ಹಾಸನ ವಿಧಾಸಭಾ ಕ್ಷೇತ್ರದ ಟಿಕೆಟ್ ಗೊಂದಲ ಜೆಡಿಎಸ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ಭವಾನಿ ರೇವಣ್ಣ ಹೆಸರು ಕೇಳಿ ಬಂದ ಹಿನ್ನೆಲೆ ಕೋಲಾಹಲವೇ ಸೃಷ್ಟಿಯಾಗಿತ್ತು. ಇದೀಗ ಸಿಂ‘ಹಾಸನ’ದ ಟಿಕೆಟ್ ಫೈಟ್ಗೆ ಖುದ್ದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡರೇ ಎಂಟ್ರಿ ಕೊಡೋಕೆ ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಹಾಸನದಿಂದ ಭವಾನಿ ಸ್ಪರ್ಧೆ ಬಗ್ಗೆ ಸ್ಪಷ್ಟನೆ ಕೊಟ್ಟ ಹೆಚ್.ಡಿ.ರೇವಣ್ಣ
ಹಾಸನದಲ್ಲಿ ದೇವೇಗೌಡರ ಲೆಕ್ಕವೇ ಬೇರೆ!
ಒಬ್ಬೊಬ್ಬರದ್ದು ಒಂದೊಂದು ಲೆಕ್ಕಾಚಾರವಾದ್ರೆ ಹಾಸನದಲ್ಲಿ ದೇವೇಗೌಡರದ್ದೇ ಒಂದು ಲೆಕ್ಕಾಚಾರವಿದೆ. ಹಾಸನದ ಟಿಕೆಟ್ ಫೈಟ್ಗೆ ಹೆಚ್.ಡಿ.ದೇವೇಗೌಡರು ಹೊಸ ದಾಳ ಉರುಳಿಸಲು ಮುಂದಾಗಿದ್ದಾರೆ. ಭವಾನಿ ರೇವಣ್ಣ, ಸ್ವರೂಪ್ ಪ್ರಕಾಶ್ ಇಬ್ಬರಿಗೂ ಟಿಕೆಟ್ ನೀಡಿ ಭಿನ್ನಮತ ಶಮನಕ್ಕೆ ಪ್ಲಾನ್ ಮಾಡಿದ್ದಾರೆ. ಹಾಸನದಿಂದ ಸ್ವರೂಪ್ ಪ್ರಕಾಶ್‌ಗೆ ಹೊಳೆನರಸೀಪುರದಿಂದ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡೋ ಲೆಕ್ಕಾಚಾರ ಇದೆ ಎನ್ನಲಾಗಿದೆ. ಈ ಮೂಲಕ ದೇವೇಗೌಡರು ಒಂದೇ ಕಲ್ಲಲ್ಲಿ ನಾಲ್ಕೈದು ಹಕ್ಕಿ ಹೊಡೆಯುವ ತಂತ್ರ ಹೆಣೆದಿದ್ದಾರಂತೆ.
ಭವಾನಿ ರೇವಣ್ಣ, ಸ್ವರೂಪ್ ಪ್ರಕಾಶ್ಗೂ ಟಿಕೆಟ್!
ಹಾಸನ ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಉಪ ಪಂಗಡ ದಾಸ ಒಕ್ಕಲಿಗ ಮತದಾರರೇ ಹೆಚ್ಚಿದ್ದಾರೆ. ಹಿಂದಿನಿಂದಲೂ ದೇವೇಗೌಡರು ಇದೇ ಪಂಗಡಕ್ಕೆ ಟಿಕೆಟ್ ನೀಡುತ್ತಾ ಬಂದಿದ್ದಾರೆ. ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ತಪ್ಪಿಸಿ ಭವಾನಿ ರೇವಣ್ಣ ಅವರಿಗೆ ಕೊಟ್ಟರೆ ಬಿಜೆಪಿ ಶಾಸಕ ಪ್ರೀತಂಗೌಡಗೆ ಅನುಕೂಲ ಆಗಲಿದೆ. ಸ್ವರೂಪ್ ಪ್ರಕಾಶ್ ಹಾಗೂ ಪ್ರೀತಂಗೌಡ ಇಬ್ಬರೂ ದಾಸ ಒಕ್ಕಲಿಗ ಪಂಗಡಕ್ಕೆ ಸೇರಿದವರು. ಹೀಗಾಗಿ ಸಂಪ್ರದಾಯದಂತೆ ಸ್ವರೂಪ್ ಪ್ರಕಾಶ್‌ಗೆ ಟಿಕೆಟ್ ಕೊಟ್ಟರೆ ಗೆಲುವು ಸಾಧಿಸಬಹುದು ಅನ್ನೋದು ದೇವೇಗೌಡರ ರಾಜಕೀಯ ಪಟ್ಟು.
