/newsfirstlive-kannada/media/post_attachments/wp-content/uploads/2024/11/PRITAM-GOWDA-ON-HDR.jpg)
ಮೈತ್ರಿ ಮಾಡಿಕೊಂಡು ಬಿಜೆಪಿ-ಜೆಡಿಎಸ್ ಲೋಕಸಭಾ ಚುನಾವಣೆ ಎದುರಿಸಿದೆ. ಈಗ ಅದೇ ದೋಸ್ತಿ ಉಪಚುನಾವಣೆಯನ್ನೂ ನಡೆಸಿದೆ. ಆದ್ರೆ, ಸೋಲು ಮಾತ್ರ ಮೈತ್ರಿ ನಾಯಕರಿಗೆ ಅರಗಿಸಿಕೊಳ್ಳದಾಗಿದೆ. ಇದೀಗ ಗಾಯಕ್ಕೆ ಬರೆ ಎಂಬಂತೆ ಬಣರಾಜಕೀಯ ಬಿಜೆಪಿಯಲ್ಲಿ ಬೆಂಕಿ ಹಚ್ಚಿದೆ. ಇದ್ರ ಮಧ್ಯೆ ಹಾಸನದಲ್ಲಿ ಮೈತ್ರಿ ಪಡೆಯಲ್ಲಿ ಬಿರುಕು ಮೂಡಿರೋದು ಬಿಜೆಪಿ ನಾಯಕನ ಮಾತಲ್ಲೇ ಮಾರ್ಧನಿಸಿದೆ.
ಹಾಸನದಲ್ಲಿ ಬಿಜೆಪಿ-ಜೆಡಿಎಸ್ ಮಧ್ಯೆ ಬಿರುಕು ಇದ್ದೇ ಇದೆ. ರಾಜ್ಯ ನಾಯಕರು ದೋಸ್ತಿನೇ ಆಸ್ತಿಯು ಬೇರೆಲ್ಲ ನಾಸ್ತಿಯೂ ಅಂತ ಎಷ್ಟೇ ಹಾಡು ಹೇಳಿದ್ರೂ ಹಾಸನದಲ್ಲಿ ದಳ-ಕಮಲ ನಾಯಕರ ಮಧ್ಯೆ ತಾಳವೇ ಸರಿ ಇಲ್ಲ ಅನ್ನೋದು ಆಗಾಗ ಗೋಚರಿಸುತ್ತಲೇ ಇರುತ್ತೆ. ಇದೀಗ ಬೈ ಎಲೆಕ್ಷನ್ ಮುಗೀತಿದ್ದಂತೆ ಹಾಸನದ ಮೈತ್ರಿ ನಾಯಕರ ಮಧ್ಯೆ ಬಿರುಕು ಮೂಡಿರೋದು ಗೊತ್ತಾಗುತ್ತಿದೆ.
ಹೆಚ್.ಡಿ. ರೇವಣ್ಣ ವಿರುದ್ಧ ಪ್ರೀತಂಗೌಡ ಪರೋಕ್ಷವಾಗಿ ವಾಗ್ದಾಳಿ
2023ರ ವಿಧಾನಸಭಾ ಚುನಾವಣೆಯಿಂದಲೂ ಮಾಜಿ ಶಾಸಕ ಪ್ರೀತಂಗೌಡ ಮತ್ತು ಜೆಡಿಎಸ್ ನಾಯಕರ ಮಧ್ಯೆ ಜಟಾಪಟಿ ನಡೆಯುತ್ತಲೇ ಇದೆ. ಲೋಕಸಭಾ ಚುನಾವಣೆ ವೇಳೆಯಲ್ಲೂ ಈ ಫೈಟ್ ತಾರಕಕ್ಕೇರಿತ್ತು. ಅಲ್ಲದೇ ಹಗರಣಗಳ ವಿರುದ್ಧದ ಹೋರಾಟದಲ್ಲಿ ದಳಪತಿಯೇ ಪ್ರೀತಂ ಗೌಡರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ರು. ಇದೀಗ ಬೈ ಎಲೆಕ್ಷನ್‌ನಲ್ಲಿ ದೋಸ್ತಿ ಒಂದಾಗಿ ಹೋರಾಡಿ ಸೋಲನ್ನಪ್ಪಿದ ಮೇಲೆ ಹಾಸನದ ದೋಸ್ತಿಯಲ್ಲಿ ಮೆಲ್ಲಗೆ ಹೊಗೆಯಾಡಲು ಆರಂಭಿಸಿದೆ. ಮಾಜಿ ಶಾಸಕ ಪ್ರೀತಂಗೌಡ, ಹೆಚ್.ಡಿ. ರೇವಣ್ಣ ಕುಟುಂಬವನ್ನ ಪರೋಕ್ಷವಾಗಿ ಛೇಡಿಸಿದ್ದಾರೆ.
ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಿಖಿಲ್ ಸೋಲು.. ಹೀಯಾಳಿಸುವವರಿಗೆ ಅನಿತಾ ಕುಮಾರಸ್ವಾಮಿ ಟಾಂಗ್; ಹೇಳಿದ್ದೇನು?
ಹೊಳೆನರಸೀಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ ಕೂಡ ಭಾಗಿಯಾಗಿದ್ರು. ಈ ವೇಳೆ ವೇದಿಕೆಯಲ್ಲಿ ಹಾಸನ ಸಂಸದ ಶ್ರೇಯಸ್ ಪಟೇಲ್ ಕೂಡ ಹಾಜರಿದ್ರು. ಇದೇ ವೇಳೆ ಶ್ರೇಯಸ್ ಪಟೇಲ್‌ನ ಹೊಗಳುತ್ತಾ ರೇವಣ್ಣನ ವಿರುದ್ಧ ಪ್ರೀತಂಗೌಡ ಪರೋಕ್ಷವಾಗಿ ಮಾತಿನ ಚಾಟಿ ಬೀಸಿದ್ರು. ನಿಮ್ಮನ್ನೆಲ್ಲಾ ನೋಡಿದ ಮೇಲೆ ಹೊಳೆನರಸೀಪುರಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅನ್ನಿಸಿತು. ಎಲ್ಲಿಯ ತನಕ ಶ್ರೇಯಸ್ ಪಟೇಲ್‌ಗೆ ಅಧಿಕಾರ ಕೊಡ್ತಿರೋ ನಾನು ಯಾವುದೇ ಪಕ್ಷದಲ್ಲಿರಲಿ ಇದೇ ತರ ಪ್ರತಿ ವರ್ಷ ಬರ್ತಿನಿ ಎಂಬ ಅಚ್ಚರಿಯ ಮಾತುಗಳನ್ನ ಆಡಿದ್ರು.
ಇದನ್ನೂ ಓದಿ:ಚಾಮುಂಡೇಶ್ವರಿಗೆ ₹100 ಕೋಟಿ ಚಿನ್ನದ ರಥ.. ದೊಡ್ಡ ಕಾಣಿಕೆಗೆ ಸಿಎಂ ಸಿದ್ದರಾಮಯ್ಯ ಒಲವು; ಏನಿದರ ವಿಶೇಷ?
ಶ್ರೇಯಸ್ ಪಟೇಲ್‌ನ ಹೊಗಳುತ್ತಾ ಹೆಚ್.ಡಿ. ರೇವಣ್ಣ ಕುಟುಂಬವನ್ನ ಪ್ರೀತಂಗೌಡ ಮೂದಲಿಸಿದ್ದಾರೆ. ಒಟ್ಟಾರೆ, ಹಾಸನದಲ್ಲಿ ಕಾಂಗ್ರೆಸ್ ಸಂಸದನ ಜೊತೆ ಕಾಣಿಸಿಕೊಂಡು ಪ್ರೀತಂಗೌಡ ದೋಸ್ತಿ ವಿರುದ್ಧವೇ ಗುಡುಗಿರೋದು ಜಿಲ್ಲೆಯ ಮೈತ್ರಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದನ್ನ ಎತ್ತಿ ತೋರಿಸುವಂತಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us