BF.7 ಸೋಂಕಿನ ಆತಂಕ ಜೋರಾಗಿರುವಾಗಲೇ ಹೈರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರು ಕಂಟಕವಾಗಿ ಪರಿಣಮಿಸಿದ್ದಾರೆ. ಹೀಗಾಗಿ ವಿದೇಶಿ ಪ್ರಯಾಣಿಕರ ಮೇಲೆ ಸರ್ಕಾರ ಹದ್ದಿನ ಕಣ್ಣಿಟ್ಟಿದೆ. ಹೀಗಿರುವಾಗ ಮೊನ್ನೆ ಮೊನ್ನೆಯಷ್ಟೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಈಗ ಮತ್ತೊಬ್ಬ ವಿದೇಶಿ ಪ್ರಯಾಣಿಕನಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.
ಮಂಗಳೂರಿನಲ್ಲಿ ಹೋಮ್ ಐಸೋಲೇಷನ್ನಲ್ಲಿ ವ್ಯಕ್ತಿ
ವಿದೇಶದಿಂದ ಮಂಗಳೂರಿಗೆ ಬಂದ ಮತ್ತೊಬ್ಬ ವ್ಯಕ್ತಿಯಲ್ಲಿ ಕೋವಿಡ್ ದೃಢಪಟ್ಟಿದೆ. ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಯಲ್ಲಿ ಕೋವಿಡ್ ಕಾಣಿಸಿಕೊಂಡಿದೆ. ಸೌದಿಯಿಂದ ಬೆಂಗಳೂರಿಗೆ ಬಂದಿದ್ದ ವ್ಯಕ್ತಿ ಅಲ್ಲಿಂದ ಮಂಗಳೂರಿಗೆ ಪ್ರಯಾಣಿಸಿದ್ದಾನೆ. ಸದ್ಯ ಈತನನ್ನ ಮಂಗಳೂರಿನಲ್ಲಿ ಹೋಮ್ ಐಸೋಲೇಷನ್ನಲ್ಲಿ ಇರಿಸಲಾಗಿದೆ.
ಕೋವಿಡ್ ಎದುರಿಸಲು ಜಿಲ್ಲಾಡಳಿತ ಸಿದ್ಧತೆ
ಅತ್ತ ಮಂಗಳೂರಿನಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದ್ದಂತೆ ಮುಂಬರುವ ಕೋವಿಡ್ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ದಕ್ಷಿಣ ಕನ್ನಡದ 8 ಕಾಲೇಜುಗಳಲ್ಲಿ ಕೋವಿಡ್ ವಾರ್ಡ್ ಸ್ಥಾಪನೆ ಮಾಡಲಾಗಿದೆ. ಜೊತೆಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 25 ಬೆಡ್ಗಳ ಐಸೋಲೇಷನ್ ವಾರ್ಡ್ಗಳನ್ನ ನಿರ್ಮಿಸಿದ್ದಾರೆ.
ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ಸಿಗದೇ ಪರದಾಟ
ಅತ್ತ ಕೊರೊನಾ ಆತಂಕ ಮನೆಮಾಡಿರುವಾಗಲೇ ಇತ್ತ ಕೊರೊನಾ ವಿರುದ್ಧ ಹೋರಾಡಲು ಅಸ್ತ್ರವೇ ಇಲ್ಲದಂತಾಗಿದೆ. 4ನೇ ಅಲೆ ಆರಂಭಕ್ಕೂ ಮುನ್ನವೇ ವ್ಯಾಕ್ಸಿನ್ ಕೊರತೆಯಾಗಿದೆ. ಒಂದು ಕಡೆ ಬೂಸ್ಟರ್ ಡೋಸ್ ತೆಗೆದುಕೊಳ್ಳಿ ಅಂತ ಸರ್ಕಾರ ಹೇಳ್ತಿದ್ರೆ ಇತ್ತ ಬೆಂಗಳೂರಿನಲ್ಲಿ ಬೂಸ್ಟರ್ ಡೋಸ್ ಸಿಗದೇ ಜನ ಪರದಾಡುತ್ತಿದ್ದಾರೆ. ಲಸಿಕಾ ಕೇಂದ್ರದಲ್ಲಿ ಬೂಸ್ಟರ್ ಡೋಸ್ ಸಿಗದೆ ವಾಪಸ್ಸಾಗ್ತಿದ್ದಾರೆ. ಕೋವಿಶೀಲ್ಡ್, ಕೋರ್ಬಿವ್ಯಾಕ್ಸ್, ಬೂಸ್ಟರ್ ಡೋಸ್ ಕೊರತೆ ಸೃಷ್ಟಿಯಾಗಿದೆ. ಹವಲು ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಅಭಾವವಿದ್ರೆ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕೋವ್ಯಾಕ್ಸಿನ್ ಮಾತ್ರ ಲಭ್ಯವಿದೆ. ಸದ್ಯ ಬೂಸ್ಟರ್ ಡೋಸ್ ಅಭಾವ ನೀಗಿಸಲು ಸರ್ಕಾರ ಕೋವಿಶೀಲ್ಡ್ ಬದಲಿಗೆ ಕೋರ್ಬಿವ್ಯಾಕ್ಸ್ ನೀಡಲು ನಿರ್ಧಾರ ಮಾಡಿದೆ.
ಒಟ್ಟಾರೆ ಕೊರೊನಾತಂಕ ಜನರಲ್ಲಿ ಇನ್ನಿಲ್ಲದಂತೆ ಹೆಚ್ಚಾಗಿದೆ. ಅದರಲ್ಲೂ ಚೀನಾ ಪರಿಸ್ಥಿತಿ ನೋಡಿ ಜನ ಭೀತಿಗೊಳಗಾಗಿದ್ದಾರೆ. ಸರ್ಕಾರ ಜನರ ಭಯ ಹೋಗಲಾಡಿಸಿ ಲಸಿಕೆಗಳ ಅಭಾವವಾಗದಂತೆ ವ್ಯವಸ್ಥೆ ಮಾಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post