/newsfirstlive-kannada/media/post_attachments/wp-content/uploads/2025/02/USD-5-million-for-a-gold-card-in-the-USA.jpg)
ವಿಶ್ವದ ದೊಡ್ಡಣ್ಣ ಅನ್ನೋ ಖ್ಯಾತಿ ಪಡೆದಿರುವ ಅಮೆರಿಕಾ ಕೊನೆಗೂ ದುಡ್ಡಿದ್ದವರಿಗೆ ಮಣೆ ಹಾಕಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 43 ಕೋಟಿ ರೂಪಾಯಿ ಕೊಟ್ಟವರಿಗೆ ಅಮೆರಿಕಾದ ಪೌರತ್ವ ನೀಡುವ ಮಹತ್ವದ ಘೋಷಣೆ ಮಾಡಿದ್ದಾರೆ. EB-5 ಇನ್ವೆಸ್ಟರ್ ವೀಸಾ ಬದಲು ಗೋಲ್ಡ್ ಕಾರ್ಡ್ ಮೂಲಕ ಪೌರತ್ವ ನೀಡುವ ನಿರ್ಧಾರವನ್ನು ಟ್ರಂಪ್ ತೆಗೆದುಕೊಂಡಿದ್ದಾರೆ.
ಅಮೆರಿಕಾ ಪೌರತ್ವ ಮಾರಾಟಕ್ಕಿದೆ!
ಅಮೆರಿಕಾದಲ್ಲಿ ಉದ್ಯಮಿಯಾಗುವ ಕನಸು ನನಸು ಮಾಡಿಕೊಳ್ಳುವವರಿಗೆ ಇದು ಸುವರ್ಣ ಅವಕಾಶ. ಇನ್ಮುಂದೆ ಅಮೆರಿಕನ್ ಆಗುವ ಡ್ರೀಮ್‌ಗೆ H-1 ಬಿ ವೀಸಾ ಅಗತ್ಯವಿಲ್ಲ. ನಿಮ್ಮ ಬಳಿ 5 ಮಿಲಿಯನ್ ಡಾಲರ್ ಅಂದ್ರೆ ಭಾರತದ ರೂಪಾಯಿ ಮೌಲ್ಯದಲ್ಲಿ ಹೇಳುವುದಾದರೆ 43 ಕೋಟಿ 52 ಲಕ್ಷ 55 ಸಾವಿರ ರೂಪಾಯಿ ಇದ್ದರೆ ಸಾಕು.
ಒಂದೇ ಮಾತಿನಲ್ಲಿ ಹೇಳುವುದಾದರೆ ಕೋಟಿ, ಕೋಟಿ ದುಡ್ಡಿದ್ದವರಿಗೆ ಅಮೆರಿಕಾದ ಪೌರತ್ವ ನೀಡಲು ಡೋನಾಲ್ಡ್ ಟ್ರಂಪ್ ನಿರ್ಧಾರ ಮಾಡಿದ್ದಾರೆ. ಗೋಲ್ಡ್ ಕಾರ್ಡ್ ಮೂಲಕ ಅಮೆರಿಕಾದ ಪೌರತ್ವವನ್ನು ಮಾರಾಟ ಮಾಡುತ್ತಿದ್ದಾರೆ.
ಅಮೆರಿಕಾಗೆ ಏನು ಲಾಭ?
ಆರ್ಥಿಕ ಕೊರತೆಯನ್ನು ಎದುರಿಸುತ್ತಿರುವ ಅಮೆರಿಕಾ ಅದನ್ನು ಸರಿದೂಗಿಸಿಕೊಳ್ಳಲು ಗೋಲ್ಡನ್ ಪ್ಲ್ಯಾನ್ ಮಾಡಿದೆ. ಗೋಲ್ಡ್ ಕಾರ್ಡ್ ಮೂಲಕ ಅಮೆರಿಕಾ ಸರ್ಕಾರಕ್ಕೆ ಸಾಕಷ್ಟು ಆದಾಯ ಹರಿದು ಬರುವ ನಿರೀಕ್ಷೆ ಇದೆ. ಈ ಗೋಲ್ಡ್ ಕಾರ್ಡ್‌ನಿಂದ ವಿಶ್ವದ ಬೇರೆ ಬೇರೆ ದೇಶಗಳ ಶ್ರೀಮಂತರನ್ನು ಅಮೆರಿಕಾದತ್ತ ಆಕರ್ಷಣೆ ಮಾಡಬಹುದಾಗಿದೆ.
