ಕರ್ನಾಟಕದ ಕಾಫಿ ಡೇ ಎಂಟರ್ ರ್ಪ್ರೈಸಸ್ಗೆ ಷೇರು ಮಾರುಕಟ್ಟೆ ನಿಯಂತ್ರಕ ಸೆಬಿ (SEBI: Securities and Exchange Board of India) ಬರೋಬ್ಬರಿ 26 ಕೋಟಿ ರೂಪಾಯಿ ದಂಡ ವಿಧಿಸಿದೆ. ಸೆಬಿ, ಕಾಫಿ ಡೇ ಎಂಟರ್ ಪ್ರೆೈಸಸ್ಗೆ ದಂಡ ವಿಧಿಸಿದ್ದು ಏಕೆ? ಕಾಫಿ ಡೇ ಮಾಲೀಕ ಸಿದ್ದಾರ್ಥ ಸಾವಿನ ನಂತರ ಸಾಲದ ಸುಳಿಯಿಂದ ಹೊರಬರುತ್ತಿರುವ ಕಂಪನಿಯ ಮೇಲೆ ಆಗುವ ಪರಿಣಾಮವೇನು ಎಂಬ ಮಾಹಿತಿ ಲಭ್ಯವಾಗಿದೆ.
ಕಾಫಿ ಡೇ ಎಂಟರ್ ಪ್ರೈಸಸ್ ಇದು ವಿ.ಜಿ. ಸಿದ್ದಾರ್ಥ ಅವರ ಕನಸಿನ ಕೂಸು. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅಳಿಯ ಸಿದ್ದಾರ್ಥ ಅವರು ಕಷ್ಟಪಟ್ಟು ಕಟ್ಟಿ ಬೆಳೆಸಿದ ಕಂಪನಿ. ಆದರೆ ಇದೇ ಕಂಪನಿಯ ಹಣಕಾಸು ಸಮಸ್ಯೆಗಳು ಅವರ ಜೀವವನ್ನೇ ಬಲಿ ಪಡೆದವು. ಸಿದ್ದಾರ್ಥ ಅವರು 2019 ರ ಜುಲೈನಲ್ಲಿ ಮಂಗಳೂರು ಬಳಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. ಸಿದ್ದಾರ್ಥ ಅವರು ಸಾವನ್ನಪ್ಪಿದ್ದಾಗ ಕಂಪನಿಗೆ 7,653 ಕೋಟಿ ರೂಪಾಯಿ ಸಾಲದ ಹೊರೆ ಇತ್ತು. ಸಾಲದ ಹೊರೆಯನ್ನು ತಾಳಲಾರದೇ ಸಿದ್ದಾರ್ಥ ಆತ್ಮಹತ್ಯೆ ಮಾಡಿಕೊಂಡರು ಎಂಬ ಮಾತುಗಳು ಆಗ ಕೇಳಿ ಬಂದಿದ್ದವು.
