2023ರ ವಿಧಾನಸಭಾ ಚುನಾವಣೆಯಲ್ಲಿ ತಾವು ಬಳ್ಳಾರಿ ಗ್ರಾಮೀಣಾ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವುದಾಗಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಘೋಷಿಸಿಕೊಂಡಿದ್ದಾರೆ. ಹಾಗಾದರೆ ಈ ಬಾರಿ ಬಳ್ಳಾರಿ ಗ್ರಾಮೀಣಾ ಕ್ಷೇತ್ರದಲ್ಲಿ ಎಲೆಕ್ಷನ್ ಫೈಟ್ ಹೇಗಿರಲಿದೆ? ಯಾರಿಗೆ ಗೆಲುವು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಬಿಜೆಪಿಯ ಬಿ.ಶ್ರೀರಾಮುಲು ಅವರ ವೀಕ್ ನೆಸ್ ಏನು? ಕಾಂಗ್ರೆಸ್ ಪಕ್ಷದ ಪ್ಲಸ್ ಪಾಯಿಂಟ್ ಏನು ಅನ್ನೋದ್ರ ವಿವರ ಈ ಸ್ಟೋರಿಯಲ್ಲಿದೆ.
ಬಳ್ಳಾರಿ ಗ್ರಾಮೀಣಾ ವಿಧಾನಸಭಾ ಕ್ಷೇತ್ರ ಮತ್ತೊಮ್ಮೆ ಹೈ-ವೋಲ್ಟೇಜ್ ಕ್ಷೇತ್ರವಾಗುತ್ತಿದೆ. ಬಳ್ಳಾರಿ ಗ್ರಾಮೀಣಾ ಕ್ಷೇತ್ರದಲ್ಲಿ 2023ರ ವಿಧಾನಸಭಾ ಚುನಾವಣೆಯಲ್ಲಿ ಮದಗಜಗಳ ಕಾದಾಟ ನಡೆಯೋದು ಖಚಿತವಾಗಿದೆ. ಎಸ್.ಟಿ. ಮೀಸಲು ಕ್ಷೇತ್ರವಾದ ಬಳ್ಳಾರಿ ಗ್ರಾಮೀಣಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷದ ಬಿ.ನಾಗೇಂದ್ರ ವರ್ಸಸ್ ಬಿಜೆಪಿಯ ಬಿ.ಶ್ರೀರಾಮುಲು ನಡುವಿನ ಫೈಟ್ ಬಾರಿ ಕುತೂಹಲ ಕೆರಳಿಸಿದೆ. ದೈತ್ಯರ ನಡುವಿನ ಕಾಳಗದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬುದೇ ಜನರ ಕುತೂಹಲಕ್ಕೆ ಕಾರಣವಾಗಿದೆ.
2008ರಲ್ಲಿ ಈ ಕ್ಷೇತ್ರದಿಂದ ಬಿ.ಶ್ರೀರಾಮುಲು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಬಳಿಕ ಬಿಜೆಪಿ ಜೊತೆಗೆ ಭಿನ್ನಾಭಿಪ್ರಾಯದಿಂದ 2011ರಲ್ಲಿ ಬಿಜೆಪಿ ಬಿಟ್ಟರು. 2011ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜೆಡಿಎಸ್ ಬೆಂಬಲ, ಮಾಜಿ ಎಂಎಲ್‌ಎ ಕುರುಗೋಡು ಸೂರ್ಯನಾರಾಯಣ್ ರೆಡ್ಡಿ ಬೆಂಬಲ ಪಡೆದು ಗೆದ್ದರು. 2013 ರಲ್ಲಿ ಶ್ರೀರಾಮುಲು ಬಿಎಸ್‌ಆರ್ ಪಕ್ಷವನ್ನು ಸ್ಥಾಪಿಸಿ ಇದೇ ಬಳ್ಳಾರಿ ಗ್ರಾಮೀಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ ಗೆದ್ದರು. ಬಳಿಕ 2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು. ಹೀಗಾಗಿ 2014ರಲ್ಲಿ ನಡೆದ ಉಪಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶ್ರೀರಾಮುಲು ಸೋದರಿ ಜೆ.ಶಾಂತಾ ಸ್ಪರ್ಧಿಸಿದ್ದರು.
