ಟಿ.ನರಸೀಪುರದಲ್ಲಿ ಚಿರತೆಯ ಕಾಟ ಹಿನ್ನೆಲೆಯಲ್ಲಿ ಅದನ್ನ ಸೆರೆಹಿಡಿಯಲು ಟಾಸ್ಕ್ ಫೋರ್ಸ್ ರಚನೆ ಮಾಡಿದ್ದಾರೆ. ಸಿಎಂ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಿತಿ ರಚನೆಗೆ ಸೂಚನೆ ನೀಡಲಾಗಿದ್ದು ಅರಣ್ಯ ಇಲಾಖೆಯಿಂದ ಕೂಂಬಿಂಗ್ ನಡೆಸ್ತಿದೆ.
ಸಾಂಸ್ಕೃತಿ ನಗರಿ ಮೈಸೂರು ಕಾಡುಪ್ರಾಣಿಗಳ ಅಟ್ಟಹಾಸಕ್ಕೆ ನಲುಗಿಹೋಗಿದೆ. ಕಳೆದೊಂದು ತಿಂಗಳಿಂದ ಚಿರತೆ ಕಾಟದಿಂದ ಜನರು ಹೈರಾಣಾಗಿ ಹೋಗಿದ್ದಾರೆ. ಮೊನ್ನೆವರೆಗೂ ಜನರ ರಕ್ತ ಹೀರುವ ಮೂಲಕ ಮೈಸೂರಿಗರಲ್ಲಿ ಜೀವಭಯ ತಂದಿಟ್ಟಿದೆ. ಇದಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಕ್ರಮ ಕೈಗೊಳ್ಳಲು ಮುಂದಾಗಿದೆ.
ಚಿರತೆ ಸೆರೆಗೆ ಟಾಸ್ಕ್ ಫೋರ್ಸ್ ರಚನೆ, ಸಿಎಂ ಬೊಮ್ಮಾಯಿ ಸೂಚನೆ
ಎರಡು ದಿನಗಳ ಹಿಂದೆಯಷ್ಟೇ ನರಭಕ್ಷಕ ಚಿರತೆ ಯುವಕನನ್ನು ಕೊಂದು ಹಾಕಿತ್ತು. ಇದಕ್ಕಿಂತ ಮೊದಲು ಇಬ್ಬರನ್ನು ಬಲಿ ಪಡೆದು ಇಡೀ ಗ್ರಾಮಕ್ಕೇ ನಡುಕ ಸೃಷ್ಟಿಸಿತ್ತು. ಹೀಗೆ ಕಳೆದ 4 ತಿಂಗಳಿಂದ ನಾಲ್ವರನ್ನು ಕೊಂದು ಹಾಕಿದೆ. ಇತ್ತೀಚೆಗೆ ನಡೆದ ಚಿರತೆ ದಾಳಿಯ ವಿವರ ನೋಡೋದಾದ್ರೆ.
ಬಾಲಕ, ಯುವಕ, ಯುವತಿ ವೃದ್ಧೆ ಮೃಗಕ್ಕೆ ಬಲಿ
ಮೊನ್ನೆ ಜನವರಿ 20ರಂದು ಕನ್ನಾನಾಯಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ 60 ವರ್ಷದ ವೃದ್ಧೆ ಸಿದ್ದಮ್ಮ ಸಾವನ್ನಪ್ಪಿದ್ದರು. ಇದಾಗಿ ಎರಡೇ ದಿನಕ್ಕೆ ಅಂದ್ರೆ ಜನವರಿ 22ರಂದು ಚಿರತೆ ದಾಳಿಗೆ 11 ವರ್ಷದ ಬಾಲಕ ಜಯಂತ್ ಸಾವನ್ನಪ್ಪಿದ್ದಾನೆ. ಇನ್ನು 2022ರ ಅಕ್ಟೋಬರ್ 31ರಂದು ಚಿರತೆ ದಾಳಿಗೆ ಎಂ.ಎಲ್. ಹುಂಡಿ ಗ್ರಾಮದ ಚೆನ್ನಮಲ್ಲಿಕಾರ್ಜುನ ಬೆಟ್ಟದಲ್ಲಿ ಮಂಜುನಾಥ್ ಮೃತಪಟ್ಟಿದ್ದರು. 2022ರ ಡಿಸೆಂಬರ್ 1ರಂದು ಚಿರತೆ ದಾಳಿಯಿಂದ ಕೆಬ್ಬೆ ಹುಂಡಿ ಗ್ರಾಮದ 23 ವರ್ಷದ ಯುವತಿ ಮೇಘನಾ ಸಾವನ್ನಪ್ಪಿದ್ದಳು.
ಇದನ್ನು ಓದಿ: ಅಮೆರಿಕದಲ್ಲಿ ಕೆಲಸ ಕಳೆದುಕೊಂಡ 80 ಸಾವಿರಕ್ಕೂ ಹೆಚ್ಚು ಭಾರತೀಯರು ಈಗ ಅತಂತ್ರ!
ಮೊನ್ನೆಯಷ್ಟೇ ಎರಡು ದಿನಗಳ ಅಂತರದಲ್ಲಿ ಇಬ್ಬರನ್ನು ಚಿರತೆ ಬಲಿ ಪಡೆದುಕೊಂಡಿದೆ. ಇದ್ರಿಂದ ರೊಚ್ಚಿಗೆದ್ದಿದ್ದ ಜನರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದ್ರಿಂದ ಎಚ್ಚೆತ್ತುಕೊಂಡ ಸರ್ಕಾರ ನಿನ್ನೆ ಮಹತ್ವದ ಮೀಟಿಂಗ್ ಮಾಡಿದೆ. ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಮೀಟಿಂಗ್ನಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಸೂಚನೆ ನೀಡಲಾಯ್ತು. ಮೈಸೂರು ಜಿಲ್ಲಾಡಳಿತದಿಂದ ಮಾಹಿತಿ ಪಡೆದ ಸಿಎಂ ಬೊಮ್ಮಾಯಿ, ಕೂಡಲೇ ಚಿರತೆ ಸೆರೆಗೆ ಬೇಕಾದ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ಟಿ.ನರಸೀಪುರದಲ್ಲಿ ಚಿರತೆ ಸೆರೆಗೆ ಕೂಂಬಿಂಗ್ ಶುರು
ಇನ್ನು ಟಿ ನರಸೀಪುರ ತಾಲೂಕಿನ 21 ಹಳ್ಳಿಗಳಲ್ಲಿ ಚಿರತೆ ದಾಳಿಯ ಆತಂಕ ಎದುರಾಗಿದೆ. ಸದ್ಯ 158 ಜನರ ತಂಡ ಚಿರತೆ ಸೆರೆ ಹಿಡಿಯಲು ಕೂಂಬಿಂಗ್ ಶುರುಮಾಡಿದೆ. ಚಿರತೆ ದಾಳಿ ಮಾಡಿದ್ದ ಗ್ರಾಮದ 3-4 ಕಿಲೋಮೀಟರ್ ವ್ಯಾಪ್ತಿಯಲ್ಲಿ ಚಿರತೆ ಸೆರೆಗಾಗಿ ಕಾರ್ಯಾಚರಣೆ ನಡೆಯಲಿದೆ. ಅಗತ್ಯವಿದ್ದಲ್ಲಿ ಸಶಸ್ತ್ರ ಮೀಸಲು ಪೊಲೀಸ್ ಪಡೆಗಳ ನೆರವು ಪಡೆಯಲು ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post