/newsfirstlive-kannada/media/post_attachments/wp-content/uploads/2025/06/old-cars.jpg)
ನಮ್ಮ ದೇಶದಲ್ಲಿ ದೆಹಲಿ ಸೇರಿದಂತೆ ಉತ್ತರ ಭಾರತದ ನಗರಗಳೇ ವಾಯುಮಾಲಿನ್ಯದಿಂದ ಹೆಚ್ಚು ತತ್ತರಿಸಿ ಹೋಗಿವೆ. ಚಳಿಗಾಲದಲ್ಲಿ ದೆಹಲಿಯಲ್ಲಿ ವಾಯು ಮಾಲಿನ್ಯ ಮತ್ತಷ್ಟು ಹೆಚ್ಚಾಗುತ್ತೆ. ಚಳಿಗಾಲದಲ್ಲಿ ಜನರು ಉಸಿರಾಡಲು ಕೂಡ ಕಷ್ಟಪಡುತ್ತಾರೆ. ಶ್ವಾಸಕೋಸ ತಜ್ಞ ವೈದ್ಯರ ಬಳಿ ಉಸಿರಾಟದ ತೊಂದರೆ ಅನುಭವಿಸುವ ಜನರು ಹೋದರೇ, ದೆಹಲಿಯನ್ನು ಬಿಟ್ಟು ಶುದ್ಧ ಗಾಳಿ ಸಿಗುವ ನಗರ, ಊರುಗಳಿಗೆ ಹೋಗುವುದೇ ಈ ಸಮಸ್ಯೆಗೆ ಇರುವ ಪರಿಹಾರ ಎಂದೇ ಹೇಳುತ್ತಾರೆ. ದೆಹಲಿಯಲ್ಲಿ ಶುದ್ಧ ಗಾಳಿಗೂ ಜನರು ಕಾಸು ಕೊಡಬೇಕಾದ ಪರಿಸ್ಥಿತಿ ಇದೆ. ಇಲ್ಲವೇ ನಗರ ಬಿಟ್ಟು ಉತ್ತರಾಖಂಡ್, ಹಿಮಾಚಲ ಪ್ರದೇಶ, ಗೋವಾ, ಮೈಸೂರು, ಮಡಿಕೇರಿಯಂಥ ನಗರಗಳತ್ತ ವಲಸೆ ಹೋಗಬೇಕಾದ ಪರಿಸ್ಥಿತಿ ಇದೆ.
ಇದನ್ನೂ ಓದಿ: ಗುಡ್ನ್ಯೂಸ್; KRS ಡ್ಯಾಂ ಐತಿಹಾಸಿಕ ದಾಖಲೆಗೆ ಕೇವಲ ಒಂದೇ 1 ಅಡಿ ಮಾತ್ರ ಬಾಕಿ
ದೆಹಲಿಯ ವಾಯು ಮಾಲಿನ್ಯಕ್ಕೆ ಪಂಜಾಬ್‌ನಲ್ಲಿ ಕೃಷಿ ತ್ಯಾಜ್ಯಕ್ಕೆ ಬೆಂಕಿ ಇಡುವುದು ಕೂಡ ಪ್ರಮುಖ ಕಾರಣ. ಇದರ ಜೊತೆಗೆ ದೆಹಲಿಯಲ್ಲಿ ಮಿತಿಮೀರಿದ ವಾಹನಗಳ ಹೊಗೆ ಮತ್ತೊಂದು ಕಾರಣ. ಹೀಗಾಗಿ ಹೆಚ್ಚು ಹೊಗೆ ಸೂಸುವ ಹಳೆಯ ಕಾರುಗಳನ್ನು ದೆಹಲಿ ಸರ್ಕಾರವೇ ಬ್ಯಾನ್ ಮಾಡಿದೆ. ಹಳೆಯ ಕಾರ್ಗಳು ಜುಲೈ 1ರಿಂದ ರಸ್ತೆಗೆ ಇಳಿಯದಂತೆ ಈಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜುಲೈ 1 ರಿಂದ ದೆಹಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ಕಾರುಗಳು, 15 ವರ್ಷ ಹಳೆಯ ಪೆಟ್ರೋಲ್ ಕಾರುಗಳು ಬ್ಯಾನ್ ಆಗಲಿವೆ. ಈ ಹಳೆಯ ಕಾರುಗಳಿಗೆ ದೆಹಲಿಯ ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ಹಾಕಲ್ಲ. ಬಂಕ್ಗಳಲ್ಲೇ ಸಾರಿಗೆ ಇಲಾಖೆಯ ಅಧಿಕಾರಿಗಳೇ ಮೊಕ್ಕಾಂ ಹೂಡಿ ಕಾರು ಎಷ್ಟು ವರ್ಷ ಹಳೆಯದೆಂದು ದಾಖಲೆ ಪರಿಶೀಲನೆ ನಡೆಸುತ್ತಾರೆ. 10 ವರ್ಷದೊಳಗಿನ ಡೀಸೆಲ್ ಕಾರ್ ಗಳಿಗೆ ಮಾತ್ರವೇ ಡೀಸೆಲ್ ಹಾಕುವಂತೆ ಸೂಚಿಸುತ್ತಾರೆ. 15 ವರ್ಷದೊಳಗಿನ ಪೆಟ್ರೋಲ್ ಕಾರ್ ಗಳಿಗೆ ಮಾತ್ರವೇ ಪೆಟ್ರೋಲ್ ಹಾಕಲು ಅವಕಾಶ ಕೊಡುತ್ತಾರೆ.
