ರೋಹಿತ್ ಶರ್ಮಾ, ಶುಭ್ಮನ್ ಗಿಲ್ ಬ್ಯಾಟಿಂಗ್ ಶತಕದ ಅಬ್ಬರ- ಕುಲ್ದೀಪ್ ಯಾದವ್ ಸ್ಪಿನ್ ಮ್ಯಾಜಿಕ್, ಆಲ್ರೌಂಡರ್ ಪಾಂಡ್ಯರ ಅಮೋಘ ಆಟದಿಂದ 3ನೇ ಏಕದಿನ ಪಂದ್ಯದಲ್ಲು ನ್ಯೂಜಿಲೆಂಡ್ಗೆ ಸೋಲು ತಪ್ಪಲಿಲ್ಲ. ಇಂದೋರ್ನಲ್ಲಿ ಟೀಮ್ ಇಂಡಿಯಾಗೆ ಸಿಕ್ತು ಗೆಲುವಿನ ಥ್ರಿಲ್.
ನ್ಯೂಜಿಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲು ಟೀಮ್ ಇಂಡಿಯಾ ಗೆಲುವಿನ ರಣಕಹಳೆ ಮೊಳಗಿಸಿದೆ. 3-0 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಈ ಭರ್ಜರಿ ಗೆಲುವಿನಿಂದಾಗಿ ರೋಹಿತ್ ಶರ್ಮಾ ಪಡೆ, ಐಸಿಸಿ ಏಕದಿನ ಱಂಕಿಂಗ್ನಲ್ಲಿ ನಂ.1 ಪಟ್ಟ ಅಲಂಕರಿಸಿದೆ.
ಸಾಲಿಡ್ ಸ್ಟಾರ್ಟ್ ಒದಗಿಸಿದ ರೋಹಿತ್ -ಗಿಲ್.!
ಇಂದೋರ್ನ ಹೋಲ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ಗೆದ್ದ ನ್ಯೂಜಿಲೆಂಡ್ ಕ್ಯಾಪ್ಟನ್ ಟಾಮ್ ಲಾಥಮ್, ಫೀಲ್ಡಿಂಗ್ ಮಾಡೋ ನಿರ್ಧಾರ ಕೈಗೊಂಡ್ರು. ಆದ್ರೆ, ಕಿವೀಸ್ ನಾಯಕನಿಗೆ ನಮ್ಮ ನಿರ್ಧಾರ ತಪ್ಪು ಅಂತ ಗೊತ್ತಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.
ಆರಂಭಿಕರಾದ ರೋಹಿತ್ ಶರ್ಮಾ- ಶುಭ್ಮನ್ ಗಿಲ್ ಅದ್ಭುತ ಬ್ಯಾಟಿಂಗ್ ಮೂಲಕ ಟೀಮ್ ಇಂಡಿಯಾಗೆ ಸಾಲಿಡ್ ಸ್ಟಾರ್ಟ್ ಒದಗಿಸಿದ್ರು. ಮೊದಲಿಗೆ ಅಳೆದು ತೂಗಿ ಆಡಿದ ಇವರಿಬ್ಬರು, ಸೆಟಲ್ ಆದ ನಂತರ ಅಬ್ಬರಿಸಿದ್ರು. ಅದರಲ್ಲು ಗಿಲ್ ಆರ್ಭಟಕ್ಕೆ ಲಾಥಮ್ ಪಡೆ ಬೆಚ್ಚಿಬಿತ್ತು. ಗಿಲ್ ಆರ್ಭಟ ಹೇಗಿತ್ತು ಅಂದ್ರೆ, ಲಾಕಿ ಫರ್ಗುಸನ್ ಎಸೆದ ಒಂದೇ ಓವರ್ನಲ್ಲಿ ಗಿಲ್, 3 ಬೌಂಡರಿ 1 ಸಿಕ್ಸರ್ ಚಚ್ಚಿದ್ರು.
