/newsfirstlive-kannada/media/post_attachments/wp-content/uploads/2025/02/POSITIVE-ENERGY-ANIMALS.jpg)
ಸಾಕು ಪ್ರಾಣಿಗಳಲ್ಲಿ ಹಲವು ವಿಧಗಳಿವೆ. ಹಸುವಿನಿಂದ ಹಿಡಿದು ಹಾವಿನವರೆಗೂ ಎಲ್ಲವನ್ನು ಕೂಡ ಸಾಕುವವರಿದ್ದಾರೆ. ಕಾರಣ ಪ್ರಾಣಿ ಮತ್ತು ಮನುಷ್ಯನ ನಡುವೆ ಒಂದು ಬಾಂಧವ್ಯ ಮಾತ್ರವಲ್ಲ. ಅವುಗಳಿಂದ ಮನೆಯಲ್ಲಿ ಹೊಸ ಶಕ್ತಿಯ ಸಂಚಯವೊಂದು ಪ್ರಾರಂಭವಾಗುತ್ತದೆ. ನೀವು ಯಾವುದೇ ಒತ್ತಡದಲ್ಲಿ ಮನೆಗೆ ಬಂದರೂ ಕೂಡ ಅವುಗಳೊಂದಿಗೆ ಕೊಂಚ ಕಾಲ ಸಮಯ ಕಳೆದರು ಸಾಕು ಎಲ್ಲ ಟೆನ್ಷನ್ಗಳು ಕಳಚಿ ಬಿದ್ದ ಮನಸ್ಸು ನಿರಾಳ ನಿರಾಳ. ಹೀಗೆ ಮನಸ್ಸಿಗೆ ಮುದ ನೀಡುವ ಹಾಗೂ ಮನೆಯಲ್ಲಿ ಪಾಸಿಟಿವ್ ಶಕ್ತಿಯನ್ನು ಕೂಡ ಸೃಷ್ಟಿಸುತ್ತವೆ ಅಂತಹ ಪ್ರಮುಖ ಪ್ರಾಣಿಗಳು ಯಾವುವು ಎಂದು ನೋಡುವುದಾದ್ರೆ.
1. ಶ್ವಾನ
ಸಾಕು ಪ್ರಾಣಿಗಳಲ್ಲಿ ಅತ್ಯಂತ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಪ್ರಾಣಿ ಎಂದು ಹೆಸರು ಪಡೆದುಕೊಂಡಿರುವುದು ಶ್ವಾನವೇ. ಮಾಲೀಕನಿಗಾಗಿ ಅದು ತನ್ನ ಪ್ರಾಣವನ್ನು ಕೂಡ ಕೊಡಲು ಸಿದ್ಧವಾಗಿ ಬಿಡುತ್ತದೆ. ಮನೆಯಲ್ಲಿ ಶ್ವಾನಗಳನ್ನು ಸಾಕುವುದು ಹಾಗೂ ತೋಟ ಮತ್ತು ಜಮೀನಿನಲ್ಲಿ ಶ್ವಾನಗಳನ್ನು ಸಾಕುವುದು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಇದರಿಂದ ಕೇವಲ ಅವುಗಳು ಮನೆಯನ್ನು, ತೋಟ ಹಾಗೂ ಜಮೀನನ್ನು ಕಾಯುತ್ತವೆ ಅನ್ನುವ ಒಂದೇ ಕಾರಣವಲ್ಲ. ಅವು ಸಾಕಿದ ಮಾಲೀಕನಿಗೆ ಅದೃಷ್ಟ, ಸಂರಕ್ಷಣೆ ಹಾಗೂ ಧನಾತ್ಮಕ ಶಕ್ತಿಯನ್ನು ತಂದುಕೊಡುತ್ತದೆ ಎಂಬ ನಂಬಿಕೆಯೂ ಕೂಡ ಇದೆ.
ಇದನ್ನೂ ಓದಿ:ಮನೆಯಲ್ಲಿ ಕಾಮಧೇನು ಮೂರ್ತಿಯನ್ನು ಇಡುವುದು ಏಕೆ? ಇದರ ಹಿನ್ನೆಲೆ ಏನು?
