/newsfirstlive-kannada/media/post_attachments/wp-content/uploads/2024/06/LOK-SABHA.jpg)
ಕೇಂದ್ರದಲ್ಲಿ 3ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಲಿದೆ. ಮೊದಲ ಅಧಿವೇಶನದಲ್ಲಿ ಹೊಸದಾಗಿ ಆಯ್ಕೆಯಾದ ಸದಸ್ಯರು ಪ್ರಮಾಣವಚನ ಸ್ವೀಕರಿಸಲಿದ್ದು, ಸ್ಪೀಕರ್ ಆಯ್ಕೆ, ರಾಷ್ಟ್ರಪತಿಗಳ ಭಾಷಣ ಮತ್ತು ಅದರ ಮೇಲೆ ಚರ್ಚೆ ನಡೆಯಲಿದೆ. ಸಂಸದರ ಪ್ರಮಾಣ ವಚನ ಸ್ವೀಕಾರದ ಬಳಿಕ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ.
ಇದು ನಮೋ ಯುಗ.. 2014ರಿಂದ ಸತತವಾಗಿ 3ನೇ ಬಾರಿಗೆ ಕೇಂದ್ರದಲ್ಲಿ ಅಧಿಕಾರ ಹಿಡಿದಿರೋ ಪ್ರಧಾನಿ ನರೇಂದ್ರ ಮೋದಿ 3.O ಸರ್ಕಾರಕ್ಕೆ ಮೊದಲ ಅಧಿವೇಶನದ ಸವಾಲು..
ಇಂದಿನಿಂದ 18ನೇ ಲೋಕಸಭೆಯ ಅಧಿವೇಶನ ಆರಂಭ
ಕೇಂದ್ರದಲ್ಲಿ 3ನೇ ಬಾರಿಗೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸಂಸತ್ನ ಮೊದಲ ಅಧಿವೇಶನ ಇಂದಿನಿಂದ ಆರಂಭ ಆಗಲಿದೆ. ಅಧಿವೇಶನದ ಮೊದಲ ಎರಡು ದಿನ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 11ಗಂಟೆಗೆ ಅಧಿವೇಶನ ಆರಂಭವಾಗಲಿದ್ದು ಮೊದಲಿಗೆ ಪ್ರಧಾನಿ ಮೋದಿ ಪ್ರಮಾಣ ಸ್ವೀಕರಿಸಲಿದ್ದಾರೆ. ಬಳಿಕ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನ ನೀಡಲಾಗುತ್ತದೆ. ನಂತರ ರಾಜ್ಯವಾರು ಸಂಸದರು ಪ್ರತಿಜ್ಞಾವಿಧಿ ಸ್ವೀಕರಿಸ್ತಾರೆ. ಮೊದಲಿಗೆ ಅಸ್ಸಾಂ ಸಂಸದರು, ಕೊನೆಯಲ್ಲಿ ಪಶ್ಚಿಮ ಬಂಗಾಳದ ಸಂಸದರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:‘ಮಕ್ಕಳಿಗೆ ಬೈಕ್ ಕೊಡ್ತಿದ್ದೀರಾ..’ ಪೋಷಕರೇ ಇನ್ನಾದರೂ ಪಾಠ ಕಲೀರಿ..!
ಅಧಿವೇಶನದಲ್ಲಿ ಏನೇನು?
