ಸದಾ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತೊಮ್ಮೆ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ವಿವಾದಿತ BBC ಸಾಕ್ಷ್ಯಚಿತ್ರ ಪ್ರದರ್ಶಿಸಲು ಜೆಎನ್ಯು ವಿದ್ಯಾರ್ಥಿ ಒಕ್ಕೂಟ ಸಿದ್ಧತೆ ಮಾಡಿಕೊಂಡಿತ್ತು. ಈ ವೇಳೆ ಜೆಎನ್ಯು ಕ್ಯಾಂಪಸ್‌ನಲ್ಲಿ ಭಾರೀ ಹೈಡ್ರಾಮವೇ ನಡೆದಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದೆ. ಈ ಬಾರಿ ಗುಜರಾತ್ ಗಲಭೆ ಕುರಿತ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ಸೃಷ್ಟಿಸಿದೆ. ಕಳೆದ ರಾತ್ರಿ ಜವಹರಲಾಲ್ ನೆಹರೂ ಯುವನಿವರ್ಸಿಟಿಯ ಆವರಣದಲ್ಲಿ ಭಾರೀ ಹೈಡ್ರಾಮಾವೇ ನಡೆದಿದೆ.
ಹೈದ್ರಾಬಾದ್ ವಿವಿಯಲ್ಲಿ ಬಿಬಿಸಿ ವಿವಾದಿತ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಲಾಗಿತ್ತು. ಇದೇ ಮಾದರಿಯಲ್ಲಿ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮಂಗಳವಾರ ರಾತ್ರಿ ಮೋದಿ ಕುರಿತ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸುವ ಯೋಜನೆಯನ್ನು ರೂಪಿಸಿದ್ದರು. ಸಾಕ್ಷ್ಯಚಿತ್ರ ಪ್ರದರ್ಶಿಸದಂತೆ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಎಚ್ಚರಿಕೆ ನೀಡಿತ್ತು.
ಆದರೆ ಆಡಳಿತದ ಎಚ್ಚರಿಕೆಗೆ ತಲೆ ಕೆಡಿಸಿಕೊಳ್ಳದೇ ವಿದ್ಯಾರ್ಥಿಗಳು ಮಂಗಳವಾರ ರಾತ್ರಿ 9 ಗಂಟೆಗೆ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಯೂನಿಯನ್ ಕಚೇರಿಯಲ್ಲಿ ವಿದ್ಯುತ್ ಹಾಗೂ ಇಂಟರ್ನೆಟ್ ಸಂಪರ್ಕವನ್ನು ವಿವಿ ಆಡಳಿತ ಮಂಡಳಿ ಕಡಿತಗೊಳಿಸಿದ್ದರಿಂದ ಸಾಕ್ಷ್ಯಚಿತ್ರ ಪ್ರದರ್ಶಿಸಲು ಸಾಧ್ಯವಾಗಲಿಲ್ಲ ಎಂದು ಒಕ್ಕೂಟ ಆರೋಪಿಸಿದೆ. ಕರೆಂಟ್ ಕಟ್ ಮಾಡಿದ್ರೂ ವಿದ್ಯಾರ್ಥಿಗಳು ಆನ್ಲೈನ್ ಆ್ಯಪ್ ಮೂಲಕ ತಮ್ಮ ಮೊಬೈಲ್ಗಳಲ್ಲಿ, ಲ್ಯಾಪ್ಟಾಪ್ಗಳಲ್ಲಿ ಸಾಕ್ಷ್ಯಚಿತ್ರ ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಿದ್ದಾರೆ.
ಸಾಕ್ಷ್ಯಚಿತ್ರ ವೀಕ್ಷಿಸುತ್ತಿದ್ದವರ ಮೇಲೆ ಕಲ್ಲುತೂರಾಟ
ಬಿಬಿಸಿ ಸಾಕ್ಷ್ಯಚಿತ್ರ ವೀಕ್ಷಣೆ ವೇಳೆ ಜೆಎನ್ಯು ಆವರಣದಲ್ಲಿ ನಡೆಯಬಾರದ ಘಟನೆ ನಡೆದಿದೆ. ಸಾಕ್ಷ್ಯಚಿತ್ರ ವೀಕ್ಷಣೆ ಮಾಡುತ್ತಿದ್ದಾಗ ಈ ವೇಳೆ ಕಿಡಿಕೇಡಿಗಳು ಕಲ್ಲು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ತಡರಾತ್ರಿವರೆಗೂ ಜೆಎನ್ಯು ಕ್ಯಾಂಪಸ್‌ನಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಘಟನೆಯಲ್ಲಿ ಓರ್ವ ವ್ಯಕ್ತಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ.
ಇದನ್ನು ಓದಿ: ವಿಧಾನಸೌಧ ಖಾಲಿ ಮಾಡಿ, ಗಂಜಲ ಹಾಕಿ ಕ್ಲೀನ್ ಮಾಡ್ತೀವಿ- ಬಿಜೆಪಿಗೆ ಡಿಕೆಶಿ ಕೌಂಟರ್
ಈ ಘಟನೆ ನಂತರ ಎಬಿವಿಪಿ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿ ವಿದ್ಯಾರ್ಥಿ ಒಕ್ಕೂಟ ವಿವಿ ಕ್ಯಾಂಪಸ್‌ನಲ್ಲಿ ಪ್ರತಿಭಟನೆ ನಡೆಸಿತು. ಕೊನೆಗೆ ಕ್ಯಾಂಪಸ್‌ನಲ್ಲಿ ವಿದ್ಯುತ್ ಸಂಪರ್ಕವನ್ನು ಮರುಸ್ಥಾಪಿಸಲಾಯ್ತು. ಅಹಿತಕರ ಘಟನೆ ತಡೆಯಲು ಸುಮಾರು 50 ಪೊಲೀಸ್ ಸಿಬ್ಬಂದಿ ಮತ್ತು ವಿವಿ ಭದ್ರತಾ ಸಿಬ್ಬಂದಿಯನ್ನು ಕ್ಯಾಂಪಸ್‌ನಲ್ಲಿ ನಿಯೋಜಿಸಲಾಗಿತ್ತು. ಕಲ್ಲು ತೂರಾಟದ ವಿಚಾರವಾಗಿ, ವಿದ್ಯಾರ್ಥಿಗಳ ಒಕ್ಕೂಟದವರು, ವಸಂತ್ ಕುಂಜ್ ಪೊಲೀಸ್ ಠಾಣೆಯವರಿಗೆ ಮೆರವಣಿಗೆ ನಡೆಸಿ ದೂರು ನೀಡಲು ಮುಂದಾದ್ರು. ಆದ್ರೆ, ವಿದ್ಯಾರ್ಥಿಗಳ ಒಕ್ಕೂಟ ಮಾಡಿರುವ ಆರೋಪವನ್ನು ಎಬಿವಿಪಿ ನಿರಾಕರಿಸಿದೆ.
ದೇಶದಲ್ಲಿ ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರವು ಕೋಲಾಹಲವನ್ನೇ ಎಬ್ಬಿಸಿದೆ. ಇದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯುತ್ತೋ ಗೊತ್ತಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post