ಬೆಂಗಳೂರು: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಗೆ ದಿನಗಣನೆ ಆರಂಭವಾಗಿದೆ. ರಾಜ್ಯದ ಪ್ರಸಕ್ತ ಇರುವ 15ನೇ ವಿಧಾನಸಭೆಯ ಅವಧಿ ಮೇ 24 ಕ್ಕೆ ಮುಕ್ತಾಯವಾಗುತ್ತಿದೆ. ಹೀಗಾಗಿ ಮೇ 24 ರೊಳಗೆ ಮುಂದಿನ 16ನೇ ವಿಧಾನಸಭೆಗೆ ಚುನಾವಣೆ ನಡೆಸಬೇಕಾದ ಹೊಣೆಗಾರಿಕೆ ಕೇಂದ್ರ ಚುನಾವಣಾ ಆಯೋಗದ ಮೇಲಿದೆ. ಇದಕ್ಕಾಗಿ ಕೇಂದ್ರ ಚುನಾವಣಾ ಆಯೋಗ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಉಳಿದ ಇಬ್ಬರು ಆಯುಕ್ತರು ಬೆಂಗಳೂರಿಗೆ ಭೇಟಿ ನೀಡಿ ಚುನಾವಣಾ ಸಿದ್ದತೆಯ ಸಭೆಗಳನ್ನ ಈಗಾಗಲೇ ನಡೆಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಏಪ್ರಿಲ್ 15ಕ್ಕೆ ಮುಗಿಯುತ್ತಾವೆ. ಇನ್ನೂ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾರ್ಚ್ 29ಕ್ಕೆ ಮುಗಿಯಲಿವೆ. ಹೀಗಾಗಿ ಚುನಾವಣೆ ಘೋಷಣೆಗೆ ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಸಿದ್ದತೆ ನಡೆಸುತ್ತಿವೆ. ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಮೀನಾ ಅವರು, ಈಗ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಿರುವ ಸೂಚನೆಯು ಚುನಾವಣಾ ಘೋಷಣೆಯ ದಿನಾಂಕದ ಸುಳಿವು ಅನ್ನು ನೀಡುತ್ತಿದೆ. ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಸಿದ್ದತೆಯ ಸಭೆಯನ್ನು ಮನೋಜ್ ಕುಮಾರ್ ಮೀನಾ ನಡೆಸಿದ್ದಾರೆ. ಈ ಸಭೆಯಲ್ಲಿ ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು.
ಚುನಾವಣೆ ಘೋಷಣೆ ಯಾವಾಗ?
ಮಾರ್ಚ್ 24ರೊಳಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಹಾಕಿರುವ ಪ್ಲೆಕ್ಸ್, ಕಟೌಟ್, ಬ್ಯಾನರ್ ಗಳನ್ನು ತೆರವುಗೊಳಿಸಲು ಕಟ್ಟುನಿಟ್ಟಾದ ಸೂಚನೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ. ಅಂದರೇ, ರಾಜ್ಯದಲ್ಲಿ ಮಾರ್ಚ್ 25ರ ಬಳಿಕ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆಯಾಗುತ್ತೆ ಎಂಬ ಪರೋಕ್ಷ ಸುಳಿವು ಅನ್ನು ಟ್ವೀಟ್ ಮೂಲಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ನೀಡಿದ್ದಾರೆ.
ಸದ್ಯದಲ್ಲೇ ಮಾರ್ಚ್ 25 ರಂದು ಇಲ್ಲವೇ ನಂತರದ ಒಂದೆರೆಡು ದಿನಗಳಲ್ಲೇ ರಾಜ್ಯ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಬಹುದು ಎಂಬ ಸುಳಿವು ಈ ಟ್ವೀಟ್ ನಲ್ಲಿದೆ. ಮಾರ್ಚ್ 24ರ ಶುಕ್ರವಾರ ರಾಜ್ಯ ಕ್ಯಾಬಿನೆಟ್ ಸಭೆ ನಿಗದಿಯಾಗಿದೆ. ಇದೇ ಬಹುತೇಕ ಸಿಎಂ ಬಸವರಾಜ ಬೊಮ್ಮಾಯಿ ಸರ್ಕಾರದ ಕೊನೆಯ ಕ್ಯಾಬಿನೆಟ್ ಸಭೆಯಾಗಬಹುದು.
ಇನ್ನು, ಮಾರ್ಚ್ 25 ರಂದು ಬೆಂಗಳೂರು ಹಾಗೂ ದಾವಣಗೆರೆಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಮಾರ್ಚ್ 26ರ ಬಳಿಕ ಕೇಂದ್ರ ಚುನಾವಣಾ ಆಯೋಗ ರಾಜ್ಯ ವಿಧಾನಸಭೆಗೆ ಮುಹೂರ್ತ ಘೋಷಿಸಬಹುದು. ಚುನಾವಣೆ ಘೋಷಣೆಯಾದ ಬಳಿಕ ನಾಮಪತ್ರ ಸಲ್ಲಿಕೆ, ಮತದಾನ, ಮತಎಣಿಕೆ ಪ್ರಕ್ರಿಯೆ ಮುಗಿಯಲು ಒಂದೂವರೆ ತಿಂಗಳ ಕಾಲಾವಕಾಶ ಬೇಕು. ಹೀಗಾಗಿ ಏಪ್ರಿಲ್ 10 -15 ರೊಳಗೆ ಎಲ್ಲ ಪ್ರಕ್ರಿಯೆ ಮುಗಿಸಲು ಈ ತಿಂಗಳಾಂತ್ಯದೊಳಗೆ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಿಸುವ ಸುಳಿವು ಅನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿ ಟ್ವೀಟ್ ಮೂಲಕ ನೀಡಿದ್ದಾರೆ.
ಚುನಾವಣಾ ಘೋಷಣೆಯಾದ ಕ್ಷಣದಿಂದಲೇ ರಾಜ್ಯದಲ್ಲಿ ಮಾದರಿ ನೀತಿಸಂಹಿತೆ ಜಾರಿಯಾಗಲಿದೆ. ನೀತಿ ಸಂಹಿತೆ ಜಾರಿಯಾದ ಬಳಿಕ ರಾಜ್ಯ ಸರ್ಕಾರ ಯಾವುದೇ ಹೊಸ ಯೋಜನೆ ಘೋಷಿಸುವಂತಿಲ್ಲ. ಜನರಿಗೆ ಸರ್ಕಾರದಿಂದ ಹೊಸ ಭರವಸೆ ನೀಡುವಂತಿಲ್ಲ. ತುರ್ತು, ದೈನಂದಿನ ಸಂಬಳ ಸಾರಿಗೆ ಹೊರತುಪಡಿಸಿ ಉಳಿದ ಕಾರ್ಯಗಳ ಹಣ ಬಿಡುಗಡೆಗೂ ಬ್ರೇಕ್ ಬೀಳಲಿದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯಾಷನಲ್ ಬ್ಯುರೋ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಮ್ಮ ಸಲಹೆ, ಸೂಚನೆ ಹಾಗೂ ಅಭಿಪ್ರಾಯಗಳಿಗೆ ಸಂಪರ್ಕಿಸಿ
[email protected]
Discussion about this post