ಇದನ್ನೂ ಓದಿ: ‘ಹಾಲಲ್ಲಾದರು ಹಾಕು ನೀರಲ್ಲಾದರು ಹಾಕು’- ಹೀಗ್ಯಾಕೆ ಅಂದ್ರು ಅನಿತಾ ಕುಮಾರಸ್ವಾಮಿ?
ಕೆ.ಆರ್.ಪೇಟೆಗೆ ಹೆಚ್.ಡಿ.ರೇವಣ್ಣ ಶಿಫ್ಟ್?
ಭವಾನಿ ರೇವಣ್ಣರನ್ನ ಹೊಳೆನರಸೀಪುರದಿಂದ ಕಣಕ್ಕಿಳಿಸದರೆ ಸುಲಭವಾಗಿ ಗೆಲುವು ಸಾಧಿಸಬಹುದು. ಆಗ ಹೆಚ್.ಡಿ.ರೇವಣ್ಣರನ್ನ ಕೆ.ಆರ್.ಪೇಟೆಯಿಂದ ಕಣಕ್ಕಿಳಿಸುವುದು ದಳಪತಿಯ ಮಾಸ್ಟರ್ ಪ್ಲಾನ್ ಎನ್ನಲಾಗಿದೆ. ಪಕ್ಷದ ಭಿನ್ನಮತ ಶಮನ ಮಾಡುವುದು ಇದರ ಜೊತೆಗೆ 2019ರಲ್ಲಿ ಪಕ್ಷಕ್ಕೆ ಕೈ ಕೊಟ್ಟ ಸಚಿವ ನಾರಾಯಣಗೌಡರನ್ನೂ ಅಣಿಯಬಹುದು. ಈ ಮೂಲಕ ದೇವೇಗೌಡರು ಒಂದೇ ಕಲ್ಲಲ್ಲಿ ಒಂದಲ್ಲ, ಎರಡಲ್ಲ ನಾಲ್ಕೈದು ಹಕ್ಕಿ ಒಡೆಯುವ ತಂತ್ರ ಹೆಣೆದಿದ್ದಾರೆ.
ಕೆ.ಆರ್.ಪೇಟೆ ಜೆಡಿಎಸ್ ಭದ್ರಕೋಟೆ
ಕೆ.ಆರ್.ಪೇಟೆಗೆ ಹೇಮಾವತಿ ನೀರು ಹರಿಸುವಲ್ಲಿ ದೇವೇಗೌಡರ ಪಾತ್ರ ದೊಡ್ಡದಿದೆ. ಇಂದಿಗೂ ಈ ಕ್ಷೇತ್ರದ ಮೇಲೆ ಹೆಚ್.ಡಿ.ರೇವಣ್ಣ ಕುಟುಂಬ ಹಿಡಿತ ಸಾಧಿಸಿದೆ. ರೇವಣ್ಣ ಅವರನ್ನೇ ಕೆ.ಆರ್.ಪೇಟೆಯಿಂದ ಕಣಕ್ಕಿಳಿಸಿದರೆ ಕುಟುಂಬದಲ್ಲಿ ಎದುರಾಗಿರುವ ಅಸಮಧಾನ ಶಮನವಾಗುತ್ತೆ. ವಿರೋಧಿಗಳಿಗೆ ಅಸ್ತ್ರವಾಗುವುದನ್ನ ತಪ್ಪಿಸಬಹುದಾಗಿದೆ. ಹೀಗೆ ಅಳೆದು ತೂಗಿ ಹೊಸ ದಾಳ ಉರುಳಿಸಲು ಹೆಚ್.ಡಿ.ದೇವೇಗೌಡರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post