ಸಿಂಧನೂರು: ಹೊಸ ಪಕ್ಷ ಘೋಷಿಸಿ ಬಿಜೆಪಿಗೆ ಶಾಕ್ ಕೊಟ್ಟಿರೋ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ತಮ್ಮ ಹಳೇ ಖದರ್‌ಗೆ ಮರಳಿದ್ದಾರೆ. ಒಬ್ಬ ಸಾಮಾನ್ಯ ಪೊಲೀಸ್ ಕಾನ್ಸ್‌ಟೇಬಲ್‌ನ ಮಗ ನಾನು. ನನ್ನ ಆಸ್ತಿ ಮುಟ್ಟುಗೋಲು ಹಾಕಲು ನೂರು ಜನ್ಮ ಎತ್ತಿ ಬರಬೇಕು ಅನ್ನೋ ಸವಾಲ್ ಎಸೆದಿದ್ದಾರೆ.
ಪ್ರಾದೇಶಿಕ ಪಕ್ಷದ ಶಕ್ತಿ ಪ್ರದರ್ಶನ
ಸಿಂಧನೂರು ನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಬೈಕ್ ಱಲಿ ಮೂಲಕ ಸಮಾವೇಶಕ್ಕೆ ಆಗಮಿಸಿದ ಜನಾರ್ದನ ರೆಡ್ಡಿ, ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಏನು ಮಾಡೋಕಾಗುತ್ತೆ ಅಂತಾ ಯೋಚನೆ ಮಾಡ್ತಿದ್ದಾರೆ. ಚುನಾವಣೆಗೆ ಇನ್ನು ನಾಲ್ಕು ತಿಂಗಳು ಮಾತ್ರ ಇದೆ. KRPP ಪಕ್ಷವನ್ನ ಅಧಿಕಾರಕ್ಕೆ ತರಲು ಹಗಲು ರಾತ್ರಿ ಕೆಲಸ ಮಾಡ್ತೇನೆ ಎಂದಿದ್ದಾರೆ.
ಸುಮ್ಮನೆ ಕೈಕಟ್ಟಿ ಕುಳಿತಿರಲಿಲ್ಲ
2018 ರಲ್ಲೇ ಹೊಸ ಪಕ್ಷ ಕಟ್ಟುವ ವಿಚಾರ ನನ್ನಲ್ಲಿತ್ತು. ಆದ್ರೆ ಆ ಸಮಯದಲ್ಲಿ ಬಿ.ಎಸ್. ಯಡಿಯೂರಪ್ಪ ಸಿಎಂ ಅಭ್ಯರ್ಥಿ ಆಗಿದ್ರು. ನಾನೇ ಎಲ್ಲಾ ಹಾಳು ಮಾಡಬಾರದು ಅಂತಾ ಸುಮ್ಮನಿದ್ದೆ. ನನ್ನ ಕೈಯಲ್ಲಿ ಏನೂ ಆಗಲ್ಲ ಅಂತಾ ಸುಮ್ಮನೆ ಕುಳಿತಿರಲಿಲ್ಲ. ನಾನು ರಾಜಕೀಯಕ್ಕೆ ಯಾರನ್ನೂ ನಂಬಿ ಬಂದಿಲ್ಲ. ಜನರನ್ನು ನಂಬಿ ನಾನು ರಾಜಕೀಯಕ್ಕೆ ಬಂದಿದ್ದೇನೆ. ಒಂದು ಅವಕಾಶ ಮಾಡಿ ಕೊಡಿ. ಸಿಂಧನೂರನ್ನ ಅಭಿವೃದ್ಧಿ ಮಾಡುತ್ತೇನೆ. ನೀವು ಭಾರತದ ರಸ್ತೆಗಳ ಮೇಲೆ ಓಡಾಡುತ್ತಿದ್ದೀರಾ. ಫಾರಿನ್‌ನಲ್ಲಿ ಓಡಾಡುತ್ತಿದ್ದೇವೆ ಎಂದು ಬಾಯಿ ಮೇಲೆ ಬೆರಳಿಟ್ಟುಕೊಳ್ಬೇಕು ಹಾಗೆ ಮಾಡುತ್ತೇನೆ ಎಂದು ರೆಡ್ಡಿ ಹೇಳಿದ್ದಾರೆ.
ನೂರು ಜನ್ಮ ಎತ್ತಿ ಬರಬೇಕು
ಮಾತು ಮುಂದುವರಿಸಿದ ರೆಡ್ಡಿಗಾರು ಖಡಕ್ ಸವಾಲುಗಳನ್ನ ಹಾಕಿದ್ರು. ನನ್ನ ಆಸ್ತಿ ಮುಟ್ಟುಗೋಲು ಹಾಕಲು ನೂರು ಜನ್ಮ ಹುಟ್ಟಿ ಬರಬೇಕು. ಕಷ್ಟಪಟ್ಟು ದುಡಿದ ಗಂಡುಮಗ ನಾನು. ಅಡ್ಡಾದಿಡ್ಡಿ ಮಾಡಿದ ದುಡ್ಡು ಅಲ್ಲ. ವಿಧಿಯಾಟದಿಂದ ನಾನು ಇಲ್ಲಿಯವರೆಗೆ ಬಂದಿದ್ದೇನೆ. ಕುತಂತ್ರದಿಂದ ನನ್ನ ಜೈಲಿಗೆ ಕಳುಹಿಸಿದ್ರು. ಮೋಸ ಕುತಂತ್ರ ಮಾಡೋರನ್ನ ದೇವರು ಮೇಲಿಂದ ನೋಡ್ತಿದ್ದಾನೆ. ಅವರ ಬಗ್ಗೆ ನಾನೇನು ಹೇಳಲ್ಲ, ಎಲ್ಲಾ ದೇವರಿಗೆ ಬಿಟ್ಟಿದ್ದೇನೆ. ಚಿಕ್ಕಂದಿನಿಂದ ನಾನು ದೇವರನ್ನೇ ನಂಬಿದ್ದೇನೆ. ಒಂದು ದಿನ ನಾನು ಸುಳ್ಳು ಹೇಳಿದ್ರೆ ನಂಗೆ ಅಂದು ರಾತ್ರಿ ನಿದ್ದೆಯೇ ಬರಲ್ಲ ಎಂದು ಜನಾರ್ದನ ರೆಡ್ಡಿ ಹೇಳಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post