2. ಆನೆ
ಇನ್ನು ಮನೆಯಲ್ಲಿ ಹಾಗೂ ಮನುಷ್ಯನಲ್ಲಿ ಧನಾತ್ಮಕ ಶಕ್ತಿಯನ್ನು ತಂದುಕೊಡುವ ಮತ್ತೊಂದು ಪ್ರಾಣಿಯೆಂದರೆ ಅದು ಆನೆ. ಆನೆಯನ್ನು ಈಗ ಸಾಕು ಪ್ರಾಣಿಯೆಂದು ನಮ್ಮ ದೇಶದಲ್ಲಿ ಪರಿಗಣಿಸುವುದಿಲ್ಲ ಹಾಗೆ ಸಾಕುವುದು ಕಾನೂನು ಬಾಹಿರ ಕೂಡ. ಆದ್ರೆ ಆನೆ ಶಕ್ತಿ, ಜ್ಞಾನ ಹಾಗೂ ಅದೃಷ್ಟದ ಗುರುತಾಗಿ ನಾವು ನೋಡುತ್ತೇವೆ. ಅದರಲ್ಲೂ ಭಾರತದಂತಹ ದೇಶದಲ್ಲಿ ಅದನ್ನು ಪೂಜ್ಯನೀಯ ಭಾವನೆಯಿಂದಲೇ ನೋಡುತ್ತೇವೆ. ಅದು ಗಣಪನ ಪ್ರತಿರೂಪವಾಗಿ ನಮಗೆ ಕಾಣುತ್ತದೆ. ಆನೆಯನ್ನು ಸಾಕುವುದರಿಂದ ಅಥವಾ ಅದರ ಜೊತೆ ಒಡನಾಟವಿಟ್ಟುಕೊಳ್ಳುವುದರಿಂದ ಮನಸ್ಸಿಗೆ ಹಾಗೂ ಮನೆಗೆ ತುಂಬಾ ಧನಾತ್ಮಕ ಶಕ್ತಿ ಒದಗಿಸುತ್ತದೆ ಎಂದು ಹೇಳಲಾಗುತ್ತದೆ.
3. ಹಸು
ಹಸುವನ್ನು ನಾವು ಗೋಮಾತೆ ಅಂತಲೇ ಪೂಜಿಸುತ್ತೇವೆ. ಮನೆಗೆ ಹಸುವನ್ನು ಕರೆದುತಂದು ಸಾಕುವುದು ಹಾಗೂ ಮನೆಗೆ ನಾವು ದೇವರ ಹಾರೈಕೆ ಹಾಗೂ ಪಾಸಿಟಿವ್ ಎನರ್ಜಿಯನ್ನು ಆಹ್ವಾನಿಸುವುದು ಎರಡು ಒಂದೇ ಎಂದು ಹೇಳಲಾಗುತ್ತದೆ. ಗೋವುಗಳಿಗೆ ಭಾರತದಲ್ಲಿ ಪವಿತ್ರಸ್ಥಾನವನ್ನು ನೀಡಲಾಗಿದೆ ಅದಕ್ಕೆ ಕೇವಲ ಧಾರ್ಮಿಕ ಕಾರಣವಲ್ಲ. ಸಹಸ್ರಾರು ವರ್ಷಗಳಿಂದ ಅವು ಕೃಷಿ ಪ್ರಧಾನವಾದ ಈ ದೇಶದಲ್ಲಿ ಮನುಷ್ಯನೊಂದಿಗೆ ವಿಶೇಷ ನಂಟನ್ನು ಹೊಂದಿವೆ. ಶ್ರಮ ಹಾಗೂ ಪ್ರಾಮಾಣಿಕತೆಯ ಗುರುತಾಗಿ ಅವು ಇಂದಿಗೂ ಕೂಡ ಉಳಿದಿವೆ. ಇವು ಮನೆಯ ಮಾಲೀಕನಿಗೆ ಹಾಗೂ ಮನೆಗೆ ಖುಷಿ, ಅದೃಷ್ಟ, ಆರೋಗ್ಯ ಹಾಗೂ ಧನಾತ್ಮಕ ಶಕ್ತಿಯನ್ನು ನೀಡುತ್ತವೆ.