- ಹಂಗಾಮಿ ಸ್ಪೀಕರ್ ಆಗಿ ಭರ್ತೃಹರಿ ಮಹ್ತಾಬ್ ನೇಮಕ
- ಹಂಗಾಮಿ ಸ್ಪೀಕರ್ಗೆ ರಾಷ್ಟ್ರಪತಿ ಪ್ರಮಾಣ ಬೋಧನೆ
- ಇಂದು 280 ಸಂಸದರಿಂದ ಪ್ರಮಾಣ ವಚನ ಸ್ವೀಕಾರ
- ನಾಳೆ ಉಳಿದ 264 ಸಂಸದರು ಪ್ರತಿಜ್ಞಾವಿಧಿ ಸ್ವೀಕಾರ
- ನೂತನ ಸಂಸದರಿಗೆ ಹಂಗಾಮಿ ಸ್ಪೀಕರ್ ಪ್ರತಿಜ್ಞಾವಿಧಿ
- ಜೂನ್ 26ಕ್ಕೆ ನೂತನ ಸ್ಪೀಕರ್ ಸ್ಥಾನದ ಚುನಾವಣೆ
- ಜೂನ್ 26ರಂದೇ ನೂತನ ಸ್ಪೀಕರ್ ಅಧಿಕಾರ ಸ್ವೀಕಾರ
- ಜೂ.27ಕ್ಕೆ ಜಂಟಿ ಸದನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ
ಹಂಗಾಮಿ ಸ್ಪೀಕರ್ ಆಯ್ಕೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಸಮರ ಮುಂದುವರಿಸಿದೆ. ಹಂಗಾಮಿ ಸ್ಪೀಕರ್ ಆಗಿ ಭತೃಹರಿ ನೇಮಕಕ್ಕೆ ವಿಪಕ್ಷಗಳು ಈಗಾಗಲೇ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಕೇರಳ ಕಾಂಗ್ರೆಸ್ ಸದಸ್ಯ ಕೆ.ಸುರೇಶ್ 8 ಬಾರಿ ಸಂಸದರಾಗಿ ಆಯ್ಕೆ ಆಗಿದ್ದಾರೆ. ಲೋಕಸಭೆಯ ಹಿರಿಯ ಸದಸ್ಯರಾಗಿರುವ ಕಾರಣ ಸುರೇಶ್ಗೆ ಹಂಗಾಮಿ ಸ್ಪೀಕರ್ ಸ್ಥಾನ ನೀಡಬೇಕಿತ್ತು ಅಂತ ಆಗ್ರಹಿಸಿವೆ. ವಿಪಕ್ಷಗಳ ಆಗ್ರಹಕ್ಕೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಕಿರಣ್ ರಿಜಿಜು ಭತೃಹರಿ ಸತತ 7 ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಸುರೇಶ್ 1998 ಮತ್ತು 2004ರ ಚುನಾವಣೆಯಲ್ಲಿ ಸೋತಿದ್ದಾರೆ. ಈಗ ಅವರು ಸತತ 4 ಬಾರಿ ಜಯಗಳಿಸಿದ್ದಾರೆ ಎಂದಿದ್ದರು. ಆದ್ರೆ ಸುರೇಶ್ ಕೇರಳದ ಮಾವೇಲಿಕರ ಲೋಕಸಭಾ ಕ್ಷೇತ್ರದಿಂದ 1989, 1991, 1996, 1999, 2009, 2014, 2019, 2024ರ ಚುನಾವಣೆಯಲ್ಲಿ ಗೆದ್ದಿದ್ದಾರೆಂದು ದಾಖಲೆಗಳು ಹೇಳುತ್ತಿವೆ.
ಹಂಗಾಮಿ ಸ್ಪೀಕರ್ ನೇಮಕ ಕೋಲಾಹಲ ಸಂಭವ!
