ಹುಬ್ಬಳ್ಳಿಯ ಮೂರು ಸಾವಿರ ಮಠದ ಬಳಿಕ ಗದಗದ ಶಿವಾನಂದ ಮಠದ ಉತ್ತರಾಧಿಕಾರ ವಿವಾದ ಮತ್ತೆ ತಾರಕಕ್ಕೇರಿದೆ. ಮಠದ ಆವರಣದಲ್ಲಿ ಪೀಠಾಧಿಪತಿಗಳ ನಡುವೆ ಜಟಾಪಟಿ ಶುರುವಾಗಿದ್ದು ಹೈಡ್ರಾಮಾವೇ ನಡೆದಿದೆ. ಗದಗದ ಶಿವಾನಂದ ಮಠದ ಆವರಣದಲ್ಲಿ ಹಿರಿಯ ಹಾಗೂ ಕಿರಿಯ ಸ್ವಾಮೀಜಿ ಹಾಗೂ ಇಬ್ಬರೂ ಸ್ವಾಮೀಜಿಗಳ ಕಡೆಯವರು ನಡೆಸಿದ ವಾಗ್ವಾದ ನಡೆದಿದೆ. ಮಠದಲ್ಲಿ ಅಧಿಪತ್ಯ ಸಾಧಿಸಲು ಇಬ್ಬರು ಸ್ವಾಮೀಜಿಗಳ ನಡುವೆ ಸಮರ ಶುರುವಾಗಿದೆ.
ಶಿವಾನಂದ ಮಠದಲ್ಲಿ ಭುಗಿಲೆದ್ದ ಉತ್ತರಾಧಿಕಾರ ವಿವಾದ!
ಹಿರಿಯ-ಕಿರಿಯ ಸ್ವಾಮೀಜಿ ನಡುವೆ ಗದ್ದುಗೆ ಗುದ್ದಾಟ!
ಗದಗದ ಶಿವಾನಂದ ಬೃಹನ್ಮಠದಲ್ಲಿ ಉತ್ತರಾಧಿಕಾರಿ ವಿವಾದ ಭುಗಿಲೆದ್ದಿದೆ. ಮಠದ ಉತ್ತರಾಧಿಕಾರಿ ಪಟ್ಟಕ್ಕಾಗಿ ಕಿರಿಯ ಸದಾಶಿವಾನಂದ ಶ್ರೀ, ಹಿರಿಯ ಶಿವಾನಂದ ಶ್ರೀ ನಡುವೆ ಗಲಾಟೆ ನಡೆದು ಬಿಟ್ಟಿದೆ. ಇಷ್ಟೆಲ್ಲಾ ಗಲಾಟೆ ನಡೆಯಲು ಮುಖ್ಯ ಕಾರಣ ಏನಂದ್ರೆ ಪೀಠಾಧಿಪತಿ ಸ್ಥಾನದಿಂದ ಕಿರಿಯ ಶ್ರೀಗಳನ್ನು ತೆಗೆದು ಹಾಕಿದ್ದಾರೆಂದು ಸುದ್ದಿ. ಹಿರಿಯ ಸ್ವಾಮಿಗಳ ನೇತೃತ್ವದಲ್ಲಿ ಜಾತ್ರೆ ನಡೆಸಲು ಮುಂದಾಗಿದ್ದು, ಈ ಕುರಿತು ಹಿರಿಯ ಮತ್ತು ಕಿರಿಯ ಸ್ವಾಮೀಜಿಗಳ ಬಣದವರು ವಾಗ್ವಾದಕ್ಕಿಳಿದಿದ್ದಾರೆ. ಇತ್ತ ಪೀಠಾಧಿಪತಿ ಸ್ಥಾನದಿಂದ ತೆಗೆದು ಹಾಕಿರೋದನ್ನು ಪ್ರಶ್ನಿಸಿ ಕಿರಿಯ ಸ್ವಾಮೀಜಿ ಕೋರ್ಟ್ ಮೊರೆ ಹೋಗಿದ್ದರು.
ಇನ್ನು ವಿವಾದಕ್ಕೆ ಕಾರಣವನ್ನು ಕಿರಿಯ ಸ್ವಾಮೀಜಿ ಸದಾಶಿವಾನಂದ ಶ್ರೀ ಬಿಚ್ಚಿಟ್ಟಿದ್ದಾರೆ. ಮಠದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆ ಕಬಳಿಕೆಗೆ ಯತ್ನ ನಡೆಸಲಾಗಿತ್ತು. ಇದಕ್ಕೆ ಎಸ್‌ಬಿ ಸಂಶಿಯವರ ಮಕ್ಕಳು ಮತ್ತು ಪ್ರಭಾವಿಗಳ ಕೈವಾಡ ಇದೆ ಅಂತ ಆರೋಪಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿದ್ದ ಹಿರಿಯ ಸ್ವಾಮೀಜಿ ಕಿರಿಯ ಶ್ರೀಗಳಾದ ಸದಾಶಿವಾನಂದ ಸ್ವಾಮಿಗಳ ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ಈ ಮಠಕ್ಕೆ ನಾನೇ ಪೀಠಾಧಿಪತಿ ಮತ್ತು ನನ್ನಿಂದಲೇ ಎಲ್ಲಾ ಆಡಳಿತ ನಡೆಯಬೇಕೆಂದು ಕೋರ್ಟ್ ಆದೇಶ ನೀಡಿದೆ. ಈ ಬಾರಿಯ ಜಾತ್ರೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದಿದ್ರು. ನ್ಯಾಯಾಲಯ ನೀಡಿದ ತೀರ್ಪಿನ ವಿಚಾರವಾಗಿ ಇವತ್ತು ಮಠದ ಆವರಣದಲ್ಲಿ ಕೆಲಕಾಲ ಜೋರಾಗಿ ವಾಗ್ವಾದ ನಡೆಯಿತು. ಎರಡೂ ಕಡೆಯ ನೂರಾರು ಭಕ್ತರು ಸೇರಿದ್ದರಿಂದ ಪರಿಸ್ಥಿತಿ ಸ್ವಲ್ಪ ವಿಕೋಪಕ್ಕೆ ಹೋಗುವ ಹಂತ ತಲುಪಿತ್ತು. ಬಳಿಕ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ್ರು. ಒಟ್ಟಿನಲ್ಲಿ ಸ್ವಾಮೀಜಿಗಳು ಅಂದ್ರೆ ನಡೆದಾಡುವ ದೇವರೆಂದೇ ಅದೆಷ್ಟೋ ಭಕ್ತರು ನಂಬಿದ್ದಾರೆ. ಸತ್ಸಂಗ ಪರಿತ್ಯಾಗಿಗಳಾದ ಸ್ವಾಮೀಜಿಗಳು ಹೀಗೆ ಅಧಿಕಾರ ಹಾಗೂ ಪೀಠಕ್ಕಾಗಿ ಹೊಡೆದಾಡುತ್ತಿರುವುದು ಭಕ್ತರ ಮನಸ್ಸನ್ನು ಘಾಸಿಗೊಳಿಸಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post