/newsfirstlive-kannada/media/post_attachments/wp-content/uploads/2025/07/UP_Changur_Baba_NITU.jpg)
ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಆಳ್ವಿಕೆಯಲ್ಲಿ ರೌಡಿಸಂ, ಮತಾಂತರಗಳಿಗೆಲ್ಲಾ ಅವಕಾಶವೇ ಇಲ್ಲ ಎಂಬ ಭಾವನೆ ಜನರಲ್ಲಿತ್ತು. ಆದರೂ ಯೋಗಿ ಆದಿತ್ಯನಾಥ್ ಆಳ್ವಿಕೆಯಲ್ಲಿ ಉತ್ತರಪ್ರದೇಶದ ಬಲರಾಮಪುರ ಜಿಲ್ಲೆಯಲ್ಲಿ ಧಾರ್ಮಿಕ ಮತಾಂತರ ಸದ್ದಿಲ್ಲದೇ ನಡೆದಿದೆ. ಅದು ಈಗ ಟಿವಿ ಚಾನಲ್ ವೊಂದರ ಸ್ಟಿಂಗ್ ಅಪರೇಷನ್​​ನಿಂದ ಬೆಳಕಿಗೆ ಬಂದಿದೆ. ಒಂದು ಕಾಲದಲ್ಲಿ ರಸ್ತೆಯಲ್ಲಿ ರಿಂಗ್​ಗಳನ್ನು ಮಾರುತ್ತಿದ್ದವನೇ ದೊಡ್ಡ ಧಾರ್ಮಿಕ ಮತಾಂತರದ ಕಿಂಗ್ ಪಿನ್ ಎಂಬುದು ಆಘಾತಕಾರಿ.
ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನೇ ಆಕ್ರಮ ಮತಾಂತರವನ್ನು ಕೋಟ್ಯಾಂತರ ರೂಪಾಯಿ ಹಣದ ಆಮಿಷವೊಡ್ಡಿ ನಡೆಸುತ್ತಿದ್ದ. ಸ್ಟಿಂಗ್ ಅಪರೇಷನ್ ಬಳಿಕ ಉತ್ತರ ಪ್ರದೇಶ ಪೊಲೀಸರು ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನನ್ನು ಬಂಧಿಸಿದ್ದಾರೆ. ಈಗ ಈ ಜಮಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾನ ಆಕ್ರಮ ಚಟುವಟಿಕೆಗಳ ವಿಷಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಆಕ್ರಮ ಧಾರ್ಮಿಕ ಮತಾಂತರದ ಮೂಲಕವೇ ಈ ಚಂಗೂರ್ ಬಾಬಾ ಕೋಟಿಗಟ್ಟಲೇ ಹಣ, ಆಸ್ತಿ ಸಂಪಾದಿಸಿದ್ದ. ಒಂದು ಕಾಲದಲ್ಲಿ ರಸ್ತೆಯಲ್ಲಿ ರಿಂಗ್​ಗಳನ್ನು ಮಾರುತ್ತಿದ್ದವನು, ಸಡನ್ ಆಗಿ ಕೋಟಿಗಟ್ಟಲೇ ಆಸ್ತಿಯ ಮಾಲೀಕನಾಗಿದ್ದನ್ನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ.
ಬಡವರಿಗೆ ಹಣದಾಸೆ ತೋರಿಸಿ ಗಾಳ ಹಾಕುತ್ತಿದ್ದ
ಚಂಗೂರ್ ಬಾಬಾ, ಹಿಂದೂ ಧರ್ಮದ ಬಡವರು, ನಿರ್ಗತಿಕರು, ಹಿಂದುಳಿದ ಸಮುದಾಯದ ಜನರನ್ನು ಈ ಬಾಬಾ ಟಾರ್ಗೆಟ್ ಮಾಡಿ, ಹಣದ ಆಮಿಷವೊಡ್ಡುತ್ತಿದ್ದ. ಕಷ್ಟಗಳಿಗೆ ಸಹಾಯ ಮಾಡುವ ಭರವಸೆ ನೀಡುತ್ತಿದ್ದ. ರೋಗಗಳನ್ನು ತನ್ನ ಚಮತ್ಕಾರದ ಮೂಲಕ ವಾಸಿ ಮಾಡುತ್ತೇನೆ ಎಂದು ಭರವಸೆ ಕೊಡುತ್ತಿದ್ದ. ಇನ್ನೂ ಹಿಂದೂ ಹುಡುಗಿಯನ್ನು ಬಲವಂತವಾಗಿ ಮುಸ್ಲಿಂ ಧರ್ಮಕ್ಕೆ ಮತಾಂತ ಮಾಡಿದ್ದಾನೆ. ಈತನಿಗೆ ಉತ್ತರ ಪ್ರದೇಶ ಮಾತ್ರವಲ್ಲದೇ, ನೇಪಾಳ, ದುಬೈವರೆಗೂ ಸಂಪರ್ಕಗಳಿವೆ ಎಂದು ಪೊಲೀಸರು ಹೇಳಿದ್ದಾರೆ. ತಾನೊಬ್ಬ ಬಾಬಾ ಎಂಬ ಇಮೇಜ್ ಅನ್ನು ಬಳಸಿಕೊಂಡು ಆಕ್ರಮವಾಗಿ ಧಾರ್ಮಿಕ ಮತಾಂತರ ಮಾಡಿದ್ದ.
