2025 ಬೆಂಗಳೂರು ಕರಗ ಹೇಗಿತ್ತು? ಐತಿಹಾಸಿಕ ಉತ್ಸವದ ಟಾಪ್ 10 ಫೋಟೋ ಇಲ್ಲಿದೆ!

author-image
admin
Updated On
2025 ಬೆಂಗಳೂರು ಕರಗ ಹೇಗಿತ್ತು? ಐತಿಹಾಸಿಕ ಉತ್ಸವದ ಟಾಪ್ 10 ಫೋಟೋ ಇಲ್ಲಿದೆ!
Advertisment
  • 15ನೇ ವರ್ಷವೂ ಕರಗ ಹೊತ್ತು ದಾಖಲೆ ಬರೆದ ಅರ್ಚಕ ಜ್ಞಾನೇಂದ್ರ
  • ಚೈತ್ರ ಹುಣ್ಣಿಮೆ ಬೆಳಕು, ಮಲ್ಲಿಗೆ ಹೂವಿನ ಕಂಪು ಹಾಗೂ ವೀರಕುಮಾರರು
  • ಐತಿಹಾಸಿಕ ಬೆಂಗಳೂರು ಕರಗ ಸಂಭ್ರಮ, ಸಡಗರದ ಕ್ಷಣಗಳು ಇಲ್ಲಿವೆ!

ಚೈತ್ರಮಾಸದ ಶುದ್ಧ ಪೂರ್ಣಿಮೆಯಂದು ನಡೆಯುವ ಐತಿಹಾಸಿಕ ಬೆಂಗಳೂರು ಕರಗ ಸಂಭ್ರಮ, ಸಡಗರದಿಂದ ನೆರವೇರಿದೆ. ಅದ್ಧೂರಿ ಕರಗ ಮಹೋತ್ಸವಕ್ಕೆ ಲಕ್ಷಾಂತರ ಭಕ್ತಗಣ ಸಾಕ್ಷಿಯಾಯ್ತು. ಧರ್ಮರಾಯಸ್ವಾಮಿ ದೇಗುಲದ ಅರ್ಚಕ ಜ್ಞಾನೇಂದ್ರ ಸತತ 15ನೇ ವರ್ಷವೂ ಕರಗ ಹೊತ್ತು ದಾಖಲೆ ಬರೆದಿದ್ದಾರೆ.

ಬರೋಬ್ಬರಿ 800 ವರ್ಷಗಳ ಇತಿಹಾಸ ಹೊಂದಿರುವ ಕರಗ. ಆದಿಶಕ್ತಿ ಸ್ವರೂಪಿಣಿ ದ್ರೌಪದಮ್ಮ-ಧರ್ಮರಾಯಸ್ವಾಮಿ ಕರಗ ಶಕ್ತ್ಯೋತ್ಸವ. ಚೈತ್ರ ಹುಣ್ಣಿಮೆಯ ಬೆಳಕು. ಮಲ್ಲಿಗೆ ಹೂವಿನ ಕಂಪು. ಬಣ್ಣ ಬಣ್ಣದ ಹೂವುಗಳಿಂದ ಧರ್ಮರಾಯಸ್ವಾಮಿ ರಥ ಝಗಮಗ. ರಥದ ಮೇಲೆ ಕಲಶ. ಉತ್ಸವಕರ್ತರು ಹಾಗೂ ವೀರಕುಮಾರರು, ಪೂಜಾರಿಗಳೊಂದಿಗೆ ಸಾಗುವ ಮೆರವಣಿಗೆ. ಛತ್ರಿ, ಚಾಮರ, ಧ್ವಜದ ಜತೆಗೆ ನಾದಸ್ವರ. ಇಂದು ಬೆಂಗಳೂರಿನ ಹೆಮ್ಮೆಯ ಕರಗ.