ಇದನ್ನೂ ಓದಿ: ಬಳ್ಳಾರಿ ಗ್ರಾಮೀಣದಿಂದಲೇ ಶ್ರೀರಾಮುಲು ಸ್ಪರ್ಧೆ; ಹಳೇ ದೋಸ್ತಿ ನಾಗೇಂದ್ರಗೆ ಕೊಡ್ತಾರಾ ಟಕ್ಕರ್
ಕಾಂಗ್ರೆಸ್ ಪಕ್ಷದಿಂದ ಎನ್.ವೈ.ಗೋಪಾಲಕೃಷ್ಣ ಸ್ಪರ್ಧಿಸಿದ್ದರು. ಅಂತಿಮವಾಗಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿತ್ತು. 2018ರಲ್ಲಿ ಈ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಬಿ.ನಾಗೇಂದ್ರ ಸ್ಪರ್ಧಿಸಿದರೆ ಬಿಜೆಪಿಯಿಂದ ಸಣ್ಣಫಕ್ಕೀರಪ್ಪ ಸ್ಪರ್ಧಿಸಿದ್ದರು. ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದ ಬಿ.ನಾಗೇಂದ್ರಗೆ ವಿಜಯದ ಮಾಲೆ ತೊಡಿಸಿದ್ದರು. ಈಗ 2023ರಲ್ಲಿ ಬಳ್ಳಾರಿ ಗ್ರಾಮೀಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಲಿ ಎಂಎಲ್ಎ ಬಿ.ನಾಗೇಂದ್ರರನ್ನು ಸೋಲಿಸಿ ಸ್ವಕ್ಷೇತ್ರವನ್ನು ಮರುಪ್ರವೇಶ ಮಾಡಿಕೊಳ್ಳಲು ಶ್ರೀರಾಮುಲು ಯತ್ನಿಸುತ್ತಿದ್ದಾರೆ.
ಶ್ರೀರಾಮುಲು ಹುಟ್ಟೂರು ಜೋಳದರಾಶಿ ಗ್ರಾಮ ಕೂಡ ಇದೇ ಬಳ್ಳಾರಿ ಗ್ರಾಮೀಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಜೋಳದರಾಶಿ ಗ್ರಾಮದಲ್ಲಿ ಬಿ.ಶ್ರೀರಾಮುಲು ಅವರ ಮನೆ ಇದೆ. ಜನಾರ್ಧನ ರೆಡ್ಡಿ ಕೂಡ ಶ್ರೀರಾಮುಲುಗೆ ಬಳ್ಳಾರಿ ಗ್ರಾಮೀಣಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಸಲಹೆ ನೀಡಿದ್ದಾರಂತೆ. ಕಳೆದ ಬಾರಿ ಗೆದ್ದಿದ್ದ ಮೊಳಕಾಲ್ಮೂರು ಕ್ಷೇತ್ರದಲ್ಲಿ ಈ ಬಾರಿ ಗೆಲ್ಲೋದು ಕಷ್ಟವಾಗಿರುವುದರಿಂದ ಶ್ರೀರಾಮುಲು ಸ್ವಕ್ಷೇತ್ರ ಬಳ್ಳಾರಿ ಗ್ರಾಮೀಣಾದತ್ತ ಮುಖ ಮಾಡಿದ್ದಾರೆ. ಸಂಡೂರು, ಕೂಡ್ಲಿಗಿಯತ್ತ ಕೂಡ ಶ್ರೀರಾಮುಲು ಚಿತ್ತ ಹರಿಸಿದ್ದರು. ಆದರೆ ಅಂತಿಮವಾಗಿ ಈಗ ಬಳ್ಳಾರಿ ಗ್ರಾಮೀಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಶ್ರೀರಾಮುಲು ಘೋಷಿಸಿದ್ದಾರೆ.
ಬಳ್ಳಾರಿ ಗ್ರಾಮೀಣಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಹಾಲಿ ಎಂಎಲ್ಎ ಬಿ.ನಾಗೇಂದ್ರ ಮೂಲತಃ ಆಂಧ್ರದ ಕರ್ನೂಲ್ ಜಿಲ್ಲೆಯ ಗುಮ್ಮನೂರು ಗ್ರಾಮದವರು. ಹೀಗಾಗಿ ಕ್ಷೇತ್ರದಲ್ಲಿ ನಾಗೇಂದ್ರ ಅವರನ್ನು ಗುಮ್ಮನೂರು ನಾಗೇಂದ್ರ ಅಂತಾನೇ ಜನರು ಕರೆಯುತ್ತಾರೆ. ಆದರೇ, ನಾಗೇಂದ್ರ ಓದಿದ್ದು, ಬೆಳೆದಿದ್ದು ಬಳ್ಳಾರಿಯಲ್ಲೇ. 2013ರಲ್ಲಿ ಶ್ರೀರಾಮುಲು ಜೊತೆಗೆ ಇದ್ದವರು ನಾಗೇಂದ್ರ. ಶ್ರೀರಾಮುಲು ಹಾಗೂ ಬಿ.ನಾಗೇಂದ್ರ ಇಬ್ಬರೂ ವಾಲ್ಮೀಕಿ ನಾಯಕ ಜನಾಂಗಕ್ಕೆ ಸೇರಿದವರು. ಶ್ರೀರಾಮುಲು ಸ್ಥಾಪಿಸಿದ್ದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದಲೇ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷ ಸೇರಿ 2018 ರಲ್ಲಿ ಬಳ್ಳಾರಿ ಗ್ರಾಮೀಣಾ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ.