ಚಂಗೂರ್ ಬಾಬಾ ಬರೋಬ್ಬರಿ 106 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿದ್ದ. ಈತ 40 ಬ್ಯಾಂಕ್ ಖಾತೆಗಳನ್ನು ಹೊಂದಿದ್ದ. ಫೇಕ್ ಹೆಸರುಗಳನ್ನು ನೀಡಿ ಬ್ಯಾಂಕ್ ಖಾತೆಗಳನ್ನು ತೆರೆದಿದ್ದ. ಈ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಹಣದ ವರ್ಗಾವಣೆ ಜಮಾಲುದ್ದೀನ್ ಮಾಡುತ್ತಿದ್ದ. 2 ಆಸ್ತಿಗಳು ಕೋಟಿಗಟ್ಟಲೇ ಬೆಲೆ ಬಾಳುತ್ತವೆ ಎಂದು ಪೊಲೀಸರು ಹೇಳಿದ್ದಾರೆ. ಚಂಗೂರ್ ಬಾಬಾ, ಲಕ್ಷುರಿ ಮನೆ, ಬಂಗಲೆ, ಲಕ್ಷುರಿ ಕಾರುಗಳನ್ನು ಖರೀದಿಸಿದ್ದಾನೆ. ಜೊತೆಗೆ ಷೋರೂಮು ಅನ್ನು ಬಾಬಾ ಖರೀದಿಸಿದ್ದ. ಧಾರ್ಮಿಕ ಮತಾಂತರಕ್ಕೆ ಹಣ ವರ್ಗಾವಣೆ ಮಾಡಿರುವುದಕ್ಕೆ ದಾಖಲೆ, ವಿಡಿಯೋಗಳು ಪೊಲೀಸರಿಗೆ ಸಿಕ್ಕಿವೆ. ಬಡತನದಿಂದ ಬಳಲುವವರನ್ನೇ ಟಾರ್ಗೆಟ್ ಮಾಡುತ್ತಿದ್ದ. ಉತ್ತಮ ಜೀವನದ ಸುಂದರ ಕನಸುಗಳನ್ನು ಅವರಲ್ಲಿ ಬಿತ್ತುತ್ತಿದ್ದ. ಆ ಕನಸು ನನಸಾಗಬೇಕಾದರೇ, ಇಸ್ಲಾಂ ಧರ್ಮಕ್ಕೆ ಮತಾಂತರ ಆಗಬೇಕು ಎಂದು ಹೇಳಿ ಮತಾಂತರ ಮಾಡಿಸುತ್ತಿದ್ದ.
ಹಿಂದೂ ಎಂದು ಹೇಳಿಕೊಂಡು ತಮ್ಮ ಧರ್ಮಕ್ಕೆ ಮತಾಂತರ
ಕಳೆದ ಮೂರು ನಾಲ್ಕು ವರ್ಷಗಳಿಂದ ಬಾಬಾ ಬಲರಾಮಪುರದ ಚಂದ್ ಔಲಿಯಾ ದರ್ಗಾ ಬಳಿ ವಾಸ ಮಾಡುತ್ತಿದ್ದ. ತನ್ನನ್ನು ತಾನು ಸೂಫಿ ಸಂತ ಹಜರತ್ ಬಾಬಾ ಜಮಾಲುದ್ದೀನ್ ಪೀರ್ ಬಾಬಾ ಎಂದು ಬಿಂಬಿಸಿಕೊಳ್ಳುತ್ತಿದ್ದ. ಜೊತೆಗೆ ಇಸ್ಲಾಂ ಪ್ರಚಾರಕ್ಕಾಗಿ ಶಾರ್ಜಾ ಇ ತಯ್ಯಾಬ್ ಬುಕ್ ಅನ್ನು ಈತ ಪ್ರಕಟಿಸಿದ್ದ. ಮುಸ್ಲಿಂ ವ್ಯಕ್ತಿಯೊಬ್ಬ ತನ್ನನ್ನು ತಾನು ಹಿಂದೂ ಎಂದು ಹೇಳಿಕೊಂಡು ಲಕ್ನೋದ ಮಹಿಳೆಯನ್ನು ತನ್ನತ್ತ ಸೆಳೆದು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದ. ನೀತೂ ಹಾಗೂ ಇತರರು ಕೂಡ ಬಲವಂತ ಮಾಡಿ ಲಕ್ನೋದ ಮಹಿಳೆಯನ್ನು ಮತಾಂತರ ಮಾಡಿದ್ದರು.