ಮಾಳವೀಕಾ ಹೆಗಡೆಗೆ ಮತ್ತೊಂದು ಸಂಕಷ್ಟ
ಆದರೆ ಸಿದ್ದಾರ್ಥ ಸಾವಿನ ಬಳಿಕ ಕಂಪನಿಯ ಹೊಣೆಯನ್ನು ಸಿದ್ದಾರ್ಥ ಅವರ ಪತ್ನಿ ಮಾಳವೀಕಾ ಹಾಗೂ ಇಬ್ಬರು ಮಕ್ಕಳು ವಹಿಸಿಕೊಂಡು ಮುನ್ನಡೆಸಿದ್ದಾರೆ. ಕಂಪನಿಯ ಸಾಲವನ್ನ ತಕ್ಕ ಮಟ್ಟಿಗೆ ಮರುಪಾವತಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಬಿಡದಿ ಬಳಿ ಇದ್ದ ಗ್ಲೋಬಲ್ ಟೆಕ್ ಪಾರ್ಕ್ ಅನ್ನು 2019ರ ಸೆಪ್ಟೆಂಬರ್ನಲ್ಲಿ ಅಮೆರಿಕಾದ ಬ್ಲಾಕ್ ಸ್ಟೋನ್ ಕಂಪನಿಗೆ ಬರೋಬ್ಬರಿ 2,800 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಇದರಿಂದ ಬಂದ ಹಣದ ಪೈಕಿ 2 ಸಾವಿರ ಕೋಟಿ ರೂಪಾಯಿಯನ್ನು ಸಾಲ ಮರುಪಾವತಿಗೆ ಬಳಸಿಕೊಂಡಿದ್ದರು. ಇನ್ನುಳಿದ 800 ಕೋಟಿ ರೂಪಾಯಿಯನ್ನು ಕಂಪನಿಯ ದೈನಂದಿನ ನಿರ್ವಹಣೆಗೆ ಬಳಸಿಕೊಂಡಿದ್ದರು. ಇದೇ ರೀತಿ ಮೈಂಡ್ ಟ್ರೀ ಕಂಪನಿಯಲ್ಲಿ ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ಹೊಂದಿದ್ದ ಷೇರುಗಳನ್ನು ಎಲ್ ಅಂಡ್ ಟೀ ಕಂಪನಿಗೆ 3,200 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಇದರಿಂದಾಗಿ ಕಾಫಿ ಡೇ ಎಂಟರ್ ಪ್ರೈಸಸ್ ನ ಸಾಲದ ಮೊತ್ತ 2,400 ಕೋಟಿ ರೂಪಾಯಿಗೆ ಇಳಿದಿತ್ತು. ಕೆಲ ಆಯ್ದ ಆಸ್ತಿ ಹಾಗೂ ಕಂಪನಿಗಳ ಷೇರುಗಳನ್ನು ಮಾರುವ ಮೂಲಕವೇ ಬಾರಿ ಮೊತ್ತದ ಸಾಲವನ್ನು ಮರುಪಾವತಿಸುವ ಹಾದಿಯನ್ನು ಮಾಳವಿಕಾ ಹೆಗಡೆ ಕಂಡುಕೊಂಡಿದ್ದರು. ಈ ಹಾದಿಯಲ್ಲಿ ಯಶಸ್ಸುನ್ನು ಕಂಡಿದ್ದರು. ಆದರೆ ಈಗ ಮತ್ತೊಂದು ಸಂಕಷ್ಟ ಮಾಳವೀಕಾ ಹೆಗಡೆ ಹಾಗೂ ಇಬ್ಬರು ಮಕ್ಕಳಿಗೆ ಎದುರಾಗಿದೆ.
ಷೇರುಮಾರುಕಟ್ಟೆ ನಿಯಂತ್ರಕ ಸೆಬಿ ಅಂದರೇ ಸೆಕ್ಯುರೀಟಿಸ್ ಅಂಡ್ ಎಕ್ಸಚೇಂಜ್ ಬೋರ್ಡ್ ಆಫ್ ಇಂಡಿಯಾ ಬರೋಬ್ಬರಿ 26 ಕೋಟಿ ರೂಪಾಯಿ ದಂಡ ವಿಧಿಸಿದೆ. ದಂಡವನ್ನು ಮುಂದಿನ 45 ದಿನದಲ್ಲಿ ಪಾವತಿಸಬೇಕೆಂದು ಆದೇಶಿಸಿದೆ. ಇದಕ್ಕೆ ಬಲವಾದ ಕಾರಣವೂ ಇದೆ. ವಿ.ಜಿ. ಸಿದ್ದಾರ್ಥ ಅವರು ಬದುಕಿದ್ದಾಗಲೇ, ಕಾಫಿ ಡೇ ಎಂಟರ್ ಪ್ರೈಸಸ್ ನ ಏಳು ಸಬ್ಸಿಡರಿ ಕಂಪನಿಗಳಿಂದ 3,535 ಕೋಟಿ ರೂಪಾಯಿ ಹಣವನ್ನು ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ ಕಂಪನಿಗೆ ವರ್ಗಾವಣೆ ಮಾಡಿದ್ದರು. ಈ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ ಕಂಪನಿಯು ಪ್ರಮೋಟರ್ ಸಿದ್ದಾರ್ಥ ಅವರ ಕುಟುಂಬದ ಒಡೆತನದ ಕಂಪನಿ. ಈ ಕಂಪನಿಯಲ್ಲಿ ಸಿದ್ದಾರ್ಥ ಕುಟುಂಬದ ಪಾಲು ಶೇ. 92 ರಷ್ಟು ಇದೆ.
