/newsfirstlive-kannada/media/post_attachments/wp-content/uploads/2024/09/SCHOOL-1-1.jpg)
2024-25ನೇ ಸಾಲಿನ ಶೈಕ್ಷಣಿಕ ವರ್ಷ ಮುಗಿದು ಹೋಗಿದೆ. ಈ ಬೆನ್ನಲ್ಲೇ 2025-26ನೇ ಸಾಲಿನ ಶೈಕ್ಷಣಿಕ ವರ್ಷ ಶುರುವಾಗಬೇಕಿದೆ. ಇಷ್ಟು ದಿನ ಮಕ್ಕಳಿಗೆ ಪಠ್ಯಪುಸ್ತಕಗಳು ನೀಡಿಲ್ಲ ಅನ್ನೋ ದೂರುಗಳು ಕೇಳಿ ಬಂದಿದ್ದವು. ಮಕ್ಕಳು ಪುಸ್ತಕಗಳು ಇಲ್ಲದೆ ಶಾಲೆಗೆ ಹೋಗುವ ಸ್ಥಿತಿ ನಿರ್ಮಾಣವಾಗಿತ್ತು. ಹಾಗೆಯೇ ಮಕ್ಕಳಿಗೆ ಸಮವಸ್ತ್ರ ನೀಡುವಲ್ಲೂ ವಿಳಂಬ ಆಗಿತ್ತು. ರಾಜ್ಯದ ಅನೇಕ ಶಾಲೆಗಳಲ್ಲಿ ಕಟ್ಟಡ, ಶೌಚಾಲಯ, ಶಿಕ್ಷಕರ ಕೊರತೆ ಎದ್ದು ಕಾಣುತ್ತಿತ್ತು. ಇದರ ಮಧ್ಯೆ 1ನೇ ತರಗತಿಗೆ ಸೇರೋ ಮಕ್ಕಳಿಗೂ ಏಜ್ ಪ್ರಾಬ್ಲಮ್ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ವಿದ್ಯಾರ್ಥಿಗಳ ಬಾಳಲ್ಲಿ ಚೆಲ್ಲಾಟ ಆಡುತ್ತಿವೆ. ನಾಡಿನ ಮಕ್ಕಳ ಭವಿಷ್ಯ ರೂಪಿಸಬೇಕಿದ್ದ ಸರ್ಕಾರಗಳೇ ರಾಜಕೀಯ ಕೆಸರೆರಚಾಟದಲ್ಲಿ ಮುಳುಗಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತದ್ವಿರುದ್ಧ ಆದೇಶಗಳ ಮೂಲಕ ಮಕ್ಕಳ ಭವಿಷ್ಯದ ಬಗ್ಗೆ ಆಟವಾಡ್ತಿವೆ.
ಇತ್ತೀಚೆಗೆ ಮಕ್ಕಳನ್ನು 1ನೇ ತರಗತಿಗೆ ಸೇರಿಸಲು ವಯಸ್ಸು 5.5 ವರ್ಷ ಇದ್ರೆ ಸಾಕು ಎಂದು ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಈ ಬೆನ್ನಲ್ಲೇ ದೇಶದ ಯಾವುದೇ ರಾಜ್ಯದಲ್ಲಿ 1ನೇ ತರಗತಿಗೆ ದಾಖಲು ಮಾಡಿಸಲು ಮಗುವಿಗೆ ಕನಿಷ್ಟ 6 ವರ್ಷ ಆಗಿರಬೇಕು ಎಂದು ಕೇಂದ್ರ ಶಿಕ್ಷಣ ಇಲಾಖೆ ಆದೇಶ ಮಹತ್ವದ ಸೂಚನೆ ನೀಡಿದೆ. ಇದು ಶಾಲಾ ಸಿಬ್ಬಂದಿ ಹಾಗೂ ಪೋಷಕರಲ್ಲಿ ಭಾರೀ ಗೊಂದಲ ಉಂಟು ಮಾಡಿದೆ.
ಏನಿದು ಕೇಂದ್ರದ ವಿವಾದಿತ ಆದೇಶ?
