ಮತಯುದ್ಧಕ್ಕೆ ಕೆಲವೇ ತಿಂಗಳುಗಳು ಬಾಕಿ ಇವೆ. ಈ ಟೈಮ್‌ನಲ್ಲಿ ಆರೋಪಗಳು. ಪ್ರತ್ಯಾರೋಪಗಳು ಕಾಮನ್. ಆದ್ರೆ, ಕೈ ನಾಯಕರ ವಿರುದ್ಧ ಕೇಳಿಬಂದಿರೋದು ಒಂದೋ, ಎರಡೋ ಆರೋಪಗಳಲ್ಲ. ಸಾಲು ಸಾಲು ಹಗರಣಗಳ ಆರೋಪ. ಅದ್ರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಮೇರು ನಾಯಕರ ಮೇಲೆ ಬಿಜೆಪಿ ಬೃಹತ್ ಹಗರಣಗಳ ಸರಮಾಲೆಯನ್ನೇ ಸಿಡಿಸಿದೆ. ಕೈಪಡೆಗೆ ಶಿಕ್ಷೆ ಕೊಡಿಸಿ ಅಂತಾ ‘ಲೋಕಾ’ಕ್ಕೆ ದೂರು ನೀಡಿದೆ.
ಇಂದಿರಾ ಕ್ಯಾಂಟೀನ್‌ನಲ್ಲೂ ಹಗರಣ. ಬಸ್ ತಂಗುದಾಣದಲ್ಲೂ ಅಕ್ರಮ. ಕೃಷಿ ಹೊಂಡದಲ್ಲಿ ಭ್ರಷ್ಟಚಾರದ ಈಜಾಟ. ಬೀದಿ ದೀಪಗಳಲ್ಲಿ ಅಕ್ರಮದ ಅಂಧಕಾರ. ಹೀಗೆ ಸಾಲು ಸಾಲು ಆರೋಪಗಳು ಕೈ ನಾಯಕರ ಬೆನ್ನುಬಿದ್ದಿವೆ. ಬಿಜೆಪಿ ನಾಯಕ ಎನ್.ಆರ್. ರಮೇಶ್, ಕೈ ಪಡೆ ವಿರುದ್ಧ ಅಕ್ರಮದ ಸಮರ ಸಾರಿದ್ದಾರೆ.
ಸಿದ್ದರಾಮಯ್ಯ ಸೇರಿ ‘ಹಸ್ತ’ ನಾಯಕರ ವಿರುದ್ಧ ‘ಲೋಕಾ’ಕ್ಕೆ ದೂರು!
ಬಿಜೆಪಿ ಮುಖಂಡ ಎನ್.ಆರ್. ರಮೇಶ್, ಕಾಂಗ್ರೆಸ್ ವಿರುದ್ಧ 10 ಬೃಹತ್ ಹಗರಣಗಳ ಕೇಸ್‌ಗಳನ್ನ ಹಿಡಿದು ಲೋಕಾಯುಕ್ತ ಕಚೇರಿಯ ಮೆಟ್ಟಿಲೇರಿದ್ದಾರೆ. ಸಿದ್ದು ಸರ್ಕಾರದ ಅವಧಿಯಲ್ಲಿ ಸಾಲು ಸಾಲು ಹಗರಣಗಳು ನಡೆದಿವೆ ಅಂತಾ 3 ಸಾವಿರದ 728 ಪುಟಗಳ ದಾಖಲೆ ಸಮೇತ 10 ದೂರುಗಳನ್ನ ನೀಡಿದ್ದಾರೆ. ಅದರಲ್ಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೇ 7 ದೂರು ದಾಖಲಿಸಿದ್ದಾರೆ. ಅಲ್ಲದೇ ಮಾಜಿ ಸಚಿವರಾದ ಕೆ.ಜೆ.ಜಾರ್ಜ್, ಕೃಷ್ಣ ಬೈರೇಗೌಡ, ಯು.ಟಿ. ಖಾದರ್, ಎಂ.ಬಿ.ಪಾಟೀಲ್, ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ, ರಾಬರ್ಟ್ ವಾದ್ರಾ ವಿರುದ್ಧ ಕೋಟಿ ಕೋಟಿ ಕೊಳ್ಳೆ ಹೋಡೆದಿರೋದಾಗಿ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಎನ್.ಆರ್. ರಮೇಶ್ ಮಾಡ್ತಿರೋ ಆರೋಪಗಳೇನು?