ಬಿ.ನಾಗೇಂದ್ರ ಅನೇಕ ವರ್ಷಗಳಿಂದ ಅದಿರಿನ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬಿ.ನಾಗೇಂದ್ರ 2013 ರಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. ಬಳಿಕ ರಾಮುಲು ಜೊತೆಗೆ ಸೇರಿದ್ದರು. ಹೀಗಾಗಿ ನಾಗೇಂದ್ರ ನಾವು ಬೆಳೆಸಿದ ಹುಡುಗ ಅಂತ ಕೆಲವು ಕಡೆ ಶ್ರೀರಾಮುಲು ಹೇಳಿದ್ದು ಉಂಟು. ಆದರೆ ರಾಜಕೀಯದಲ್ಲಿ ಶಾಶ್ವತ ವೈರಿಗಳೂ ಇಲ್ಲ, ಮಿತ್ರರೂ ಇಲ್ಲ ಎಂಬಂತೆ, ಹಳೆಯ ಸ್ನೇಹಿತರೇ ಎದುರಾಳಿಗಳಾಗುತ್ತಿದ್ದಾರೆ.
ಬಿ.ನಾಗೇಂದ್ರ ಸೋದರ ಗುಮ್ಮನೂರು ಜಯರಾಮ್ ಆಂಧ್ರಪ್ರದೇಶದ ರಾಜಕಾರಣದಲ್ಲಿ ಸಕ್ರಿಯರಾಗಿದ್ದಾರೆ. ಬಳ್ಳಾರಿ ಗ್ರಾಮೀಣಾ ಕ್ಷೇತ್ರಕ್ಕೆ ಹೊಂದಿಕೊಂಡಂತೆ ಇರುವ ಆಂಧ್ರದ ಆಲೂರು ಕ್ಷೇತ್ರದಿಂದ ಆಂಧ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಆಂಧ್ರದ ಜಗನ್ ಮೋಹನ್ ರೆಡ್ಡಿ ಸರ್ಕಾರದಲ್ಲಿ ನಾಗೇಂದ್ರ ಸೋದರ ಗುಮ್ಮನೂರು ಜಯರಾಮ್ ಕಾರ್ಮಿಕ ಖಾತೆ ಮಂತ್ರಿಯಾಗಿದ್ದಾರೆ. ಅಕ್ಕಪಕ್ಕದ ಕ್ಷೇತ್ರಗಳಲ್ಲೇ ಸೋದರರಾದ ಗುಮ್ಮನೂರು ನಾಗೇಂದ್ರ ಹಾಗೂ ಗುಮ್ಮನೂರು ಜಯರಾಮ್ ಎಂಎಲ್‌ಎ ಗಳಾಗಿರೋದು ವಿಶೇಷ. ಈಗಾಗಲೇ ಬಿ.ನಾಗೇಂದ್ರ ತಾವು ಬಳ್ಳಾರಿ ಗ್ರಾಮೀಣಾ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗಲ್ಲ, ಬಳ್ಳಾರಿ ಗ್ರಾಮೀಣಾ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದಾರೆ.
