ಖಲಿಸ್ತಾನ್ ಪರ ಸಹಾನುಭೂತಿ ಹೊಂದಿದ್ದ ಮೂಲಭೂತವಾದಿ ಅಮೃತ್‌ಪಾಲ್ ಸಿಂಗ್ ವಿರುದ್ಧ ಆಪರೇಷನ್ ಶುರುವಾಗಿದೆ. ಅಮೃತ್ಪಾಲ್ಗಾಗಿ ತೀವ್ರ ಹುಡುಕಾಟ ನಡೆದಿದ್ದು, ಪಂಜಾಬ್ನಾದ್ಯಂತ ಹೈಅಲರ್ಟ್ ಘೊಷಣೆ ಆಗಿದೆ. ಅಲ್ಲದೆ, ರಾಜ್ಯದಲ್ಲಿ ಇಂಟರ್‌ನೆಟ್ ಸೇವೆ ಸ್ಥಗಿತವಾಗಿದೆ.
ಪಂಜಾಬ್ ಸದ್ಯ 80ರ ದಶಕದ ದಿನಗಳನ್ನ ನೆನಪಿಸ್ತಿದೆ. ಭಿಂದ್ರನವಾಲೆ ಬಳಿಕ ಸಿಖ್ರ ಊರಲ್ಲಿ ಖಲಿಸ್ತಾನ ಪರ ಪ್ರತ್ಯೇಕತಾವಾದಿ ಚಳವಳಿ ಮರುಜನ್ಮ ಸಿಗ್ತಿದೆ. ಈ ಬೆನ್ನಲ್ಲೆ ಎಚ್ಚೆತ್ತಿರುವ ಸರ್ಕಾರ, ಇಲಿ, ಹುಲಿಯಾಗುವ ಮುನ್ನವೇ ಬೋನಿಟ್ಟು ಕಾದಿದೆ. ಅಶಾಂತಿಯ ವಾತಾವರಣ ಸೃಷ್ಟಿಸ್ತಿರುವ ಮತ್ತು ಸರ್ಕಾರಕ್ಕೆ ಸವಾಲೊಡ್ಡಿದ ಅಮೃತ್‌ಪಾಲ್ ಸಿಂಗ್ಗಾಗಿ ಬಹುದೊಡ್ಡ ಕಾರ್ಯಾಚರಣೆ ಶುರುವಾಗಿದೆ.
ಅಮೃತ್‌ಪಾಲ್ ಸಿಂಗ್ ಬಂಧನಕ್ಕಾಗಿ ತೀವ್ರ ಹುಡುಕಾಟ!
ಹೌದು ಪಂಜಾಬ್‌ನಲ್ಲಿ ಪರಿಸ್ಥಿತಿ ವಿಷಮಿಸ್ತಿದೆ. ಕೋಮು ಸಂಘರ್ಷ ಹರಡಲು ಯತ್ನಿಸಿದ ಆರೋಪದಲ್ಲಿ ಖಲಿಸ್ತಾನ್ ಪರ ಸಹಾನುಭೂತಿ ಹೊಂದಿರುವ ಸಿಖ್ ಮೂಲಭೂತವಾದಿ ಧರ್ಮ ಪ್ರಚಾರಕ ಅಮೃತ್‌ಪಾಲ್ ಸಿಂಗ್ ವಿರುದ್ಧ ಭಾರೀ ಕಾರ್ಯಾಚರಣೆ ಆರಂಭವಾಗಿದೆ. ಅಮೃತ್‌ಪಾಲ್ ಬಂಧನಕ್ಕೆ ಹುಡುಕಾಟ ನಡೆದಿದ್ದು, ಅವರ 78 ಬೆಂಬಲಿಗರನ್ನ ಬಂಧಿಸಲಾಗಿದೆ. ಬಂಧಿತರ ಬಳಿ ರೈಫಲ್, ರಿವಾಲ್ವರ್, ಸಜೀವ ಗುಂಡುಗಳನ್ನ ಜಪ್ತಿ ಮಾಡಲಾಗಿದೆ.
ಸ್ಥಳದಿಂದ ದಿಕ್ಕೆಟ್ಟು ಓಡಿದ ಅಮೃತ್‌ಪಾಲ್
ಸಿಂಗ್ ಪತ್ತೆ ಹಚ್ಚುವ ಕಾರ್ಯಾಚರಣೆ ನಡೆಯುತ್ತಿದೆ. ಜಲಂಧರ್ ಜಿಲ್ಲೆ ಮೆಹತ್‌ಪುರ ಗ್ರಾಮದಲ್ಲಿ ಅಮೃತ್‌ಪಾಲ್ ಹಾಗೂ ಅವರ ಬೆಂಬಲಿಗರ ವಾಹನವನ್ನ ಪೊಲೀಸರು ಬೆನ್ನತ್ತಿದ್ದರು. ಇನ್ನೇನು ಸಿಕ್ಕೇಬಿಟ್ಟರು ಎನ್ನುವಷ್ಟರಲ್ಲಿ ತಪ್ಪಿಸಿಕೊಂಡಿದ್ದಾರೆ. ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ವಿಡಿಯೋ ಬಿಡುಗಡೆ ಆಗಿದ್ದು, ಪೊಲೀಸರು ತಮ್ಮ ಬೆನ್ನು ಹತ್ತಿದ್ದಾರೆ ಎಂಬ ಆಡಿಯೋ ಕೇಳಿಸಿದೆ.
ಅಮೃತ್ ಪಾಲ್ ಹುಟ್ಟೂರಲ್ಲಿ ಬಿಗಿ ಭದ್ರತೆ
ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲಿ ಇವತ್ತು ಮಧ್ಯಾಹ್ನ 12 ಗಂಟೆವರೆಗೆ ಇಂಟರ್‌ನೆಟ್ ಸೇವೆ ಸ್ಥಗಿತ ಮಾಡಲಾಗಿದೆ. ಎಸ್‌ಎಂಎಸ್ ಸೇವೆಯನ್ನು ರದ್ದು ಮಾಡಿ ರಾಜ್ಯ ಗೃಹ ಇಲಾಖೆ ಆದೇಶಿಸಿದೆ. ಇನ್ನು, ಅಮೃತ್‌ಪಾಲ್ ಹುಟ್ಟೂರು ಜಲ್ಲಪುರಖೇರದ ಸಮೀಪ ಭದ್ರತೆ ಹೆಚ್ಚಿಸಲಾಗಿದೆ. ಇಡೀ ಊರಿನಲ್ಲಿ ಭದ್ರತಾ ಪಡೆಗಳನ್ನ ನಿಯೋಜಿಸಲಾಗಿದೆ.
ಸಿಎಂ ಮಾನ್ ಬೆಂಬಲಕ್ಕೆ ಕೇಂದ್ರಿಯ ಪಡೆ ಆಗಮನ
ಇನ್ನು, ಕೇಂದ್ರ ಸರ್ಕಾರ ಈ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಪಂಜಾಬ್‌ಗೆ ವಿಶೇಷ ಪಡೆ ರವಾನಿಸಿದೆ. ಸಿಎಂ ಭಗವಂತ್ ಮಾನ್ ಮನವಿ ಮೇರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, 1,900 ಸಿಆರ್‌ಪಿಎಫ್ ಸಿಬ್ಬಂದಿ, ಗಲಭೆ ತಡೆಯಲು ಆರ್‌ಎಎಫ್ ತಂಡ ಈಗಾಗಲೇ ಪಂಜಾಬ್‌ನಲ್ಲಿ ನಿಯೋಜನೆ ಆಗಿದೆ. ಜೊತೆಗೆ 18 ಕೇಂದ್ರೀಯ ತುಕಡಿಗಳು ಕೂಡ ಪಂಜಾಬ್‌ಗೆ ರವಾನೆ ಆಗಿದೆ. ಖಲಿಸ್ತಾನ್ ಪರ ಮತ್ತೆ ಮೊಳಕೆಯೊಡೆಯುತ್ತಿದ್ದ ಪ್ರತ್ಯೇಕತಾ ಕೂಗಿಗೆ ಆರಂಭದಲ್ಲೇ ಚಿವುಟುವ ಕಾರ್ಯ ಸಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post