189 ಇಂದಿರಾ ಕ್ಯಾಂಟೀನ್‌ಗಳಲ್ಲಿ ಗ್ರಾಹಕರ ಹೆಸರಲ್ಲಿ ಲೂಟಿ ಮಾಡಲಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ. ಪ್ರತಿ ತಿಂಗಳು 11 ಕೋಟಿ 52 ಲಕ್ಷದ 74 ಸಾವಿರದ 273ರೂಪಾಯಿಗಳಂತೆ 17 ತಿಂಗಳಲ್ಲಿ 560 ಕೋಟಿ ರೂಪಾಯಿ ಕಬಳಿಸಿದ್ದಾರೆ ಎಂದು ಸಿದ್ದರಾಮಯ್ಯ ಹಾಗೂ ಕೆ.ಜೆ.ಜಾರ್ಜ್ ವಿರುದ್ಧ ದೂರು ನೀಡಿದ್ದಾರೆ.
ಸುಮಾರು 68.15 ಕೋಟಿ ಜಾಹೀರಾತು ಶುಲ್ಕ ವಂಚನೆ ಹಗರಣ
439 ಬಸ್ ತಂಗುದಾಣಗಳ ಜಾಹೀರಾತು ಶುಲ್ಕದಲ್ಲಿ ಅಕ್ರಮ ನಡೆದಿರೋದಾಗಿ ಆರೋಪ ಕೇಳಿಬಂದಿದೆ. ಇದರಲ್ಲಿ ಸುಮಾರು 68 ಕೋಟಿ 12 ಲಕ್ಷ ಶುಲ್ಕ ವಂಚನೆ ಮಾಡಲಾಗಿದೆ ಅಂತಾ ವಿಪಕ್ಷ ನಾಯಕ ಮತ್ತು ಕೆ.ಜೆ ಜಾರ್ಜ್ ವಿರುದ್ದ ಲೋಕಾಕ್ಕೆ ದೂರು ನೀಡಿದ್ದಾರೆ.
ಯೋಜನೆಯಲ್ಲಿ 800 ಕೋಟಿ ರೂಪಾಯಿ ಹಗರಣ
ರಾಜ್ಯದಲ್ಲಿ ಕೃಷಿ ಹೊಂಡ ನಿರ್ಮಿಸುವ ಕೃಷಿ ಭಾಗ್ಯ ಯೋಜನೆಯಲ್ಲಿ 800 ಕೋಟಿ ರೂಪಾಯಿ ಹಗರಣ ನಡೆದಿದೆ. ಇದರಲ್ಲಿ ಸಿದ್ದರಾಮಯ್ಯ ಮತ್ತು ಕೃಷ್ಣಬೈರೇಗೌಡ ಭಾಗಿಯಾಗಿದ್ದಾರೆ ಎಂದು ಎನ್‌ಆರ್ ರಮೇಶ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
LED ಬೀದಿ ದೀಪಗಳ ಅಳವಡಿಕೆ ಯೋಜನೆಯಲ್ಲಿ ಅಕ್ರಮ
ರಾಜ್ಯದಲ್ಲಿ LED ಬೀದಿ ದೀಪಗಳ ಅಳವಡಿಕೆ ಯೋಜನೆಯಲ್ಲಿ ಸುಮಾರು 1 ಸಾವಿರದ 600 ಕೋಟಿ ರೂಪಾಯಿಗಳ ಹಗರಣ ನಡೆದಿದೆ. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಆರೋಪ ಕೇಳಿ ಬಂದಿದೆ.
ನೂರಾರು ಕೋಟಿ ಮೊತ್ತದ ಹಣ ದುರ್ಬಳಕೆ
2015-16 ರ ಅವಧಿಯಲ್ಲಿ KSAPS ಯೋಜನೆಯ ಹೆಸರಿನಲ್ಲಿ ಲೂಟಿನೂರಾರು ಕೋಟಿ ಮೊತ್ತದ ಹಣ ದುರ್ಬಳಕೆ ಮಾಡಿದ್ದಾರೆ ಅಂತಾ ಸಿದ್ದರಾಮಯ್ಯ, ಮಾಜಿ ಸಚಿವ ಯು.ಟಿ ಖಾದರ್ ವಿರುದ್ಧ ರಮೇಶ್ ಆರೋಪಿಸಿದ್ದಾರೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ (SAST) ಮೂಲಕ ಯೋಜನೆಗಳ ಅನುಷ್ಟಾನದಿಂದ ನೂರಾರು ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಎಂದು ಮಾಜಿ ಸಚಿವ ಯು.ಟಿ. ಖಾದರ್ ವಿರುದ್ಧ ಆರೋಪ ಕೇಳಿಬಂದಿದೆ.