publive-image

ಬೆಂಗಳೂರು ಕರಗ ಮಹೋತ್ಸವ ಅದ್ಧೂರಿಯಾಗಿ ಸಂಪನ್ನ
ಐತಿಹಾಸಿಕ ಕರಗೋತ್ಸವ ಕಣ್ತುಂಬಿಕೊಂಡ ಲಕ್ಷಾಂತರ ಭಕ್ತರು
ಕರಗ ಮಹೋತ್ಸವ.. ಇದು ಬೆಂಗಳೂರಿನ ಜಾನಪದ ಹಬ್ಬ.. ತಿಗಳರು ಅಥವಾ ವಹ್ನಿಕುಲ ಸಮುದಾಯ ಶತ-ಶತಮಾನಗಳಿಂದ ನಡೆಸಿಕೊಂಡು ಬಂದಿರುವ ಸಂಪ್ರದಾಯ. ಯುಗಾದಿ ನಂತರದ 11 ದಿನಗಳ ಹಬ್ಬ. ದ್ವಾದಶಿಯಂದು ಆರತಿ ಸೇವೆ ನಡೆದ್ರೆ, ತ್ರಯೋದಶಿಯಂದು ಹಸಿಕರಗ ಸೇವೆ, ಹಾಗೂ ಶುದ್ಧ ಹುಣ್ಣಿಮೆ ದಿನ ಕರಗ ಶಕ್ತೋತ್ಸವ ನಡೆಯುತ್ತೆ.

ನಿನ್ನೆ ಬೆಳಗ್ಗೆಯಿಂದಲೂ ಕರಗದ ಕೇಂದ್ರ ಬಿಂದು ದ್ರೌಪದಮ್ಮ-ಧರ್ಮರಾಯಸ್ವಾಮಿ ಸ್ವಾಮಿ ದೇಗುಲದಲ್ಲಿ ವಿಶೇಷ ಪೂಜೆ, ಅಭಿಷೇಕ, ಮಹಾಮಂಗಳಾರತಿ ಸೇರಿ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆದವು.

publive-image

ಪ್ರತಿ ವರ್ಷದಂತೆ ಈ ವರ್ಷವೂ ರಾತ್ರಿ 12.30ಕ್ಕೆ ಕರಗ ಉತ್ಸವ ಆರಂಭ ಆಗಬೇಕಿತ್ತು. ಆದ್ರೆ ರಾತ್ರಿ ಸುರಿದ ವರುಣ ಉತ್ಸವಕ್ಕೆ ಅಡ್ಡಿ ಮಾಡಿದ್ದು, ಒಂದು ಗಂಟೆ ತಡವಾಗಿ ಕರಗ ಉತ್ಸವ ಆರಂಭವಾಯಿತು. ಅರಿಶಿನ ಬಣ್ಣದ ಸೀರೆಯುಟ್ಟು, ಕೈಗೆ ಬಳೆಗಳನ್ನು ತೊಟ್ಟು ಹೆಣ್ಣಿನ ವೇಷ ಧರಿಸಿದ ಅರ್ಚಕ ಜ್ಞಾನೇಂದ್ರ ಮಹಾಮಂಗಳಾರತಿ ಬಳಿಕ ಕರಗ ಹೊತ್ತು ದೇಗುಲದಿಂದ ಹೊರಬಂದ್ರು.

ಇದನ್ನೂ ಓದಿ: 800 ವರ್ಷಗಳ ಬೆಂಗಳೂರು ‘ಕರಗ’ ಎಂದರೇನು? ದ್ರೌಪದಿ ಆರಾಧನೆಯ ಪೌರಾಣಿಕ ಕಥೆ ಏನು? ಓದಲೇಬೇಕಾದ ಸ್ಟೋರಿ! 

ಮಲ್ಲಿಗೆಯ ಕರಗ ಹೊತ್ತು ನೃತ್ಯ ಮಾಡುತ್ತಾ ಹೆಜ್ಜೆ ಹಾಕಿದ್ರು. ಕರಗ ನೋಡಲು ಕಾತುರದಿಂದ ಕಾಯ್ತಿದ್ದ ಭಕ್ತರು ಕರಗದ ದರ್ಶನ ಮಾಡಿ ಪುನೀತರಾದ್ರು. ಭಕ್ತಿಯಿಂದ ಕೈ ಮುಗಿದು ಕರಗದ ಮೇಲೆ ಹೂಮಳೆ ಸುರಿಸಿದ್ರು. ಈ ವೇಳೆ ಘಂಟಾನಾದ ಜೋರಾಗಿ ಮೇಳೈಸಿತು. ಕರಗ ಉತ್ಸವ ಕಣ್ತುಂಬಿಕೊಂಡ ಭಕ್ತರು ಭಕ್ತಿಯ ಪರಾಕಾಷ್ಟೆಯಲ್ಲಿ ಮಿಂದೆದರು.

