/newsfirstlive-kannada/media/post_attachments/wp-content/uploads/2025/04/Muttappa-rai-Son-Ricki-Rai-Case-2.jpg)
ರಾಮನಗರ: ಭೂಗತ ಲೋಕದ ಮಾಜಿ ಡಾನ್.. ಜಯ ಕರ್ನಾಟಕ ಸಂಘಟನೆ ಸಂಸ್ಥಾಪಕ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ನಿನ್ನೆ ತಡರಾತ್ರಿ ಬಿಡದಿ ನಿವಾಸನಿಂದ ಬೆಂಗಳೂರಿಗೆ ವಾಪಸ್ ತೆರಳುತ್ತಿದ್ದರು. ಈ ವೇಳೆ ರಿಕ್ಕಿ ರೈ ಮನೆಯ ಸಮೀಪವೇ ಶಾರ್ಪ್ ಶೂಟರ್ ಗುಂಡಿನ ದಾಳಿ ಮಾಡಿ ಎಸ್ಕೇಪ್ ಆಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ರಿಕ್ಕಿ ರೈ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಿಕ್ಕಿ ರೈ ಶೂಟ್ ಔಟ್ ಪ್ರಕರಣ ಹಲವು ಅನುಮಾನಗಳಿಗೆ ಕಾರಣವಾಗಿದೆ. ರಿಕ್ಕಿ ರೈ ಕಾರು ಚಾಲಕ ಬಸವರಾಜು ದೂರಿನ ಅನ್ವಯ ಬಿಡದಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಘಟನೆ ಬಳಿಕ ಸ್ಥಳದಲ್ಲಿ ಮಹಜರು ನಡೆಸಿರುವ ಬಿಡದಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರೆಸಿದ್ದಾರೆ.
ಕಳೆದ 2 ದಿನಗಳ ಹಿಂದಷ್ಟೇ ರಿಕ್ಕಿ ರೈ ವಿದೇಶದಿಂದ ಬೆಂಗಳೂರಿಗೆ ಬಂದಿದ್ದರು. ನಿನ್ನೆ ಸಂಜೆಯಷ್ಟೇ ಬಿಡದಿ ಹೊರವಲಯದ ತಮ್ಮ ಫಾರ್ಮ್ ಹೌಸ್‌ಗೆ ಆಗಮಿಸಿದ್ದರು. ಫಾರ್ಮ್ ಹೌಸ್‌ನಲ್ಲಿ ಇಂಟಿರಿಯರ್ ಕೆಲಸ ಮಾಡಿಸುತ್ತಿದ್ದ ರಿಕ್ಕಿ ರೈ ರಾತ್ರಿ ಸುಮಾರು 12:30ರ ವೇಳೆಗೆ ಕಾರಿನಲ್ಲಿ ಬೆಂಗಳೂರಿಗೆ ತೆರಳುವ ವೇಳೆ ಈ ಗುಂಡಿನ ದಾಳಿ ನಡೆದಿದೆ.
ತಮ್ಮ ಫಾರ್ಮ್ ಹೌಸ್‌ನ ಗೇಟ್ ಮುಂಭಾಗದ ರಸ್ತೆಯಲ್ಲಿ ಅಟ್ಯಾಕ್ ಮಾಡಿರೋ ದುಷ್ಕರ್ಮಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಶೂಟೌಟ್ ಪರಿಣಾಮ ಕಾರಿನ ಮುಂಭಾಗದ ಡೋರ್ ಸೀಳಿಕೊಂಡು ಹಿಂಬದಿ ಕೂತಿದ್ದ ರಿಕ್ಕಿ ರೈಗೆ ಗುಂಡು ತಗುಲಿದೆ. ಗುಂಡು ತಗುಲಿದ ರಭಸಕ್ಕೆ ರಿಕ್ಕಿ ರೈ ಬಲಗೈ ಹಾಗೂ ಮೂಗಿನ ಭಾಗಕ್ಕೆ ಗಂಭೀರ ಗಾಯವಾಗಿದೆ. ಗಾಯಗೊಂಡ ರಿಕ್ಕಿ ರೈ ಅವರನ್ನ ಕೂಡಲೇ ಬಿಡದಿ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಗುಂಡಿನ ದಾಳಿಗೆ ಹಲವು ಅನುಮಾನ!
ಉದ್ಯಮಿ ರಿಕ್ಕಿ ರೈ ಮೇಲಿನ ಕೊಲೆ ಯತ್ನ ಪ್ರಕರಣ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಯಾವ ಕಾರಣಕ್ಕೆ ಗುಂಡಿನ ದಾಳಿ ಆಗಿದೆ ಎಂಬ ಕುತೂಹಲ ಹೆಚ್ಚಾಗಿದೆ. ಮುತ್ತಪ್ಪ ರೈ ಪುತ್ರ ಎನ್ನುವ ಕಾರಣಕ್ಕೆ ಭೂಗತ ಲೋಕದ ಕೈವಾಡ ಇದೆ ಎಂಬ ಅನುಮಾನ ಒಂದು ಕಡೆ ಇದೆ.