ಕಾಫಿ ಡೇ ಎಂಟರ್ ಪ್ರೈಸಸ್ ಷೇರು ಮಾರುಕಟ್ಟೆಯಲ್ಲಿ ನೋಂದಾಯಿತ ಕಂಪನಿ. ಸಾಮಾನ್ಯ ಷೇರುದಾರರು ಕೂಡ ಕಾಫಿ ಡೇ ಎಂಟರ್ ಪ್ರೈಸಸ್ ಷೇರು ಹೊಂದಿದ್ದಾರೆ. ಷೇರುದಾರರಿಗೂ ಕೂಡ ಕಂಪನಿಯ ಹಣದ ಮೇಲೆ ಹಕ್ಕು ಇದೆ. ಷೇರುದಾರರ ಒಪ್ಪಿಗೆ ಇಲ್ಲದೇ, ಅವರ ಗಮನಕ್ಕೆ ತರದೇ ಹಣವನ್ನು ಕಾಫಿ ಡೇ ಎಂಟರ್ ಪ್ರೈಸಸ್ನಿಂದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ಗೆ ವರ್ಗಾಯಿಸಿದ್ದು ತಪ್ಪು ಎಂಬ ತೀರ್ಮಾನಕ್ಕೆ ಸೆಬಿ ಬಂದಿದೆ. ವಂಚನೆ ಹಾಗೂ ಸೂಕ್ತವಲ್ಲದ ಟ್ರೇಡ್ ಪ್ರಾಕ್ಟೀಸ್ ಮಾಡಿದ ಕಾರಣಕ್ಕಾಗಿ ಕಾಫಿ ಡೇ ಎಂಟರ್ ಪ್ರೈಸಸ್ ಮೇಲೆ 25 ಕೋಟಿ ರೂಪಾಯಿ ದಂಡ ಹಾಗೂ ಮಾಹಿತಿ ಮುಚ್ಚಿಟ್ಟಿದ್ದಕ್ಕಾಗಿ 1 ಕೋಟಿ ರೂ ದಂಡ ಸೇರಿ ಒಟ್ಟು 26 ಕೋಟಿ ರೂಪಾಯಿ ದಂಡ ವಿಧಿಸಿದೆ.
