ಸಕ್ಕರೆ ನಾಡಿನಲ್ಲಿ ಈಗ ರಾಜಕೀಯ ಸಂಕ್ರಮಣ ಕಾಲ. ವಿಧಾನಸಭಾ ಚುನಾವಣೆ ಹತ್ತಿರಾಗ್ತಿದ್ದಂತೆ ಸಂಸದೆ ಸುಮಲತಾ ಮತ್ತೊಂದು ರಾಜಕೀಯ ಕ್ರಾಂತಿಗೆ ಮುನ್ನುಡಿ ಬರೀತಾರಾ ಅನ್ನೋ ಚರ್ಚೆ ಶುರುವಾಗಿದೆ. ರಾಷ್ಟ್ರ ರಾಜಕಾರಣದಿಂದ ರಾಜ್ಯಕ್ಕೆ ಎಂಟ್ರಿ ಆಗಲಿದ್ದಾರೆ ಎನ್ನಲಾಗ್ತಿದ್ದು, ಕಾಂಗ್ರೆಸ್ ಬಿಜೆಪಿ ಭರ್ಜರಿ ಆಫರ್ ನೀಡ್ತಿದ್ದು, ಇವತ್ತು ಸುಮಲತಾ ನಿರ್ಧಾರ ಏನು ಅನ್ನೋ ಸುಳಿವು ಸಿಗಲಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರಾಗ್ತಿದ್ದಂತೆ ಮಂಡ್ಯದಲ್ಲಿ ರಾಜಕಾರಣ ರಂಗೇರ್ತಿದೆ. ಕಳೆದ ಬಾರಿ ಲೋಕಸಭಾ ಎಲೆಕ್ಷನ್ನಲ್ಲಿ ಗೆದ್ದು ಬೀಗಿದ್ದ ಸುಮಲತಾ ಈ ಬಾರಿ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಆಗ್ತಾರಾ ಅನ್ನೋ ಸುದ್ದಿ, ಗಾಳಿಪಟದಂತೆ ಪಟಪಟಿಸ್ತಿದೆ. 2 ರಾಷ್ಟ್ರೀಯ ಪಕ್ಷಗಳು ಆಫರ್ ನೀಡಿದ್ದು, ಯಾವ ಪಕ್ಷ ಆಯ್ದುಕೊಳ್ಳೋದು ಅನ್ನೋ ಗೊಂದಲ ಸುಮಲತಾರನ್ನ ಹಲವು ದಿನದಿಂದ ಕಾಡ್ತಿದೆ.
ಕಾಂಗ್ರೆಸ್ಸಾ? ಬಿಜೆಪಿನಾ? ಯಾವ ಪಕ್ಷದತ್ತ ಸಂಸದೆ ಸುಮಲತಾ ಚಿತ್ತ
ದಳಪತಿಗಳ ಜೊತೆಗೆ ಜಿದ್ದಿಗೆ ಬಿದ್ದು ಗೆದ್ದ ಗಟ್ಟಿಗಿತ್ತಿ ಸುಮಲತಾ, ಸ್ವಾಭಿಮಾನಿ ಹೆಸರಲ್ಲಿ ದಳಪತಿಗಳ ಜಂಘಾಬಲ ಉಡುಗಿಸಿದ್ದರು. ರಣರಣ ರಾಜಕಾರಣಕ್ಕೆ ಹೆಸರಾದ ಮಂಡ್ಯದಲ್ಲಿ ಈ ಬಾರಿ ಸುಮಲತಾ, ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಅನ್ನೋ ಕುತೂಹಲ ಎಲ್ಲೆಡೆ ಮನೆ ಮಾಡಿದೆ. ಜೆಡಿಎಸ್ನ ಭದ್ರಕೋಟೆ ಛಿದ್ರ ಮಾಡುವ ಕನಸು ಕಾಣ್ತೀರು ಕಾಂಗ್ರೆಸ್, ಬಿಜೆಪಿ ಪಾಳಯದ ಕಣ್ಣಲ್ಲಿ ಸುಮಲತಾ ಬ್ರಹ್ಮಾಸ್ತ್ರ ರೀತಿ ಕಾಣಿಸ್ತಿದ್ದಾರೆ.
ಸುಮಲತಾ ರಾಜಕೀಯ ಭವಿಷ್ಯ ನಿರ್ಧರಿಸುತ್ತಾ ಇಂದಿನ ಸಭೆ
ಮಂಡ್ಯ ಸಂಸದೆ ಸುಮಲತಾ ಯಾವ ಪಕ್ಷ ಸೇರ್ತಾರೆ ಎಂಬ ಚರ್ಚೆಗಳು ಜೋರಾಗಿದೆ. ಈ ಹೊತ್ತಿನಲ್ಲೆ ಸಂಸದೆ ಸುಮಲತಾ ಬೆಂಬಲಿಗರು, ಅಭಿಮಾನಿಗಳು ಇವತ್ತು ಮಹತ್ವದ ಸಭೆಯನ್ನ ಕರೆದಿದ್ದಾರೆ. ಈ ಹಿನ್ನೆಲೆ ಇವತ್ತಿನ ಸಭೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆ ಚರ್ಚೆಗೆ ಪುಷ್ಠಿ ನೀಡುವಂತೆ ಸಂಸದೆ ಸುಮಲತಾ ಹೇಳಿಕೆಗಳನ್ನ ನೀಡ್ತಿದ್ದು, ಸಮಯ ಬಂದಾಗ ನೋಡಿ ಎನ್ನುತ್ತಿದ್ದಾರೆ. ಯಾವಾಗ ಸುಮಲತಾ ಹೇಳಿಕೆ ಕೊಟ್ಟರೋ ಇದೀಗ ಬೆಂಬಲಿಗರು ಸಭೆ ನಡೆಸಲು ತೀರ್ಮಾನಿಸಿದ್ದಾರೆ.
ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಚರ್ಚೆ
ಇವತ್ತು ಬೆಳಗ್ಗೆ 11 ಗಂಟೆಗೆ ಸುಮಲತಾ ಬೆಂಬಲಿಗರು ಸಭೆ ಸೇರಲಿದ್ದಾರೆ. ಮಂಡ್ಯದ ಕರ್ನಾಟಕ ಸಂಘದ ಸಭಾಂಗಣದಲ್ಲಿ ಈ ಸಭೆಯನ್ನ ಆಯೋಜಿಸಲಾಗಿದೆ. ಹನಕೆರೆ ಶಶಿಕುಮಾರ್, ಬೇಲೂರು ಸೋಮಶೇಖರ್ ನೇತೃತ್ವದಲ್ಲಿ ಮೀಟಿಂಗ್ ನಡೆಯಲಿದೆ. ಈ ಸಭೆಯಲ್ಲಿ ಸಂಸದೆ ಸುಮಲತಾ ರಾಜ್ಯ ರಾಜಕಾರಣಕ್ಕೆ ಬರಬೇಕು. ಬರೋದಿದ್ದರೇ ಯಾವ ಪಕ್ಷವನ್ನ ಸೇರ್ಪಡೆಯಾಗಬೇಕು ಅಂತ ಚರ್ಚೆ ನಡೆಸಲಿದ್ದಾರೆ. ಬಳಿಕ ಸಭೆಯ ನಿರ್ಣಯವನ್ನ ಮಂಡಿಸಿ ಸಂಸದೆ ಸುಮಲತಾಗೆ ಒಪ್ಪಿಸಲಿದ್ದಾರೆ. ಅಂತಿಮವಾಗಿ ಸುಮಲತಾ ತಮ್ಮ ನಿರ್ಧಾರ ಪ್ರಕಟಿಸ್ತಾರೆ ಎನ್ನಲಾಗ್ತಿದೆ.
ಸುಮಲತಾ ಅವರಿಗೆ ಮಂಡ್ಯದ ಜನರು ಒತ್ತಾಯ ಮಾಡುತ್ತಿದ್ದೇವೆ. ಅವ್ರು ರಾಜ್ಯ ರಾಜಕಾರಣಕ್ಕೆ ಬರಬೇಕು. ರಾಜ್ಯ ರಾಜಕಾರಣದಲ್ಲಿ ತಾವು ತೊಡಗಿಸಿಕೊಳ್ಳಬೇಕು.
ಹನಕೆರೆ ಶಶಿಕುಮಾರ್, ಸುಮಲತಾ ಆಪ್ತ
ಜನರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ ಅನ್ನೋ ಮನಸ್ಥಿತಿಯಲ್ಲಿ ಸಂಸದೆ ಸುಮಲತಾ ಇದ್ದಾರೆ. ಚುನಾವಣೆ ಸ್ಪರ್ಧೆ ಮಾಡುವ ಬಗ್ಗೆ ಅಥವಾ ಬೇರೆ ಪಕ್ಷ ಸೇರ್ಪಡೆ ಬಗ್ಗೆಯೂ ಮೊದಲು ಜನರಿಂದ ಅಭಿಪ್ರಾಯ ಸಂಗ್ರಹಿಸಿ, ನಂತ್ರ ಮುಂದಿನ ಹೆಜ್ಜೆ ಇಡಲು ನಿರ್ಧರಿಸಿದ್ದಾರೆ. ಈ ಕಾರಣಕ್ಕೆ ಮಂಡ್ಯ ಜಿಲ್ಲೆಯ 7 ಕ್ಷೇತ್ರಗಳಿಂದ ಅಭಿಮಾನಿಗಳು ಸಭೆಗೆ ಆಗಮಿಸಲಿದ್ದಾರೆ.
ಇದನ್ನು ಓದಿ: ವಿಷ್ಣು ಸ್ಮಾರಕದ ಬೆನ್ನಲ್ಲೇ ನಟ ಚೇತನ್ ತಗಾದೆ! ಸಿನಿ ಸ್ಟಾರ್ಗಳಿಗೆ ಸರ್ಕಾರಿ ಜಾಗ ಯಾಕೆ?
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸುಮಲತಾ ಸ್ಪರ್ಧೆ ಮಾಡಿದ್ದರು. ಬಿಜೆಪಿ, ರಾಜ್ಯ ರೈತ ಸಂಘ ಬಹಿರಂಗವಾಗಿಯೆ ಬೆಂಬಲ ಸೂಚಿಸಿದ್ವು. ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಿಂದೆ ನಿಂತು ಸುಮಲತಾ ಗೆಲುವಿಗೆ ಕಾರಣರಾಗಿದ್ರು. ಸದ್ಯ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡ್ತಾರಾ ಎಂಬ ಚರ್ಚೆಯಾಗ್ತಿದೆ. ಇವತ್ತಿನ ಸಭೆ ಸುಮಲತಾ ಭವಿಷ್ಯಕ್ಕೆ ಮುನ್ನುಡಿ ಬರೆಯುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post