ರಾಜ್ಯ ಸರ್ಕಾರ ನಿಗದಿಗೊಳಿಸಿರೋ ವಯೋಮಿತಿಯನ್ನು 6 ತಿಂಗಳಿಗೆ ಹೆಚ್ಚಿಸಿ ಕೇಂದ್ರ ಸರ್ಕಾರ ಆದೇಶಿಸಿದೆ. 1ನೇ ಕ್ಲಾಸಿಗೆ ಸೇರಲು ಮಗುವಿಗೆ 6 ವರ್ಷ ಕಡ್ಡಾಯ ಆಗಿರಬೇಕು. 2025-26ರ ಶೈಕ್ಷಣಿಕ ವರ್ಷದಿಂದಲೇ ಈ ನಿಯಮ ಕಡ್ಡಾಯವಾಗಿ ಜಾರಿ ಆಗಬೇಕು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಪತ್ರ ಬರೆದಿದೆ. ಅಷ್ಟೇ ಅಲ್ಲ ಹೊಸ ನಿಯಮದ ಬಗ್ಗೆ ಏನಾದ್ರೂ ಆಕ್ಷೇಪಣೆ ಇದ್ದಲ್ಲಿ ಸಲ್ಲಿಸಬಹುದು ಎಂದು ರಾಜ್ಯಗಳಿಗೆ ಕೇಂದ್ರ ಹೇಳಿದೆ.
ಪೋಷಕರಲ್ಲಿ ಗೊಂದಲ ಏಕೆ?
2018ರಲ್ಲಿ 1ನೇ ತರಗತಿ ಪ್ರವೇಶ ವಯಸ್ಸು 5 ವರ್ಷ 5 ತಿಂಗಳಿಗೆ ನಿಗದಿಪಡಿಸಲಾಗಿತ್ತು. ಬಳಿಕ ಡಿಸೆಂಬರ್ 2022ರಲ್ಲಿ ಒಂದನೇ ತರಗತಿಗೆ 6 ವರ್ಷ ಅನ್ನೋ ನಿಯಮ ಬಂತು. ಅಂದು 2022ರಲ್ಲಿ ಪ್ರೀ ಕೆಜಿಗೆ ಅಡ್ಮಿಷನ್ ಮಾಡಿಸಲಾಗಿದ್ದ ಮಕ್ಕಳಿಗೆ ಈಗ 6 ವರ್ಷ. ಹೀಗಾಗಿ ರಾಜ್ಯ ಸರ್ಕಾರದ ಹೊಸ ಆದೇಶದಿಂದ 6 ವರ್ಷ ತುಂಬಿರೋ ಮಕ್ಕಳಿಗೆ 1ನೇ ತರಗತಿಗೆ ಸೇರಲು ಆಗುತ್ತಿಲ್ಲ. ಬರೋಬ್ಬರಿ 15 ಲಕ್ಷಕ್ಕೂ ಹೆಚ್ಚು ಮಕ್ಕಳ ಭವಿಷ್ಯ ಆತಂಕದಲ್ಲಿದ್ದು, ಈ ವರ್ಷ ರಿಯಾಯಿತಿಗೆ ಪೋಷಕರು ಆಗ್ರಹಿಸಿದ್ದಾರೆ. ಜತೆಗೆ ಮಕ್ಕಳನ್ನು 1ನೇ ತರಗತಿಗೆ 5.5 ವರ್ಷ ದಾಟಿದ ಕೂಡಲೇ ಸೇರಿಸಬೇಕೋ ಅಥವಾ ಕೇಂದ್ರ ಸರ್ಕಾರದ ಸುತ್ತೋಲೆಯಂತೆ 6 ವರ್ಷ ದಾಟಿದ ನಂತರ ಸೇರಿಸಬೇಕೋ ಎಂಬ ಗೊಂದಲ ಇದೆ. ಇದರಿಂದ ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಸಚಿವ ಮಧು ಬಂಗಾರಪ್ಪ ಏನಂದ್ರು?
