/newsfirstlive-kannada/media/post_attachments/wp-content/uploads/2024/12/Siddaramaiah-ED.jpg)
ಮೈಸೂರಿನ ಮುಡಾದಲ್ಲಿ ಬ್ರಹ್ಮಾಂಡ​ ಭ್ರಷ್ಟಾಚಾರವೇ ಬಯಲು. ಖಾಸಗಿ ಸುದ್ದಿ ಸಂಸ್ಥೆ PTIನಿಂದ ತನಿಖೆಯ ಮಾಹಿತಿ ಬಹಿರಂಗ. ಮುಡಾದಲ್ಲಿ 700 ಕೋಟಿ ರೂಪಾಯಿ ಬೆಲೆಬಾಳುವ ಸೈಟ್ ಹಗರಣ. ಇಡಿಯಿಂದ ಲೋಕಾಯುಕ್ತಕ್ಕೆ ತನಿಖಾ ಮಾಹಿತಿ ಒಳಗೊಂಡ ಪತ್ರ. 1,095 ಸೈಟ್​ಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಅಕ್ರಮ ಹಂಚಿಕೆ. ಈ 1,095 ಸೈಟ್​ಗಳ ಮೌಲ್ಯ ಬರೋಬ್ಬರಿ 700 ಕೋಟಿ ರೂಪಾಯಿ. ಕಾರುಗಳಿಗೆ ಸಹ ಎಕ್ಸಚೇಂಜ್ ರೂಪದಲ್ಲಿ ಸೈಟ್​ಗಳ ಹಂಚಿಕೆ. ಪಿಎಂಎಲ್ಎ ಕಾಯಿದೆ ಅಡಿ ತನಿಖೆ ನಡೆಸಿದ್ದ ಇಡಿ ಅಧಿಕಾರಿಗಳು
ಬರೋಬ್ಬರಿ ₹700 ಕೋಟಿ ಹಗರಣ.. ಮುಡಾ ಕೇಸ್‌ಗೆ ಹೊಸ ಟ್ವಿಸ್ಟ್
ರಾಜ್ಯ ರಾಜಕೀಯದಲ್ಲಿ ಅತಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದ ಮುಡಾ ಸೈಟು ಅಕ್ರಮ ಹಂಚಿಕೆ ಕೇಸ್​ಗೆ ಇದೀಗ ಹೊಸ ಟ್ವಿಸ್ಟ್​ ಸಿಕ್ಕಿದೆ. ಬದಲಿ ನಿವೇಶನದ ಹೆಸರಲ್ಲಿ ಬರೋಬ್ಬರಿ 700 ಕೋಟಿ ರೂಪಾಯಿ ಬೆಲೆಬಾಳು ಸೈಟ್​ಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿರೋದು ಇ.ಡಿ ನಡೆಸಿದ ತನಿಖೆಯಲ್ಲಿ ಬಯಲಾಗಿದೆ.