ಬಳ್ಳಾರಿ ಗ್ರಾಮೀಣಾ ಕ್ಷೇತ್ರದ ವ್ಯಾಪ್ತಿಯಲ್ಲಿ ಗ್ರಾಮಗಳೂ ಇವೆ. ಜೊತೆಗೆ ಬಳ್ಳಾರಿ ಪಾಲಿಕೆಯ ವ್ಯಾಪ್ತಿಯ ಹನ್ನೆೊಂದು ವಾರ್ಡ್ ಗಳು ಕೂಡ ಸೇರುತ್ತಾವೆ. ಬಳ್ಳಾರಿ ನಗರದ ಕೌಲ್ ಬಜಾರ್ ಪ್ರದೇಶ ಕೂಡ ಬಳ್ಳಾರಿ ಗ್ರಾಮೀಣಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಕೌಲ್ ಬಜಾರ್ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮತಗಳಿವೆ. ಮುಸ್ಲಿಂ ಸಮುದಾಯದ ಮತಗಳೇ ಕಾಂಗ್ರೆಸ್ ಪಕ್ಷದ ಪ್ರಬಲ ವೋಟ್ ಬ್ಯಾಂಕ್. ಕ್ಷೇತ್ರದಲ್ಲಿ ವಾಲ್ಮೀಕಿ ನಾಯಕ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿವೆ. ವಾಲ್ಮೀಕಿ ನಾಯಕ ಸಮುದಾಯದ ಮತಗಳು ಸಮುದಾಯದ ಪ್ರಭಾವಿ ನಾಯಕ ಬಿ.ಶ್ರೀರಾಮುಲುಗೆ ಹೆಚ್ಚಿನ ಸಂಖ್ಯೆಯಲ್ಲಿ ಸಿಗುವ ಸಾಧ್ಯತೆ ಇದೆ. ವಾಲ್ಮೀಕಿ ನಾಯಕ ಸಮುದಾಯದ ಮತಗಳ ಪೈಕಿ ಶೇ. 60 ರಿಂದ 70 ರಷ್ಟು ಮತಗಳು ಶ್ರೀರಾಮುಲುಗೆ ಸಿಕ್ಕರೂ ಗೆಲುವು ಸುಲಭವಲ್ಲ. ಏಕೆಂದರೇ, ಈ ಕ್ಷೇತ್ರದಲ್ಲಿ ಕೌಲ್ ಬಜಾರ್ ಪ್ರದೇಶದಲ್ಲಿ 50 ಸಾವಿರದಷ್ಟು ಮುಸ್ಲಿಂ ಸಮುದಾಯದ ಮತಗಳಿವೆ. ಮುಸ್ಲಿಂ ಸಮುದಾಯದ ಮತಗಳು ಸಂಪೂರ್ಣವಾಗಿ ಕಾಂಗ್ರೆಸ್ ಪಾಲಾಗುತ್ತಾವೆ. ಇದರಿಂದಾಗಿ ಬಿಜೆಪಿಗೆ ಗ್ರಾಮೀಣಾ ಪ್ರದೇಶದಲ್ಲಿ ಮುನ್ನಡೆ ಪಡೆದರೂ, ನಗರ ಪ್ರದೇಶದಲ್ಲಿ ಮುನ್ನಡೆ ಪಡೆಯಲು ಸಾಧ್ಯವಾಗಲ್ಲ. 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬಿ.ನಾಗೇಂದ್ರ ಅವರಿಗೆ ಗ್ರಾಮೀಣಾ ಪ್ರದೇಶದಲ್ಲಿ ಹಿನ್ನಡೆಯಾಗಿತ್ತು.
ಆದರೆ ಕೌಲ್ ಬಜಾರ್ ಪ್ರದೇಶದ 11 ವಾರ್ಡ್ ಗಳಲ್ಲಿ ಬಾರಿ ಪ್ರಮಾಣದ ಮುನ್ನಡೆ ಸಿಕ್ಕಿತ್ತು. ಕ್ಷೇತ್ರದ ದಲಿತ ಹಾಗೂ ಹಿಂದುಳಿತ ಸಮುದಾಯದ ಮತಗಳು ಕಾಂಗ್ರೆಸ್ ಪಾಲಾಗುತ್ತಾವೆ. ಇದರಿಂದಾಗಿ 2,679 ಮತಗಳ ಅಂತರದಿಂದ ಬಿ.ನಾಗೇಂದ್ರ ಕಳೆದ ಬಾರಿ ಗೆದ್ದಿದ್ದರು. ಬಿಜೆಪಿ ಈ ಕ್ಷೇತ್ರದಲ್ಲಿ ಗೆಲ್ಲಬೇಕೆಂದರೇ, ಕೌಲ್ ಬಜಾರ್ ಪ್ರದೇಶದ ವ್ಯಾಪ್ತಿಯಲ್ಲಿ ಲೀಡ್ ಪಡೆಯೋದು ಅನಿವಾರ್ಯ. ಗ್ರಾಮೀಣಾ ಪ್ರದೇಶದಲ್ಲಿ ಸಮಬಲದ ಸ್ಪರ್ಧೆ ನಡೆದಾಗಲೂ ಕೌಲ್ ಬಜಾರ್ ಪ್ರದೇಶವೇ ಯಾರಿಗೆ ಗೆಲುವು ಅನ್ನೋದನ್ನು ನಿರ್ಧರಿಸುತ್ತೆ.
ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಡೆಸ್ಕ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post