ಗೋಕಾಕ್ ಅಂದ್ರೆ ಕರದಂಟಿನ ಸಿಹಿ. ಕಣ್ಣಿಗೆ ಹಬ್ಬ ಗೋಕಾಕ್ ಫಾಲ್ಸ್. ಗೋಕಾಕ್ ಅಂದ್ರೆ ಜಾರಕಿಹೊಳಿ ಸಾಮ್ರಾಜ್ಯ. ಹೌದು ಅಷ್ಟರ ಮಟ್ಟಿಗೆ ಜಾರಕಿಹೊಳಿ ಈ ಕ್ಷೇತ್ರದಲ್ಲಿ ಬೇರು ಬಿಟ್ಟಿದ್ದಾರೆ. ಆದ್ರೆ, ಈ ಬಾರಿ ಸಾಹುಕಾರ್ ಕೋಟೆ ಛಿದ್ರಗೊಳಿಸಲು ಜಾತಿವ್ಯೂಹ ರಚಿಸಲಾಗಿದೆ. ಇದಕ್ಕಾಗಿ ರಾಜಕೀಯ ವಿರೋಧಿಗಳಿಂದ ತಂತ್ರಗಾರಿಕೆ ಆರಂಭವಾಗಿದೆ. ಅಂದ್ಹಾಗೆ ಈ ರಣಾಂಗಣದಲ್ಲಿ ಸಿ.ಡಿ ಸಂಗ್ರಾಮ ಮತ್ತೊಂದು ಮಜಲಿಗೆ ತಲುಪಲಿದೆ.
ಬೆಳಗಾವಿ ಲಿಂಗಾಯತ ಸಮುದಾಯದ ಪ್ರಬಲ ಕೋಟೆ. 18 ವಿಧಾನಸಭಾ ಕ್ಷೇತ್ರಗಳಲ್ಲಿ ಲಿಂಗಾಯತ ಸಮುದಾಯವೇ ನಿರ್ಣಾಯಕ. ಈ ಉಕ್ಕಿನ ಕೋಟೆಯನ್ನ ಜಾರಕಿಹೊಳಿ ಬ್ರದರ್ಸ್ ಛಿದ್ರ ಮಾಡಿ ದಶಕಗಳೇ ಉರುಳಿವೆ. ಬ್ರದರ್ಸ್ ಪಾಲಿಗೆ ಗೋಕಾಕ್ ಕ್ಷೇತ್ರವೇ ರಾಜಧಾನಿ. ಇಲ್ಲಿ ಉರುಳಿದ ದಾಳ, ಬೆಳಗಾವಿ ಎಲ್ಲಾ ಕ್ಷೇತ್ರಗಳಲ್ಲೂ ಸರ್ವವ್ಯಾಪಿ ಆಗಿ ಬದಲಾಗುತ್ತೆ. ಹಾಗಾಗಿ ಈ ಬಾರಿ, ಬ್ರದರ್ಸ್ ರಾಜಧಾನಿಗೆ ಲಗ್ಗೆ ಹಾಕಲು ಲಿಂಗಾಯತ ಪಡೆ ರಣತಂತ್ರ ಹೆಣೆದಿದೆ.
ಇದನ್ನು ಓದಿ: Maha Shivratri: ನಾಡಿನೆಲ್ಲಡೆ ಶಿವ ನಾಮ ಸ್ಮರಣೆ.. ಭಕ್ತಿ ಭಾವದಲ್ಲಿ ಮಿಂದೆದ್ದ ಈಶ ಪ್ರಿಯರು
ಗೋಕಾಕ್ನಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಪತನಕ್ಕೆ ಪಣ
ಗೋಕಾಕ್, ಅರಭಾವಿ, ಯಮಕನಮರಡಿ ಈ 3 ಕ್ಷೇತ್ರಗಳಿಗೆ ಜಾರಕಿಹೊಳಿ ಬ್ರದರ್ಸ್ ಶಾಶ್ವತ ಶಾಸಕರು. ಅಹಿಂದ ಮತಗಳ ಮೇಲಾಟ ಆಡಿದ ಜಾರಕಿಹೊಳಿ ಬ್ರದರ್ಸ್, ಅದೇ ಮತ ಬ್ಯಾಂಕ್ ಅನ್ನೆ ಗುರಾಣಿಯಾಗಿ ಬಳಸಿ, ಪ್ರಬಲ ಲಿಂಗಾಯತ ನಾಯಕರನ್ನೇ ಮೂಲೆ ಗುಂಪು ಮಾಡಿದ ಇತಿಹಾಸ ಇಲ್ಲಿ ಹಾಸು ಹೊಕ್ಕಾಗಿದೆ. ಆದ್ರೆ ಈ ಬಾರಿ ಜಾರಕಿಹೊಳಿ ಓಟಕ್ಕೆ ಲಗಾಮು ಸಿದ್ಧವಾಗಿದೆ.
ಗೋಕಾಕ್ ಜಾರಕಿಹೊಳಿಯ ಸಾಮ್ರಾಜ್ಯ. 6 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ತಮ್ಮ ಕೊನೇ ಚುನಾವಣೆ ಅಂತ ಮೊಳೆ ಹೊಡೆದಿದ್ದಾರೆ. ಆದ್ರೆ, ರಮೇಶ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಅದೊಂದು ಕೂಗು ಹೆಚ್ಚು ಸದ್ದಾಗ್ತಿದೆ. ಪಂಚಮಸಾಲಿ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು ಅನ್ನೋ ಆಗ್ರಹ ಹೆಚ್ತಿದೆ. ಗೋಕಾಕ್ ಅಖಾಡಕ್ಕೆ ಹೆಬ್ಬಾಳ್ಕರ್ ಹೆಬ್ಬಂಡೆ ರೀತಿ ಎಂಟ್ರಿ ಆಗುವ ಸಾಧ್ಯತೆ ಇದೆ.
