ಬೆಂಗಳೂರು: ರೌಡಿಶೀಟರ್ ಸೈಲೆಂಟ್ ಸುನೀಲ್ ಸೈಲೆಂಟ್ ಆಗಿಯೇ ಬಿಜೆಪಿಯಲ್ಲಿ ಸದ್ದು ಮಾಡುತ್ತಿದ್ದರು. ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜ್ಯ ಬಿಜೆಪಿ ಮುಜುಗರದಿಂದ ತಪ್ಪಿಸಿಕೊಳ್ಳಲು ಮುಂದಾಗಿದೆ. ಕೊನೆಗೂ ಸೈಲೆಂಟ್ ಸುನೀಲ್‌ಗೆ ಬಿಜೆಪಿ ಪಕ್ಷದಿಂದ ಗೇಟ್‌ಪಾಸ್ ಸಿಕ್ಕಿದೆ.
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳುವ ನಿರೀಕ್ಷೆಯಲ್ಲಿದ್ದ ಸೈಲೆಂಟ್ ಸುನೀಲ್‌ಗೆ ಬಿಜೆಪಿ ಗೇಟ್‌ಪಾಸ್ ಕೊಟ್ಟಿದೆ. ಸೈಲೆಂಟ್ ಸುನೀಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ. ಸೈಲೆಂಟ್ ಸುನೀಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗುವುದು. ಅವರು ಪಾರ್ಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ ಅದಕ್ಕೂ ನಮಗೂ ಸಂಬಂಧವಿಲ್ಲ. ಹೀಗಂತಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ ಅವರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಸದ್ಯ ಬಿಜೆಪಿ ನಾಯಕರು ಸೈಲೆಂಟ್ ಸುನೀಲ್‌ಗೂ ಬಿಜೆಪಿಗೂ ಇದ್ದ ಲಿಂಕ್ ಅನ್ನೇ ಕಟ್ ಮಾಡಿದ್ದಾರೆ. ಈ ಮೂಲಕ ರಾಜಕೀಯದಲ್ಲಿ ಬೆಳೆಯೋ ಕನಸು ಕಂಡಿದ್ದ ಸೈಲೆಂಟ್ ಸುನೀಲ್‌ಗೆ ಹಿನ್ನಡೆಯಾಗಿದೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಸೈಲೆಂಟ್ ಸುನೀಲ್, ಶಾಸಕ ಜಮೀರ್ ಅಹ್ಮದ್ ವಿರುದ್ಧ ಸ್ಪರ್ಧಿಸಲು ತಯಾರಿ ನಡೆಸಿದ್ದರು. ಆದರೆ ಬಿಜೆಪಿ ಪಕ್ಷ ಸೈಲೆಂಟ್ ಸುನೀಲ್‌ನಿಂದ ಅಂತರ ಕಾಯ್ದುಕೊಂಡಿದೆ. ಬಿಜೆಪಿಯ ಈ ನಿರ್ಧಾರದಿಂದ ಜಮೀರ್ ಅಹ್ಮದ್‌ಗೆ ರಿಲೀಫ್ ಸಿಕ್ಕಂತಾಗಿದೆ.
ಇದನ್ನೂ ಓದಿ: ಸುಮಲತಾ ಅಂಬರೀಶ್ ಬೆಂಬಲದ ಬೆನ್ನಲ್ಲೇ ಬಿಜೆಪಿಗೆ ಮತ್ತೊಬ್ಬ ಪ್ರಭಾವಿ ನಾಯಕ?
ಇತ್ತೀಚೆಗೆ ಚಾಮರಾಜಪೇಟೆಯ ಸುತ್ತಾಮುತ್ತ ಸೈಲೆಂಟ್ ಸುನೀಲ್ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳು ಹಾರಾಡುತ್ತಿದ್ದವು. ಸೈಲೆಂಟ್ ಸುನೀಲ್ ಆಯೋಜಿಸುತ್ತಿದ್ದ ಸಭೆ, ಸಮಾರಂಭಗಳಲ್ಲಿ ಬಿಜೆಪಿ ನಾಯಕರು ಭಾಗವಹಿಸಿದ್ದರು. ಸೈಲೆಂಟ್ ಸುನೀಲ್ ಅಭಿಮಾನಿಗಳು ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ಬಿಜೆಪಿ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ ಮೋಹನ್ ಭಾಗವಹಿಸಿದ್ದು ಸಾಕಷ್ಟು ಚರ್ಚೆಯಾಗಿತ್ತು. ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ಮುಜುಗರದಿಂದ ತಪ್ಪಿಸಿಕೊಳ್ಳಲು ಬಿಜೆಪಿ ನಾಯಕರು ಸೈಲೆಂಟ್ ಸುನೀಲ್‌ಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post