/newsfirstlive-kannada/media/post_attachments/wp-content/uploads/2023/08/WATER.jpg)
ಕರ್ನಾಟಕದ ಮಹಾನದಿ.. ಕೊಡಗಿನ ಕುಲದೈವ.. ಸಪ್ತಪುಣ್ಯ ನದಿಗಳಲ್ಲಿ ಒಂದಾಗಿರುವ ಕಾವೇರಿ ಈಗ ಕರ್ನಾಟಕ-ತಮಿಳುನಾಡು ರಾಜ್ಯಗಳಿಗೆ ವಿವಾದವಾಗಿ ಮಾರ್ಪಟ್ಟಿದ್ದಾಳೆ. ವರುಣ ಕೈಕೊಟ್ಟಿರುವ ಹೊತ್ತಲ್ಲೇ ಕಾವೇರಿ ಜಲಜ್ವಾಲೆ ಹೊತ್ತಿ ಉರಿಯುತ್ತಿದೆ. ಇದೇ ಜ್ವಾಲೆ ಇವತ್ತು ಮೀಟಿಂಗ್ ಸ್ವರೂಪ ಪಡೆದುಕೊಳ್ಳಲಿದೆ.
ಕಾವೇರಿ ನಿಯಂತ್ರಣ ಪ್ರಾಧಿಕಾರದ ಸಭೆಗೆ ಕೌಂಟ್​ಡೌನ್
ಮೊನ್ನೆ ಸುಪ್ರೀಂಕೋರ್ಟ್ ಕಟಕಟೆಯಲ್ಲಿ ಕಾವೇರಿ ವಿವಾದದ ಬಗ್ಗೆ ವಾದ-ಪ್ರತಿವಾದ ನಡೆದಿತ್ತು. ನಿಯಮದ ಪ್ರಕಾರ ನೀರು ಬಿಡ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​​ ಈ ಬಗ್ಗೆ ತೀರ್ಮಾನ ಮಾಡಲು ಕಾವೇರಿ ಪ್ರಾಧಿಕಾರವೇ ಸೂಕ್ತ. ಹೀಗಾಗಿ ಪ್ರಾಧಿಕಾರ ಸಭೆ ನಡೆಸಿ ನಮಗೆ ವರದಿ ನೀಡಬೇಕು ಅಂತ ಆದೇಶಿಸಿ​ ಸೆಪ್ಟೆಂಬರ್ 1ಕ್ಕೆ ವಿಚಾರಣೆ ಮುಂದೂಡಿತ್ತು.. ಅದರಂತೆ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ನಡೆಯಲಿದೆ. ಕರ್ನಾಟಕ ಹಾಗೂ ತಮಿಳುನಾಡಿನ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.
‘ಕಾವೇರಿ’ದ ಬಿಕ್ಕಟ್ಟು!
- ನವದೆಹಲಿಯಲ್ಲಿ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ
- ಮುಂದಿನ 15 ದಿನಗಳು ನೀರು ಬಿಡಬೇಕಾ, ಬೇಡ್ವಾ ಎಂಬ ಚರ್ಚೆ
- ಕಳೆದ ಸಭೆಯಲ್ಲಿ ವಾಸ್ತವ ಸ್ಥಿತಿಯನ್ನ ನಿರಾಕರಿಸಿದ್ದ ತಮಿಳುನಾಡು
- ಸಭೆಯಿಂದ ಅರ್ಧಕ್ಕೆ ಎದ್ದು ಹೋಗಿದ್ದ ತಮಿಳುನಾಡು ಅಧಿಕಾರಿಗಳು
- ಮಹತ್ವ ಪಡೆದಿರುವ ಕಾವೇರಿ ನಿಯಂತ್ರಣ ಪ್ರಾಧಿಕಾರದ ಸಭೆ
- ಶುಕ್ರವಾರ ಸುಪ್ರೀಂಕೋರ್ಟ್​​ನಲ್ಲಿ ‘ಕಾವೇರಿ’ದ ವಿಚಾರಣೆ!
