ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾಯಣ್ ಅಂತಿಮ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತನ್ನ ಆಪ್ತನ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಧ್ರುವನಾರಾಯಣ್ ಮೃತದೇಹ ನೋಡಿ ಮೌನವಾಗಿ ನಿಂತ ಸಿದ್ದರಾಮಯ್ಯ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಮೈಸೂರು ರಾಜಕಾರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಧ್ರುವನಾರಾಯಣ್ ಬಹುದೊಡ್ಡ ಬಲವೇ ಆಗಿದ್ದರು. ಪರಮಾಪ್ತನ ಅಗಲಿಕೆ ನಿಜಕ್ಕೂ ಸಿದ್ದರಾಮಯ್ಯಗೆ ಆಘಾತವನ್ನು ತಂದಿದೆ. ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಧ್ರುವನಾರಾಯಣ್ ಆಪ್ತರ ಆಕ್ರಂದನ ಮುಗಿಲು ಮುಟ್ಟಿತ್ತು.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ಧ್ರುವನಾರಾಯಣ್ ಅವರ ಪತ್ನಿ ವೀಣಾ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ. ಧ್ರುವನಾರಾಯಣ್ ಅವರ ಅಂತಿಮ ದರ್ಶನಕ್ಕೆ ಗಣ್ಯರು, ಅಭಿಮಾನಿಗಳ ದಂಡೇ ಮೈಸೂರಿನತ್ತ ಹರಿದು ಬರ್ತಿದೆ.
ಇದನ್ನೂ ಓದಿ: ನಿನ್ನೆ ಬೆಳಗ್ಗೆ 9 ರಿಂದ ರಾತ್ರಿ 10 ಗಂಟೆಯವರೆಗೂ ಪ್ರಚಾರದಲ್ಲಿದ್ದ ಧ್ರುವನಾರಾಯಣ್ -ಕೊನೆ ಭಾಷಣದ ವಿಡಿಯೋ
ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್, ಧ್ರುವನಾರಾಯಣ್ ಅವರ ಅಕಾಲಿಕ ಮರಣ ಆಘಾತ ತಂದಿದೆ. 2004ರಲ್ಲಿ ಚಾಮರಾಜನಗರ ಜಿಲ್ಲೆಯ ಏಕೈಕ ಕಾಂಗ್ರೆಸ್ ಶಾಸಕ ಧ್ರುವನಾರಾಯಣ್ ಆಗಿದ್ದರು. ನಾನು ಅಂದು ಮೈಸೂರು ಜಿಲ್ಲೆಗೆ ಏಕೈಕ ಶಾಸಕ. ಅಂದಿನಿಂದ ಇಂದಿನವರೆಗೂ ಪಕ್ಷ ಸಂಘಟನೆಗೆ ಒತ್ತು ನೀಡಿದ್ದಾರೆ. ನಿನ್ನೆ ರಾತ್ರಿ ಕೂಡ ಪಕ್ಷದ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದರು. ಇದು ನಮಗೆ ದೊಡ್ಡ ಆಘಾತವಾಗಿದೆ ಎಂದು ಹೇಳಿದ್ದಾರೆ.
ಚುನಾವಣೆ ಸಂಧರ್ಭದಲ್ಲಿ ಮಾತ್ರ ಅವರು ರಾಜಕೀಯ ಮಾಡುತ್ತಿದ್ದರು. ಚಾಮರಾಜನಗರ ಅಭಿವೃದ್ಧಿಗೆ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಸಂಸದರಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಜಿಲ್ಲೆಗೆ ತುಂಬಲಾರದ ನಷ್ಟವುಂಟಾಗಿದೆ ಎಂದು ಧ್ರುವನಾರಾಯಣ್ ನಿಧನಕ್ಕೆ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಸಂತಾಪ ಸೂಚಿಸಿದ್ದಾರೆ.
ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಕಣ್ಣೀರಾಕುತ್ತಲೇ ಧ್ರುವನಾರಾಯಣ್ ಸಾವಿಗೆ ಸಂತಾಪ ಸೂಚಿಸಿದರು. ಮಾಜಿ ಸಚಿವ ಕೃಷ್ಣ ಭೈರೇಗೌಡ, ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವನ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post