ಹೀಗಾಗಿ ನಿಯಮಗಳನ್ನು ಉಲಂಘಿಸಿ, ಕಾಫಿ ಡೇ ಎಂಟರ್ ಪ್ರೈಸಸ್ ಕಂಪನಿಯ ಹಣವನ್ನು ಸಿದ್ದಾರ್ಥ ಕುಟುಂಬದ ಮಾಲೀಕತ್ವದ ಕಂಪನಿಗೆ ವರ್ಗಾಯಿಸಿದ್ದು ಕಾನೂನು ಹಾಗೂ ನಿಯಮಗಳ ಉಲಂಘನೆ ಎಂಬ ತೀರ್ಮಾನಕ್ಕೆ ಸೆಬಿ ಬಂದಿದೆ. ಈ ಕಾರಣಕ್ಕಾಗಿ ಈಗ ಹಣವನ್ನು ಮೈಸೂರು ಅಮಲ್ಗಮೇಟೆಡ್ ಕಂಪನಿಗೆ ವರ್ಗಾಯಿಸಿದ್ದಕ್ಕಾಗಿ ಕಾಫಿ ಡೇ ಎಂಟರ್ ಪ್ರೈಸಸ್ ಗೆ 26 ಕೋಟಿ ರೂಪಾಯಿ ದಂಡ ವಿಧಿಸಿದೆ. ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಕಂಪನಿಯಿಂದ ಎಲ್ಲ 3,535 ಕೋಟಿ ರೂಪಾಯಿ ಹಣವನ್ನು ಬಡ್ಡಿ ಸಹಿತ ವಸೂಲಿ ಮಾಡಲು ಸೆಬಿ ನಿರ್ದೇಶನ ನೀಡಿದೆ. ಜೊತೆಗೆ ಕಾಫಿ ಡೇ ಎಂಟರ್ಪ್ರೈಸಸ್, ಹಣ ವಸೂಲಿಗಾಗಿ NSE ಜೊತೆಗೆ ಸಮಾಲೋಚನೆ ನಡೆಸಿ ಸ್ವತಂತ್ರ ಲಾ ಕಂಪನಿ ನೇಮಿಸಲು ಆದೇಶಿಸಿದೆ. ಸ್ವತಂತ್ರ ಲಾ ಕಂಪನಿಯು ಸಿದ್ದಾರ್ಥ ಅವರ ಕುಟುಂಬದ ಮಾಲೀಕತ್ವದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ನಿಂದ ಹಣ ವಸೂಲಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು 43 ಪುಟದ ಆದೇಶದಲ್ಲಿ ಸೆಬಿ ಹೇಳಿದೆ.
ಹೀಗಾಗಿ ಈಗ ಮಾಳವಿಕಾ ಹೆಗಡೆ ಹಾಗೂ ಅವರ ಇಬ್ಬರು ಪುತ್ರರು 3,535 ಕೋಟಿ ರೂಪಾಯಿಯನ್ನು ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ನಿಂದ ಕಾಫಿ ಡೇ ಎಂಟರ್ ಪ್ರೈಸಸ್ಗೆ ವರ್ಗಾಯಿಸಬೇಕು. 2022ರ ಸೆಪ್ಟೆಂಬರ್ ಅಂತ್ಯದವರೆಗೂ ಕಾಫಿ ಡೇ ಎಂಟರ್ ಪ್ರೈಸಸ್ ಬರೀ 110 ಕೋಟಿ ರೂಪಾಯಿಯನ್ನು ಮಾತ್ರ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ ಲಿಮಿಟೆಡ್ ನಿಂದ ವಸೂಲಿ ಮಾಡಿದೆ ಅಂತ ಕೂಡ ಸೆಬಿ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಸಿದ್ದಾರ್ಥ ಸಾವಿನ ಬಳಿಕ ಸೆಬಿ, ತಾನಾಗಿಯೇ ಕಾಫಿ ಡೇ ಎಂಟರ್ ಪ್ರೈಸಸ್ ಹಣವನ್ನು ಬೇರೆ ಕಡೆಗೆ ಆಕ್ರಮವಾಗಿ ವರ್ಗಾಯಿಸಿದೆಯೇ ಎಂಬ ಬಗ್ಗೆ ತನಿಖೆ ನಡೆಸಿದೆ. ಈ ತನಿಖೆಯಲ್ಲೂ ಹಣವನ್ನು ಬೇರೆಡೆಗೆ ಆಕ್ರಮವಾಗಿ ವರ್ಗಾಯಿಸಿರುವುದು ಕಂಡು ಬಂದಿದೆ. ಹೀಗಾಗಿಯೇ ಈಗ 26 ಕೋಟಿ ರೂಪಾಯಿ ದಂಡ ವಿಧಿಸಿದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯೂರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post