/newsfirstlive-kannada/media/post_attachments/wp-content/uploads/2024/11/BOY-2.jpg)
ಹೆತ್ತ ಅಪ್ಪ-ಅಮ್ಮ ಹುಟ್ಟಿಸಿದ ತಪ್ಪಿಗಾದರೂ ಊಟ ಹಾಕಿದ್ದರೆ ಅದು ಬೇರೆಯದ್ದೇ ಮಾತಾಗಿತ್ತು. ಸರಿಯಾಗಿ ಅನ್ನ ನೀಡಲಿಲ್ಲ, ಹೊಟ್ಟೆ ತುಂಬಲಿಲ್ಲ. ಹೋಗಲಿ ನಿದ್ದೆನಾದರೂ ಮಾಡೋಣ ಅಂತಾ ಮಲಗಿದರೆ ಅದೇ ಹಸಿವು ತಾಳ ಹಾಕುತ್ತಿತ್ತು. ಒಂದು ದಿನ, ಒಂದು ವಾರ, ಒಂದು ತಿಂಗಳು ಅದೇ ಹಾಡಾಗಿದ್ದರೂ ಬಹುಶಃ ಸುಮ್ಮನೆ ಇರುತ್ತಿದ್ದನೋ ಏನೋ. ಆದರೆ, ಈ ಬಾಲಕನಿಗೆ ಪ್ರತಿ ದಿನವೂ ಮನೆ ಅನ್ನೋದು ನರಕವಾಗಿಬಿಟ್ಟಿತ್ತು. ಅದಕ್ಕೆ ಉಪಾಯ ಕಂಡುಕೊಳ್ಳಲು ಹೊರಟಿದ್ದ ಬಾಲಕ ತುಳಿದಿದ್ದ ಹಾದಿ ಮಾತ್ರ..
ಕುಡುಕ ತಂದೆ, ಅಮ್ಮ ಬಡವಿ..
ಬೆಂಗಳೂರಿನ ಶಂಕರಪುರ ಪೊಲೀಸ್ ಠಾಣೆಯ ಇನ್ಸ್​​ಪೆಕ್ಟರ್ ಉದಯ ರವಿ ಅವರ ಮಾನವೀಯ ಸೇವೆಯಿಂದ ವಿಶೇಷ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಆರು ದಿನದ ಹಿಂದೆ ರಾತ್ರಿ ಶಂಕರಪುರ ಪೊಲೀಸ್ ಠಾಣಾ ವ್ಯಾಪ್ತಿಯ ಫುಟ್​ಪಾತ್ ಒಂದರ ಬಳಿ ಬಾಲಕನೊಬ್ಬ ನಿಂತಿದ್ದ. ಮಧ್ಯರಾತ್ರಿ ಬಾಲಕನ ಕಂಡ ಉದಯ್ ಶಂಕರ್, ಯಾರು ನೀನು ಎಂದು ವಿಚಾರಿಸಿದ್ದಾರೆ. ಮಾತನಾಡಲು ತಡಬಡಿಸಿದ ಬಾಲಕನನ್ನು ಬಿಡಿಸಿ ಕೇಳಿದ್ದಾರೆ. ಆಗ ‘ತಾಯಿ, ಅಪ್ಪ ಯಾರೆಂದು ಗೊತ್ತಿಲ್ಲ. ಊರು ಕೂಡ ಗೊತ್ತಿಲ್ಲ’ ಎಂದಿದ್ದ.
