/newsfirstlive-kannada/media/post_attachments/wp-content/uploads/2025/02/Delhi-Stamphede.jpg)
ದೆಹಲಿ: ಮಹಾಕುಂಭಮೇಳದಲ್ಲಿ ಕಾಲ್ತುಳಿತ ಸಂಭವಿಸಿ 30ಕ್ಕೂ ಹೆಚ್ಚು ಮಂದಿ ದಾರುಣ ಸಾವನ್ನಪ್ಪಿದ ಘಟನೆ ನಡೆದಿತ್ತು. ರಾಜ್ಯದ ನಾಲ್ವರು ಸಹ ಈ ಭೀಕರ ಕಾಲ್ತುಳಿತದಲ್ಲಿ ಉಸಿರು ಚೆಲ್ಲಿದ್ರು. ಈ ಘಟನೆ ಮಾಸೋ ಮುನ್ನವೇ ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಂದು ಕಾಲ್ತುಳಿತ ಸಂಭವಿಸಿದೆ.
ಕಳೆದ ರಾತ್ರಿ ರಾಷ್ಟ್ರಧಾನಿಯಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆ ಸಾವಿನ ರಣಕೇಕೆ ಹಾಕಿದೆ. ಮಹಾಕುಂಭ ಮೇಳ ನೋಡುವ ತವಕದಲ್ಲಿದ್ದವರಿಗೆ ಯಮರಾಯನ ದರ್ಶನವಾಗಿದೆ. ನವದೆಹಲಿಯ ರೇಲ್ವೇ ನಿಲ್ದಾಣ ಅಕ್ಷರಶಃ ಸೂತಕದ ಮನೆಯಾಗಿದೆ.
4 ಮಕ್ಕಳು ಸೇರಿದಂತೆ 18 ಹೆಚ್ಚು ಮಂದಿ ಸಾವು
ಮಹಾಕುಂಭ ಮೇಳಕ್ಕೆ ಹೋಗುವ ಎರಡು ವಿಶೇಷ ರೈಲುಗಳು ಆಗಮಿಸಲು ತಡವಾದ ಹಿನ್ನಲೆ ಕಳೆದ ರಾತ್ರಿ ನವದೆಹಲಿ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ತೀವ್ರವಾಗಿ ಕಾಲ್ತುಳಿತ ಉಂಟಾಗಿದೆ. ಹಠಾತ್ ನೂಕುನುಗ್ಗಲು ಉಂಟಾದ ಕಾರಣ ನಾಲ್ವರು ಮಕ್ಕಳು ಸೇರಿ 18 ಮಂದಿ ಉಸಿರುಗಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನೂಕುನುಗ್ಗಲಿನಿಂದಾಗಿ ನಾಲ್ವರು ಉಸಿರಾಡಲು ಸಾಧ್ಯವಾಗದೆ ಪ್ರಜ್ಞೆ ತಪ್ಪಿಬಿದ್ದಿದ್ದು ಕೂಡಲೇ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕಾಗಮಿಸಿ ಹರಸಾಹಸ ಪರಿಸ್ಥಿತಿಯನ್ನು ನಿಯಂತ್ರಿಸಿದ್ರು. ಘಟನೆಯಲ್ಲಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕಳೆದ ರಾತ್ರಿ ದೆಹಲಿಯಿಂದ ಪ್ರಯಾಗ್ ರಾಜ್ಗೆ ತೆರಳಲು ಎರಡು ವಿಶೇಷ ರೈಲುಗಳನ್ನ ರೈಲ್ವೆ ಇಲಾಖೆ ನಿಗದಿ ಮಾಡಿತ್ತು. ಅದರಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಪ್ರಯಾಗ್ರಾಜ್‌ಗೆ ತೆರಳುವ ರೈಲುಗಳನ್ನು ಹತ್ತಲು ಕಾಯುತ್ತಿದ್ರು. ಈ ಸಂದರ್ಭದಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 14 ಮತ್ತು 15 ರಲ್ಲಿ ರಾತ್ರಿ 8 ಗಂಟೆ ಸುಮಾರಿಗೆ ಜನಸಂದಣಿ ತೀವ್ರವಾಗಿದ್ದು ನೂಕುನುಗ್ಗಲು ಉಂಟಾಗಿದೆ.
ಜನಸಂದಣಿಯನ್ನು ನಿಯಂತ್ರಿಸಲು ಯಾರೂ ಇರಲಿಲ್ಲ. ಪ್ಲಾಟ್‌ಫಾರ್ಮ್ ಸಂಖ್ಯೆ 12 ರಲ್ಲಿ ಬರುವ ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 16 ರಲ್ಲಿ ಬರುತ್ತದೆ ಎಂದು ಘೋಷಿಸಲಾಯಿತು. ಆದ್ದರಿಂದ ಎರಡೂ ಕಡೆಯಿಂದ ಜನಸಂದಣಿ ಬಂದಿತು ಮತ್ತು ಕಾಲ್ತುಳಿತ ಸಂಭವಿಸಿತು. ಕೆಲವು ಜನರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದರು ಪ್ರತ್ಯಕ್ಷದರ್ಶಿಗಳು.
ಪ್ರಯಾಗ್ರಾಜ್ನಲ್ಲಿ ಸಂಭವಿಸಿದ ಕಾಲ್ತುಳಿತದ ಶಾಕ್ನಿಂದ ದೇಶವಾಸಿಗಳು ಹೊರಬರೋ ಹೊತ್ತಲ್ಲೇ ದೆಹಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ದೆಹಲಿ ಕಾಲ್ತುಳಿದ ಪ್ರಕರಣದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ ಮತ್ತಷ್ಟು ಹೆಚ್ಚಳವಾಗೋ ಸಾಧ್ಯತೆ ಇದೆ.
ಇದನ್ನೂ ಓದಿ:ಕ್ರಿಕೆಟರ್ ಆಗ್ಲಿಲ್ಲ..! ಸಚಿನ್, ಧೋನಿ, ಕೊಹ್ಲಿ, KL ರಾಹುಲ್ ಮನ ಗೆದ್ದ ಪ್ರೀತಿಯ ಅಣ್ಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