19 ವರ್ಷ ವಯೋಮಿತಿಯ ಭಾರತದ ಮಹಿಳೆಯರು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಸೌತ್ ಆಫ್ರಿಕಾದ ಸೆನ್ವೆಸ್ ಪಾರ್ಕ್ ಕ್ರಿಕೆಟ್ ಮೈದಾನದಲ್ಲಿ ನಡೆದ ಅಂಡರ್ 19 ಮಹಿಳಾ T20 ವಿಶ್ವಕಪ್ನಲ್ಲಿ ಭಾರತ ಫೈನಲ್ ಪ್ರವೇಶಿಸಿ ಇತಿಹಾಸ ನಿರ್ಮಿಸಿದೆ.
ಬೌಲಿಂಗ್ನಲ್ಲಿ ಬೆಂಕಿ-ಬಿರುಗಾಳಿ, ಕಿವೀಸ್ ಉಡೀಸ್..!
ಚೊಚ್ಚಲ ಅಂಡರ್ ನೈಂಟೀನ್ T20 ವಿಶ್ವಕಪ್ನಲ್ಲೇ ಭಾರತ ಮಹಿಳೆಯರ ತಂಡ, ಹೊಸ ಮೈಲಿಗಲ್ಲು ನೆಟ್ಟಿದೆ. ಹೊಸ ವರ್ಷದ, ಹೊಸ ಸವಾಲನ್ನ ಕೆಚ್ಚೆದೆಯಿಂದ ಮೆಟ್ಟಿ ನಿಂತ, ನಮ್ಮ ವನಿತೆಯರು ಐಸಿಹಾಸಿಕ ಸಾಧನೆ ಮಾಡಿದ್ದಾರೆ. ಮೊದಲ ಟಿ20 ವಿಶ್ವಕಪ್ನಲ್ಲೇ ಫೈನಲ್ ಪ್ರವೇಶಿಸಿ, ಇತಿಹಾಸ ಪುಟಗಳಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದ್ದಾರೆ.
ಭಾರತದ ಅಂಡರ್ ನೈಂಟೀನ್ ತಂಡ, ಫೈನಲ್ಗೆ ಟಿಕೆಟ್ ರಿಸರ್ವ್ ಮಾಡಿಕೊಂಡಿದೆ. ಸೆಮಿಫೈನಲ್ ಫೈಟ್ನಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸಿದ ಟೀಮ್ ಇಂಡಿಯಾ, 8 ವಿಕೆಟ್ಗಳಿಂದ ಜಯಭೇರಿ ಬಾರಿಸಿದೆ. ಆ ಮೂಲಕ ಭಾರತದ ಮುಡಿಗೆ ಮತ್ತೊಂದು ಐಸಿಸಿ ಟ್ರೋಫಿ ಗೆದ್ದುಕೊಡೋ ಭರವಸೆ ಹುಟ್ಟು ಹಾಕಿದೆ.
ಪಾರ್ಶವಿ ಚೋಪ್ರಾ ಮಿಂಚಿನ ಬೌಲಿಂಗ್, ನಾಯಕಿ ಸಾಥ್
ಸೆಮೀಸ್ನಲ್ಲಿ ಟಾಸ್ ಸೋತು ನ್ಯೂಜಿಲೆಂಡ್, ಮೊದಲು ಬ್ಯಾಟಿಂಗ್ ಆರಂಭಿಸ್ತು. ನಾಯಕಿ ಶೆಫಾಲಿ ವರ್ಮಾ ನಿರ್ಧಾರ ಸಮರ್ಥಿಸುವಂತೆ ಬೌಲಿಂಗ್ ಮಾಡಿದ ಬೌಲರ್ಸ್, ಕಿವೀಸ್ ಪತರುಗುಟ್ಟುವಂತೆ ಮಾಡಿದ್ರು. ಇದ್ರಿಂದ ಬ್ಲಾಕ್ಕ್ಯಾಪ್ಸ್ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ ಜಸ್ಟ್ 107 ರನ್ ಗಳಿಸ್ತು. ಮಾರಕ ಬೌಲಿಂಗ್ ದಾಳಿ ನಡೆಸಿದ ಪಾರ್ಶವಿ ಚೋಪ್ರಾ 3 ವಿಕೆಟ್, ಶೆಫಾಲಿ ವರ್ಮಾ, ಅರ್ಚನಾ ದೇವಿ, ಮನ್ನತ್ ಕಶ್ಯಪ್ ತಲಾ ಒಂದು ವಿಕೆಟ್ ಪಡೆದು ಮಿಂಚಿದ್ರು.
ಶ್ವೇತಾ ಸೆಹ್ರಾವತ್ ಸ್ಫೋಟಕ ಆಟ, ಬೆಚ್ಚಿದ ಬ್ಲಾಕ್ಕ್ಯಾಪ್ಸ್..!
