/newsfirstlive-kannada/media/post_attachments/wp-content/uploads/2025/03/Earthquake-History.jpg)
ನಾವು ವಿಶ್ವದ ಅತಿದೊಡ್ಡ ಪ್ರಕೃತಿ ವಿಕೋಪಗಳ ಬಗ್ಗೆ ಮಾತನಾಡುವಾಗ ಆ ಲಿಸ್ಟ್ನಲ್ಲಿ ಭೂಕಂಪ ಕೂಡ ಬಂದೇ ಬರುತ್ತೆ. ಇಂತಹ ಭೂಕಂಪಗಳು ಭೂಮಿ ಮಧ್ಯಭಾಗದಿಂದ ಹೊರಹೊಮ್ಮುವ ಶಕ್ತಿಯಿಂದ ಉಂಟಾಗುತ್ತದೆ. ಇದರಿಂದಾಗಿ ಆಸ್ತಿ ಪಾಸ್ತಿಯೊಂದಿಗೆ ಜೀವಹಾನಿಗಳು ಕೂಡ ಆಗುತ್ತವೆ. ಪ್ರತಿ ಭೂಕಂಪವೂ ನೈಸರ್ಗಿಕ ಶಕ್ತಿಯ ಪರಿಚಯವನ್ನು ಮಾಡಿಕೊಡುತ್ತದೆ. ಭೂಮಿ ಒಂದು ಬಾರಿ ಮೈಕೊಡವಿಕೊಂಡರೇ ಏನೆಲ್ಲಾ ವೈಪರಿತ್ಯಗಳು ಸಂಭವಿಸಬಹುದು ಎಂಬುದನ್ನು ಸ್ಪಷ್ಟ ಮಾಡುತ್ತವೆ. ಮನಷ್ಯನು ಇಂತಹ ಪ್ರಕೃತಿ ವಿಕೋಪಗಳು ಇಂದೇ ಸಂಭವಿಸುತ್ತವೆ. ಇದೇ ಪ್ರಮಾಣದಲ್ಲಿ ಸಂಭವಿಸುತ್ತವೆ ಎಂದು ಊಹೆ ಕೂಡ ಮಾಡಲು ಬಿಡದಂತೆ ಈ ವಿಕೋಪಗಳು ಸಂಭವಿಸಿಬಿಡುತ್ತವೆ.
ಇದನ್ನೂ ಓದಿ:ಥೈಲ್ಯಾಂಡ್ ಮತ್ತು ಮಯನ್ಮಾರ್ನಲ್ಲಿ ಭೀಕರ ಭೂಕಂಪ.. ಸಾವಿನ ಸಂಖ್ಯೆ 700ಕ್ಕೆ ಏರಿಕೆ!
ಸದ್ಯ ಥೈಲ್ಯಾಂಡ್ ಹಾಗೂ ಮಯನ್ಮಾರ್ನಲ್ಲಿ ಆಗಿರುವ ಭೀಕರ ಭೂಕಂಪ ದೊಡ್ಡ ಸುದ್ದಿಯಾಗುತ್ತಿದೆ. ಭೂಮಿ ಹೀಗೆ ಕಂಪಿಸಿ ಅನಾಹುತ ಸೃಷ್ಟಿಸಿದ್ದು ಇದೇ ಮೊದಲ ಬಾರಿಯೇನು ಅಲ್ಲ ಇದೇ ಕೊನೆಯ ಬಾರಿ ಆಗುತ್ತದೆ ಅಂತಲೂ ಅಲ್ಲ. ಇತಿಹಾಸವನ್ನು ಕೆದಕಿ ನೋಡಿದಾಗ ಇದಕ್ಕಿಂತ ರಣಭೀಕರ ಭೂಕಂಪಗಳನ್ನು ಈ ಭೂಮಿ ಕಂಡಿದೆ ಅಂತಹ ಭೂಕಂಪಗಳು ಯಾವುವು ಎಂಬುದನ್ನು ನೋಡುವುದಾದ್ರೆ.