ಮತ್ತೊಂದು ಕಡೆ ಜಮೀನು ವಿವಾದವೂ ರಿಕ್ಕಿ ಕೊಲೆ ಯತ್ನಕ್ಕೆ ಕಾರಣ ಎನ್ನುವ ಅನುಮಾನ ಮೂಡಿವೆ. ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ ಹಾಗೂ ಮೊದಲನೇ ಪತ್ನಿ ಮಗ ರಿಕ್ಕಿ ರೈ ನಡುವೆ ಆಸ್ತಿ ವಿಚಾರಕ್ಕೆ ತಿಕ್ಕಾಟ ಇತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿ, ಉದ್ಯಮಿ ನಿತೀಶ್ ಶೆಟ್ಟಿ, ವೈದ್ಯನಾಥ್ ಎಂಬ ನಾಲ್ವರ ಮೇಲೆ ಅನುಮಾನ ಇದೆ ಎಂದು ರಿಕ್ಕಿ ರೈ ಕಾರು ಚಾಲಕ ಬಸವರಾಜು ಬಿಡದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ನಾಲ್ವರ ಮೇಲೆ ಎಫ್ಐಆರ್ ಕೂಡ ದಾಖಲಾಗಿದೆ.
ಇದನ್ನೂ ಓದಿ: ರಿಕ್ಕಿ ರೈ ಮೇಲೆ ದಾಳಿಗೆ ಕಾರಣ ಏನು? ಮುತ್ತಪ್ಪ ರೈ 2ನೇ ಪತ್ನಿ ಮೇಲೆ ದೂರು! ಯಾರು ಈ ರಾಕೇಶ್ ಮಲ್ಲಿ?
FIR ನಲ್ಲಿ ಮಾಜಿ ಡಾನ್ ಮುತ್ತಪ್ಪ ರೈ ಎರಡನೇ ಪತ್ನಿ ಅನುರಾಧ, ರಾಕೇಶ್ ಮಲ್ಲಿ ಹಾಗೂ ನಿತೇಶ್ ಎಸ್ಟೇಟ್ ಕಂಪನಿ ಎಂಬುವವರ ವಿರುದ್ಧ ಆರೋಪಿಸಲಾಗಿದೆ. ಪ್ರಮುಖವಾಗಿ ಮಂಗಳೂರಿನ 12 ಎಕರೆ ಜಮೀನು ವಿಚಾರಕ್ಕೆ ಈ ಹಿಂದೆ ರಿಕ್ಕಿ ರೈ ಹಾಗೂ ರಾಕೇಶ್ ಮಲ್ಲಿ ಮಧ್ಯೆ ವಿವಾದವಾಗಿತ್ತು. ಈ ಹಿನ್ನೆಲೆಯಲ್ಲಿ ಫೈರಿಂಗ್ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣ ಸಂಬಂಧ ರಾಮನಗರ ಎಸ್‌ಪಿ ಶ್ರೀನಿವಾಸ್ ಗೌಡ ಅವರು ಸ್ಥಳ ಪರಿಶೀಲನೆ ನಡೆಸಿ ಹಲವು ಸಾಕ್ಷಾಧಾರಗಳನ್ನ ಸಂಗ್ರಹ ಮಾಡಿದ್ದಾರೆ. ಎಫ್ಎಸ್ಎಲ್ ಟೀಂ, ಶ್ವಾನ ದಳದಿಂದ ತಪಾಸಣೆ ಮಾಡಲಾಗಿದೆ. ಟವರ್ ಡಂಪ್ ಮೂಲಕ ನಿನ್ನೆ ರಾತ್ರಿ ಸ್ಥಳದಲ್ಲಿ ಆ್ಯಕ್ಟೀವ್ ಆಗಿದ್ದ ಮೊಬೈಲ್ ನಂಬರ್‌ಗಳನ್ನೂ ಪತ್ತೆ ಮಾಡುವ ಕಾರ್ಯ ನಡೆದಿದೆ. ಅಲ್ಲದೇ ಸ್ಥಳದಲ್ಲಿ ಗುಂಡಿನ ಕಾಟ್ರೇಜ್, ಸಿಮ್ ಇಲ್ಲದ ಕೀಪ್ಯಾಡ್ ಮೊಬೈಲ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಡ್ರೈವರ್ ಬಸವರಾಜು ಅವರನ್ನೂ ವಿಚಾರಣೆ ನಡೆಸಿದ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ 4 ತಂಡಗಳನ್ನು ರಚನೆ ಮಾಡಿದ್ದಾರೆ. ಯಾವ ಕಾರಣಕ್ಕೆ ಫೈರಿಂಗ್ ಮಾಡಲಾಗಿದೆ. ಯಾರೆಲ್ಲ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