/newsfirstlive-kannada/media/post_attachments/wp-content/uploads/2024/11/ICC-CHAMPIONS-TROPHY.jpg)
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್​ ಟ್ರೋಫಿ 2025ಯನ್ನು ತಾನೇ ಆತಿಥ್ಯವಹಿಸಬೇಕು ಎಂದು ಪಾಕಿಸ್ತಾನ ನಿರ್ಧಾರ ಮಾಡಿದೆ. ಆದ್ರೆ ಇದರ ಬಗ್ಗೆ ಐಸಿಸಿ ಹಾಗೂ ಬಿಸಿಸಿಐ ಹಲವು ಆಕ್ಷೇಪಣೆಗಳನ್ನು ಎತ್ತಿವೆ. ಇದೇ ವಿಚಾರವನ್ನು ನಿರ್ಧಾರ ಮಾಡಲು ಐಸಿಸಿ ನವೆಂಬರ್ 29 ರಂದು ಅಂದ್ರೆ ಇಂದು ಮಧ್ಯಾಹ್ನ 3.30 ರಿಂದ ಸಭೆಯನ್ನು ಕರೆದಿದೆ. ಐಸಿಸಿ ಚಾಂಪಿಯನ್ಸ್​ ಟ್ರೋಫಿ 2025ರ ಪಂದ್ಯಾವಳಿಗಳು ಇನ್ನೇನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಹೀಗಾಗಿ ಈ ಬಗ್ಗೆ ಒಂದು ದೃಢ ನಿರ್ಧಾರಕ್ಕೆ ಐಸಿಸಿ ಬರಬೇಕಿದೆ. ಇದೇ ನಿಟ್ಟಿನಲ್ಲಿ ಈಗ ಸಭೆಯನ್ನು ಕರೆದಿದೆ.
3.30ಕ್ಕೆ ಶುರುವಾಗಿರುವ ಈ ಒಂದು ಮೀಟಿಂಗ್ ಸಂಜೆ 7 ಗಂಟೆಗೆ ಮುಗಿಯುವ ಸೂಚನೆ ಇದೆ. ಈ ಒಂದು ಸಭೆಯ ನಂತರವೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಎಲ್ಲಿ ನಡೆಯಬೇಕು ಹಾಗೂ ಯಾವಾಗಿನಿಂದ ಶುರು ಆಗಬೇಕು ಎಂಬ ಸ್ಪಷ್ಟ ನಿರ್ಧಾರಕ್ಕೆ ಬರಲಾಗುತ್ತದೆ.
ಪಾಕಿಸ್ತಾನದಲ್ಲಿ ಪಂದ್ಯಾವಳಿಗಳನ್ನು ನಡೆಸುವ ಬಗ್ಗೆ ಹೊಸ ಟೆನ್ಶನ್ ಈಗ ಶುರುವಾಗಿದೆ. ಇತ್ತೀಚೆಗೆ ಶ್ರೀಲಂಕಾ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಿ ತನ್ನ ಸರಣಿಯನ್ನು ಕಡಿತಗೊಳಿಸಿ ವಾಪಸ್ ಬಂದಿತ್ತು. ಕಾರಣ ಇಸ್ಲಾಮಾಬಾದ್​ನಲ್ಲಾದ ರಾಜಕೀಯ ಕೋಲಾಹಲ. ಪಾಕಿಸ್ತಾನ ಸಮಸ್ಯೆಗಳ ಆಗರ. ಒಂದಿಲ್ಲೊಂದು ದುರಂತಗಳು ಪ್ರತಿಭಟನೆಗಳು ಅಲ್ಲಿ ನಿತ್ಯ ನಿರಂತರ ನಡೆಯುತ್ತಿರುತ್ತವೆ. ಆದ್ರೆ ಇತ್ತೀಚೆಗೆ ಇಮ್ರಾನ್​ ಖಾನ್​ ಬೆಂಬಲಿಗರು ಇಸ್ಲಾಮಾಬಾದ್​ನಲ್ಲಿ ನಡೆಸಿದ ಪ್ರತಿಭಟನೆಯಿಂದಾಗಿ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ನಡೆಸಬೇಕಾ ಅಥವಾ ಬೇರೆ ಕಡೆ ಆಯೋಜನೆ ಮಾಡಬೇಕಾ ಅನ್ನೋ ಗೊಂದಲವನ್ನು ಸೃಷ್ಟಿ ಮಾಡಿದೆ.