1ನೇ ತರಗತಿಗೆ ಮಕ್ಕಳ ದಾಖಲಾತಿ ವಯಸ್ಸನ್ನು ರಾಜ್ಯ ಶಿಕ್ಷಣ ನೀತಿ (SEP) ಆಯೋಗದ ಶಿಫಾರಸ್ಸಿನ ಆಧಾರದ ಮೇಲೆ ನಿರ್ಧರಿಸಲಾಗುವುದು ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ರು. ಹಿಂದಿನ ಸರ್ಕಾರ ಮಾಡಿದ ತಪ್ಪಿನಿಂದ ಈ ಗೊಂದಲ ಉಂಟಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಪ್ರಕಾರ ಅವರು ಮಾರ್ಗಸೂಚಿಗಳನ್ನು ರೂಪಿಸಿದ್ದರು. ಆದರೆ ನಾವು ಅದನ್ನು ವಿರೋಧಿಸುತ್ತೇವೆ. ಹಾಗಾಗಿ ಈ ವಿಷಯವನ್ನು ಪರಿಶೀಲಿಸಲು ರಾಜ್ಯ ಶಿಕ್ಷಣ ನೀತಿ ಆಯೋಗಕ್ಕೆ ಮನವಿ ಕಳುಹಿಸಿದ್ದೇವೆ. ಎಸ್‌ಇಪಿ ಆಯೋಗದಿಂದ ಮಾರ್ಗಸೂಚಿ ಪಡೆದ ಕೂಡಲೇ ಅದನ್ನು ಜಾರಿಗೆ ಮಾಡುತ್ತೇವೆ. ತರಾತುರಿಯಲ್ಲಿ ನಿರ್ಧಾರ ಕೈಗೊಂಡರೆ ರಾಜ್ಯದ 15 ಲಕ್ಷ ಮಕ್ಕಳ ಮೇಲೆ ಪ್ರಭಾವ ಬೀಳಲಿದೆ ಎಂದರು.
ಏನಿದು ವಿವಾದ?
ಶಾಲಾ ಶಿಕ್ಷಣ ಇಲಾಖೆ ನವೆಂಬರ್ 15, 2022 ರಂದು ಆದೇಶವೊಂದು ಹೊರಡಿಸಿತ್ತು. 2022ರ ಆದೇಶದ ಪ್ರಕಾರ ಜೂನ್ 1, 2025ರ ವೇಳೆಗೆ 6 ವರ್ಷ ಪೂರೈಸಿದ ಮಕ್ಕಳು 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ 1ನೇ ತರಗತಿಗೆ ದಾಖಲಾಗಲು ಅರ್ಹರಾಗಿರುತ್ತಾರೆ. ಈ ಹಿಂದೆ 1ನೇ ತರಗತಿಗೆ ಪ್ರವೇಶ ಪಡೆಯಲು ಕನಿಷ್ಠ ವಯಸ್ಸು 5.5 ವರ್ಷ ಎಂದಿತ್ತು. ಪೋಷಕರು ಬೀದಿಗಿಳಿದ ಬಳಿಕ ಎಚ್ಚೆತ್ತ ಸರ್ಕಾರ ನವೆಂಬರ್ 2022ರ ಆದೇಶವನ್ನು 2025-26ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ತರಲಾಗುವುದು ಎಂದು ಹೇಳಿತ್ತು. ಹಾಗಾಗಿ ಈ ವರ್ಷ 1ನೇ ತರಗತಿಗೆ ಪ್ರವೇಶ ಪಡೆಯುವ ವಯಸ್ಸಿನ ಬಗ್ಗೆ ಪೋಷಕರಲ್ಲಿ ಗೊಂದಲವಿದೆ. ಈ ಗೊಂದಲವನ್ನು ನಿವಾರಿಸಲು ಸರ್ಕಾರ ರಾಜ್ಯ ಶಿಕ್ಷಣ ನೀತಿ ಆಯೋಗದ ಸಹಾಯ ಪಡೆಯುತ್ತಿದೆ. ಆಯೋಗದ ಶಿಫಾರಸ್ಸಿನಂತೆ ಹೊಸ ನಿಯಮಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧವಾಗಿದೆ.
ಲೇಖಕರು:ಗಣೇಶ್ ನಚಿಕೇತು
ಇದನ್ನೂ ಓದಿ:GHIBLI ಮಾಯೆಗೆ ನೀವು ಮರುಳಾದ್ರಾ? ಇದು ಒಳ್ಳೇದಾ.. ಕೆಟ್ಟದ್ದಾ? ಸೈಬರ್ ಎಕ್ಸ್ಪರ್ಟ್ಗಳ ಎಚ್ಚರಿಕೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