/newsfirstlive-kannada/media/post_attachments/wp-content/uploads/2024/12/UK-Parking-Fine.jpg)
ಬ್ರಿಟನ್ನ ಡರ್ಬಿಯಲ್ಲಿ ಮಹಿಳೆಯೊಬ್ಬರು 2 ಲಕ್ಷ ರೂ. ಪಾರ್ಕಿಂಗ್ ದಂಡ ಕಟ್ಟಿರೋದು ಭಾರೀ ಚರ್ಚೆಗೆ ಗುರಿಯಾಗಿದೆ. ನೆಟ್‌ವರ್ಕ್ ಸಮಸ್ಯೆಯಿಂದ ಪಾರ್ಕಿಂಗ್ ಶುಲ್ಕ ನಿಗದಿತ ಸಮಯದಲ್ಲಿ ಪಾವತಿಸುವಲ್ಲಿ 5 ನಿಮಿಷ ವಿಳಂಬ ಮಾಡಿದ ಮಹಿಳೆಗೆ 2 ಲಕ್ಷ ರೂ. ದಂಡ ವಿಧಿಸಲಾಗಿದೆ. ಕಟ್ಟುನಿಟ್ಟಾದ ಪಾರ್ಕಿಂಗ್ ನಿಯಮಗಳಿಂದಾಗಿ ಮಹಿಳೆ 2 ಲಕ್ಷ ದಂಡ ತೆತ್ತಿದ್ದಾರೆ. ಇದಕ್ಕೆ ಕಳಪೆ ಮೊಬೈಲ್ ನೆಟ್ವರ್ಕ್ ಕಾರಣ ಅಂತ ಮಹಿಳೆ ರೋಜಿ ಹಡ್ಸನ್ ಹೇಳಿದ್ದಾರೆ.
ಬ್ರಿಟನ್ನ ಡರ್ಬಿಯಲ್ಲಿ ಪಾರ್ಕಿಂಗ್ನಲ್ಲಿ ವಾಹನ ನಿಲ್ಲಿಸಿ ಬಳಿಕ ತೆಗೆದುಕೊಂಡು ಹೋಗುವಾಗ ಪ್ರತಿಯೊಬ್ಬರಿಗೂ ಕೇವಲ 5 ನಿಮಿಷ ಸಮಯ ನಿಡಲಾಗುತ್ತದೆ. ಆದರೆ ನೆಟ್ವರ್ಕ್ ಸಮಸ್ಯೆಯಿಂದ ಆ ಮಹಿಳೆ ಶುಲ್ಕ ಪಾವತಿಸಲು 5 ನಿಮಿಷಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾಳೆ. ಹೀಗೆ 10 ಬಾರಿ ನಿಯಮ ಉಲ್ಲಂಘಿಸಿದ್ದು ಇದರಿಂದ ಅಧಿಕಾರಿಗಳು 2 ಲಕ್ಷ ದಂಡ ವಿಧಿಸಿದ್ದಾರೆ.
ನೆಟ್‌ವರ್ಕ್ ಸಮಸ್ಯೆ ಕಾರಣ!
ರೋಜಿ ಹಡ್ಸನ್ ತಮ್ಮ ಕಾರು ಪಾರ್ಕ್ ಮಾಡಿದ ಬಳಿಕ ಶುಲ್ಕ ಪಾವತಿಸಲು ಪ್ರಯತ್ನಿಸಿದ್ದಾರೆ. ಆದರೆ ಮೊಬೈಲ್ ಸಿಗ್ನಲ್ ಸಮಸ್ಯೆಯಿಂದ ಸಿಗ್ನಲ್ ಹುಡುಕುತ್ತಾ ಸ್ವಲ್ಪ ದೂರ ಹೋಗಿದ್ದಾರೆ. ರೋಜಿ ಶುಲ್ಕ ಪಾವತಿ ಮಾಡುವ ಹೊತ್ತಿಗೆ ಪಾರ್ಕಿಂಗ್ ಗುತ್ತಿಗೆದಾರ ಕಂಪನಿ ಎಕ್ಸೆಲ್ ಪಾರ್ಕಿಂಗ್ ಲಿಮಿಟೆಡ್ ರೋಜಿಗೆ 10 ನೋಟಿಸ್ ಜಾರಿ ಮಾಡಿದೆ.