ಇದನ್ನೂ ಓದಿ:ಅಪರೂಪ; ಏಕಕಾಲದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಹಸು
/newsfirstlive-kannada/media/post_attachments/wp-content/uploads/2024/11/BOY-3.jpg)
ಬಾಲಕನ ರಕ್ಷಣೆ ಮಾಡಿದ ಪೊಲೀಸರು, ‘ಬಾಲ ಮಂದಿರ’ಕ್ಕೆ ಬಿಟ್ಟು ಬಂದಿದ್ದರು. ಕೊನೆಗೆ ಪೋಷಕರ ಪತ್ತೆಗೆ ಪತ್ರಿಕಾ ಪ್ರಕಟಣೆ ಹೊರಡಿಸಿದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಪೋಷಕರು ಅತ್ತಿಬೆಲೆ ಠಾಣೆಗೆ ಓಡೋಡಿ ಬಂದಿದ್ದಾರೆ. ವಿಚಾರಣೆ ನಡೆಸಿದಾಗ ಬಾಲಕನ ಕುರಿತ ಅಸಲಿ ಸತ್ಯ ಬೆಳಕಿಗೆ ಬಂದಿದೆ.
ಬಾಲಕ ಯಾಕೆ ಸುಳ್ಳು ಹೇಳಿದ?
‘ಅಪ್ಪ-ಅಮ್ಮ ಯಾರೆಂದು ಗೊತ್ತಿಲ್ಲ. ನನ್ನ ಊರು ಕೂಡ ಯಾವುದೆಂದು ತಿಳಿದಿಲ್ಲ’ ಎಂದು ಪೊಲೀಸ್ ಅಧಿಕಾರಿ ಉದಯ್ ರವಿ ಜೊತೆ ಬಾಲಕ ಸುಳ್ಳು ಹೇಳಿದ್ದ. ಅದಕ್ಕೆ ಕಾರಣ.. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಅಮ್ಮ ಕೂಲಿ ಮಾಡಿ ಸಂಸಾರ ನಡೆಸುತ್ತಿದ್ದಳು. ಹೀಗಿದ್ದೂ ಮೂರು ಹೊತ್ತಿನ ಊಟಕ್ಕೆ ಸರ್ಕಸ್ ಮಾಡಬೇಕಾಗಿತ್ತು. ಆಗಾಗ ಹಸಿವಿನಿಂದ ಬಳಲುತ್ತಿದ್ದ ಬಾಲಕನಿಗೆ ಮನೆಯಲ್ಲಿನ ವಾತಾವರಣ ಸರಿ ಇರಲ್ಲ. ಮಲಗಿದ್ದರೂ ಕೂಡ ನಿದ್ರೆ ಬರುತ್ತಿರಲಿಲ್ಲವಂತೆ. ಅದೇ ಕಾರಣಕ್ಕೆ ಮನೆ ಬಿಡುವ ನಿರ್ಧಾರ ಮಾಡಿ ಪೊಲೀಸರು ಓಡಾಡುವ ಜಾಗದಲ್ಲೇ ನಿಂತಿದ್ದ.
/newsfirstlive-kannada/media/post_attachments/wp-content/uploads/2024/11/BOY.jpg)
ಮಧ್ಯರಾತ್ರಿ ಯಾಕೆ ಅಲ್ಲಿದ್ದ..?
ಅಂದ್ಹಾಗೆ ಬಾಲಕ ಪೊಲೀಸರ ಕಣ್ಣಿಗೆ ಬಿದ್ದಿದ್ದು ಇದೇ ಮೊದಲಲ್ಲ. ಹಲವು ಠಾಣಾ ವ್ಯಾಪ್ತಿಯ ಅನೇಕ ಪೊಲೀಸರ ಕೈಗೆ ಸಿಕ್ಕಿಕೊಂಡಿದ್ದ. ಪ್ರತಿ ಸಲ ತಗ್ಲಾಕಿಕೊಂಡಾಗಲೂ ಒಂದೇ ಉತ್ತರ. ಅಪ್ಪ-ಅಮ್ಮ ನನಗೆ ಗೊತ್ತಿಲ್ಲ. ನನ್ನ ಊರು ಕೂಡ ಯಾವುದೆಂದು ತಿಳಿದಿಲ್ಲ ಎನ್ನುತ್ತಿದ್ದ. ಇದನ್ನ ಕೇಳಿದ ಮೇಲೆ ಅಧಿಕಾರಿಗಳು ಆಯಾ ಠಾಣಾ ವ್ಯಾಪ್ತಿಯ ಬಾಲ ಮಂದಿರಕ್ಕೆ ಕಳುಹಿಸಿಕೊಡ್ತಿದ್ದರು.
