/newsfirstlive-kannada/media/post_attachments/wp-content/uploads/2025/07/MYS_DASARA_2025.jpg)
ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ 2025ರ ದಸರಾ ಮಹೋತ್ಸವ ಈ ಬಾರಿ 11 ದಿನಗಳ ಕಾಲ ಸಂಭ್ರಮದಿಂದ ನಡೆಯಲಿದೆ. ಆದರೆ ಈ ಸಲದ ದಸರಾ ಉದ್ಘಾಟನೆ ಮಾಡುವರು ಯಾರು ಎಂಬುದರ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಕ್ರಿಕೆಟರ್ಸ್ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಸಾಹಿತಿ ಬಾನು ಮುಷ್ತಾಕ್, ಬಿ.ಜಯಶ್ರೀ ಹೆಸರು ಮುಂಚೂಣಿಯಲ್ಲಿವೆ.
ಸಿಎಂ ಸಿದ್ದರಾಮಯ್ಯ ಅವರ ರಾಜಕೀಯ ಗುರುಗಳು ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಂದ ಈ ಬಾರಿ ದಸರಾ ಉದ್ಘಾಟನೆ ಮಾಡಬೇಕು. ಪ್ರಧಾನಿಗಳಾಗಿದ್ದಾಗ ಕರ್ನಾಟಕಕ್ಕಾಗಿ ಶ್ರಮಿಸಿದ್ದಾರೆ. ದೆಹಲಿ ಕೆಂಪುಕೋಟೆಯಲ್ಲಿ ಕನ್ನಡದ ಬಾವುಟ ಹಾರಿಸಿದ ಏಕೈಕ ಕನ್ನಡಿಗ ಎಂದರೆ ಹೆಚ್.ಡಿ ದೇವೇಗೌಡ. ಹೀಗಾಗಿ ಒಕ್ಕಲಿಗ ಶಾಸಕರಲ್ಲದೇ ಎಲ್ಲರಿಂದಲೂ ಒಗ್ಗೂಡಿ ಆಗ್ರಹ ಕೇಳಿ ಬಂದಿದೆ. ಹಿರಿಯ ರಾಜಕಾರಣಿಯ ಸಂಧ್ಯಾಕಾಲದಲ್ಲಿ ಗೌರವ ಕೊಡಿ ಎಂದು ಮನವಿ ಮಾಡಲಾಗಿದೆ.
ಇತ್ತೀಚೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಪಡೆದಿರುವ ಹಾಸನದ ಮಹಿಳಾ ಸಾಹಿತಿ ಬಾನು ಮುಷ್ತಾಕ್ ಅವರ ಹೆಸರು ಕೂಡ ಮುಂಚೂಣಿಯಲ್ಲಿದೆ. ಸಾಹಿತಿ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆ ಕುರಿತು ಚಿಂತನೆ ನಡೆದಿದೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದಾರೆ. ಇವರ ಹೆಸರಿನ ಬೆನ್ನಲ್ಲೇ ಸುತ್ತೂರು ಶ್ರೀಗಳ ಹೆಸರು ಕೂಡ ಮುನ್ನಲೆಗೆ ಬಂದಿದೆ.
2025ರ ದಸರಾ ಮಹೋತ್ಸವವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುಲು ಸರ್ಕಾರದಿಂದ ಚಿಂತನೆ ನಡೆದಿದೆ. ಹೀಗಾಗಿ ಕ್ರಿಕೆಟರ್, ಟೀಮ್ ಇಂಡಿಯಾದ ಮಾಜಿ ಆಟಗಾರರಾದ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಹೆಸರುಗಳು ಕೇಳಿ ಬಂದಿವೆ. ರಂಗಭೂಮಿ ಕಲಾವಿದೆ ಬಿ. ಜಯಶ್ರೀ ಅವರ ಹೆಸರು ಕೂಡ ಚರ್ಚಿಸಲಾಗಿದೆ.
ಇದನ್ನೂ ಓದಿ:ಕಬಿನಿ ಜಲಾಶಯದ ಬಫರ್ ಜೋನ್ನಲ್ಲಿ 1 KM ಅನಧಿಕೃತ ರಸ್ತೆ ನಿರ್ಮಾಣ.. ನೋಟಿಸ್ ಜಾರಿ
ಈ ಹಿಂದೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಗಣ್ಯರಿಂದ ದಸರಾ ಸಮಾರಂಭವನ್ನು ಉದ್ಘಾಟನೆ ಮಾಡಲಾಗಿತ್ತು. ಕಲೆ, ಸಾಹಿತ್ಯ, ಧಾರ್ಮಿಕ, ಕೃಷಿ ಕ್ಷೇತ್ರ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹನೀಯರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಮಾಡಲಾಗಿತ್ತು. ಡಾ.ರಾಜ್ ಕುಮಾರ್, ಸಿದ್ದಗಂಗಾ ಶ್ರೀಗಳು, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಅನೇಕರು ದಸರಾವನ್ನು ಉದ್ಘಾಟನೆ ಮಾಡಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