ಬೆಂಗಳೂರು: ಟಿಪ್ಪು ಸುಲ್ತಾನನನ್ನು ಹೊಡೆದು ಹಾಕಿದ್ದಾರೆ ಎನ್ನಲಾದ ಉರಿಗೌಡ, ನಂಜೇಗೌಡರ ಸಿನಿಮಾ ವಿವಾದ ಮತ್ತೊಂದು ಹಂತಕ್ಕೆ ಹೋಗಿದೆ. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿದ್ದು, ನಾಳೆ ಮಹತ್ವದ ನಿರ್ಧಾರ ಹೊರ ಬೀಳುವ ಸಾಧ್ಯತೆಯಿದೆ.
ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಉರಿಗೌಡ, ನಂಜೇಗೌಡರ ಚರ್ಚೆ ತಾರಕಕ್ಕೇರಿದೆ. ರಾಜ್ಯ ಬಿಜೆಪಿಯ ನಾಯಕರು ಹಳೇ ಮೈಸೂರು ಭಾಗದಲ್ಲಿ ಉರಿಗೌಡ, ನಂಜೇಗೌಡರನ್ನೇ ಬಳಸಿಕೊಂಡು ಮತಬೇಟೆಗೂ ಇಳಿದಿದ್ದಾರೆ. ಇತಿಹಾಸದಲ್ಲಿ ಉರಿಗೌಡ, ನಂಜೇಗೌಡ ಇದ್ದರು ಎನ್ನುವುದಕ್ಕೆ ದಾಖಲೆ ಒದಗಿಸುತ್ತಿರುವ ಬಿಜೆಪಿ, ಈ ಪಾತ್ರದ ಕುರಿತಂತೆ ಸಿನಿಮಾ ಮಾಡಲು ಮುಂದಾಗಿದೆ. ನಿರ್ಮಾಪಕ, ಸಚಿವ ಮುನಿರತ್ನ ಉರಿಗೌಡ, ನಂಜೇಗೌಡ ಸಿನಿಮಾ ತಯಾರಿಸಲು ಟೈಟಲ್ ಕೂಡ ರಿಜಿಸ್ಟರ್ ಮಾಡಿದ್ದಾರೆ.
ಬಿಜೆಪಿ ನಾಯಕರ ಉರಿಗೌಡ, ನಂಜೇಗೌಡ ಸಿನಿಮಾ ತಂತ್ರಗಾರಿಕೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕೆಂಡಕಾರಿದ್ದರು. ಉರಿಗೌಡ, ನಂಜೇಗೌಡ ಎಂಬ ಕಲ್ಪಿತ ಒಕ್ಕಲಿಗ ಹೆಸರುಗಳ ಸೃಷ್ಟಿ, ಸಿನಿಮಾ ಮಾಡುವ ದುರುಳ ಐಡಿಯಾ, ಒಕ್ಕಲಿಗರ ಮೇಲೆ BJP ಬೀರುತ್ತಿರುವ ವಕ್ರದೃಷ್ಟಿ. ಇದೆಲ್ಲವೂ ಒಕ್ಕಲಿಗರನ್ನು ರಾಜಕೀಯವಾಗಿ ಮುಗಿಸಿಬಿಡುವ ಬಿಜೆಪಿ ರಕ್ಕಸ ಹಿಡೆನ್ ಅಜೆಂಡಾ ಅಲ್ಲದೆ ಮತ್ತೇನೂ ಅಲ್ಲ ಎಂದು ಹೆಚ್‌ಡಿಕೆ ತರಾಟೆ ತೆಗೆದುಕೊಂಡಿದ್ದರು.
ಇದನ್ನೂ ಓದಿ: ಸಿನಿಮಾ ಆಗಲಿದೆ ಉರಿಗೌಡ-ನಂಜೇಗೌಡ ಕಥೆ; ನಿರ್ದೇಶನ, ನಿರ್ಮಾಣ ಮಾಡೋದು ಯಾರು ಗೊತ್ತಾ?
ಇಷ್ಟೆಲ್ಲಾ ವಿವಾದ, ರಾಜಕೀಯ ವಾಗ್ಯುದ್ಧದ ಬಳಿಕ ಉರಿಗೌಡ, ನಂಜೇಗೌಡ ಸಿನಿಮಾ ವಿವಾದ ನಿರ್ಮಲಾನಂದನಾಥ ಸ್ವಾಮೀಜಿ ಅಂಗಳ ತಲುಪಿದೆ. ಸಚಿವ ಮುನಿರತ್ನ ಅವರನ್ನು ನಾಳೆ ಬೆಳಗ್ಗೆ ತಮ್ಮನ್ನು ಭೇಟಿ ಮಾಡುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಖುದ್ದು ಸಚಿವ ಮುನಿರತ್ನ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಈಗಾಗಲೇ ಸಚಿವ ಆರ್.ಅಶೋಕ್, ಅಶ್ವಥ್ ನಾರಾಯಣ ಅವರು ಉರಿಗೌಡ-ನಂಜೇಗೌಡರ ಇತಿಹಾಸದ ಬಗ್ಗೆ ಮಾತಾಡಿದ್ದಾರೆ. ನಾನು ಒಬ್ಬ ಸಿನಿಮಾ ನಿರ್ಮಾಪಕನಾಗಿ ಅವರ ಚಿತ್ರ ಮಾಡೋಣ ಅಂತಿದ್ದೀನಿ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ಮಾಡಲು ನನ್ನನ್ನು ಕರೆದಿದ್ದಾರೆ. ನಾಳೆ ಬೆಳಗ್ಗೆ ಶ್ರೀಗಳ ಭೇಟಿ ಮಾಡುತ್ತಿದ್ದೇನೆ. ಇತಿಹಾಸದ ಬಗ್ಗೆ ಮಾತಾಡೋರು ಅದಕ್ಕೆ ಜಾತಿ ಬಣ್ಣ ಕಟ್ಟಬಾರದು. ಸಿನಿಮಾ ಬಗ್ಗೆ ಸದ್ಯ ಚರ್ಚೆಯಲ್ಲಿದೆ. ನಾಳೆ ಬೆಳಗ್ಗೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಜೊತೆ ಚರ್ಚಿಸಿದ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post