108 ರನ್ ಸಾಧಾರಣ ಗುರಿ ಬೆನ್ನತ್ತಿದ ಇಂಡಿಯಾ, ಭರ್ಜರಿ ಓಪನಿಂಗ್ ಪಡೆದುಕೊಳ್ತು. ಉತ್ತಮ ಆರಂಭದ ನಡುವೆಯೂ ನಾಯಕಿ ಶೆಫಾಲಿ ವರ್ಮಾ ನಿರಾಸೆ ಮೂಡಿಸಿದ್ರೆ, ಕಿವೀಸ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಶ್ವೇತಾ ಸೆಹ್ರಾವತ್, ಅದ್ಭುತ ಆಟವಾಡಿ ಗೆಲುವಿನ ರೂವಾರಿ ಎನಿಸಿದ್ರು. ಅಜೇಯ 57 ರನ್ಗಳನ್ನ ಸಿಡಿಸಿದ ಓಪನರ್, 14ನೇ ಓವರ್ನಲ್ಲಿ ಚೆಂಡನ್ನ ಬೌಂಡರಿ ಗೆರೆ ದಾಟಿಸುವ ಮೂಲಕ, ಐತಿಹಾಸಿಕ ಜಯ ತಂದುಕೊಟ್ರು.
ಪದೆ ಪದೇ ವಿಲನ್ ಆಗ್ತಿದ್ದ ಕಿವೀಸ್ಗೆ ಕೊನೆಗೂ ಸೋಲು
ICC ಟೂರ್ನಿಗಳ ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವೇ ಭಾರತವೇ ವಿಲನ್ ಆಗ್ತಿತ್ತು. ಇದೇ ಆತಂಕ ನಿನ್ನೆಯೂ ಮನೆ ಮಾಡಿತ್ತು. ಆದ್ರೆ, ಅಂಡರ್-19 ತಂಡ ಆ ಭೀತಿಯನ್ನ ದೂರ ಮಾಡಿದೆ. ಈ ಹಿಂದೆ 2019ರ ಸೆಮಿಫೈನಲ್, 2021ರ ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಅಷ್ಟೆ ಯಾಕೆ.? ಇತ್ತೀಚೆಗೆ ಭಾರತದಲ್ಲಿ ನಡೆದ ಹಾಕಿ ವರ್ಲ್ಡ್ಕಪ್ನ ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್ ಭಾರತ ತಂಡವನ್ನ ಸೋಲಿಸಿತ್ತು. ಇದೀಗ ಅಂಡರ್-19 ತಂಡ ಇದೆಲ್ಲದ್ರ ಸೇಡು ತೀರಿಸಿಕೊಂಡಿದೆ.
ರೋಹಿತ್-ಹರ್ಮನ್ ಹುರುಪು ಹೆಚ್ಚಿಸಿದ ಈ ಅದ್ವಿತೀಯ ಗೆಲುವು
ಫೆಬ್ರವರಿ 10ರಿಂದ ಮಹಿಳಾ T20 ವಿಶ್ವಕಪ್ ಮತ್ತು ಅಕ್ಟೋಬರ್ನಲ್ಲಿ ಪುರುಷರ ಏಕದಿನ ವಿಶ್ವಕಪ್ ನಡೆಯಲಿದೆ. ಇದೀಗ ಅಂಡರ್-19 ಟಿ20 ವಿಶ್ವಕಪ್ ಭಾರತದ ವನಿತೆಯರು ಪ್ರಶಸ್ತಿ ಸುತ್ತಿಗೇರುವ ಮೂಲಕ ಸೀನಿಯರ್ಸ್ಗೆ ಹೊಸ ಹುರುಪು ತುಂಬಿದ್ದಾರೆ. ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮಹಿಳಾ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ಗೆ ಈ ಸುದ್ದಿ ಪಾಸಿಟಿವ್ ಬೂಸ್ಟರ್ ತುಂಬಿದಂತಾಗಿದೆ.
ಸೆಮೀಸ್ನಲ್ಲಿ ಗೆದ್ದು ಫೈನಲ್ಗೇರಿದ ಟೀಮ್ ಇಂಡಿಯಾ, ನಾಳೆ ಇಂಗ್ಲೆಂಡ್ ತಂಡದ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಆ ಮೂಲಕ ಚೊಚ್ಚಲ ICC ಟೂರ್ನಿಯಲ್ಲಿ ಮತ್ತೊಂದು ಮಜಲು ಮುಟ್ಟಲು ಕಾತರದಿಂದ ಕಾಯ್ತಿದೆ. ಒಟ್ನಲ್ಲಿ ಅಂಡರ್ ನೈಂಟೀನ್ ಭಾರತ ತಂಡದ ವನಿತೆಯರು ಐಸಿಸಿ ಟ್ರೋಫಿ ಗೆದ್ದು, 2022ರ T20 ವಿಶ್ವಕಪ್ ಸೋಲಿನ ನೋವು ಮರೆಸಲಿ ಅನ್ನೋದೇ ನಮ್ಮೆಲ್ಲರ ಆಶಯ.
ವಿಶೇಷ ವರದಿ: ಪ್ರಸನ್ನಕುಮಾರ್ PN
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post