ಇದನ್ನೂ ಓದಿ:ಈ 5 ಟೀಮ್​ಗೆ ನಾಯಕರದ್ದೇ ಸಮಸ್ಯೆ.. KL ರಾಹುಲ್, ಕೊಹ್ಲಿ, ಪಂತ್, ಅಯ್ಯರ್ ಕ್ಯಾಪ್ಟನ್ ಆಗ್ತಾರಾ?
ಹೀಗಾಗಿ ಇಂದು ನಡೆಯುವ ಸಭೆಯಲ್ಲಿ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯವಹಿಸುವಷ್ಟು ಸಾಮರ್ಥ್ಯ ಹೊಂದಿದೆಯಾ ಎನ್ನುವ ಬಗ್ಗೆ ನಿರ್ಧಾರವಾಗಲಿದೆ. ಈಗಾಗಲೇ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಒಂದಂತೂ ಸ್ಪಷ್ಟಪಡಿಸಿದ್ದಾರೆ. ಭಾರತ ಸರ್ಕಾರ ಭಾರತೀಯ ಆಟಗಾರರ ಸುರಕ್ಷತೆಯ ಬಗ್ಗೆ ಹೆಚ್ಚು ಒತ್ತು ಕೊಡುತ್ತದೆ ಇದೇ ವಿಚಾರವನ್ನು ಇಂದು ಸಭೆಯಲ್ಲಿ ಮಂಡಿಸುವುದಾಗಿ ಹೇಳಿದ್ದಾರೆ.
ನಾವು ನಮ್ಮ ನಿರ್ಧಾರವನ್ನು ಬೋರ್ಡ್​ ಮುಂದೆ ಇಟ್ಟಿದ್ದೇವೆ ಮುಂದಿನ ನಿರ್ಧಾರ ಅವರು ತೆಗೆದುಕೊಳ್ಳುತ್ತಾರೆ. ಪ್ರಮುಖವಾಗಿ ಆಟಗಾರರ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ. ಇದೇ ವಿಚಾರವಾಗಿ ಚರ್ಚೆಗಳು ನಡೆಯುತ್ತಿವೆ ಎಂದು ಶುಕ್ಲಾ ಹೇಳಿದ್ದಾರೆ.
ಈಗಾಗಲೇ ಬಿಸಿಸಿಐ ಪಾಕಿಸ್ತಾನಕ್ಕೆ ತನ್ನ ಆಟಗಾರರನ್ನು ಕಳುಹಿಸಲು ಈಗಾಗಲೇ ನಿರಾಕರಿಸಿದೆ. ಈ ಎಲ್ಲಾ ಬೆಳವಣಿಗಳು ನೋಡಿದರೆ ಹೈಬ್ರಿಡ್ ಮಾದರಿಯ ಪರಿಹಾರವನ್ನು ಐಸಿಸಿ ಕಂಡುಕೊಳ್ಳಬಹುದು ಎಂಬ ಸೂಚನೆ ಸಿಕ್ಕಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಕೆಲವು ಪಾಕಿಸ್ತಾನದಲ್ಲಿ ಹಾಗೂ ಕೆಲವು ಯುಎಇನಲ್ಲಿ ನಡೆಸುವ ಸಾಧ್ಯತೆಗಳು ಹೆಚ್ಚು ಇವೆ ಎಂದು ಹೇಳಲಾಗುತ್ತಿದೆ. ಆದ್ರೆ ಸ್ಪಷ್ಟ ಮಾಹಿತಿ ಇಂದಿನ ಐಸಿಸಿ ಸಭೆಯ ಮುಕ್ತಾಯದ ನಂತರವೇ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us