1. ಶಾಂಕ್ಸಿ ಭೂಕಂಪ-ಚೀನಾ: 1556ರಲ್ಲಿ ಚೀನಾ ಶಾಂಕ್ಸಿಯಲ್ಲಾದ ಭೂಕಂಪ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಇದು ಸಾಮಾನ್ಯವಾದ ಭೂಕಂಪ ಅಲ್ಲ. ಸುಮಾರು 8 ರಿಕ್ಟರ್ ಮಾಪಕದಲ್ಲಿ ಭೂಮಿ ಅಲ್ಲಾಡಿಕೊಂಡಿತ್ತು. ಜನವರಿ 23, 1556ರ ನಸುಕಿನ ಸಮಯದಲ್ಲಿ ಚೀನಾವೆಂಬ ಚೀನಾ ಇನ್ನೂ ಅರೆನಿದ್ರೆಯಲ್ಲಿದ್ದಾಗ ವಸಂಧರೆ ಕಂಪಿಸಿ ಬಿಟ್ಟಿದ್ದಳು. ಈ ಭೂಕಂಪದ ತೀವ್ರತೆ ಎಷ್ಟು ಇತ್ತು ಅಂದ್ರೆ ಸುಮಾರು 830 ಕಿಲೋ ಮೀಟರ್ ವ್ಯಾಪ್ತಿಯವರೆಗೂ ಭೂಕಂಪನದ ಅನುಭವ ಆಗಿತ್ತು ಹುವಾಕ್ಸಿಯನ್, ವೀನಾನ್ ಮತ್ತು ಹುಯಾಯಿನ್ ದೇಶಗಳು ಕೂಡ ಈ ಭೂಕಂಪಕ್ಕೆ ನಲುಗಿ ಹೋಗಿದ್ದವು. ಈ ಭೂಕಂಪದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಬರೋಬ್ಬರಿ 8 ಲಕ್ಷ 30 ಸಾವಿರ ಜನ ಅಂದ್ರೆ ನೀವು ನಂಬಲೇಬೇಕು.
2.ತಂಗ್ಶಾನ್ ಭೂಕಂಪ-ಚೀನಾ: 1556ರ ಬಳಿಕ ಮತ್ತೊಂದು ಭೀಕರ ಭೂಕಂಪವನ್ನು ಚೀನಾ ಎದುರಿಸಿದ್ದು 1976ರಲ್ಲಿ. ಚೀನಾದ ತಂಗ್ಶಾನ್ನಲ್ಲಿ ಸುಮಾರು 7.5 ರಿಕ್ಟರ್ ಮಾಪಕದಲ್ಲಿ ಭೂಮಿ ಕಂಪಿಸಿತ್ತು. ಅದು ಜುಲೈ 8ನೇ ತಾರೀಕು. ಬದುಕಿನ ಗಡಿಬಿಡಿಯಲ್ಲಿದ್ದ ತಂಗ್ಶಾನ್ ಜನರಿಗೆ ಭೂದೇವಿಯು ತನ್ನ ಕೋಪದ ಪರಿಚಯ ಮಾಡಿಸಿದ್ದಳು. ಈ ಭೀಕರ ಭೂಕಂಪ ಅದ್ಯಾವ ಮಟ್ಟಿನ ತೀವ್ರತೆಯಿಂದ ಕೂಡಿತ್ತೆಂದರೆ. ಈ ಭೂಕಂಪವನ್ನು 20ನೇ ಶತಮಾನದ ಮಾರಣಾಂತಿಕ ಭೂಕಂಪ ಎಂದೇ ಗುರುತಿಸಲಾಯ್ತು. ಈ ಭೂಕಂಪವೂ ಕೂಡ ಚೀನಾದ ಲಕ್ಷ ಲಕ್ಷ ಜನರನ್ನು ನುಂಗಿಕೊಂಡಿತು. ಚೀನಾದ ಅಫಿಷಿಯಲ್ಗಳು ಹೇಳುವ ಪ್ರಕಾರ ಸುಮಾರು 2 ಲಕ್ಷ 42 ಜನರ ಸಾವಾಗಿದೆ ಎಂದು. ಆದ್ರೆ ವಿಶ್ವ ಅಂದಾಜು ಮಾಡಿದ ಪ್ರಕಾರ ಸಾವಿನ ಸಂಖ್ಯೆ ಕನಿಷ್ಠವೆಂದರೂ 6 ಲಕ್ಷ 55 ಸಾವಿರ ಇದೆ ಎನ್ನಲಾಗಿತ್ತು.