ಮುಡಾ ಸೈಟ್​ ಗೋಲ್ಮಾಲ್​ ಬಗ್ಗೆ ಜಾರಿ ನಿರ್ದೇಶನಾಲಯ PMLA ಕಾಯಿದೆ ಸಮಗ್ರ ತನಿಖೆ ನಡೆಸಿತ್ತು. ಇದೀಗ ಜಾರಿ ನಿರ್ದೇಶನಾಯಲ ಲೋಕಾಯುಕ್ತಕ್ಕೆ ತನಿಖಾ ಮಾಹಿತಿ ಒಳಗೊಂಡ ಪತ್ರ ಬರೆದಿದೆ. ಈ ಬಗ್ಗೆ ಖಾಸಗಿ ಸುದ್ದಿ ಸಂಸ್ಥೆ ದೆಹಲಿಯ ಪಿಟಿಐ ವರದಿ ಮಾಡಿದ್ದು, ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಭೂಮಿ ಕಳೆದುಕೊಂಡವರಿಗೆ ಸೈಟ್ ನೀಡುವ ನೆಪದಲ್ಲಿ ಅಕ್ರಮ ಎಸಗಿದ್ದಾರೆ.. ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳಿಗೆ ಸೈಟ್​​​ ನೀಡಲಾಗಿದೆ. ಬೇನಾಮಿ ಹಾಗೂ ನಕಲಿ ವ್ಯಕ್ತಿಗಳ ಹೆಸರಲ್ಲಿ 1095 ಸೈಟ್​ಗಳ ಹಂಚಿಕೆ ಮಾಡಿದ್ದು, ರಿಯಲ್ ಎಸ್ಟೇಟ್ & ಅಧಿಕಾರಿಗಳ ಮಧ್ಯೆ ದೊಡ್ಡ ಅಕ್ರಮ ಬೇರೂರಿದೆ. 5000 ಸೈಟ್​ಗಳಲ್ಲಿ 1946 ಸೈಟ್​ಗಳ ಅಲಾಟ್​ಮೆಂಟ್ ದಾಖಲೆಗಳು ನಾಪತ್ತೆ ಆಗಿವೆ. ಇದರಲ್ಲಿ 1,095 ಸೈಟ್​ಗಳನ್ನು ಬದಲಿ ನಿವೇಶನದ ಹೆಸರಿನಲ್ಲಿ ಅಕ್ರಮವಾಗಿ ಹಂಚಿಕೆ ಮಾಡಿದ್ದಾರೆ. ಈ 1,095 ಸೈಟ್​ಗಳ ಮೌಲ್ಯ ಬರೋಬ್ಬರಿ 700 ಕೋಟಿ ರೂಪಾಯಿ ಎಂದು ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ. ಇನ್ನು ಕಾರುಗಳಿಗೆ ಸಹ ಎಕ್ಸಚೇಂಜ್ ರೂಪದಲ್ಲಿ ಸೈಟ್​ಗಳ ಹಂಚಿಕೆ ಮಾಡಿದ್ದಾರೆ ಎಂದು ತನಿಖಾ ಪ್ರಗತಿ ಪತ್ರದಲ್ಲಿ ಜಾರಿ ನಿರ್ದೇಶನಾಲಯ ಉಲ್ಲೇಖಿಸಿದೆ.
ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ ಎಂದ ಇ.ಡಿ
ಕೋರ್ಟ್​ ಆದೇಶದಂತೆ ಮೈಸೂರು ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ಸಿಎಂ ಸೇರಿದಂತೆ ಎಲ್ಲ 4 ಆರೋಪಿಗಳ ವಿಚಾರಣೆ ನಡೆಸಿದೆ. ಇನ್ನು ಆರೋಪ ನಿರಾಕರಿಸಿದ್ದ ಸಿಎಂ, ಇದೊಂದು ರಾಜಕೀಯ ಪ್ರೇರಿತ ಎಂದಿದ್ದರು. ಆದ್ರೀಗ ಸಿಎಂ ಪತ್ನಿಗೆ ಸೈಟ್ ಹಂಚಿಕೆಯೇ ಅಕ್ರಮ ಎಂದು ಜಾರಿ ನಿರ್ದೇಶನಾಲಯ ತನಿಖಾ ಪ್ರಗತಿ ಪತ್ರದಲ್ಲಿ ಉಲ್ಲೇಖಿಸಿದೆ. ಸೈಟ್ ಹಂಚಿಕೆ ವೇಳೆ ವೇಳೆ ಕಾನೂನು ಗಾಳಿಗೆ ತೂರಿದ್ದಾರೆ. ಸಹಿಗಳ ನಕಲಿ ಮಾಡಿರುವುದು ಸಹ ಇಡಿ ತನಿಖೆಯಲ್ಲಿ ಪತ್ತೆಯಾಗಿದೆ.