4. ಕುದುರೆ
ಕುದುರೆಗೂ ಮನುಷ್ಯನಿಗೂ ತುಂಬಾ ಹಿಂದಿನಿಂದಲೂ ನಂಟಿದೆ. ಮನುಷ್ಯನನ್ನು ನಾಯಿಯಷ್ಟೇ ಪ್ರೀತಿಸುವ ಹಾಗೂ ನಿಷ್ಠೆಯಿಂದಿರುವ ಇನ್ನೊಂದು ಪ್ರಾಣಿಯೆಂದರೆ ಅದು ಕುದುರೆ. ಇದನ್ನು ನಾವು ಶಕ್ತಿ, ಸ್ವಾತಂತ್ರ್ಯ ಹಾಗೂ ಯಶಸ್ಸಿನ ಸಂಕೇತವೆಂದು ಗುರುತಿಸುತ್ತೇವೆ. ಕುದುರೆ ರಾಜ ಮಹಾರಾಜರ ಕಾಲದಿಂದಲೂ ತಮ್ಮ ನಂಟನ್ನು ಮನುಷ್ಯನೊಂದಿಗೆ ಗುರುತಿಸಿಕೊಂಡು ಬಂದಿವೆ. ಅದೆಷ್ಟೋ ಯುದ್ಧಗಳಲ್ಲಿ ಮಹಾ ಸಾಮ್ರಾಟರಿಗೆ ಗೆಲುವಿನ ರೂವಾರಿಯಾಗಿ ಗುರುತಿಸಿಕೊಂಡಿವೆ. ಮನೆಯಲ್ಲಿ ಹಾಗೂ ಮಾಲೀಕನಲ್ಲಿ ಧನಾತ್ಮಕ ಶಕ್ತಿಯ ಸಂಚಾರವನ್ನುಂಟು ಮಾಡುವ ಪ್ರಾಣಿಗಳಲ್ಲಿ ಕುದರೆಯೂ ಕೂಡ ಒಂದು
5. ಬೆಕ್ಕು
ಪ್ರಾಚೀನ ಈಜಿಪ್ಟ್ ಬೆಕ್ಕುಗಳನ್ನು ಅತ್ಯಂತ ಪವಿತ್ರ ಹಾಗೂ ಅದೃಷ್ಟ ತರುವ ಪ್ರಾಣಿ ಎಂದು ನಂಬಲಾಗುತ್ತದೆ. ಅವುಗಳನ್ನು ಅದೃಷ್ಟವನ್ನು ಹೊತ್ತುಕೊಂಡು ಬರುವ ಪ್ರಾಣಿ ಎಂತಲೇ ಸಾಕಲಾಗುತ್ತದೆ. ವಿಶ್ವದಲ್ಲಿ ಶ್ವಾನವನ್ನು ಬಿಟ್ಟರೆ ಅತಿ ಹೆಚ್ಚು ಸಾಕಲ್ಪಡುವ ಮತ್ತೊಂದು ಪ್ರಾಣಿ ಅಂದ್ರೆ ಅದು ಬೆಕ್ಕು. ಇದರೊಂದಿಗೆ ಆಟ ಆಡುತ್ತಲೇ ಬೆಳೆಯುವ ಮಕ್ಕಳಲ್ಲಿ ಹಾಗೂ ಮನೆಯಲ್ಲಿ ಒಂದು ಧನಾತ್ಮಕ ಶಕ್ತಿಯ ಸಂಚಲನವಾಗುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ: ಜಸ್ಟ್ 1 ವರ್ಷ.. 50 ಕೆಜಿ ತೂಕ ಇಳಿಸಿದ ಯುವತಿ.. ನಿಶ್ಚಿತಾರ್ಥದಲ್ಲಿ ನೋಡಿ ನಕ್ಕವರಿಗೆ ತಕ್ಕ ಉತ್ತರ
ಇವಿಷ್ಟು ಮಾತ್ರವಲ್ಲ ಮನೆಯಲ್ಲಿ ಆಮೆಯನ್ನು ಸಾಕುವುದರಿಂದಲೂ ಕೂಡ ಅದೃಷ್ಟ ಹಾಗೂ ಐಶ್ವರ್ಯಗಳು ಅರಸಿ ಬರುತ್ತವೆ ಎಂದು ಹೇಳಲಾಗುತ್ತದೆ. ಇದರೊಂದಿಗೆ ಗೋಲ್ಡನ್ ಫಿಶ್,ಜೀರುಂಡೆ,ಮೊಲ ಇವೆಲ್ಲವೂ ಕೂಡ ಅದೃಷ್ಟದ ಸಂಕೇತ ಹಾಗೂ ಪಾಸಿಟಿವ್ ಎನರ್ಜಿ ಸೃಷ್ಟಿಸುವ ಸಾಕು ಪ್ರಾಣಿಗಳು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