ಇದನ್ನೂ ಓದಿ: ಮಯನ್ಮಾರ್-ಥೈಲ್ಯಾಂಡ್ ಭೂಕಂಪ.. 1000ಕ್ಕೂ ಅಧಿಕ ಸಾವು; ಬ್ಯಾಂಕಾಕ್‌ನಲ್ಲಿ ಕನ್ನಡಿಗರು ಸೇಫ್!
3. ಹಿಂದೂ ಮಹಾಸಾಗರದಲ್ಲಾದ ಭೂಕಂಪ ಮತ್ತು ಸುನಾಮಿ :2004 ರಲ್ಲಿ ಹಿಂದೂ ಮಹಾಸಾಗರದಲ್ಲಾದ ಭೂಕಂಪದಿಂದಾಗಿ ದೊಡ್ಡದೊಂದು ಸುನಾಮಿ ಎದ್ದು ಬಂದಿತ್ತು. ಅದು ಯಾವ ಮಟ್ಟಿಗೆ ಅಂದ್ರೆ ಸುಮಾರು 14 ದೇಶಗಳು ಈ ಸುನಾಮಿಯಿಂದ ಹೊಡೆತ ತಿಂದವು. ಅದರಲ್ಲೂ ಪ್ರಮುಖವಾಗಿ ಇಂಡೋನೇಷಿಯಾ, ಶ್ರೀಲಂಕಾ, ಭಾರತ ಮತ್ತು ಥೈಲ್ಯಾಂಡ್ನ ಕರವಾಳಿ ಪ್ರದೇಶದಲ್ಲಿ ಇದು ಭೀಕರವಾಗಿ ಬಂದು ಅಪ್ಪಳಿಸಿತು. ಸಮುದ್ರದ ಅಲೆಗಳು ಸುಮಾರು 30 ಮೀಟರ್ನಷ್ಟು ಎತ್ತರಕ್ಕೆ ಎದ್ದು ತೀರಕ್ಕೆ ಅಪ್ಪಳಿಸುವ ಮೂಲಕ ತನ್ನ ಬಾಹುವಿಗೆ ಸಿಕ್ಕಿದ್ದನ್ನೆಲ್ಲಾ ಕೊಚ್ಚಿಕೊಂಡು ತನ್ನೊಡಲೊಳಗೆ ತೆಗೆದುಕೊಂಡು ಹೋಗಿತ್ತು. ಈ ರಣಭೀಕರ ಪ್ರಕೃತಿ ವಿಕೋಪಕ್ಕೆ ಒಟ್ಟು 14 ದೇಶಗಳಲ್ಲಿ ಸುಮಾರು 2 ಲಕ್ಷ 30 ಸಾವಿರದಿಂದ 2 ಲಕ್ಷ 80 ಸಾವಿರ ಜನರು ಅಸುನೀಗಿದ್ದರು.
4. ಹೈಟಿ ಭೂಕಂಪ : 2010ರಲ್ಲಿ ಕೆರಿಬಿಯನ್ ದೇಶಗಳಲ್ಲಿ ಒಂದಾದ ಹೈಟಿಯಲ್ಲಾದ ಭೂಕಂಪವೂ ಕೂಡ ವಿಶ್ವದಲ್ಲಿಯೇ ಅತಿ ಭಯಾನಕ ಭೂಕಂಪ ಎಂದು ಗುರುತಿಸಲಾಗುತ್ತದೆ. 2010 ಜನವರಿ 12 ರಂದು ಉಂಟಾದ ಈ ಭೂಕಂಪ ಹೈಟಿಯ ರಾಜಧಾನಿಯಾದ ಪೊರ್ಟ್ ಔ ಪ್ರಿನ್ಸ್ನ್ನು ಸಂಪೂರ್ಣವಾಗಿ ಧ್ವಂಸಗೊಳಿಸತ್ತು. ಈ ಪ್ರಬಲ ಭೂಕಂಪದಿಂದ ಸುಮಾರು 30 ಲಕ್ಷ ಜನರಿಗೆ ದೊಡ್ಡ ಹೊಡೆತವನ್ನು ಕೊಟ್ಟಿತ್ತು. ಈ ಭೂಕಂಪದಲ್ಲಿ ಸುಮಾರು 2 ಲಕ್ಷ ಜನರು ಪ್ರಾಣವನ್ನು ಕಳೆದುಕೊಂಡರೆ, ಗಾಯಗೊಂಡವರ ಸಂಖ್ಯೆ ಲೆಕ್ಕೆಕ್ಕ ಸಿಕ್ಕಿಲ್ಲ.