ಗೋಕಾಕ್ದಿಂದ ಸ್ಪರ್ಧಿಸುವಂತೆ ಲಕ್ಷ್ಮೀ ಹೆಬ್ಬಾಳ್ಕರ್ಗೆ ಪಟ್ಟು
ಈ ಸಾಧ್ಯತೆ ಒಂದ್ವೇಳೆ ನಿಜವಾದಲ್ಲಿ ಗೋಕಾಕ್ ಕಣ ಹಿಂದೆಂದಿಗಿಂತಲೂ ರಣರೋಚಕವಾಗಿ ಮಾರ್ಪಡಲಿದೆ. ಕಾಂಗ್ರೆಸ್ದಿಂದ ಪಂಚಮಸಾಲಿ ಸಮುದಾಯದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕಣಕ್ಕಿಳಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಕೂಡಲ ಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳನ್ನ ಭೇಟಿಯಾದ ಗೋಕಾಕ್, ಅರಬಾವಿ ಕ್ಷೇತ್ರದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ. ಸ್ವಾಮೀಜಿ ಬಳಿ ಗೋಕಾಕ್ ಜೆಡಿಎಸ್ ಮುಖಂಡ ಚಂದ್ರನ್ನ ಗಿಡ್ಡಣ್ಣವರ್ ಈ ವಿಚಾರ ಪ್ರಸ್ತಾಪಿಸಿದ್ದಾರೆ.
2 ದಶಕದಲ್ಲೇ ದೊಡ್ಡಮಟ್ಟದಲ್ಲಿ ಬೆಳೆದ ಜಾರಕಿಹೊಳಿ ಕುಟುಂಬ
ಜಾರಕಿಹೊಳಿ ಕುಟುಂಬ ಕಳೆದ 2 ದಶಕದಲ್ಲೇ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿದೆ. ಲಿಂಗಾಯತರ ಪ್ರಬಲ ಮತಬ್ಯಾಂಕ್ ಹೊಂದಿರುವ ಕ್ಷೇತ್ರಗಳಲ್ಲೇ ಈ ಕುಟುಂಬದ ಮೂವರು ಅಧಿಪತ್ಯ ಸ್ಥಾಪಿಸಿದ್ದಾರೆ. ಅದರಲ್ಲೂ ಕಳೆದ ಬೆಳಗಾವಿ ಬೈಎಲೆಕ್ಷನ್ನಲ್ಲಿ ಸತೀಶ್ ಜಾರಕಿಹೊಳಿ ವೀರಾವೇಶದ ಸೋಲು ಲಿಂಗಾಯತ ಸಮುದಾಯದ ಕಣ್ಣುರಿಗೆ ಕಾರಣವಾಗಿದೆ. ಪಕ್ಷಭೇದ ಮರೆತ ನಾಯಕರು ಜಾತಿ ಅಸ್ಮಿತೆಗಾಗಿ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಉಮೇಶ್ ಕತ್ತಿ ಸಾವಿನ ಬಳಿಕ ಲಿಂಗಾಯತರಲ್ಲಿ ನಾಯಕತ್ವ ಕೊರತೆ ಕಾಡ್ತಿದ್ದು, ಸವದಿ, ಹೆಬ್ಬಾಳ್ಕರ್ತ್ತ ದೃಷ್ಟಿ ನೆಟ್ಟಿದೆ.
ಗೋಕಾಕ್ನಲ್ಲಿ ಜಾರಕಿಹೊಳಿ ಸಾಮ್ರಾಜ್ಯ ಪತನಕ್ಕೆ ಲಿಂಗಾಯತ ಸಮುದಾಯ ಪಣ ತೊಟ್ಟಿದೆ. ಇದಕ್ಕಾಗಿ ರಾಜಕೀಯ ವಿರೋಧಿಗಳಿಂದ ತಂತ್ರಗಾರಿಕೆ ಶುರುವಾಗಿದೆ. ಆದ್ರೆ, ಹಣಬಲ, ತೋಳ್ಬಲ, ಅಹಿಂದ ಬಲ ಹೊತ್ತ ಜಾರಕಿಹೊಳಿ ಬ್ರದರ್ಸ್ ಎದುರಿಗಿನ ಸ್ಪರ್ಧೆ ಗೋಕಾಕ್ ಫಾಲ್ಸ್ ಧುಮ್ಮಿಕ್ಕುವ ನೀರಿನ ಸೆಳೆತ ಮೀರಿ ಈಜುವ ಸಾಹಸ ಸಲೀಸಲ್ಲ. ಆದ್ರೆ, ಯಾವುದೇ ಸವಾಲು ಮೆಟ್ಟುವ ಸಂಗ್ರಾಮಿಗೆ ಯಾವುದೇ ಸವಾಲು ದೊಡ್ಡದಲ್ಲ.
ವಿಶೇಷ ವರದಿ: ಶ್ರೀಕಾಂತ್ ಕುಬಕಡ್ಡಿ, ಬೆಳಗಾವಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post