ಸಿಎಂ ಪತ್ನಿ ಪಾರ್ವತಿ ಅವರಿಗೆ ನೀಡಿರುವ 14 ಸೈಟ್​ಗಳು ಅಕ್ರಮ.. ಸೈಟ್ ಹಂಚಿಕೆ ವೇಳೆ ವೇಳೆ ಕಾನೂನು ಗಾಳಿಗೆ ತೂರಿರೋದು ಬಯಲಾಗಿದೆ. ಸೈಟ್ ನೀಡುವಾಗ ಯತೀಂದ್ರ ಮುಡಾ ಬೋರ್ಡ್ ಮೆಂಬರ್ ಆಗಿದ್ರು. ಆ ಸಮಯದಲ್ಲಿ ಸಿದ್ದರಾಮಯ್ಯ ವಿರೋಧಪಕ್ಷದ ನಾಯಕರಾಗಿದ್ರು. ಸಿಎಂ ಪತ್ನಿಗೆ ಸೈಟ್ ಹಂಚಿಕೆ ವಿಚಾರದಲ್ಲಿ ಸಾಕ್ಷಿಗಳನ್ನ ತಿರುಚಲಾಗಿದೆ. ಸಹಿಗಳ ನಕಲಿ ಮಾಡಿರುವುದು ಸಹ ಇಡಿ ತನಿಖೆಯಲ್ಲಿ ಪತ್ತೆಯಾಗಿದೆ. ದಾಖಲೆಗಳಿಗೆ ನಕಲಿ ಸಹಿ ಮಾಡಿ, ಒತ್ತಡ ಹೇರಿ ಸೈಟ್​ಗಳ ಅಲಾಟ್ ಮಾಡಿಸಲಾಗಿದೆ. 2014ರಲ್ಲಿ ಪಾರ್ವತಿಯವರಿಗೆ ನೀಡಿರುವ ಪರಿಹಾರ ವಿಚಾರದಲ್ಲಿ ದಾಖಲೆ ತಿರುಚಲಾಗಿದೆ. ಇದಕ್ಕಾಗಿ ಸಿಎಂ ಪಿಎ ಎಸ್.ಜಿ ದಿನೇಶ್ ಕುಮಾರ್ @ ಸಿಟಿ ಕುಮಾರ್​ ಮುಡಾ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಪಿಎ ಪ್ರಶಾಂತ್ ಪಾತ್ರವು ಇದರಲ್ಲಿ ಪತ್ತೆ ಆಗಿದೆ. ಕೆಸರೆ ಗ್ರಾಮದ ಜಮೀನು ಸಂಬಂಧ ಪ್ರಕ್ರಿಯೆಗಳು ಕೇವಲ ನೆಪಮಾತ್ರ.. ಮುಡಾದ ಸಾಮಾನ್ಯ ನಿಯಮಗಳನ್ನೂ ಪಾರ್ವತಿ ಅವರು ಪಾಲನೆ ಮಾಡಿಲ್ಲ. sಇಎಂ ಪತ್ನಿ ಪಾರ್ವತಿ ಅವರಿಗೆ ಸೈಟ್ ನೀಡುವ ವಿಚಾರದಲ್ಲಿ ನಟೇಶ್​ರಿಂದ ನಿರ್ಧಾರ ಆಗಿದೆ. ಹೀಗಾಗಿ ಪ್ರಭಾವ ಬೀರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದೆ.
ಮುಡಾ ಅಕ್ರಮದ ಪ್ರಕರಣದಲ್ಲಿ ತನಿಖೆ ನಡೆಸಿರುವ ಜಾರಿ ನಿರ್ದೇಶನಾಲಯ, ಎಲ್ಲವನ್ನೂ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಇದೀಗ ಜಾರಿ ನಿರ್ದೇಶನಾಲಯದ ತನಿಖಾ ಪ್ರಗತಿ ಪತ್ರದಿಂದ ಸಿಎಂಗೆ ಮತ್ತಷ್ಟು ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us