5. ಅಂತಿಯೋಕ್ಯ ಭೂಕಂಪ- ಬೈಜಾಂಟೈನ್ ಸಾಮ್ರಾಜ್ಯ: ಕ್ರಿಸ್ತಶತಕ 526ರಲ್ಲಿ ಬೈಜಾಂಟೈನ್ ಸಾಮ್ರಾಜ್ಯವಾಗಿದ್ದ ಅಂತಿಯೋಕ್ಯದಲ್ಲಿ ಆಗಿದ್ದ ಭೂಕಂಪದ ತೀವ್ರತೆಯೂ ಕೂಡ ನಾವು ಈಗಾಗಲೇ ಹೇಳಿರುವ ಹಲವು ಭೂಕಂಪಗಳ ಮಟ್ಟದ್ದೆ ಇತ್ತು. ಇಂದಿನ ಟರ್ಕಿಯ ಅಂತಿಯೋಕ್ಯದಲ್ಲಿ ಈ ಭೀಕರ ಭೂಕಂಪ ಉಂಟಾಗಿತ್ತು. 7 ರಿಕ್ಟರ್ ಮಾಪಕದಲ್ಲಿ ಅಂದು ಭೂಮಿ ಕಂಪಿಸಿತ್ತು. ಬೈಜಾಂಟೈನ್ ಸಾಮ್ರಾಜ್ಯವೇ ಈ ಭೀಕರ ಭೂಕಂಪನದಿಂದಾಗಿ ಪತರಗುಟ್ಟಿ ಹೋಗಿತ್ತು. ಇದರಿಂದಾಗಿ ಸುಮಾರು 2 ಲಕ್ಷ 50 ಸಾವಿರದಿಂದ 3 ಲಕ್ಷದವರೆಗೆ ಜೀವಹಾನಿಯಾಗಿತ್ತು ಎಂದು ಇತಿಹಾಸದಲ್ಲಿ ದಾಖಲೆಗಳು ಸಿಗುತ್ತವೆ.
6. ಅಲೆಪ್ಪೊ ಭೂಕಂಪ-ಸಿರಿಯಾ: 1138ರಲ್ಲಿ ಸಿರಿಯಾದ ಅಲೆಪ್ಪೊದಲ್ಲಿ 7 ರಿಕ್ಟರ್ ಮಾಪಕದಲ್ಲಿ ಕಂಪಿಸಿದ ಭೂಮಿ ಮಾಡಿದ ಅವಾಂತರಗಳು ಒಂದೆರಡಲ್ಲ. ಅಕ್ಟೊಬರ್ 11 ರಂದು ನಡೆದ ಈ ಭೂಕಂಪದ ಹೊಡೆತಕ್ಕೆ ಜೀವ ಬಿಟ್ಟವರ ಸಂಖ್ಯೆ ಸುಮಾರು 2 ಲಕ್ಷ 30 ಸಾವಿರ
7. ದಮ್ಘಾನ್ ಭೂಕಂಪ-ಇರಾನ್: ಕ್ರಿಸ್ತಶಕ 856ರಲ್ಲಿ ಇರಾನ್ನ ದಮ್ಘಾನ್ನಲ್ಲಾದ ಭೂಕಂಪ ಅಂದಿನ ಪರ್ಷಿಯನ್ ಪ್ರಾಂತ್ಯದ ರಾಜಧಾನಿ ಕ್ವಿಮೀಸ್ನ್ನೇ ನುಂಗಿ ನೀರು ಕುಡಿದಿತ್ತು. ಈ ಭೂಕಂಪ ಅತಿಹೆಚ್ಚು ಪರಿಣಾಮ ಬೀರಿದ್ದೆ ಕ್ವಿಮೀಸ್ ಮೇಲೆ. ಭೂಕಂಪದ ತೀವ್ರತೆ ಎಷ್ಟಿತ್ತು ಎಂದರೆ ಅಳತೆಗೆ ಮೀರಿದ ಪ್ರಮಾಣದಲ್ಲಿ ಭೂಮಿ ಕಂಪಿಸಿತ್ತು ಎಂದು ಹೇಳಲಾಗುತ್ತದೆ. ಈ ಭೀಕರ ಭೂಕಂಪದಲ್ಲಿ ಜೀವ ಕಳೆದುಕೊಂಡವರ ಸಂಖ್ಯೆ ಸುಮಾರು 2 ಲಕ್ಷ ಜನರು.