ಈ ಜೋಡಿ ನೋಡು ನೋಡುತ್ತಲೇ, ಶಕತದ ಜೊತೆಯಾಟವಾಡ್ತು.ಇಬ್ಬರು ಅರ್ಧಶತಕ ದಾಖಲಿಸಿದ್ರು. ಹಾಫ್ ಸೆಂಚುರಿ ನಂತರ, ಇಬ್ಬರು ಗೇರ್ ಬದಲಾಯಿಸಿದ್ರು. ದ್ವಿಶತಕದ ಜೊತೆಯಾಟವಾಡಿದ್ರು.
ಕ್ಯಾಪ್ಟನ್ ರೋಹಿತ್ ಶರ್ಮಾ 3 ವರ್ಷಗಳ ನಂತರ, ಏಕದಿನ ಕ್ರಿಕೆಟ್ನಲ್ಲಿ ಶತಕ ದಾಖಲಿಸಿದ್ರು. ಇನ್ನು ಶುಭ್ಮನ್ ಗಿಲ್, ಸರಣಿಯಲ್ಲಿ 2ನೇ ಶತಕ ಸಿಡಿಸಿದ್ರು. 85 ಎಸೆತಗಳನ್ನ ಎದುರಿಸಿದ ಹಿಟ್ಮ್ಯಾನ್, 9 ಫೋರ್, 6 ಸಿಕ್ಸರ್ ಸಹಿತ 101 ರನ್ಗಳಿಸಿ, ಔಟಾದ್ರು. 78 ಎಸೆತಗಳಲ್ಲಿ 112 ರನ್ಗಳಿಸಿ ಗಿಲ್, ಪೆವಿಲಿಯನ್ ದಾರಿ ಹಿಡಿದ್ರು.
ಬಿಗ್ ಇನ್ನಿಂಗ್ಸ್ ಆಡೋ ಸೂಚನೆ ನೀಡಿದ್ದ ವಿರಾಟ್ ಕೊಹ್ಲಿ ಆಟ 36ರನ್ಗೆ ಕೊನೆಯಾಯ್ತು. ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ನಿಂದ ಅರ್ಧಶತಕ ಸಿಡಿಸಿದ್ರು. ಶಾರ್ದೂಲ್ ಠಾಕೂರ್, ಸ್ಫೋಟಕ 25 ರನ್ಗಳಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ, 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 385 ರನ್ ಕಲೆಹಾಕ್ತು.
ಮೊದಲ ಓವರ್ನಲ್ಲೇ ನ್ಯೂಜಿಲೆಂಡ್ಗೆ ಆಘಾತ.!
ಬೆಟ್ಟದಂತ ಟಾರ್ಗೆಟ್ ಚೇಸ್ ಮಾಡಲಿಳಿಸಿದ ನ್ಯೂಜಿಲೆಂಡ್ಗೆ, ಮೊದಲ ಓವರ್ನಲ್ಲೇ ಆಘಾತ ಎದುರಾಯ್ತು. ಹಾರ್ದಿಕ್ ಪಾಂಡ್ಯ ಬೌಲಿಂಗ್ನಲ್ಲಿ ಫಿನ್ ಆಲೆನ್ ಕ್ಲೀನ್ ಬೌಲ್ಡ್ ಆದ್ರು.
ಡಿವಾನ್ ಕಾನ್ವೆ, ಹೆನ್ರಿ ನಿಕೋಲ್ಸ್ ತಂಡವನ್ನ ಆರಂಭಿಕ ಆಘಾತದಿಂದ ಪಾರು ಮಾಡಿದ್ರು. 2ನೇ ವಿಕೆಟ್ಗೆ ಶತಕದ ಜೊತೆಯಾಟವಾಡಿದ್ರು. ಆದ್ರೆ 42 ರನ್ಗಳಿಸಿದ್ದ ನಿಕೋಲ್ಸ್ ಕುಲ್ದೀಪ್ ಯಾದವ್ರ ಬೌಲಿಂಗ್ನಲ್ಲಿ LBW ಬಲೆಗೆ ಬಿದ್ರು.
ಡ್ಯಾರಿಲ್ ಮಿಚೆಲ್, ಹೆಚ್ಚು ಹೊತ್ತು ಕ್ರೀಸ್ನಲ್ಲಿ ನಿಲ್ಲಲಿಲ್ಲ. ಕ್ಯಾಪ್ಟನ್ ಟಾಮ್ ಲಾಥಮ್ ಗೋಲ್ಡ್ ಡಕೌಟ್ ಆದ್ರು. ಗ್ಲೇನ್ ಫಿಲಿಪ್ಸ್ ಬಂದಷ್ಟೆ ಬೇಗ ಜಾಗ ಖಾಲಿ ಮಾಡಿದ್ರು.
ವ್ಯರ್ಥವಾಯ್ತು ಕಾನ್ವೆ ಏಕಾಂಗಿ ಶತಕದ ಹೋರಾಟ
ಒಂದೆಡೆ ವಿಕೆಟ್ ಬೀಳ್ತಿದ್ರು, ಆರಂಭಿಕ ಆಟಗಾರ ಡಿವಾನ್ ಕಾನ್ವೆ ಮಾತ್ರ ತಂಡದ ಗೆಲುವಿಗಾಗಿ ಏಕಾಂಗಿ ಹೋರಾಡಿದ್ರು. ಟೀಮ್ ಇಂಡಿಯಾ ಬೌಲರ್ಗಳನ್ನ ಸಮರ್ಥವಾಗಿ ಎದುರಿಸಿದ ಕಾನ್ವೆ ಶತಕ ಸಿಡಿಸಿ ಮಿಂಚಿದ್ರು. ಕೇವಲ 71 ಎಸೆತಗಳಲ್ಲಿ ಸಿಕ್ಸ್ ಮೂಲಕ ಶತಕ ಸಿಡಿಸಿದ ಕಾನ್ವೆ, ಶತಕದ ನಂತರ ಮತ್ತಷ್ಟು ಅಬ್ಬರಿಸಿದ್ರು.
ಇದನ್ನು ಓದಿ: ಬೀದಿ ನಾಯಿಗೆ ಪೆಟ್ರೋಲ್ ಸುರಿದು ಬೆಂಕಿ ಹಾಕಿದ ವಿದ್ಯಾರ್ಥಿ; ಕಾರಣ ಏನು ಗೊತ್ತಾ?
100 ಎಸೆತಗಳನ್ನ ಎದುರಿಸಿದ ಕಾನ್ವೆ, 12 ಬೌಂಡರಿ, 8 ಭರ್ಜರಿ ಸಿಕ್ಸರ್ಗಳ ಮೂಲಕ, 138 ರನ್ಗಳಿಸಿ ಔಟಾದ್ರು. ಮೈಕಲ್ ಬ್ರೆಸ್ವೆಲ್, ಮಿಚೆಲ್ ಸ್ಯಾಂಟ್ನರ್ ಈ ಇಬ್ಬರನ್ನ ಟೀಮ್ ಇಂಡಿಯಾ ಬೌಲರ್ಸ್, ಬೇಗ ಪೆವಿಲಿಯನ್ಗೆ ಕಳಿಸಿದ್ರು.
ಅಂತಿಮವಾಗಿ ನ್ಯೂಜಿಲೆಂಡ್ 41.2 ಓವರ್ಗಳಲ್ಲಿ 295 ರನ್ಗೆ ಆಲೌಟ್ ಆಯ್ತು. ಆ ಮೂಲಕ 90 ರನ್ಗಳಿಂದ ಭಾರತಕ್ಕೆ ಶರಣಾಯ್ತು. ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್ ತಲಾ 3 ವಿಕೆಟ್ ಪಡೆದು ಮಿಂಚಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post