ಹಂಗಾಮಿ ಸ್ಪೀಕರ್ ಆಯ್ಕೆ ವಿಚಾರ ಕಲಾಪದಲ್ಲಿ ಕೋಲಾಹಲ ಎಬ್ಬಿಸುವ ನಿರೀಕ್ಷೆ ಇದೆ. ಹಂಗಾಮಿ ಸ್ಪೀಕರ್ ನೇಮಕ ವಿಚಾರದಲ್ಲಿ ಸಂಪ್ರದಾಯ ಉಲ್ಲಂಘಿಸಿದ ಸರ್ಕಾರದ ವಿರುದ್ಧ ಗುಟುರು ಹಾಕಿರುವ ಪ್ರತಿಪಕ್ಷಗಳು, ಹಂಗಾಮಿ ಸ್ಪೀಕರ್ ಸಮಿತಿಯಿಂದ ಹೊರ ನಡೆಯಲು ಚಿಂತನೆ ನಡೆಸಿವೆ. ಇಂದು ಅಧಿವೇಶನ ಆರಂಭಕ್ಕೂ ಮೊದಲು ನಡೆಯಲಿರುವ ಇಂಡಿ ಕೂಟದ ನಾಯಕರ ಸಭೆಯಲ್ಲಿ ಸಮಿತಿಯಿಂದ ಹೊರ ಬರುವ ಬಗ್ಗೆ ಚರ್ಚೆ ನಡೆಸಲಿವೆ.
ಸ್ಪೀಕರ್ ಆಯ್ಕೆ, ರಾಷ್ಟ್ರಪತಿಗಳ ಭಾಷಣ ಮತ್ತು ಅದರ ಮೇಲೆ ಚರ್ಚೆ ನಡೆಯಲಿದೆ. ಸಂಸದರ ಪ್ರಮಾಣ ವಚನ ಸ್ವೀಕಾರದ ಬಳಿಕ ನೂತನ ಸ್ಪೀಕರ್ ಆಯ್ಕೆ ನಡೆಯಲಿದೆ. ಇನ್ನು ನೂತನ ಸ್ಪೀಕರ್ ಸ್ಥಾನಕ್ಕೆ ಮತ್ತೆ ಮಾಜಿ ಸ್ಪೀಕರ್ ಓಂ ಬಿರ್ಲಾ ಹೆಸರೇ ಕೇಳಿಬರುತ್ತಿದೆ. ಆಂಧ್ರಪ್ರದೇಶದ ಬಿಜೆಪಿ ಸಂಸದೆ ಡಿ.ಪುರಂದೇಶ್ವರಿ ಕೂಡ ಸ್ಪೀಕರ್ ರೇಸ್ನಲ್ಲಿದ್ದು ಜೂನ್ 26ರಂದು ನೂತನ ಸ್ಪೀಕರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡೆಪ್ಯೂಟಿ ಸ್ಪೀಕರ್ ಸ್ಥಾನಕ್ಕೆ ವಿಪಕ್ಷಗಳು ಬೇಡಿಕೆ ಇಟ್ಟಿವೆ. ಪ್ರಧಾನಿ ನರೇಂದ್ರ ಮೋದಿ ಸದನವನ್ನು ಉದ್ದೇಶಿಸಿ ಜುಲೈ 2 ಅಥವ 3ರಂದು ಮಾತನಾಡಲಿದ್ದಾರೆ.
ಸದಸ್ಯರ ಪ್ರಮಾಣ ವಚನ, ರಾಷ್ಟ್ರಪತಿಗಳ ಭಾಷಣ, ಪ್ರಧಾನಿಗಳ ಉತ್ತರದ ಬಳಿಕ ಲೋಕಸಭೆ, ರಾಜ್ಯಸಭೆ ಕಲಾಪ ಮುಕ್ತಾಯವಾಗಲಿದೆ. ಹೊಸದಾಗಿ ಅಧಿಕಾರಕ್ಕೆ ಬಂದಿರುವ ಎನ್‌ಡಿಎ ಸರ್ಕಾರ 2024-25ನೇ ಸಾಲಿನ ಬಜೆಟ್ ಮಂಡಿಸಬೇಕಿದೆ. ಜುಲೈ 22ರಿಂದ ಬಜೆಟ್ ಅಧಿವೇಶನ ಆರಂಭವಾಗಲಿದೆ.
ವಿಶೇಷ ವರದಿ: ಜಗದೀಶ್, ನ್ಯೂಸ್ ಫಸ್ಟ್, ನವದೆಹಲಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