ದೆಹಲಿಯಲ್ಲಿ ಸದ್ಯಕ್ಕೆ ಸಿಎನ್‌ಜಿ ಕಾರ್ಗಳನ್ನು ಬ್ಯಾನ್ ಮಾಡುವ ಉದ್ದೇಶ ಇಲ್ಲ ಎಂದು ಸರ್ಕಾರ ಹೇಳಿದೆ. ಪ್ರಾರಂಭದಲ್ಲಿ 15 ವರ್ಷ ಹಳೆಯ ಸಿಎನ್‌ಜಿ ಕಾರ್ ಗಳನ್ನು ಬ್ಯಾನ್ ಮಾಡುವ ಪ್ಲ್ಯಾನ್ ಕೂಡ ಇತ್ತು. ಅದನ್ನು ಈಗ ಕೈ ಬಿಡಲಾಗಿದೆ. ದೆಹಲಿಯ ಸಾರಿಗೆ ಆಯುಕ್ತೆ ನಿಹಾರಿಕಾ ಅವರು, ಹೇಳುವ ಪ್ರಕಾರ, ಪೆಟ್ರೋಲ್ ಬಂಕ್ ಗಳಿಗೆ ತಂಡಗಳನ್ನು ಕಳಿಸಲಾಗುತ್ತೆ. ಹಳೆಯ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ಹಾಕದಂತೆ ಈ ತಂಡಗಳು ನೋಡಿಕೊಳ್ಳಲಿವೆ ಎಂದಿದ್ದಾರೆ. ಸುಪ್ರೀಂಕೋರ್ಟ್ ಹಳೆಯ ವಾಹನಗಳ ಬ್ಯಾನ್ ಅನ್ನು ಕಟ್ಟುನಿಟ್ಟಾಗಿ ಈ ವರ್ಷವೇ ಜಾರಿಗೊಳಿಸುವಂತೆ ಸೂಚಿಸಿದ್ದರಿಂದ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದೆ. ದೆಹಲಿಯ ಬಂಕ್ಗಳಲ್ಲಿ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡ್ ಮಾಡುವ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ನಂಬರ್ ಪ್ಲೇಟ್ ಆಧಾರದ ಮೇಲೆ ಕಾರ್ ಹಳೆಯದ್ದಾಗಿದ್ದರೇ, ಪೆಟ್ರೋಲ್, ಡೀಸೆಲ್ ಹಾಕಲ್ಲ. ಹಳೆಯ ಕಾರ್ ಗಳನ್ನು ಪತ್ತೆ ಹಚ್ಚಿ ಬಂಕ್ ಗಳಲ್ಲೇ ಅಧಿಕಾರಿಗಳು ಸೀಜ್ ಮಾಡುತ್ತಾರೆ. ಬಳಿಕ ಕಾರ್ ಅನ್ನು ಸ್ಕ್ಯಾಪಿಂಗ್ ಗೆ ಕಳಿಸುತ್ತಾರೆ.
[caption id="attachment_64337" align="alignnone" width="800"] ಸಾಂದರ್ಭಿಕ ಚಿತ್ರ[/caption]
ಬಂಕ್ಗಳಲ್ಲಿ ಪೆಟ್ರೋಲ್, ಡೀಸೆಲ್ ನಿರಾಕರಿಸುವುದು ವಾಹನ ಮಾಲೀಕರು, ಪೆಟ್ರೋಲ್ ಬಂಕ್ ಸಿಬ್ಬಂದಿ ನಡುವೆ ಜಗಳಕ್ಕೆ ಕಾರಣವಾಗುತ್ತೆ ಎಂದು ಬಂಕ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಬಂಕ್ ಗಳಲ್ಲಿ ದೆಹಲಿ ಟ್ರಾಫಿಕ್ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಹೆಚ್ಚಿನ ವಾಹನ ದಟ್ಟಣೆ ಇರುವ ಬಂಕ್ ಗಳಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗುತ್ತೆ. ಕಡಿಮೆ ಸಂಖ್ಯೆಯ ವಾಹನಗಳಿರುವ ಬಂಕ್ ಗಳಿಗೆ ಕಡಿಮೆ ಪೊಲೀಸರನ್ನು ನಿಯೋಜಿಸಲಾಗುತ್ತೆ. ದೆಹಲಿಯಲ್ಲಿ ಈಗಾಗಲೇ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಪೆಟ್ರೋಲ್ ಬಂಕ್ಗಳನ್ನು ಗುರುತಿಸಲಾಗಿದೆ. ಇಂಥ ಪೆಟ್ರೋಲ್ ಬಂಕ್ ಗಳಲ್ಲೇ ಹಳೆಯ ವಾಹನಗಳು ಬರುವ ಹೆಚ್ಚಿನ ಸಾಧ್ಯತೆ ಇದೆ ಎಂದು ದೆಹಲಿ ಟ್ರಾಫಿಕ್ ಪೊಲೀಸ್ ಇಲಾಖೆಯ ಜಂಟಿ ಕಮೀಷನರ್ ಅಜಯ್ ಚೌಧರಿ ಹೇಳಿದ್ದಾರೆ.
ಆದರೇ, ದೆಹಲಿಯ ಅಕ್ಕಪಕ್ಕದಲ್ಲೇ ಉತ್ತರಪ್ರದೇಶ, ಹರಿಯಾಣ ರಾಜ್ಯಗಳಿವೆ. ಎನ್‌ಸಿಆರ್ ಸಿಟಿಗಳಾದ ನೋಯ್ಡಾ, ಗಾಜಿಯಾಬಾದ್, ಗುರುಗ್ರಾಮ, ಫರೀದಾಬಾದ್, ಸೋನಿಪಟ್ ನಗರಗಳಿವೆ. ಈ ನಗರಗಳ ಪೆಟ್ರೋಲ್ ಬಂಕ್ ಗಳಲ್ಲಿ ಸದ್ಯ ಯಾವುದೇ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೀಡಿಂಗ್ ಕ್ಯಾಮರಾ ಅಳವಡಿಸಿಲ್ಲ. ಈ ವರ್ಷದ ನವಂಬರ್ 1 ರೊಳಗೆ ಈ ನಗರಗಳಲ್ಲೂ ಕ್ಯಾಮರಾ ಅಳವಡಿಸುವ ಯೋಜನೆ ಇದೆ. ಅಲ್ಲಿಯವರೆಗೂ ದೆಹಲಿಯ ಹಳೆಯ ಕಾರ್ ಮಾಲೀಕರು ಎನ್‌ಸಿಆರ್ ನಗರಗಳಿಗೆ ಹೋಗಿ ಪೆಟ್ರೋಲ್, ಡೀಸೆಲ್ ಹಾಕಿಸಿಕೊಂಡು ದೆಹಲಿ ಪ್ರವೇಶಿಸಬಹುದು. ದೆಹಲಿಯ ಗಡಿಯಲ್ಲಿ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆಯಾಗಲೀ, ಕ್ಯಾಮರಾ ಅಳವಡಿಸಿಲ್ಲ. ಆದರೇ, ದೆಹಲಿಯ ಗಡಿಗಳಲ್ಲೂ ಕ್ಯಾಮರಾ ಅಳವಡಿಸುವ ಕಾರ್ಯ ಕೂಡ ಆರಂಭವಾಗಿದೆಯಂತೆ. ಇದರ ಜೊತೆಗೆ ಈ ಕ್ಯಾಮರಾಗಳು, ಮಾಲಿನ್ಯ ನಿಯಂತ್ರಣದ ನಿಯಮ ಪಾಲಿಸದ ಹಳೆಯ ಬಸ್, ಟ್ರಕ್ಗಳನ್ನು ಗುರುತಿಸಲಿವೆಯಂತೆ. ಅವುಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತೆ ಅಂತ ಸಾರಿಗೆ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಹಳೆಯ ಕಾರ್ ಗಳನ್ನು ಮಾಲೀಕರು ಏನ್ ಮಾಡ್ತಿದ್ದಾರೆ ಗೊತ್ತಾ?