ಜಮಾಲುದ್ದೀನ್ ಅಂಡ್ ಗ್ಯಾಂಗ್ ಧಾರ್ಮಿಕ ಮತಾಂತರಕ್ಕೆ ಹಣವನ್ನು ನಿಗದಿ ಮಾಡಿದ್ದರು. ಜನರ ಜಾತಿ, ಅಂತಸ್ತಿನ ಆಧಾರದ ಮೇಲೆ ಮತಾಂತರವಾಗಲು ಹಣ ನಿಗದಿಯಾಗುತ್ತಿದ್ದಿದ್ದು ವಿಶೇಷ. ಬ್ರಾಹ್ಮಣ ಜಾತಿ, ಸಿಖ್ಖ್, ಕ್ಷತ್ರಿಯರು ಇಸ್ಲಾಂಗೆ ಮತಾಂತರವಾದರೇ, 15-16 ಲಕ್ಷ ರೂಪಾಯಿ ಹಣ ನೀಡುತ್ತಿದ್ದರು. ಓಬಿಸಿ ಸಮುದಾಯದ ಮಹಿಳೆಯರು ಇಸ್ಲಾಂಗೆ ಮತಾಂತರವಾದರೇ, 10-12 ಲಕ್ಷ ರೂಪಾಯಿ ಹಣ ನೀಡುತ್ತಿದ್ದರು. ಬೇರೆ ಜಾತಿಯವರಿಗೆ 8-10 ಲಕ್ಷ ರೂಪಾಯಿ ಹಣ ನೀಡಲಾಗುತ್ತಿತ್ತು ಎನ್ನಲಾಗಿದೆ.
ಮಗಳನ್ನು ಮತಾಂತರ ಮಾಡಿದ್ದರು!
ಉತ್ತರ ಪ್ರದೇಶದ ಎಟಿಎಸ್ ಪೊಲೀಸರು ಚಂಗೂರ್ ಬಾಬಾ ಜೊತೆಗೆ ನವೀನ್ ಹಾಗೂ ನೀತೂ ರೋಹ್ರಾ ಎಂಬ ದಂಪತಿಯನ್ನ ಬಂಧಿಸಿದ್ದಾರೆ. ಈ ದಂಪತಿಯು ಮತಾಂತರವಾದ ಬಳಿಕ ತಮ್ಮ ಹೆಸರು ಅನ್ನು ಕಲೀಮುದ್ದೀನ್ ಮತ್ತು ನಸ್ರೀನ್ ಎಂದು ಬದಲಾಯಿಸಿಕೊಂಡಿದ್ದರು. ಈ ದಂಪತಿಯ ಮಗಳು ಇಸ್ಲಾಂ ಧರ್ಮಕ್ಕೆ ಮತಾಂತರವಾಗಿ ತನ್ನ ಹೆಸರು ಸಬೀಹಾ ಎಂದು ಬದಲಾಯಿಸಿಕೊಂಡಿದ್ದಾಳೆ.
ಉತ್ತರ ಪ್ರದೇಶದ ಎಟಿಎಸ್, ಲಕ್ನೋದ ಹೋಟೇಲ್​ನಿಂದ ಚಂಗೂರ್ ಬಾಬಾ ಮತ್ತು ನೀತೂವನ್ನು ಬಂಧಿಸಿದೆ. ನೀತೂವನ್ನು ಭೇಟಿಯಾದ ಬಳಿಕ ಚಂಗೂರ್ ಬಾಬಾ, ಮಾಧಪುರದ ದರ್ಗಾದ ಬಳಿ ಕಟ್ಟಡವೊಂದನ್ನು ಕಟ್ಟಿದ್ದಾನೆ. ಸರ್ಕಾರಿ ದಾಖಲೆಗಳ ಪ್ರಕಾರ, ಈ ಕಟ್ಟಡವು ಆಕ್ರಮ. ಪೊಲೀಸರು ಈಗ ಈ ಕಟ್ಟಡವನ್ನು ಧ್ವಂಸ ಮಾಡಲು ನಿರ್ಧರಿಸಿದ್ದಾರೆ. ನಿನ್ನೆಯಿಂದ 70 ಕೊಠಡಿಗಳ ಕಟ್ಟಡ ಪೊಲೀಸರು ಧ್ವಂಸ ಮಾಡುತ್ತಿದ್ದಾರೆ.