ಮತ್ತೊಂದು ವಿಶೇಷ ಏನಂದ್ರೆ ಅಮೆರಿಕಾ ರಷ್ಯಾದ ನಾಗರಿಕರಿಗೂ ಗೋಲ್ಡ್ ಕಾರ್ಡ್ ನೀಡಲು ನಿರ್ಧಾರ ಮಾಡಿದ್ದಾರೆ. ಇಷ್ಟು ದಿನ ಅಮೆರಿಕಾ ದೇಶ ರಷ್ಯಾವನ್ನು ವಿರೋಧಿಸಿ ಆರ್ಥಿಕ ನಿರ್ಬಂಧ ವಿಧಿಸಿತ್ತು. ಆದರೆ ಡೋನಾಲ್ಡ್ ಟ್ರಂಪ್ ಆಳ್ವಿಕೆಯಲ್ಲಿ ಎಲ್ಲವೂ ಉಲ್ಟಾ ಆಗಿದ್ದು, ರಷ್ಯಾದ ಜನರು ಬಹಳ ಒಳ್ಳೆಯ ವ್ಯಕ್ತಿಗಳು ಎಂದು ಟ್ರಂಪ್ ಹೇಳುತ್ತಿದ್ದಾರೆ.
ಏನಿದು ಗೋಲ್ಡ್ ಕಾರ್ಡ್?
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾವು ಗೋಲ್ಡ್ ಕಾರ್ಡ್ ಅನ್ನು ಮಾರಾಟ ಮಾಡುತ್ತಿದ್ದೇವೆ. ಆ ಗೋಲ್ಡ್ ಕಾರ್ಡ್‌ನ ಬೆಲೆ 5 ಮಿಲಿಯನ್ ಡಾಲರ್ ಎಂದಿದ್ದಾರೆ. ಗ್ರೀನ್ ಕಾರ್ಡ್ ಪ್ರೀಮಿಯಮ್ ವರ್ಷನ್ ಆಗಿ ಗೋಲ್ಡ್ ಕಾರ್ಡ್ ಮೂಲಕ ಪೌರತ್ವ ನೀಡಲಾಗುತ್ತಿದೆ.
ಇದುವರೆಗೂ EB-5 ಹೂಡಿಕೆದಾರರ ವೀಸಾ ಪಡೆಯಲು 1.8 ಮಿಲಿಯನ್ ಡಾಲರ್ ಹೂಡಿಕೆ ಮಾಡಿ 10 ಉದ್ಯೋಗ ಸೃಷ್ಟಿಸಬೇಕಾಗಿತ್ತು. ಆದರೆ ಈಗ 5 ಮಿಲಿಯನ್ ಡಾಲರ್ ನೀಡಿ ಗೋಲ್ಡ್ ಕಾರ್ಡ್ ಮೂಲಕ ಅಮೆರಿಕಾದ ಪೌರತ್ವ ಪಡೆಯಿರಿ ಎಂದು ಟ್ರಂಪ್ ಹೊಸ ಆಫರ್ ಕೊಟ್ಟಿದ್ದಾರೆ. EB-5 ವೀಸಾ ಸ್ಕೀಮ್ ಅನ್ನು 1990ರಲ್ಲಿ ಬಂಡವಾಳ ಹೂಡಿಕೆಗಾಗಿ ಜಾರಿ ಮಾಡಲಾಗಿತ್ತು. ಆದರೆ ಇದರಿಂದ ವಂಚನೆ, ದುರುಪಯೋಗ ಜಾಸ್ತಿ ಆಗಿ ಯಾವುದೇ ಲಾಭ ಆಗುತ್ತಿರಲಿಲ್ಲ. ಅಮೆರಿಕಾದಲ್ಲಿ 1 ಕೋಟಿ ಗೋಲ್ಡ್ ಕಾರ್ಡ್ ಮಾರಾಟ ಮಾಡಲು ಡೊನಾಲ್ಡ್ ಟ್ರಂಪ್ ಪ್ಲ್ಯಾನ್ ಮಾಡಿದ್ದಾರೆ. EB-5 ವೀಸಾ ಪ್ರೋಗ್ರಾಂ ಅನ್ನು ನಾವು ಕೊನೆಗಾಣಿಸುತ್ತಿದ್ದೇವೆ ಎಂದ ಕಾಮರ್ಸ್ ಸೆಕ್ರೆಟರಿ ಹೌವರ್ಡ್ ಲೂಟನಿಕ್ ಹೇಳಿದ್ದಾರೆ.
ಭಾರತೀಯರಿಗೂ ಇದೆ ಲಾಭ!