ಕಾವೇರಿ ಪ್ರಾಧಿಕಾರ ಸಭೆ ನಡೆಸಿ, ಮುಂದಿನ 15 ದಿನಗಳಿಗೆ ನೀರು ಹಂಚಿಕೆ ಮಾಡುವ ಸಾಧ್ಯತೆ ಇದೆ. ಸಮಿತಿ ನೀಡುವ ಸೂಚನೆ ಬಗ್ಗೆ ಕಾವೇರಿ ನದಿ ನೀರು ಪ್ರಾಧಿಕಾರ ಪರಿಶೀಲನೆ ನಡೆಸಲಿದೆ.. ಆದ್ರೆ, ಎರಡೂ ರಾಜ್ಯಗಳ ಜೊತೆ ಸಭೆ ನಡೆಸುವ ಬಗ್ಗೆ ಇನ್ನೂ ಖಚಿತತೆ ಇಲ್ಲ.. ಈ ಬಗ್ಗೆ ಸಭೆಯ ಬಳಿಕ ನಿರ್ಧರಿಸಲಿದೆ ಎನ್ನಲಾಗ್ತಿದೆ.. ಇನ್ನು ಪ್ರಾಧಿಕಾರದ ಸಭೆ ಬೆನ್ನಲ್ಲೇ ಸೆಪ್ಟೆಂಬರ್ 1ರಂದು ಸುಪ್ರೀಂಕೋರ್ಟ್​​​ ತ್ರಿಸದಸ್ಯ ಪೀಠದಲ್ಲಿ ವರದಿ ಸಲ್ಲಿಕೆ ಆಗಬೇಕಿದೆ.. ಈ ವರದಿಯನ್ನ ಆಧರಿಸಿ ಸುಪ್ರೀಂಕೋರ್ಟ್​ ತನ್ನ ಮುಂದಿನ ಆದೇಶ ತಿಳಿಸಲಿದೆ.
ಕೆಆರ್​​ಎಸ್​​ ಜಲಾಶಯದಲ್ಲಿ ಮತ್ತಷ್ಟು ಕುಸಿದ ನೀರಿನ ಮಟ್ಟ!
ಒಂದ್ಕಡೆ ಕಾವೇರಿ ಬಿಕ್ಕಟ್ಟು ಸುಪ್ರೀಂಕೋರ್ಟ್ ಅಂಗಳದಲ್ಲಿರುವಾಗ ಇತ್ತ ತಮಿಳುನಾಡಿಗೆ ನೀರು ಹರಿಸುತ್ತಿರುವ ಪರಿಣಾಮ ಮಂಡ್ಯದ ಕೆಆರ್​ಎಸ್​​ ಜಲಾಶಯದ ಒಡಲು ಮತ್ತಷ್ಟು ಖಾಲಿಯಾಗಿದೆ.. ಜಲಾಶಯದ ನೀರಿನ ಮಟ್ಟ ನೆಲ ಕಾಣುವಂತಿದೆ..
ಕೆಆರ್‌ಎಸ್ ನೀರಿನ ಮಟ್ಟ!
- ಗರಿಷ್ಠ ಮಟ್ಟ-124.80 ಅಡಿಗಳು
- ಇಂದಿನ ಮಟ್ಟ-102.00 ಅಡಿಗಳು
- ಒಳ ಹರಿವು-3,108 ಕ್ಯೂಸೆಕ್
- ಹೊರ ಹರಿವು-5,068 ಕ್ಯೂಸೆಕ್
ಒಟ್ಟಿನಲ್ಲಿ ನೀರು ಬಿಡುಗಡೆ ವಿಷಯದಲ್ಲಿ ಕಾವೇರಿ ಪ್ರಾಧಿಕಾರವೇ ನಿರ್ಣಾಯಕ ಎಂಬ ಸಂದೇಶವನ್ನು ಕೋರ್ಟ್ ರವಾನೆ ಮಾಡಿತ್ತು. ಹೀಗಾಗಿ ಇಂದು ನಡೆಯಲಿರೋ ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರದ ಸಭೆ ಸಾಕಷ್ಟು ಮಹತ್ವವನ್ನೂ, ಕುತೂಹಲವನ್ನೂ ಪಡೆದಿದೆ. ಈ ಮೀಟಿಂಗ್​ನಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಸುಪ್ರೀಂಕೋರ್ಟ್​​​ ತೀರ್ಮಾನ ಕೈಗೊಳ್ಳಲಿದೆ. ಹೀಗಾಗಿ ಎರಡೂ ರಾಜ್ಯಗಳು ಇಂದಿನ ಈ ಸಭೆಯನ್ನ ತದೇಕಚಿತ್ತದಿಂದ ನೋಡ್ತಿವೆ. ಇದಾದ ಬಳಿಕ ಏನೆಲ್ಲಾ ಬೆಳವಣಿಗೆಗಳು ನಡೆಯುತ್ತವೆ ಅನ್ನೋದನ್ನ ಕಾವೇರಿ ಮಾತೆಯೇ ಬಲ್ಲಳು..
ವಿಶೇಷ ವರದಿ: ಜಗದೀಶ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us