ದೆಹಲಿಯಲ್ಲಿ 10 ವರ್ಷ ಹಳೆಯ ಡೀಸೆಲ್ ಕಾರ್ ಗಳು, 15 ವರ್ಷ ಹಳೆಯ ಪೆಟ್ರೋಲ್ ಕಾರ್ ಗಳ ಬಳಕೆಯನ್ನು ಬ್ಯಾನ್ ಮಾಡಿರುವುದರಿಂದ ಎಲ್ಲ ಕಾರ್ ಮಾಲೀಕರು ಈ ಕಾರ್ ಗಳನ್ನು ಸ್ಕ್ರಾಪಿಂಗ್ ಗೆ ಹಾಕುತ್ತಿಲ್ಲ. ಬದಲಿಗೆ ಈ ಹಳೆಯ ಕಾರ್ ಗಳನ್ನು ಕರ್ನಾಟಕ, ಹರಿಯಾಣ, ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳ ಜನರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಸೆಕೆಂಡ್ ಹ್ಯಾಂಡ್ ಕಾರ್ ಷೋರೂಮುಗಳಲ್ಲಿ ದೆಹಲಿ ರಿಜಿಸ್ಟ್ರೇಷನ್ ಕಾರ್ ಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ. ಇನ್ನೂ ದೆಹಲಿಗೆ ಹೋಗಿಯೂ ಕರ್ನಾಟಕದ ಜನರು ಹಳೆಯ ಕಾರ್ ಗಳನ್ನು ಖರೀದಿಸಿ ಕರ್ನಾಟಕಕ್ಕೆ ತರುತ್ತಿದ್ದಾರೆ. ಆದರೆ ದೆಹಲಿಯ ರಿಜಿಸ್ಟ್ರೇಷನ್ ಕಾರ್ ಅನ್ನು ದೆಹಲಿಯಲ್ಲಿ ಎನ್‌ಓಸಿ ಪಡೆದು ಕರ್ನಾಟಕಕ್ಕೆ ತಂದ ಮೇಲೆ, 11 ತಿಂಗಳೊಳಗಾಗಿ ಕರ್ನಾಟಕದ ಯಾವುದಾದರೂ ಆರ್‌ಟಿಓ ಕಚೇರಿಯಲ್ಲಿ ಹೊಸದಾಗಿ ರಿಜಿಸ್ಟ್ರೇಷನ್ ಮಾಡಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ.
ಕಾರ್ ಗಳು ಎಷ್ಟು ವರ್ಷ ಹಳೆಯದಾಗಿವೆ ಎಂಬುದರ ಆಧಾರದ ಮೇಲೆ ರಿಜಿಸ್ಟ್ರೇಷನ್ , ಆರ್‌ಟಿಓ ಶುಲ್ಕ ನಿರ್ಧಾರವಾಗುತ್ತೆ. 2014ರ ಮಾಡೆಲ್ ಕಾರ್ ಅನ್ನು ಕರ್ನಾಟಕಕ್ಕೆ ತಂದು ಆರ್‌ಟಿಓ ಕಚೇರಿಯಲ್ಲಿ ಹೊಸದಾಗಿ ರಿಜಿಸ್ಟ್ರೇಷನ್ ಮಾಡಿ ಕರ್ನಾಟಕದ ಕಾರ್ ನಂಬರ್ ಪಡೆಯಲು ಕನಿಷ್ಠ 1 ಲಕ್ಷ ರೂಪಾಯಿ ಖರ್ಚಾಗುತ್ತೆ. ಇದರ ಜೊತೆಗೆ ದೆಹಲಿಯಿಂದ ಕಾರ್ ಅನ್ನು ಬೆಂಗಳೂರಿಗೆ ತರಲು ಟ್ರಾನ್ಸ್ ಪೋರ್ಟೇಷನ್ ಚಾರ್ಜ್ ಅಂತ 20 ರಿಂದ 30 ಸಾವಿರ ರೂಪಾಯಿ ಹಣ ಖರ್ಚಾಗುತ್ತೆ. ಆದರೂ, ಕೆಲವರು ಲಕ್ಷುರಿ ಕಾರ್ ಗಳನ್ನು ದೆಹಲಿಯಿಂದ ಕಡಿಮೆ ಬೆಲೆಗೆ ಕರ್ನಾಟಕಕ್ಕೆ ತರುತ್ತಿದ್ದಾರೆ. ಲಕ್ಷುರಿ ಕಾರ್ ಗಳನ್ನು ದೆಹಲಿಯಿಂದ ಕಡಿಮೆ ಬೆಲೆಗೆ ತರುವುದು ಕರ್ನಾಟಕದ ಜನರಿಗೆ ಆರ್ಥಿಕವಾಗಿ ಲಾಭಕಾರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