ಬಾಲ ಮಂದಿರಲ್ಲಿತ್ತು ನೆಮ್ಮದಿ..!
ಬಾಲ ಮಂದಿರಕ್ಕೆ ಹೋಗ್ತಿದ್ದಂತೆ ಬಾಲಕನಿಗೆ ನೆಮ್ಮದಿ ಸಿಗ್ತಿತ್ತಂತೆ. ಅಲ್ಲಿ ಊಟ, ತಿಂಡಿ ಹೊಟ್ಟೆ ತುಂಬಾ ನೀಡುತ್ತಿದ್ದರು. ಅದನ್ನು ತಿಂದು ನೆಮ್ಮದಿಯಾಗಿ ಇರುತ್ತಿದ್ದ. ಇದೇ ಕಾರಣಕ್ಕೆ ಬಾಲಕ, ಬಾಲ ಮಂದಿರಕ್ಕೆ ಹೋಗಲು ಮಧ್ಯರಾತ್ರಿ ಪೊಲೀಸರ ಕಣ್ಣಿಗೆ ಬೀಳುತ್ತಿದ್ದ ಅನ್ನೋದು ತನಿಖೆಯಿಂದ ತಿಳಿದುಬಂದಿದೆ. ಮಾಹಿತಿಗಳ ಪ್ರಕಾರ ಅತ್ತಿಬೆಲೆ, ಸರ್ಜಾಪುರ, ಹೊಸಕೋಟೆ ಪೊಲೀಸರ ಕೈಗೆ ಈ ಹಿಂದೆ ಸಿಕ್ಕಿಬಿದ್ದಿದ್ದ. ಪೊಲೀಸರು ಬಾಲ ಮಂದಿರಕ್ಕೆ ಕಳುಹಿಸಿ ಕೊಟ್ಟಿದ್ದರು. ಅಲ್ಲಿನ ಅಧಿಕಾರಿಗಳು ಪೋಷಕರ ಪತ್ತೆ ಮಾಡಿ ವಾಪಸ್ ಕಳುಹಿಸುತ್ತಿದ್ದರು.
ಅಂತೆಯೇ ಈ ಬಾರಿ ಶಂಕರಪುರ ಪೊಲೀಸ್ ಠಾಣೆ ಬಳಿ ಪತ್ತೆಯಾಗಿದ್ದ. ಇನ್ಸ್​ಪೆಕ್ಟರ್ ಉದಯ ರವಿ ಮಾನವೀಯ ಕೆಲಸದಿಂದ ಮತ್ತೆ ಪೋಷಕರ ಮಡಿಲು ಸೇರಿದ್ದಾನೆ. ಮಕ್ಕಳನ್ನು ಬೇಕಾಬಿಟ್ಟಿ ಬಿಡುವ ಪೋಷಕರಿಗೆ ಇದು ಪಾಠವಾಗಬೇಕಿದೆ. ಅಲ್ಲದೇ ನೆಮ್ಮದಿಗಾಗಿ, ಹೊಟ್ಟೆ ಹಸಿವು ನೀಗಿಸಿಕೊಳ್ಳಲು ಬಾಲ ಮಂದಿರ ಸೇರುತ್ತಿದ್ದ ಬಾಲಕನ ಮನಸ್ಥಿತಿಯನ್ನೂ ಬದಲಾಯಿಸಬೇಕಿದೆ.
ವಿಶೇಷ ವರದಿ: ಪ್ರಜ್ವಲ್ ನಿಟ್ಟೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us