ಸದ್ಯ ಅಮೆರಿಕಾದಲ್ಲಿ EB-5 ಹೂಡಿಕೆದಾರರ ವೀಸಾ ಪಡೆಯಲು 8 ಲಕ್ಷ ಡಾಲರ್‌ನಿಂದ 1 ಮಿಲಿಯನ್ ಡಾಲರ್‌ವರೆಗೂ ಹಣ ಹೂಡಿಕೆ ಮಾಡಬೇಕು. ಈ ಹೂಡಿಕೆಯಿಂದ 10 ಉದ್ಯೋಗಗಳನ್ನು ಸೃಷ್ಟಿ ಮಾಡಬೇಕು. ಆದರೆ ಗೋಲ್ಡ್ ಕಾರ್ಡ್‌ನಲ್ಲಿ ಈ ರೀತಿ ಉದ್ಯೋಗ ಸೃಷ್ಟಿ ಮಾಡಬೇಕೆಂಬ ಕಂಡೀಷನ್ ಇಲ್ಲ.
ಹಣ, ಸಂಪತ್ತು ಇರುವ ವ್ಯಕ್ತಿಗಳು ಮಾತ್ರ ಅಮೆರಿಕಾದ ಗೋಲ್ಡ್ ಕಾರ್ಡ್ ಮೂಲಕ ನಾಗರಿಕತ್ವ ಪಡೆಯಬಹುದು. ಮಧ್ಯಮ ವರ್ಗದವರು, ಉದ್ಯೋಗಕ್ಕಾಗಿ ಅಮೆರಿಕಾಗೆ ಹೋಗುವವರು ಗೋಲ್ಡ್ ಕಾರ್ಡ್ ಪಡೆಯಲು ಹಣ ಇರಲ್ಲ. ಹೆಚ್ಚಿನ ಹಣ ಇರುವ ಶ್ರೀಮಂತರು ಹೆಚ್ಚಿನ ಹಣ ಖರ್ಚು ಮಾಡ್ತಾರೆ. ಇದರಿಂದ ಅಮೆರಿಕಾಗೆ ಹೆಚ್ಚಿನ ತೆರಿಗೆ ಕೂಡ ಬರುತ್ತೆ ಅನ್ನೋದು ಟ್ರಂಪ್ ಅಸಲಿ ಲೆಕ್ಕಾಚಾರ.
ಶ್ರೀಮಂತ ಭಾರತೀಯರು ಈಗ ಗ್ರೀನ್ ಕಾರ್ಡ್ ಬದಲು 43 ಕೋಟಿ ಕೊಟ್ಟು ಗೋಲ್ಡ್ ಕಾರ್ಡ್ ಪಡೆದರೆ ಅಮೆರಿಕಾದ ನಾಗರಿಕರಾಗಬಹುದು. ಕೌಶಲ್ಯಯುತ ಕಾರ್ಮಿಕರು, ಉದ್ಯೋಗಿಗಳನ್ನು ಕೈ ಬಿಟ್ಟು ಶ್ರೀಮಂತರನ್ನು ಗುರಿಯಾಗಿಟ್ಟುಕೊಂಡು ಗೋಲ್ಡ್ ಕಾರ್ಡ್ ಸಿಟಿಜನ್ ಷಿಪ್ ಯೋಜನೆ ಜಾರಿ ಮಾಡಲಾಗಿದೆ.
ಗೋಲ್ಡ್ ಕಾರ್ಡ್‌ಗೆ ಷರತ್ತುಗಳು ಅನ್ವಯ!
ಈಗ ಗೋಲ್ಡ್ ಕಾರ್ಡ್ ಪಡೆಯಲು 43 ಕೋಟಿ ರೂಪಾಯಿ ಹಣ ಬೇಕು ಅಷ್ಟೇ. ಭಾರೀ ಶ್ರೀಮಂತರಷ್ಟೇ ಈ ಗೋಲ್ಡ್ ಕಾರ್ಡ್ ಪಡೆಯಲು ಸಾಧ್ಯ. ಗೋಲ್ಡ್ ಕಾರ್ಡ್ ಸಿಟಿಜನ್‌ಶಿಪ್ ಪಡೆಯಲು ಜನರ ಬ್ಯಾಕ್ ಗ್ರೌಂಡ್ ಚೆಕ್ ಮಾಡಲಾಗುತ್ತೆ. ಅಮೆರಿಕಾದಲ್ಲಿ ಉದ್ಯೋಗ ಸೃಷ್ಟಿ, ಬಂಡವಾಳ ಹೂಡಿಕೆ ಮಾಡಿ ಆರ್ಥಿಕತೆಗೆ ಸಹಾಯ ಮಾಡುವವರಿಗೆ ಮಾತ್ರವೇ ಗೋಲ್ಡ್ ಕಾರ್ಡ್ ಸಿಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