ಫೆಬ್ರವರಿ 2023ರಿಂದ ಈ ಪಾರ್ಕಿಂಗ್ ಬಳಸುತ್ತಿದ್ದೇನೆ ಅಂತಾ ರೋಜಿ ಹಡ್ಸನ್ ಹೇಳಿದ್ದಾರೆ. ಯಂತ್ರ ಕೆಟ್ಟು ಹೋಗಿದ್ದರಿಂದ ಆ್ಯಪ್ ಮೂಲಕ ಹಣ ಪಾವತಿ ಮಾಡುತ್ತಿದ್ದಳು. ಮೊದಲು ರೋಜಿಗೆ 100 ಪೌಂಡ್(10 ಸಾವಿರ ರೂ.) ನೋಟಿಸ್ ಬಂದಿದೆ. ರೋಸಿ ಈ ಬಗ್ಗೆ ಪಾರ್ಕಿಂಗ್ ಗುತ್ತಿಗೆದಾರ ಕಂಪನಿಯನ್ನು ಸಂಪರ್ಕಿಸಿದ್ದಾರೆ. ಆದರೆ ಅವರ ಮನವಿ ನಿರ್ಲಕ್ಷಿಸಿದ್ದಾರೆ. ಅವರಿಗೆ ಒಟ್ಟು 10 ನೋಟಿಸ್ ಬಂದಿದ್ದು ಜೊತೆ ಸಾಲ ವಸೂಲಾತಿ ಶುಲ್ಕ ಮತ್ತು 8% ವಾರ್ಷಿಕ ಬಡ್ಡಿಯನ್ನೂ ಸೇರಿಸಿ ದಂಡ ವಸೂಲಿ ಮಾಡಲಾಗಿದೆ.
ಇದನ್ನೂ ಓದಿ: ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಗ ಚೈತನ್ಯ-ಶೋಭಿತಾ; ಮದುವೆ ಫೋಟೋಸ್ ಇಲ್ಲಿವೆ
ಪಾರ್ಕಿಂಗ್ ಗುತ್ತಿಗೆ ಕಂಪನಿ ಸ್ಪಷ್ಟನೆ
ಡರ್ಬಿಯಲ್ಲಿ ಪಾರ್ಕಿಂಗ್ ಗುತ್ತಿಗೆ ಪಡೆದಿರುವ ಕಂಪನಿ ಎಕ್ಸೆಲ್ ಪಾರ್ಕಿಂಗ್ ಲಿಮಿಟೆಡ್, ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ನಮ್ಮ ಕಾರು ಪಾರ್ಕ್ ಸ್ಥಳದಲ್ಲಿ ಪೇ ಆನ್ ಎಂಟ್ರಿ’ ಎಂಬ ಸೌಲಭ್ಯವಿದೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. 5 ನಿಮಿಷಗಳಲ್ಲಿ ಶುಲ್ಕ ಪಾವತಿ ಕಡ್ಡಾಯವಾಗಿದೆ. ಪಾರ್ಕಿಂಗ್ನ ದುರ್ಬಳಕೆ ತಡೆಯುವುದಕ್ಕಾಗಿ ಈ ನಿಯಮವಿದೆ ಅಂತ ಕಂಪನಿ ಹೇಳಿದೆ. ರೋಜಿ ಹಡ್ಸನ್ ಈ ನಿಯಮ ಅನುಸರಿಸಿಲ್ಲ. ಅವರಿಗೆ ಆದ ತೊಂದರೆಗೆ ಅವರೇ ಜವಾಬ್ದಾರರು. ಪಾರ್ಕಿಂಗ್ ಶುಲ್ಕ ಪಾವತಿಸಲು 15-20 ನಿಮಿಷ ಸಮಯ ತೆಗೆದುಕೊಂಡಿದ್ದಾರೆ. ಈ ವಿಚಾರ 6 ತಿಂಗಳ ಒಳಗೆ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ.
ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ!
ಪಾರ್ಕಿಂಗ್ ಶುಲ್ಕ ತಡವಾಗಿದ್ದಕ್ಕೆ ದಂಡ ವಿಧಿಸಿದ್ದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ಈ ನಿಯಮವನ್ನು ಟೀಕಿಸುತ್ತಿದ್ದಾರೆ. ಸಿಗ್ನಲ್ ಹುಡುಕುವ ಶುಲ್ಕ ಪ್ರತ್ಯೇಕವಾಗಿ ಸೇರಿಸಿ ಅಂತ ಒಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದರೆ, ಮತ್ತೊಬ್ಬರು ಭಾರತದಲ್ಲಿ ಇಂತಹ ನಿಯಮ ಇದ್ದಿದ್ದರೆ ಕೋಟಿಗಟ್ಟಲೆ ದಂಡ ಪಾವತಿಸಬೇಕಾಗಿತ್ತು ಅಂತ ಜೋಕ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