/newsfirstlive-kannada/media/post_attachments/wp-content/uploads/2025/06/RCB-OWNER-1.jpg)
18 ವರ್ಷಗಳ ಬಳಿಕ ಕಪ್ ಗೆದ್ದ ಸಂಭ್ರಮ 11 ಅಮಾಯಕರನ್ನು ಬಲಿ ಪಡೆದಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ದುರಂತಕ್ಕೆ ಆರ್‌ಸಿಬಿ ತಂಡ ಸಂತಾಪ ಸೂಚಿಸಿತ್ತು. ಜೊತೆಗೆ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಇಷ್ಟಾದ್ರೂ ಆರ್ಸಿಬಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ.
ಇದನ್ನೂ ಓದಿ:ಕಾಲ್ತುಳಿತ ಕೇಸ್ಗೆ ಬಿಗ್ ಟ್ವಿಸ್ಟ್.. ಮೂವರನ್ನು ವಶಕ್ಕೆ ಪಡೆದ ಪೊಲೀಸರು..!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಕಾಲ್ತುಳಿತ ದುರಂತ ಪ್ರಕರಣ ಸಂಬಂಧ ಆರ್‌ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. RCB ಜೊತೆಗೆ DNA ಎಂಟರ್‌ಟೈನ್ಮೆಂಟ್ & KSCA ವಿರುದ್ಧವೂ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಬೆನ್ನಲ್ಲೇ ಆರ್.ಸಿ.ಬಿ ತಂಡದ ಮಾರ್ಕೆಟಿಂಗ್ ಹೆಡ್ ಆಗಿರೋ ನಿಖಿಲ್ ಸೋಸಲೆ, ಡಿಎನ್‌ಎ ಸಂಸ್ಥೆಯ ಕಿರಣ್ ಮತ್ತು ಸುಮಂತ್ ಎಂಬುವವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/06/RCB-30.jpg)
ಎಫ್ಐಆರ್ನಲ್ಲಿ ಏನಿದೆ?
ಕೆಎಸ್‌ಸಿಎ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶುಭೇಂದ್ ಘೋಷ್ ಮಂಗಳವಾರ ಸಂಜೆ 6 ಗಂಟೆಗೆ ಬಂದು, ಕ್ರೀಡಾಂಗಣದಲ್ಲಿ ಬುಧವಾರ ಸಂಜೆ ಆರ್‌ಸಿಬಿ ವಿಜಯೋತ್ಸವ ಆಚರಣೆಗೆ ಬಂದೋಬಸ್ತ್ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಬಂದೋಬಸ್ತ್ ಕಲ್ಪಿಸಲು ಸಮಯ ಬೇಕಿದೆ ಎಂದು ಹೇಳಿ ಮನವಿಯನ್ನು ನಿರಾಕರಿಸಲಾಗಿತ್ತು. ಈ ಸಲಹೆಯನ್ನು ಒಪ್ಪದೇ ಕೆಎಸ್‌ಸಿಎ, ಡಿಎನ್‌ಎ ಹಾಗೂ ಆರ್‌ಸಿಬಿ ಫ್ರಾಂಚೈಸಿಯವರು ಸಮಾನ ಉದ್ದೇಶದಿಂದ ಬುಧವಾರ ಸಂಜೆ ಕಾರ್ಯಕ್ರಮ ನಡೆಸಲೇಬೇಕೆಂದು ಒತ್ತಾಯ ಮಾಡಿದ್ದರು. ಬುಧವಾರ ಬೆಳಿಗ್ಗೆಯಿಂದಲೇ ಆರ್‌ಸಿಬಿ ಫ್ರಾಂಚೈಸಿಯವರು ಅಧಿಕೃತ ಎಕ್ಸ್ ಖಾತೆಯಲ್ಲಿ ಸಕ್ಷಮ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ನಗರದಲ್ಲಿ ವಿಜಯೋತ್ಸವ ಹಾಗೂ ವಿಕ್ಟರಿ ಪರೇಡ್‌ಗೆ ಸಾರ್ವಜನಿಕರು ಹಾಗೂ ಅಭಿಮಾನಿಗಳು ಸೇರಬೇಕೆಂದು ಏಕಪಕ್ಷೀಯ ನಿರ್ಧಾರ ಕೈಗೊಂಡು ಪೋಸ್ಟ್ ಮಾಡಿದ್ದರು. ಮಾಧ್ಯಮಗಳಲ್ಲಿ ಈ ವಿಚಾರವು ವ್ಯಾಪಕವಾಗಿ ಪ್ರಚಾರ ಆಗಿ, ಲಕ್ಷಾಂತರ ಜನರು ಸೇರುವ ಸಂಭವ ಇತ್ತು. ಆಗ ಬಂದೋಬಸ್ತ್ ಮಾಡಿಕೊಳ್ಳಲಾಯಿತು. ಬುಧವಾರ ಬೆಳಿಗ್ಗೆ 9 ಗಂಟೆ ಸುಮಾರಿಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ, ಥಣಿಸಂದ್ರದಲ್ಲಿ ತರಬೇತಿಯಲ್ಲಿದ್ದ ಸಿಬ್ಬಂದಿಯನ್ನು ಬಂದೋಬಸ್ತ್ಗೆ ಕರೆಸಿಕೊಳ್ಳಲಾಯಿತು. ಕ್ರೀಡಾಂಗಣದ ಬಳಿ ಏಕಾಏಕಿ ಲಕ್ಷಾಂತರ ಜನರು ಜಮಾವಣೆಗೊಂಡರು. ಕ್ರೀಡಾಂಗಣದ ಒಳಕ್ಕೆ ತೆರಳಲು ಆಯೋಜಕರು ಸೂಕ್ತ ವ್ಯವಸ್ಥೆ ಮಾಡಿರಲಿಲ್ಲ. ಇದೇ ದುರಂತಕ್ಕೆ ಕಾರಣವಾಗಿದೆ. ಕರ್ತವ್ಯದಲ್ಲಿದ್ದ ಪೊಲೀಸರು ಮೈಕ್‌ನಲ್ಲಿ ಮನವಿ ಮಾಡಿದ್ದರೂ ಅದನ್ನು ಧಿಕ್ಕರಿಸಿ ಬ್ಯಾರಿಕೇಡ್ ತಳ್ಳಿ ಒಳಕ್ಕೆ ನುಗ್ಗಲು ಯತ್ನಿಸಿದರು. ಆಗ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು, 64 ಮಂದಿ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಇನ್ನು ಎಫ್ಐಆರ್ನಲ್ಲಿ ಹಲವು ಬಿಎನ್ನಡಿ ಹಲವು ಸೆಕ್ಷನ್ಗಳನ್ನ ಹಾಕಲಾಗಿದ್ದು, ಈ ಆರೋಪ ಸಾಬೀತಾದ್ರೆ 10 ವರ್ಷದವರೆಗೆ ಜೈಲು ಶಿಕ್ಷೆ ನೀಡಬಹುದಾಗಿದೆ.
/newsfirstlive-kannada/media/post_attachments/wp-content/uploads/2025/06/RCB_FANS-1.jpg)
ಇನ್ನು, ಮತ್ತೊಬ್ಬರಿಗೆ ಗಾಯವನ್ನುಂಟುಮಾಡಿದ ಆರೋಪದಡಿ BNS 115(2) ಹಾಕಲಾಗಿದ್ದು, ಗರಿಷ್ಠ 1 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದೆ. ಇನ್ನು, BNS 118(1) ಅಡಿಯಲ್ಲಿ ಯಾವುದಾದ್ರೂ ಆಯುಧದಿಂದ ತೀವ್ರ ಗಾಯ ಮಾಡಿದ ಆರೋಪದಡಿ ಗರಿಷ್ಠ 3 ವರ್ಷ ಜೈಲುಶಿಕ್ಷೆಗೆ ಅವಕಾಶ ಇದೆ. ಇನ್ನು, ಸರ್ಕಾರದ ಸೇವಕನ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪಕ್ಕೆ BNS 132 ವಿಧಿಸಲಾಗಿದೆ. ಇತರರ ಜೀವಕ್ಕೆ ಹಾನಿಯಾಗುವ ಕೃತ್ಯವೆಸಗಿದ ಆರೋಪಕ್ಕೆ BNS 125(a) (b) ಹಾಕಲಾಗಿದ್ದು, ಇದು ಸಾಬೀತಾದ್ರೆ ಜೈಲುಶಿಕ್ಷೆ ವಿಧಿಸಬಹುದಾಗಿದೆ.
ಒಟ್ಟಾರೆಯಾಗಿ ಬೆಂಗಳೂರು ಕಾಲ್ತುಳಿತ ದುರಂತ ಸದ್ಯ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ತನಿಖೆ ಚುರುಕುಗೊಂಡಿದೆ. ಸರ್ಕಾರದಿಂದಲೂ ಆರ್‌ಸಿಬಿ ಪ್ರತಿನಿಧಿಸುವ ವ್ಯಕ್ತಿಗಳ ಬಂಧನಕ್ಕೆ ಸೂಚನೆ ನೀಡಿರೋದು ಆರ್‌ಸಿಬಿ ಫ್ರಾಂಚೈಸಿಗೆ ತಲೆ ನೋವು ತಂದಿದೆ. ತನಿಖೆಯಲ್ಲಿ ಯಾರೆಲ್ಲಾ ಅರೆಸ್ಟ್ ಆಗ್ತಾರೋ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