ಈ ಮತಾಂತರ ಅಪರೇಷನ್​ನಲ್ಲಿ ಬೇರೆ ಯಾರಾರು ಭಾಗಿಯಾಗಿದ್ದಾರೆ ಹಾಗೂ ಹಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತಾಂತರ, ವಂಚನೆಯ ಜೊತೆಗೆ ಈ ಚಂಗೂರ್ ಬಾಬಾ, ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಚುನಾವಣೆಗಳಲ್ಲೂ ಸ್ಪರ್ಧಿಸಿದ್ದ. ಈಗ ಬಂಧನಕ್ಕೊಳಗಾಗಿ ಜೈಲಿನ ಕಂಬಿ ಎಣಿಸುತ್ತಿದ್ದಾನೆ. ಈ ಚಂಗೂರ್ ಬಾಬಾ ಸಮಾಜ ವಿರೋಧಿ ಹಾಗೂ ರಾಷ್ಟ್ರ ವಿರೋಧಿ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಸ್ಟಾರ್ ಹೋಟೇಲ್ ರೂಮ್​ನಲ್ಲಿ ನೀತೂ, ಬಾಬಾ
ಕೇರಳದ ಮಹಿಳೆಯೊಬ್ಬರಿಗೂ ಹಣದ ಆಮಿಷವೊಡ್ಡಿ ಮತಾಂತರ ಮಾಡಿದ್ದಾನೆ. ಹೀಗೆ ಬೇರೆ ಬೇರೆ ರಾಜ್ಯಗಳಲ್ಲೂ ಹಣದ ಆಮಿಷವೊಡ್ಡಿ ಬಡ ಮಹಿಳೆಯರನ್ನು ಟಾರ್ಗೆಟ್ ಮಾಡಿ ಮತಾಂತರ ಮಾಡಲಾಗಿದೆ. ಕಳೆದ 70 ದಿನಗಳಿಂದ ಚಂಗೂರ್ ಬಾಬಾ ಮತ್ತು ನೀತೂ ಲಕ್ನೋದ ಸ್ಟಾರ್ ಹೋಟೇಲ್ ರೂಮುನಲ್ಲಿ ಇಬ್ಬರೇ ವಾಸ ಮಾಡುತ್ತಿದ್ದರು. ನೀತೂ, ಬಲರಾಮಪುರದ ಸಿಂಧಿ ಕುಟುಂಬಕ್ಕೆ ಸೇರಿದವಳು. ಪತಿ ನವೀನ್ ಘನಶ್ಯಾಮ ರೋಹ್ರಾ ಜೊತೆಗೆ 2015ರಲ್ಲಿ ದುಬೈಗೆ ಹೋಗಿದ್ದಳು. ಬಳಿಕ ಚಂಗೂರ್ ಬಾಬಾನ ಸಂಪರ್ಕಕ್ಕೆ ಬಂದು ಇಸ್ಲಾಂಗೆ ಮತಾಂತರವಾಗಿದ್ದಾಳೆ.
ಬೇರೆ ಬಡ ಹಿಂದೂ ಹೆಣ್ಣು ಮಕ್ಕಳ ಸ್ನೇಹ ಸಂಪಾದಿಸಿ, ಅವರನ್ನು ಇಸ್ಲಾಂಗೆ ಮತಾಂತರಿಸುವ ಕೆಲಸವನ್ನು ಈ ನೀತೂ ಮಾಡುತ್ತಿದ್ದಳು. ನೀತೂನೇ ಚಂಗೂರ್ ಬಾಬಾನ ನಂಬಿಕಸ್ಥ ಸಹಾಯಕಿಯಾಗಿದ್ದಳು. ಇನ್ನೂ ನೀತೂ ಪತಿ ನವೀನ್ ಕೂಡ ಬಡವರನ್ನು ಟಾರ್ಗೆಟ್ ಮಾಡಿ ಹಣವನ್ನು ಸಾಲವಾಗಿ ನೀಡುತ್ತಿದ್ದ. ಬಳಿಕ ಸಾಲ ಮರುಪಾವತಿಸಲಾಗದವರನ್ನು ಇಸ್ಲಾಂಗೆ ಮತಾಂತರವಾಗಲು ಬಲವಂತ ಮಾಡುತ್ತಿದ್ದ. ನೀತೂ ಮತ್ತು ನವೀನ್ 2014 ರಿಂದ 2019ರವರೆಗೆ 19 ಬಾರಿ ಯುಎಇಗೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಎಟಿಎಸ್ ಹೇಳಿದೆ. ವಿದೇಶದಲ್ಲೂ ಮತಾಂತರ ಈ ದಂಪತಿ ನಡೆಸಿದ್ದಾರೆ. ಈಗ ಮತಾಂತರಕ್ಕೆ ಯುಪಿ ಎಟಿಎಸ್ ಬ್ರೇಕ್ ಹಾಕಿದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