publive-image

ಕರಗ ಹೊತ್ತ ಅರ್ಚಕ ಜ್ಞಾನೇಂದ್ರ ವಾದ್ಯಮೇಳಕ್ಕೆ ತಕ್ಕಂತೆ ನೃತ್ಯ ಮಾಡುತ್ತಾ ಮುಂದೆ ಸಾಗಿದ್ರೆ ವೀರಕುಮಾರರು ಅವರ ಹಿಂದೆ ಹಿಂದೆಯೇ ಹೆಜ್ಜೆ ಹಾಕಿದ್ರು. ಕರಗ ಮೆರವಣಿಗೆ ಸಾಗುವ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಕರಗದ ಮೇಲೆ ಹೂವು ಎರಚಿ ಗೋವಿಂದ.. ಗೋವಿಂದ ಮಂತ್ರಘೋಷ ಮೊಳಗಿಸಿದ್ರು.

ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಟ ಉತ್ಸವ ಮೊದಲು ಹಲಸೂರು ಪೇಟೆಯ ಆಂಜನೇಯಸ್ವಾಮಿ ಹಾಗೂ ಶ್ರೀರಾಮದೇವರಿಗೆ ಪೂಜೆ ಸಲ್ಲಿಸ್ತು. ಬಳಿಕ ನಗರ್ತಪೇಟೆ, ಸಿದ್ದಣ್ಣಗಲ್ಲಿ, ಕಬ್ಬನ್​ಪೇಟೆ ಮೂಲಕ ಸಾಗಿ ಕೆ.ಆರ್.ಮಾರುಕಟ್ಟೆ ಮೂಲಕ ಮುಂದುವರಿದು ಮಸ್ತಾನ್​ ಸಾಹೇಬರ ದುರ್ಗಾ ತಲುಪಿತು.

publive-image

ಮಸ್ತಾನ್ ಸಾಬ್ ದರ್ಗಾದಲ್ಲಿ ದೂಪಾರತಿ ಪಡೆದ ಬಳಿಕ ಬಳೇಪೇಟೆ, ಹಳೇಗರಡಿ ಮೂಲಕ ಬೆಂಗಳೂರಿನ ಗ್ರಾಮದೇವತೆ ಅಣ್ಣಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸ್ತು.

publive-image

ಬಳಿಕ ಕಿಲಾರಿ ರಸ್ತೆ, ಯಲಹಂಕ ಗೇಟ್​, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ ಮೂಲಕ ಸಾಗಿ ತಿಗಳಪೇಟೆಯಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಭಕ್ತರಿಂದ ಪೂಜೆ ಸಲ್ಲಿಕೆ ಆಯ್ತು. ಬಳಿಕ ಹಾಲುಬೀದಿ, ಕಬ್ಬನ್​ಪೇಟೆ, ಸುಣ್ಣಕಲ್​ ಪೇಟೆ ಮಾರ್ಗವಾಗಿ ಬಂದು ನರಸಿಂಹ ಜೋಯಿಸ್​ಗಲ್ಲಿ ಮಾರ್ಗವಾಗಿ ಕರಗ ಉತ್ಸವ ಸಾಗಿದೆ.

publive-image

ಚೈತ್ರಪೂರ್ಣಿಮೆಯ ಬೆಳಕಿನ ನಡುವೆ ತಲೆತಲಾಂತರಗಳಿಂದ ನಡೆದುಕೊಂಡು ಬಂದಿರುವ ಕರಗ ಮಹೋತ್ಸವ ನೆರೆದಿದ್ದ ಭಕ್ತರನ್ನು ತನ್ಮಯಗೊಳಿಸಿದೆ. ಮಲ್ಲಿಗೆ ಹೂವಿನ ರೂಪದಲ್ಲಿ ಶಕ್ತಿಸ್ವರೂಪಿಣಿ, ಆದಿಶಕ್ತಿ ದ್ರೌಪದಮ್ಮನ ದರ್ಶನ ಮಾಡಿದ ಭಕ್ತರು ಪುನೀತರಾಗಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment