ಹಳೇ ಮೈಸೂರು ಭಾಗದಲ್ಲಿ ಬಲ ಹೆಚ್ಚಿಸಿಕೊಳ್ಳಲು ಯತ್ನಿಸ್ತಿರುವ ಬಿಜೆಪಿ ಹಲವು ನಾಯಕರನ್ನು ಸೆಳೆಯುತ್ತಿದೆ. ಮಂಡ್ಯದಲ್ಲಿ ಸುಮಲತಾ ಬಳಿಕ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರಿಗೆ ಬಿಜೆಪಿ ಗಾಳ ಹಾಕಿದೆ. ಬಿಜೆಪಿ ಸೇರ್ಪಡೆ ಆಗುವ ಬಗ್ಗೆ ಶಿವರಾಮೇಗೌಡ ಘೋಷಣೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಜೆಡಿಎಸ್ನಿಂದ ಉಚ್ಛಾಟನೆಗೊಂಡಿದ್ದ ಮಂಡ್ಯದ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಇದೀಗ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಮೊದಲು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಘಳಿಗೆಯಲ್ಲಿ ಎಲ್ಆರ್ಎಸ್ ಸೆಳೆಯುವಲ್ಲಿ ಬಿಜೆಪಿ ಸಕ್ಸಸ್ ಆಗಿದೆ.
ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಮತ್ತೆ ಬಿಜೆಪಿ ಸೇರ್ಪಡೆ ಆಗುವ ಘೋಷಣೆ ಮಾಡಿದ್ದಾರೆ. ಬೆಂಗಳೂರಲ್ಲಿ ನೆಲೆಸಿರುವ ನಾಗಮಂಗಲ ಭಾಗದ ಸಾವಿರಾರು ಮತದಾರರ ಓಲೈಕೆಗಾಗಿ ಇವತ್ತು ನಾಯಂಡಹಳ್ಳಿಯ ನಂದಿ ಲಿರಿಕ್ಸ್ ಮೈದಾನದಲ್ಲಿ ಬೃಹತ್ ಸ್ವಾಭಿಮಾನಿ ಸಮಾವೇಶ ನಡೆಸಿದ್ರು. ಕಾರ್ಯಕ್ರಮಕ್ಕೂ ಮುನ್ನ ಶಿವರಾಮೇಗೌಡ, ಪುತ್ರ ಚೇತನ್ಗೌಡ ಬೆಂಬಲಿಗರ ಜೊತೆ ರೋಡ್ ಶೋ ನಡೆಸಿದ್ರು. ನೂರಾರು ಕಾರ್ಯಕರ್ತರು, ಆಟೋ ಚಾಲಕರು, ಬೆಂಬಲಿಗರು ರೋಡ್ ಶೋನಲ್ಲಿ ಭಾಗಿಯಾಗಿದ್ದರು. ವಿವಿಧ ಕಲಾತಂಡಗಳು ರೋಡ್ ಶೋಗೆ ಮೆರುಗು ನೀಡಿದ್ದವು. ಶಿವರಾಮೇಗೌಡರನ್ನು ಹೊತ್ತು ಕಾರ್ಯಕ್ರಮಕ್ಕೆ ಕರೆತಂದ ಬೆಂಬಲಿಗರಿಂದ ಹರ್ಷೋದ್ಘಾರ ಮೊಳಗಿತ್ತು.
ಸಂಸದೆ ಸುಮಲತಾ ಬಳಿಕ ಎಲ್ಆರ್ಎಸ್ ಸೆಳೆದ ಬಿಜೆಪಿ!
ಬೆಂಬಲಿಗರ ಜೊತೆ ಎಲ್.ಆರ್.ಶಿವರಾಮೇಗೌಡ ದೀಪಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ರು. ಕಾರ್ಯಕ್ರಮದಲ್ಲಿ ಸಚಿವ ಮುನಿರತ್ನ, ಎಲ್.ಆರ್.ಶಿವರಾಮೇಗೌಡ, ಪುತ್ರ ಚೇತನ್ ಗೌಡ ಸೇರಿ ನೂರಾರು ಬೆಂಬಲಿಗರು ಭಾಗಿಯಾಗಿದ್ದರು. ಕಾರ್ಯಕರ್ತರು ಬೃಹತ್ ಹೂವಿನ ಹಾರ ಹಾಕುವ ಮೂಲಕ ಸಚಿವ ಮುನಿರತ್ನ ಹಾಗೂ ಶಿವರಾಮೇಗೌಡರನ್ನು ಸನ್ಮಾನಿಸಿದ್ರು. ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಎಲ್.ಆರ್.ಶಿವರಾಮೇಗೌಡ ಮೂರ್ನಾಲ್ಕು ದಿನದಲ್ಲಿ ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆ ಆಗಲಿದ್ದು ಈ ಬಾರಿ ಕ್ಷೇತ್ರದ ಜನತೆ ನಮಗೆ ಆಶೀರ್ವಾದ ಮಾಡಬೇಕು ಅಂತ ಮನವಿ ಮಾಡಿದ್ರು.
ಮಾಜಿ ಸಂಸದ ಶಿವರಾಮೇಗೌಡರನ್ನು ಬಿಜೆಪಿಗೆ ಸ್ವಾಗತಿಸಿದ ಸಚಿವ ಮುನಿರತ್ನ, ಎಲ್.ಆರ್.ಶಿವರಾಮೇಗೌಡರನ್ನು ಕೊಂಡಾಡಿದ್ರು. ಕಾರ್ಯಕ್ರಮಕ್ಕೆ ಬಂದಿದ್ದ ಸಾವಿರಾರು ಜನರಿಗೆ ಶಿವರಾಮೇಗೌಡ ವಿಶೇಷ ಬಾಡೂಟ ಕೂಡ ಆಯೋಜನೆ ಮಾಡಿದ್ದರು. ಇನ್ನು ಕೆಲ ತಿಂಗಳ ಹಿಂದೆ ಬಿಜೆಪಿ ಸೇರಿದ್ದ ಫೈಟರ್ ರವಿಗೆ ನಾಗಮಂಗಲ ಟಿಕೆಟ್ ಸಿಗಲಿದೆ ಎನ್ನಲಾಗ್ತಿತ್ತು. ಮೊನ್ನೆ ಪ್ರಧಾನಿ ಮೋದಿ ಮಂಡ್ಯಕ್ಕೆ ಬಂದಿದ್ದಾಗ ರವಿ ಕೂಡ ಕಾಣಿಸಿಕೊಂಡಿದ್ದರು. ಫೈಟರ್ ರವಿ ಸೇರ್ಪಡೆಗೆ ವಿಪಕ್ಷಗಳು ಬಿಜೆಪಿ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಸರಣಿ ವಾಗ್ದಾಳಿ ಮೂಲಕ ಬಿಜೆಪಿಗೆ ಇರಿಸು ಮುರಿಸು ತಂದಿದ್ದವು ಹೀಗಾಗಿ ವಿರೋಧಿಗಳ ಬಾಯಿ ಮುಚ್ಚಿಸಲು ಶಿವರಾಮೇಗೌಡಗೆ ಟಿಕೆಟ್ ಕೊಡ್ತಿದೆ ಅನ್ನೋ ಮಾತು ಕೇಳಿ ಬಂದಿದೆ. ಅದೇನೇ ಇರಲಿ ಮಂಡ್ಯದಲ್ಲಿ ಸುಮಲತಾ ಬಳಿಕ ಎಲ್.ಆರ್.ಶಿವರಾಮೇಗೌಡ ಬೆಂಬಲದಿಂದ ಮಂಡ್ಯದಲ್ಲಿ ಬಿಜೆಪಿಗೆ ನೂರಾನೆ ಬಲ ಬಂದಿರೋದಂತೂ ಸತ್ಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post