8. ಹೈಯುವಾನ್ ಭೂಕಂಪ-ಚೀನಾ: 1920ರಲ್ಲಾದ ಈ ಭೂಕಂಪವನ್ನು ಗನ್ಸು ಭೂಕಂಪ ಎಂದೇ ಗುರುತಿಸಲಾಗುತ್ತದೆ. 16ನೇ ಡಿಸೆಂಬರ್ನ ಬೆಳಗ್ಗೆ ಆದ ಈ ಭೂಕಂಪದಿಂದ ಹೈಯುವಾನ್ನಲ್ಲಿ ಭೀಕರ ಭೂಕುಸಿತಕ್ಕೂ ಕೂಡ ಕಾರಣವಾಯ್ತು. ಅಂದು ಕಂಪಿಸಿದ ಭೂಮಿ ಹಲವಾರು ಹಳ್ಳಿಗಳನ್ನು ಗೂಡಿಸಿ ಹಾಕಿತ್ತು. ಈ ಭೂಕಂಪದಿಂದಾಗಿ ಸುಮಾರು 2 ಲಕ್ಷ ಜನರು ಜೀವ ಬಿಟ್ಟರು
9. ಅರ್ದಬಿಲ್ ಭೂಕಂಪ-ಇರಾನ್: 893ರಲ್ಲಿ ಇರಾನ್ನ ಅರ್ಧಬಿಲ್ನಲ್ಲಿ ನಡೆದ ಭೂಕಂಪ ವಿಶ್ವ ಕಂಡ ಅತಿ ಭಯಾನಕ ಭೂಕಂಪಗಳಲ್ಲಿ ಒಂದು. ಅಂದು ಸಂಭವಿಸಿದ ಭೂಕಂಪದ ಮಾಪನ ಎಷ್ಟು ಎಂದು ಇಂದಿಗೂ ಕೂಡ ನಿರ್ಧಿಷ್ಟವಾಗಿ ಗುರುತಿಸಲಾಗಿಲ್ಲ ಆದ್ರೆ ಇದು ಅರ್ಧಬಿಲ್ ಸೇರಿ ಅದರ ಸುತ್ತಮುತ್ತಲಿನ ಪ್ರದೇಶಗಳಿಗೂ ದೊಡ್ಡ ಹಾನಿಯನ್ನುಂಟು ಮಾಡಿತ್ತು. ಈ ಭೂಕಂಪದಲ್ಲಿ ಸುಮಾರು 1 ಲಕ್ಷ 50 ಸಾವಿರ ಜನರ ವಿನಾಕಾರಣವಾಗಿ ಜೀವವನ್ನು ಕಳೆದುಕೊಂಡರು.
10. ಮೆಸ್ಸಿನಾ ಭೂಕಂಪ-ಇಟಲಿ: 1908 ಡಿಸೆಂಬರ್ 23ರಂದು ಇಟಲಿಯ ಮೆಸ್ಸಿನಾದಲ್ಲಿ 7.1 ರಿಕ್ಟರ್ ಮಾಪಕದಲ್ಲಿ ಭೂಕಂಪವಾಗಿತ್ತು. ಇದು ಯುರೋಪ್ ದೇಶಗಳು ಕಂಡು ಭೂಕಂಪದಲ್ಲಿ ಅತ್ಯಂತ ರಣಭೀಕರ ಭೂಕಂಪ ಎಂದು ಗುರುತಿಸಲಾಗುತ್ತದೆ. ಮೆಸ್ಸಿನಾ ಮತ್ತು ರಿಗ್ಗಿಯೊದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಸುಮಾರು 1 ಲಕಷ 23 ಸಾವಿರ ಜನರು ಜೀವವನ್ನು ಕಳೆದುಕೊಂಡರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