ಸುಮಾರು 40 ಕೋಟಿ ರೂಪಾಯಿಗಳಷ್ಟು ಹಗರಣ
ಬಿಬಿಎಂಪಿ ತ್ಯಾಜ್ಯ ವಿಲೇವಾರಿ ಸಮಸ್ಯೆ ಬಗೆಹರಿಸುವಲ್ಲೂ ಸುಮಾರು 40 ಕೋಟಿ ರೂಪಾಯಿಗಳಷ್ಟು ಲೂಟಿ ಹೊಡೆದಿದ್ದಾರೆ ಅಂತಾ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ K. J. ಜಾರ್ಜ್ ವಿರುದ್ಧ ದೂರು ದಾಖಲಾಗಿದೆ. ಸ್ವಚ್ಛ ಭಾರತ ಅಭಿಯಾನದ ಅನುಷ್ಠಾನದಲ್ಲೂ ಸುಮಾರು ನೂರಾರು ಕೋಟಿ ರೂಪಾಯಿಗಳ ಹಗರಣ ನಡೆದಿದೆ ಅಂತಾ ಮಾಜಿ ಸಚಿವರಾದ ಕೃಷ್ಣ ಭೈರೇಗೌಡ, ಎನ್.ಎ.ಹ್ಯಾರೀಸ್, ದಿನೇಶ್ ಗುಂಡೂರಾವ್, ಜಮೀರ್ ಅಹ್ಮದ್ ವಿರುದ್ಧವು ದೂರು ನೀಡಲಾಗಿದೆ.
ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿ ಗುತ್ತಿಗೆಯಲ್ಲಿ ಅಕ್ರಮ
ವಿಶ್ವೇಶ್ವರಯ್ಯ ಜಲ ನಿಗಮದ ಕಾಮಗಾರಿ ಗುತ್ತಿಗೆಯಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆ ನೀಡಿ 158 ಕೋಟಿ ರೂಪಾಯಿ ಹಗರಣ ಮಾಡಿದ್ದಾರೆ ಅಂತಾ ಮಾಜಿ ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಲೋಕಾಕ್ಕೆ ರಮೇಶ್ ದೂರು ಕೊಟ್ಟಿದ್ದಾರೆ. ವಾದ್ರಾ ಪಾಲುದಾರಿಕೆಯ DLF ಸಂಸ್ಥೆಯಿಂದ ಬೆಂಗಳೂರಿನಲ್ಲಿ 9 ಸಾವಿರದ 600 ಕೋಟಿ ರೂ. ಮೌಲ್ಯದ 1 ಸಾವಿರದ 100 ಎಕರೆ ಸರ್ಕಾರಿ ಜಾಗ ಗುಳುಂ ಮಾಡಿರೋದಾಗಿ ಸಿದ್ಧರಾಮಯ್ಯ ಮತ್ತು ರಾಬರ್ಟ್ ವಾದ್ರಾ ವಿರುದ್ಧ ಆರೋಪಿಸಿದ್ದಾರೆ.
ಭ್ರಷ್ಟಾಚಾರ, ವಂಚನೆ, ಅಧಿಕಾರ ದುರುಪಯೋಗ, ಸರ್ಕಾರಿ ಭೂ ಕಬಳಿಕೆ ಹೀಗೆ ಹಲವು ದೂರುಗಳನ್ನ ಎನ್.ಆರ್.ರಮೇಶ್ ಲೋಕಾಯುಕ್ತಕ್ಕೆ ನೀಡಿದ್ದಾರೆ. ಸದ್ಯ, ಈ ಎಲ್ಲಾ ಅಕ್ರಮ ಆರೋಪಗಳ ಬಗ್ಗೆ ಲೋಕಾಯುಕ್ತ ಯಾವ ರೀತಿ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೆ ಅನ್ನೋದೆ ಮುಂದಿರೋ ಪ್ರಶ್ನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post