ತುಮಕೂರು: ಸಚಿವ ಮಾಧುಸ್ವಾಮಿ ಚಿಕ್ಕನಾಯಕನಹಳ್ಳಿಯಲ್ಲಿ ಮಾಡಿರೋ ಒಂದು ಭಾಷಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಮಾಧುಸ್ವಾಮಿ ಮಾತುಗಳಿಗೆ ಜೆಡಿಎಸ್ ಕೆರಳಿ ಕೆಂಡವಾಗಿದ್ರೆ, ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಸಚಿವರು ಇದಕ್ಕೆ ಏನ್ ಹೇಳಬೇಕಪ್ಪಾ ಅಂತಾ ತಡಬಡಾಯಿಸಿದ್ದಾರೆ.
ಪಕ್ಷದ ದೌರ್ಬಲ್ಯ ಬಿಚ್ಚಿಟ್ಟ ಮಾಧುಸ್ವಾಮಿ
ಚಿಕ್ಕನಾಯಕನಹಳ್ಳಿ ತಾಲೂಕಿನ ಮತ್ತಿಘಟ್ಟದಲ್ಲಿ ಭಾಷಣ ಮಾಡಿದ ಮಾಧುಸ್ವಾಮಿ ತಮ್ಮ ಪಕ್ಷದ ದೌರ್ಬಲ್ಯಗಳನ್ನು ಹೇಳಿಕೊಂಡರು. ನಾವೆಲ್ಲಾ ಮೂಕ ಪ್ರೇಕ್ಷಕರಾಗಿರೋದು ನಮ್ಮ ದೌರ್ಭಾಗ್ಯ. ನಾವು ಕಾಂಗ್ರೆಸ್‌ನವರ ರೀತಿ ಅಗ್ರೆಸಿವ್ ಆಗಿ ಮಾತನಾಡುತ್ತಿಲ್ಲ. ನಾವು ಗಟ್ಟಿ ಧ್ವನಿಯಲ್ಲಿ ನಮ್ಮ ಸಾಧನೆಯನ್ನು ಹೇಳಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಅಪ್ಪ-ಮಕ್ಕಳು-ಮೊಮ್ಮಕ್ಕಳು ದೋಚಿದ್ದಾರೆ
ಜೆಡಿಎಸ್ ಮೇಲೆ ಅಬ್ಬರಿಸಿದ ಮಾಧುಸ್ವಾಮಿ, ದೇವೇಗೌಡರು ತುಮಕೂರಿಗೆ ಹೇಮಾವತಿ ನೀರನ್ನು ಕೊಡದೇ ಮೋಸ ಮಾಡಿದರು. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಚಿಕ್ಕನಾಯಕನಹಳ್ಳಿ ತಾಲೂಕು ಅಭಿವೃದ್ಧಿ ಆಗಿಲ್ಲವಂತೆ. ನಾನು ಅಭಿವೃದ್ಧಿ ಆಗಿದೀನಿ ಅಂತಾ ಹೇಳ್ತಾರೆ. ಇವರಪ್ಪ 50 ರೂ ಕೊಟ್ಟು ಕಂಟ್ರ್ಯಾಕ್ಟರ್ ಕೆಲಸ ಶುರುಮಾಡಿದ್ದು ಹೊಳೆ ನರಸೀಪುರದಲ್ಲಿ. ಇವ್ರಂಗೆ ದೋಚಿದ್ದು ಬಾಚಿದ ಪ್ರಕರಣಗಳಿಲ್ಲ ನಮ್ಮ ಬಳಿ. ಅಪ್ಪ ಮಕ್ಕಳು ಮೊಮ್ಮಕ್ಕಳು ಎಲ್ಲಾ ದೋಚೋಕೆ ಶುರು ಮಾಡಿದವರು ಎಂದಿದ್ದಾರೆ.
ಸಿಎಂ ವ್ಯಂಗ್ಯ, ಮಾಜಿ ಸಿಎಂ ಮೌನ
ಮಾಧುಸ್ವಾಮಿ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಅವರು ವಿಧಾನಸಭೆಯ ಒಳಗೆ ಅಗ್ರೆಸ್ಸಿವ್ ಆಗಿ ಮಾತನಾಡ್ತಿದ್ದಾರೆ. ಅದನ್ನ ಬಹಿರಂಗವಾಗಿ ಅವರೇ ಮೊದಲು ಶುರು ಮಾಡಲಿ ಎಂದು ವ್ಯಂಗ್ಯದಲ್ಲೇ ಟಾಂಗ್ ಕೊಟ್ಟಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ನಾನಂತೂ ಇತ್ತೀಚೆಗೆ ಮಾತನಾಡುವುದನ್ನ ಬಿಟ್ಟಿದ್ದೇನೆ. ಸಚಿವರಿಗೂ ಮಾತಾಡೋಕೆ ಹೇಳೋಣ ಎಂದಿದ್ದಾರೆ.
ಜೆಡಿಎಸ್ ಸಾಲು, ಸಾಲು ಟ್ವೀಟ್‌ಗಳ ಮೂಲಕ ಮಾಧುಸ್ವಾಮಿ ಮಾತುಗಳನ್ನ ಖಂಡಿಸಿದೆ. ನೆಟ್ಟಗೆ ಆಡಳಿತ ನಡೆಸಲು ಬಾರದ ರಾಜ್ಯ ಬಿಜೆಪಿ ಸರ್ಕಾರವನ್ನ ಮಾಧುಸ್ವಾಮಿ ಸಮರ್ಥಿಸಿಕೊಳ್ಳುವ ಮೊಂಡುವಾದ ಮಾಡಿದ್ದಾರೆ. ಮಾಧುಸ್ವಾಮಿ ಅವರಿಗೆ ದೇವೇಗೌಡರ ಬಗ್ಗೆ ಮಾತನಾಡದಿದ್ದರೆ ತಿಂದ ಅನ್ನ ಜೀರ್ಣವಾಗುವುದಿಲ್ಲವೆ? ಅಥವಾ ಈ ರೀತಿ ಮಾತಿನಿಂದ ಪ್ರಚಾರ ಗಿಟ್ಟಿಸಿಕೊಳ್ಳುವ ಹುನ್ನಾರವೇ? ಎಂದು ಟೀಕಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post